ಬೆಂಗಳೂರು: ಕಲ್ಬುರ್ಗಿಯಲ್ಲಿ ಇದೇ 30ರಂದು ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶವು ನಡೆಯಲಿದ್ದು, ಎರಡೂವರೆ ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 5ರಿಂದ 6 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಅವರು ತಿಳಿಸಿದರು.
ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು 3 ಸಾವಿರ ಕಾರ್ಯಕರ್ತರ ತಂಡವನ್ನು ನಿಯೋಜಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ, 200ಕ್ಕೂ ಹೆಚ್ಚು ಜಾತಿಗಳ, ಒಬಿಸಿ ಸಮುದಾಯದ 5 ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 4 ಸಾವಿರ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. 20 ಸಾವಿರ ಚತುಷ್ಚಕ್ರ ವಾಹನಗಳ ವ್ಯವಸ್ಥೆ ಮಾಡಿದೆ. 200 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದೇವೆ. 50 ಕಲ್ಯಾಣಮಂಟಪದಲ್ಲಿ ಊಟ, ವಸತಿ, ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು. ಜೇವರ್ಗಿ, ರಾಯಚೂರು ಸೇರಿ ಹತ್ತಿರದ ಪ್ರದೇಶಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಒಂದು ಸಾವಿರಕ್ಕೂ ಹೆಚ್ಚು ಜನ ಹಿಂದುಳಿದ ವರ್ಗಗಳ ನಾಯಕರು ಈಗಾಗಲೇ ಕಲ್ಬುರ್ಗಿಗೆ ಬಂದಿದ್ದು, ಅವರಿಗಾಗಿ ವಿವಿಧ ಹೋಟೆಲ್‍ಗಳಲ್ಲಿ ಒಂದು ಸಾವಿರ ಕೊಠಡಿ ವ್ಯವಸ್ಥೆ ಮಾಡಿದ್ದಾಗಿ ವಿವರಿಸಿದರು.
8 ತಂಡಗಳು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ 1 ಸಾವಿರಕ್ಕೂ ಹೆಚ್ಚು ಸಭೆ ನಡೆಸಿ ಸಮಾವೇಶದ ಯಶಸ್ಸಿಗೆ ಶ್ರಮಿಸಿದೆ ಎಂದರು. 1 ಲಕ್ಷ ಬಿಜೆಪಿ ಧ್ವಜದೊಂದಿಗೆ ನಗರಾಲಂಕಾರ ನಡೆದಿದೆ ಎಂದರು. ಕಲ್ಬುರ್ಗಿ ವಿಭಾಗದಿಂದ 2.5 ಲಕ್ಷ ಜನರು ಭಾಗವಹಿಸುತ್ತಾರೆ; ರಾಜ್ಯದ ಇತರ ಭಾಗಗಳಿಂದ 2.5 ಲಕ್ಷಕ್ಕೂ ಹೆಚ್ಚು ಜನರು ಬರಲಿದ್ದಾರೆ ಎಂದರು.
ಅ.30ರಂದು ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಕೇಂದ್ರದ ಸಚಿವರು, ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಸಂಸದರು ಇತರ ಗಣ್ಯರು ಪಾಲ್ಗೊಳ್ಳುವರು ಎಂದು ಅವರು ಮಾಹಿತಿ ನೀಡಿದರು. 100ಕ್ಕೂ ಹೆಚ್ಚು ಜನ ಪ್ರಮುಖರು ವೇದಿಕೆಯಲ್ಲಿ ಇರುತ್ತಾರೆ ಎಂದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ರಾಜ್ಯದ ಎಲ್ಲ 38 ಸಂಘಟನಾತ್ಮಕ ಜಿಲ್ಲೆಗಳು, ಎಲ್ಲ ಮಂಡಲಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯ ಎಂದು ವಿವರ ನೀಡಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕ ಶಶಿಲ್ ನಮೋಶಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಗಮನಿಸಿ ಜನರು ಬಿಜೆಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಅವಿನಾಶ್ ಜಾಧವ್, ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ