ಬೆಂಗಳೂರು: ಮುಂದಿನ ವರ್ಷ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ವಿಧಾನಸೌಧದಲ್ಲಿ ಅಧಿಕಾರ ಪಡೆಯಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ಸೂಚಿಸಿದರು.
ಕಲ್ಬುರ್ಗಿಯಲ್ಲಿ ಇಂದು ಬಿಜೆಪಿ ಒಬಿಸಿ ಮೋರ್ಚಾ ವಿರಾಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಬದಲಾವಣೆಯ ಕಾಲ ಬಂದಿದೆ. ಹಿಂದುಳಿದ ವರ್ಗಕ್ಕೆ ಮೋಸ ಮಾಡಿ, ಕತ್ತಲಲ್ಲಿಟ್ಟು ಅಧಿಕಾರ ನಡೆಸಿ ಕರ್ನಾಟಕವನ್ನು ಹಿಂದುಳಿದ ಪ್ರದೇಶವಾಗಿ ಮಾಡಿದ ಸಿದ್ರಾಮಣ್ಣನಿಗೆ ಬದಲಾವಣೆ ಕಾಲ ಬಂದಿದೆ ಎಂದು ತಿಳಿಸಿದರು.
ಕಾಗಿನೆಲೆ ಅಭಿವೃದ್ಧಿ, ಸಂಗೊಳ್ಳಿ ರಾಯಣ್ಣನ ಅಭಿವೃದ್ಧಿ, ಮಿಲಿಟರಿ ಶಾಲೆ ನಾವು ಕೊಟ್ಟಿದ್ದೇವೆ. ಹಿಂದುಳಿದ ವರ್ಗ, ಕುರುಬ ಸಮಾಜವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವು ಮೋಸ ಮಾಡಿತ್ತು. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿ ನ್ಯಾಯ ಕೊಡುವ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
ಮೀಸಲಾತಿ ವಿಚಾರದಲ್ಲಿ ನಮ್ಮದು ಕ್ರಾಂತಿಕಾರಿ ನಿರ್ಣಯ. ಎಸ್‍ಸಿ, ಎಸ್‍ಟಿ ಯವರನ್ನು ಮುಖ್ಯವಾಹಿನಿಗೆ ತರಲು ಸಾಮಾಜಿಕ ನ್ಯಾಯದ ನಿರ್ಧಾರ ಮಾಡಿದ್ದೇವೆ. ಹಿಂದುಳಿದ ವರ್ಗದ ಕುರುಬ ಜನಾಂಗಕ್ಕೆ ಅಮೃತ ಯೋಜನೆ ಜಾರಿಗೊಳಿಸಿದ್ದೇವೆ. 354 ಕೋಟಿ ಅನುದಾನ ನೀಡಿದ್ದೇವೆ. ಸಿದ್ರಾಮಣ್ಣ, ಕಾಂಗ್ರೆಸ್‍ನವರು ಯಾಕೆ ಇದನ್ನು ಮಾಡಿರಲಿಲ್ಲ ಎಂದು ಪ್ರಶ್ನಿಸಿದರು. ಒಬಿಸಿ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ ಎಂದು ಕೇಳಿದರು.
ನೈಜ ಸಾಮಾಜಿಕ ನ್ಯಾಯ, ಅವಕಾಶ, ಸಮಾನತೆಯನ್ನು ನಾವು ನೀಡುತ್ತಿದ್ದೇವೆ. ಹಿಂದುಳಿದ ವರ್ಗದ ಮೋದಿಜಿ ಇದಕ್ಕೆ ಪ್ರೇರಣೆ ನೀಡಿದ್ದಾರೆ. ಅವರು ಹಿಂದುಳಿದ ವರ್ಗ ಸೇರಿದಂತೆ ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಗಾಗಿ ಶ್ರಮಿಸುತ್ತಿದ್ದಾರೆ. ಆ ದಾರಿಯಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂದರು.
ಕೋಲಿ ಸಮುದಾಯಕ್ಕೆ ಅವಕಾಶ ಕೊಟ್ಟಿದ್ದೇನೆ. ಅವರಿಗೆ ನ್ಯಾಯ ನೀಡಲು ನಿರ್ಧಾರ ತೆಗೆದುಕೊಂಡಿದ್ದೇನೆ. ಸರಕಾರಿ ಆದೇಶವನ್ನು ತಂದಿದ್ದೇನೆ. ಈ ಸಮ್ಮೇಳನಕ್ಕೆ ಖಾಲಿ ಕೈಯಲ್ಲಿ ಬಂದಿಲ್ಲ. ಆದೇಶವನ್ನು ತಂದಿದ್ದೇನೆ. ಮಾತಿನಲ್ಲಿ ಸಾಮಾಜಿಕ ನ್ಯಾಯ ಕೊಡುವುದಲ್ಲ ಎಂದು ತಿಳಿಸಿದರು.
ಜನರಿಗಾಗಿ ರಾಜಕಾರಣ ಮಾಡುತ್ತೇವೆ. ಒಬಿಸಿ ವರ್ಗಕ್ಕೆ ನ್ಯಾಯ ಕೊಡುತ್ತೇವೆ. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ ಎಂದು ಅವರು ಪ್ರಕಟಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ನಮ್ಮದು. 1500 ಕೋಟಿ ಅನುದಾನವನ್ನು 3 ಸಾವಿರ ಕೋಟಿಗೆ ಈಗಾಗಲೇ ಹೆಚ್ಚಿಸಿದ್ದು, ಮುಂದಿನ ವರ್ಷ ಅದನ್ನು 5 ಸಾವಿರ ಕೋಟಿಗೆ ಏರಿಸುವುದಾಗಿ ತಿಳಿಸಿದರು.
ಹಸಿವು, ಬಡತನ ಮುಕ್ತ ಕಲ್ಯಾಣ ಕರ್ನಾಟಕವನ್ನು ನೋಡಲು ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಮೋದಿಜಿ ಕೈಯನ್ನು ಬಲಪಡಿಸಿ ಎಂದು ವಿನಂತಿಸಿದರು. ನಮ್ಮ ವಿಜಯ ಯಾತ್ರೆಯನ್ನು ನಿಲ್ಲಿಸಲು ಕಾಂಗ್ರೆಸ್‍ಗೆ ತಾಕತ್ತಿಲ್ಲ ಎಂದು ನುಡಿದರು. ಸುಳ್ಳು ಸುದ್ದಿಗಳನ್ನು ನಂಬದಿರಿ. ನಿಮ್ಮ ಸರಕಾರ ಆಯ್ಕೆಯ ಶಕ್ತಿ ನಿಮ್ಮಲ್ಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ರಥಯಾತ್ರೆ- ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಮತಬ್ಯಾಂಕ್ ರಾಜಕೀಯ ಮಾಡಿಕೊಂಡು ಒಬಿಸಿ ಜನರಿಗೆ ದ್ರೋಹ ಮಾಡಿದ ಪಕ್ಷ ಕಾಂಗ್ರೆಸ್ ಎಂದರು.
ರಾಜ್ಯದಲ್ಲಿ ಮೈಸೂರಿನಿಂದ ನನ್ನ ರಥಯಾತ್ರೆ ನಡೆಯಲಿದೆ. ಬೊಮ್ಮಾಯಿ ಮತ್ತಿತರರು ಇನ್ನೊಂದು ರಥಯಾತ್ರೆ ಮಾಡಲಿದ್ದಾರೆ. ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ನಾವು ಸಜ್ಜಾಗಿದ್ದೇವೆ. ಪ್ರಧಾನಿ ಮೋದಿಯವರಂಥ ಮಹಾನ್ ನಾಯಕ ನಮ್ಮ ಜೊತೆಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಅಸಾಧ್ಯ ಎಂದು ತಿಳಿಸಿದರು.
ಮೋದಿಜಿ ಅವರು ನ. 11ರಂದು ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರಲ್ಲದೆ, ಬಿಜೆಪಿ ಆಡಳಿತಾವಧಿಯಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿದರು. ಬಿಜೆಪಿಯಲ್ಲಿ ಅತಿ ಹೆಚ್ಚು ಒಬಿಸಿ ಜನಪ್ರತಿನಿಧಿಗಳಿದ್ದಾರೆ ಎಂದು ತಿಳಿಸಿದರು. ಕೋಲಿ ಸಮಾಜದ ಬಾಬುರಾವ್ ಚಿಂಚನಸೂರ್ ಅವರಿಗೆ ಉತ್ತಮ ಸ್ಥಾನ ಕೊಡಲಿದ್ದೇವೆ ಎಂದು ಭರವಸೆ ನೀಡಿದರು.
ಮೀಸಲಾತಿ ಪ್ರಮಾಣ ಹೆಚ್ಚಳಕ್ಕಾಗಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದರು. ಎಲ್ಲ ವರ್ಗಗಳ ಅಭಿವೃದ್ಧಿಗೆ ನಾವು ಬದ್ಧರಿದ್ದೇವೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಶಕೆ ಆರಂಭವಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಭಾಗದ ಅಭಿವೃದ್ಧಿ ಕೇವಲ ಮರೀಚಿಕೆಯಾಗಿತ್ತು. ಆದರೆ, ನಮ್ಮ ಸರಕಾರಗಳು ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿವೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಕೇಂದ್ರ- ರಾಜ್ಯದ ಸಚಿವರು, ಮಾಜಿ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ