2024ರ ಲೋಕಸಭೆ ಚುನಾವಣೆಗೆ ಇನ್ನು ದಿನ ನಿಗದಿ ಘೋಷಣೆಯಷ್ಟೇ ಬಾಕಿಯಿದೆ. ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಈಗಾಗಲೇ ಆರಂಭಗೊಂಡಿದೆ. ಟಿಕೆಟ್‌ಗಾಗಿ ಲಾಭಿ, ಪಕ್ಷಾಂತರ, ಪ್ರಚಾರ, ಅಭ್ಯರ್ಥಿ ಆಯ್ಕೆ ಸದ್ದಿಲ್ಲದೇ ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ರಾಜಕೀಯ ಕಣ ರಂಗೇರಲಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ಗಾಗಿ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ. ಬಿಜೆಪಿ ಭದ್ರಕೋಟೆಯಾಗಿರುವ ಉಡುಪಿ-ಚಿಕ್ಕಮಗಳೂರಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಸರ್ವಸನ್ನದ್ಧವಾಗಿದೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಸಿ.ಟಿ.ರವಿ ಹೆಸರು ಕೇಳಿ ಬರುತ್ತಿದ್ದು, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಸ್ಪರ್ಧಿಸಲು ಉತ್ಸುಹಕರಾಗಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಸಚಿವರಾಗಿ, ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಸಿ.ಟಿ ರವಿ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯ ಸೋಲಿನ ನಂತರ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಿ.ಟಿ ರವಿ ಅಭ್ಯರ್ಥಿಯಾಗಬೇಕು ಎಂದು ಬಿಜೆಪಿ ಕಾರ್ಯಕರ್ತರು ಹುಯಿಲೆಬ್ಬಿಸುತ್ತಿದ್ದಾರೆ. ಸಿಟಿ ರವಿ ಅವರೂ ತೀವ್ರವಾದ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಕೊನೆಯ ಹಂತದಲ್ಲಿ ಸಿಟಿ ರವಿ ಅವರೇ ಟಿಕೆಟ್ ಪಡೆದು ಗೆದ್ದು ಬಂದರೂ ಅಚ್ಚರಿಯಿಲ್ಲ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಳೆದ ಈಗ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಸಹ ಭಾಗಿಯಾಗುತ್ತಿರುವ ಪ್ರಮೋದ್ ಮಧ್ವರಾಜ್ ಬಿಜೆಪಿ ಕಾರ್ಯಕರ್ತರ ಜೊತೆ ಬೆರೆಯುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಆಕಾಂಕ್ಷಿ ಎನ್ನುವುದನ್ನು ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುವಾಗ ಲೋಕಸಭೆಯ ಟಿಕೆಟ್ ಕೇಳಿದ್ದರು ಎನ್ನುವ ಮಾತು ಕೂಡಾ ರಾಜಕೀಯ ಪಡಸಾಲೆಯಲ್ಲಿ ಓಡಾಡುತ್ತಿದೆ. ನನ್ನನ್ನು ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಆದರೆ, ನಾನೇ ಅಭ್ಯರ್ಥಿ ಎಂಬ ಸ್ಪಷ್ಟತೆ ಇಲ್ಲ. ಪಕ್ಷದಿಂದ ಟಿಕೆಟ್ ನೀಡಿದರೆ ಎಲ್ಲರ ಆಶೀರ್ವಾದ ಪಡೆದು ಮತದಾರರ ಸಹಕಾರ ಕೋರಿ ಸ್ಪರ್ಧೆಗೆ ಇಳಿಯಲು ಸಿದ್ಧನಿದ್ದೇನೆ. ನನಗೆ ಟಿಕೆಟ್ ನೀಡದೇ ಬಿಜೆಪಿ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಪ್ರಮೋದ್ ಮಧ್ವರಾಜ್ ಅವರು ಈ ಹಿಂದೆಯೇ ಹೇಳಿದ್ದರು.
ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಈಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರತಿನಿಧಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ಈ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ವಲಸೆ ಹೋಗುವ ಸಾಧ್ಯತೆಯ ಬಗ್ಗೆ ದಟ್ಟವಾದ ಸುದ್ದಿ ಹಬ್ಬಿದೆ. ಕಾರ್ಯಕರ್ತರಲ್ಲಿನ ಅಸಮಾಧಾನ ಕರಂದ್ಲಾಜೆಗೆ ಮೈನಸ್ ಆಗಲಿದೆ.
ಇದೆಲ್ಲದರ ನಡುವೆ ಅಳೆದು ತೂಗಿ ಬಿಜೆಪಿ ವರಿಷ್ಠರು ಯಾರಿಗೆ ಮಣೆ ಹಾಕಲಿದೆ ಎಂಬುದೇ ಕುತೂಹಲ ಮೂಡಿಸಿದೆ. ಕಾರ್ಯಕರ್ತರೂ ಕೂಡಾ ತಮ್ಮ ಅಭ್ಯರ್ಥಿಯ ಬಗ್ಗೆ ಕುತೂಹಲ ಹೊಂದಿದ್ದು, ಎಷ್ಟೇ ಅಸಮಾಧಾನ, ಆಕ್ರೋಶವಿದ್ದರೂ ನಮ್ಮ ಮತ ಬಿಜೆಪಿ ಚಿಹ್ನೆಗೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ