ಬೆಂಗಳೂರು: ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಇದೇ 30ರಂದು ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶವು ಕಲ್ಬುರ್ಗಿಯಲ್ಲಿ ನಡೆಯಲಿದೆ. ಕಲ್ಬುರ್ಗಿಯ ನಾಗನಹಳ್ಳಿ ಪೊಲೀಸ್ ಕೇಂದ್ರದ ಹತ್ತಿರ ರದ್ದೇವಾಡಗಿ ಬಡಾವಣೆಯಲ್ಲಿ ನಡೆಯುವ ಈ ಐತಿಹಾಸಿಕ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.30ರಂದು ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಸಂಸದರು ಇತರ ಗಣ್ಯರು ಪಾಲ್ಗೊಳ್ಳುವರು ಎಂದರು.
ಕರ್ನಾಟಕದ ಬಿಜೆಪಿ ವತಿಯಿಂದ ಮುಂದಿನ 2 ತಿಂಗಳುಗಳಲ್ಲಿ ವಿವಿಧ ರೀತಿಯ ಜನಜಾಗೃತಿ ಸಮಾವೇಶಗಳನ್ನು ಬೇರೆಬೇರೆ ಭಾಗಗಳಲ್ಲಿ ನಡೆಸಲಾಗುತ್ತಿದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕದ ಸಿದ್ಧತೆ ಎಂಬ ಕಲ್ಪನೆಯೊಂದಿಗೆ ರಾಜ್ಯಾದ್ಯಂತ ಎಲ್ಲ ಸಮುದಾಯ- ಎಲ್ಲ ವ್ಯಕ್ತಿಗಳನ್ನು ಜೋಡಿಸುವ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಹಿಂದುಳಿದ ವರ್ಗಗಳ ಚಟುವಟಿಕೆಗಳು- ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟಿವೆ. ಹಿಂದುಳಿದ ವರ್ಗಗಳ ಜಾತಿಗಳ ಆಯೋಗಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಸಾಂವಿಧಾನಿಕ ಮಾನ್ಯತೆ ಕೊಟ್ಟಿದೆ. ಹಿಂದಿನ ಸರಕಾರಗಳು ಈ ಕುರಿತು ಕೇವಲ ಮಾತನ್ನಷ್ಟೇ ಆಡಿದ್ದವು ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 250 ಕೋಟಿ ನೀಡಿದ್ದು, ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ. ಹಾಸ್ಟೆಲ್‍ಗಳ ನಿರ್ಮಾಣ, ಶೈಕ್ಷಣಿಕ ಚಟುವಟಿಕೆಗೆ ಉತ್ತೇಜನ, ಗಂಗಾ ಕಲ್ಯಾಣ ಯೋಜನೆ ವಿಸ್ತರಣೆ ಮೂಲಕ ಈ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಸಿದ್ದರಾಮಯ್ಯ ಅವರು ಕೇವಲ ಹಿಂದುಳಿದ ವರ್ಗಗಳ ಧ್ವನಿ ಎಂದು ಭಾಷಣದಲ್ಲಷ್ಟೇ ತಿಳಿಸಿದ್ದರು. ಅದನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ಟೀಕಿಸಿದರು. ಎಲ್ಲ ಜಿಲ್ಲೆಗಳಿಂದ ಈ ಸಮಾವೇಶಕ್ಕೆ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ನೆ.ಲ.ನರೇಂದ್ರಬಾಬು ಮತ್ತು ಪದಾಧಿಕಾರಿಗಳು ರಾಜ್ಯದೆಲ್ಲೆಡೆ ಪ್ರವಾಸ ಮಾಡಿದ್ದಾರೆ. ಈ ಸಮಾವೇಶವು ರಾಜಕೀಯ ಪರಿವರ್ತನೆಯ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ರದ್ದೇವಾಡಗಿ ಬಡಾವಣೆಯಲ್ಲಿ ಸಮಾವೇಶ ನಡೆಯಲಿದ್ದು, 224 ಕ್ಷೇತ್ರ, 312 ಮಂಡಲಗಳಿಂದ ಜನರು ಭಾಗವಹಿಸಲಿದ್ದಾರೆ. 205 ಒಬಿಸಿ ಸಮುದಾಯಗಳ ಪ್ರಮುಖರನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.
ಕಲ್ಬುರ್ಗಿಯ ಈ ಸಮಾವೇಶ ಹಿಂದುಳಿದ ವರ್ಗಗಳ ಸಂಘಟನೆಯ ಪ್ರತೀಕ. ಬಿಜೆಪಿ ಒಬಿಸಿ ಮೋರ್ಚಾದ ಶಕ್ತಿ, ಸಂಘಟನೆಯನ್ನು ಅದು ಅನಾವರಣಗೊಳಿಸಲಿದೆ. ರಾಜ್ಯದಾದ್ಯಂತ ಜಾಗೃತಿ ಸಭೆಗಳನ್ನು ನಡೆಸಿದ್ದು, 59ಕ್ಕೂ ಹೆಚ್ಚು ಶೇಕಡಾದಷ್ಟಿರುವ ಹಿಂದುಳಿದ ಸಮಾಜದ ಜಾಗೃತಿಗೆ ಸಮಾವೇಶವು ಪೂರಕ ಎಂದರು.
ಸಂವಿಧಾನದಲ್ಲಿ ತಿದ್ದುಪಡಿ ಹಿಂದುಳಿದ ವರ್ಗಗಳ ಗುರುತಿಸುವಿಕೆ ಅವಕಾಶ, ಜಸ್ಟಿಸ್ ರೋಹಿಣಿ ಕಮಿಷನ್ ಸ್ಥಾಪನೆ, ಮೀಸಲಾತಿ ಕೊಡುಗೆ ಬಿಜೆಪಿಯ ದೊಡ್ಡ ಪ್ರಯತ್ನ ಎಂದು ಮೆಚ್ಚುಗೆ ಸೂಚಿಸಿದರು.
ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಒಬಿಸಿಯ 80 ಸಾವಿರ ಮಂದಿಗೆ ಸಹಕಾರ ಕ್ಷೇತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಅತಿ ಹೆಚ್ಚಿನ ಯೋಜನೆಗಳು ಜಾರಿಯಾಗಿವೆ. ಒಬಿಸಿಗೆ ಆಶಾದಾಯಕವಾಗಿ ಕೇಂದ್ರ- ರಾಜ್ಯದ ಬಿಜೆಪಿ ಸರಕಾರಗಳು ಕೆಲಸ ಮಾಡುತ್ತಿವೆ. ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ವರ್ಗದ ಅಭಿವೃದ್ಧಿಗೆ ಬಿಜೆಪಿ ಶ್ರಮಿಸುತ್ತಿದೆ ಎಂದು ವಿವರ ನೀಡಿದರು.
ಸಂಸದ ಪಿ.ಸಿ.ಮೋಹನ್ ಅವರು ಮಾತನಾಡಿ, ಮಾಜಿ ಸಚಿವ ಈಶ್ವರಪ್ಪ ಅವರ ನೇತೃತ್ವದಲ್ಲಿ 5 ತಂಡಗಳ ಪ್ರವಾಸ ನಡೆಸಲಾಗಿದೆ. ಕೇಂದ್ರದ ಬಿಜೆಪಿ ಸರಕಾರದಿಂದ ವೈದ್ಯಕೀಯ ಸೀಟ್, ಪಿಜಿ ಸೀಟು, ವೈದ್ಯಕೀಯ ಕಾಲೇಜಿನ ಹೆಚ್ಚಳದಿಂದ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಸಿಕ್ಕಿದೆ ಎಂದು ತಿಳಿಸಿದರು. ಒಬಿಸಿಯನ್ನು ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ಆಗಿ ಮಾಡಿಕೊಂಡಿತ್ತು ಎಂದು ಆಕ್ಷೇಪಿಸಿದರು. ಒಬಿಸಿ ಸಮಾವೇಶ ಕುರಿತ ಹಾಡನ್ನು ಬಿಡುಗಡೆ ಮಾಡಲಾಯಿತು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ಬೆಂಗಳೂರು ಉತ್ತರ ಜಿಲ್ಲೆ ಒಬಿಸಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಅವರು ಈ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ