ಬೆಂಗಳೂರು: ಕರ್ನಾಟಕವು ಕಳೆದ ಆರು ವರ್ಷಗಳಲ್ಲಿ 3 ಜನ ಮುಖ್ಯಮಂತ್ರಿಗಳನ್ನು ಕಂಡಿದೆ. ಒಬ್ಬರು ಜನನಾಯಕ. ಇನ್ನೊಬ್ಬರು ಖಳನಾಯಕ ಮತ್ತು ಮತ್ತೊಬ್ಬರು ಕಣ್ಣೀರ ನಾಯಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಂಡ್ಯದಲ್ಲಿ ಇಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರು ಅಧಿಕಾರ ಕೊಟ್ಟಾಗ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದ ನಾಯಕ, ಹಾಲಿಗೆ ಬೆಂಬಲ ಬೆಲೆ ಮತ್ತಿತರ ಜನಪರ ಯೋಜನೆಗಳ ಮೂಲಕ ಜನರ ಕಣ್ಣೀರನ್ನು ಒರೆಸಿ ಜನನಾಯಕರೆನಿಸಿದವರು ಯಡಿಯೂರಪ್ಪನವರು ಎಂದು ಮೆಚ್ಚುಗೆ ಸೂಚಿಸಿದರು.
ರಾಜ್ಯದಲ್ಲಿ ಜನರಿಗೆ ಬೇಡವಾದ ಟಿಪ್ಪು ಜಯಂತಿ ಮಾಡಿ, ಹಿಂದೂ ಮುಸ್ಲಿಮರನ್ನು ಒಡೆದು ಹಾಕಿ, ಜನರ ಹತ್ಯೆಗೆ ಕಾರಣರಾದವರು ಸಿದ್ರಾಮಣ್ಣ. ಪಿಎಫ್‍ಐ ಚಟುವಟಿಕೆಗೆ ಬೆಂಗಾವಲಾಗಿ ನಿಂತು ಹಿಂದೂಗಳ ಹತ್ಯೆ ಮಾಡಿದ 2 ಸಾವಿರ ಜನ ಪಿಎಫ್‍ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದವರು ಸಿದ್ರಾಮಣ್ಣ ಎಂದು ಟೀಕಿಸಿದರು.
ಜನರನ್ನು ಪ್ರಶ್ನಿಸಿ ‘ಸಿದ್ದರಾಮಯ್ಯ ಖಳನಾಯಕ’ ಎಂದು ತಿಳಿಸುವಂತೆ ಮಾಡಿದ ನಳಿನ್ ಕುಮಾರ್ ಕಟೀಲ್ ಅವರು, ಸಿದ್ರಾಮಣ್ಣ ಗೋಹತ್ಯೆಗೆ ಬೆಂಬಲ ನೀಡಿದವರು. ಸಿದ್ರಾಮಣ್ಣನ ಕಾಲಘಟ್ಟದಲ್ಲಿ 3 ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಠ್ಠಲ ಅರಭಾವಿ ಎಂಬ ರೈತರು ಬೆಳಗಾವಿ ಅಧಿವೇಶನ ನಡೆಯುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರ ಮನೆಗೆ ಹೋಗಿ ಪರಿಹಾರ ಕೊಡದ ಹಾಗೂ ಅವರ ಕುಟುಂಬದ ಕಣ್ಣೀರು ಒರೆಸದ ರಾಜಕಾರಣಿ ಸಿದ್ರಾಮಣ್ಣ ಎಂದು ಆಕ್ಷೇಪಿಸಿದರು.
24 ಹಿಂದೂ ಕಾರ್ಯಕರ್ತರ ಕೊಲೆ ಆದಾಗ ಸಿದ್ರಾಮಣ್ಣನ ಕಣ್ಣೀರು ಹಾಕಿಲ್ಲ. ಸಿದ್ರಾಮಣ್ಣನ ಕಾಲಘಟ್ಟದಲ್ಲಿ ಎಲ್ಲೆಡೆ ಮರ್ಡರ್‍ಗಳು ಆಗುತ್ತಿದ್ದವು. ಆತಂಕವಾದಿಗಳ ವಿಜೃಂಭಣೆ, ಪಿಎಫ್‍ಐ ಹೆಸರಿನಲ್ಲಿ ಚಟುವಟಿಕೆ ಹೆಚ್ಚಾಗಿತ್ತು. ಆದರೆ, ಇವತ್ತು ಪಿಎಫ್‍ಐ ನಿಷೇಧಿಸಿ ಮತಾಂಧರನ್ನು ಜೈಲಿಗಟ್ಟುವ ಕಾರ್ಯವನ್ನು ನರೇಂದ್ರ ಮೋದಿಜಿ ಸರಕಾರ ಮಾಡಿದೆ ಎಂದು ವಿವರಿಸಿದರು.
ಅಧಿಕಾರ ಇಲ್ಲದಾಗ ಕುಮಾರಣ್ಣ ಕಣ್ಣೀರು ಹಾಕಿ ಸ್ಥಾನಗಳನ್ನು ಗೆಲ್ಲುವಂತೆ ಮಾಡಿದವರು. ಮಂಡ್ಯದ ಜನರು ಕುಟುಂಬವಾದವನ್ನು ದೂರ ಇಟ್ಟು ಮುಂದೆ ರಾಷ್ಟ್ರೀಯವಾದದ ಪಕ್ಷ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸದಿಂದ ತಿಳಿಸಿದರು.
ಮತಾಂಧ ಟಿಪ್ಪುವಿಗೆ ಜಯಂತಿ ಮಾಡಿದ ಮಾಜಿ ಮುಖ್ಯಮಂತ್ರಿ, ಈ ರಾಜ್ಯದ ಅಭಿವೃದ್ಧಿ ಮಾಡಿದ ಒಡೆಯರ್ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿದ ಕುತಂತ್ರದ ರಾಜಕಾರಣಿಯ ಮುಂದಿನ ರಾಜಕೀಯ ಜೀವನ ಸ್ಥಗಿತಗೊಂಡು ನಿರುದ್ಯೋಗದ ದಿನಗಳು ಎದುರಾಗಲಿವೆ. ರಾಜ್ಯದ ಹುಲಿಯಾ ಕಾಡಿಗೆ ಹೋಗುತ್ತೆ. ಬಿಜೆಪಿ 150 ಸ್ಥಾನ ಗೆದ್ದು ಆಡಳಿತ ನಡೆಸಲಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ, ಗೂಂಡಾ ರಾಜಕಾರಣ ಇರುವುದಿಲ್ಲ. ಬಿಜೆಪಿಯ ರಾಷ್ಟ್ರಪರ ಚಿಂತನೆಯ ಅಭಿವೃದ್ಧಿಗೆ ಜನಬೆಂಬಲ ಲಭಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕಾಗಿ ದೇವರನ್ನು ಪ್ರಾರ್ಥಿಸಿದ್ದಾಗಿ ಹೇಳಿದರು.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ಮೈಸೂರು ಮತ್ತಿತರ ಕಡೆ ಸಂಕಲ್ಪ ಯಾತ್ರೆ ಮುಗಿಸಿ ಬಂದಿದ್ದೇನೆ. ಇಲ್ಲಿನ ಜನಸಾಗರ ಗಮನಿಸಿದಾಗ ಕುಟುಂಬ ರಾಜಕೀಯಕ್ಕೆ ಜನರು ವಿದಾಯ ಹೇಳಿ ಬಿಜೆಪಿಯ ಕಮಲ ಅರಳಿಸಲು ಸಿದ್ಧರಾಗಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಕೆಂಪೇಗೌಡರು- ಒಡೆಯರ್ ಅವರಿಗೆ ಗೌರವ
ನಾಡಗೌಡ ಕೆಂಪೇಗೌಡರನ್ನು- ಒಡೆಯರ್ ಅವರನ್ನು ರಾಜ್ಯದಲ್ಲಿ ಆಡಳಿತ ಮಾಡಿದ ಇತರ ಪಕ್ಷಗಳು ಮರೆತಿದ್ದವು. ಕೆಂಪೇಗೌಡರ ವಿಗ್ರಹ ನಿರ್ಮಾಣ ಮಾಡಿದ ಬಿಜೆಪಿ ಆಡಳಿತ ಅವರಿಗೆ ಗೌರವ ನೀಡಿದೆ. ಕಾಂಗ್ರೆಸ್ ಕಾಲಘಟ್ಟದಲ್ಲಿ ರೈಲಿಗೆ ಮತಾಂಧ ಟಿಪ್ಪುವಿನ ಹೆಸರನ್ನು ಇಡಲಾಗಿತ್ತು. ಆ ರೈಲಿಗೆ ಒಡೆಯರ್ ಹೆಸರನ್ನು ಇಡುವ ಮೂಲಕ ಮೈಸೂರಿನ ಹೆಸರನ್ನು ರಾಷ್ಟ್ರಕ್ಕೆ ಪರಿಚಯಿಸುವ ಕಾರ್ಯವನ್ನು ಬಿಜೆಪಿ ಮಾಡಿದೆ. ಅದಕ್ಕೆ ಪ್ರಯತ್ನಿಸಿದ ಪ್ರತಾಪಸಿಂಹ, ಪ್ರಲ್ಹಾದ ಜೋಷಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಮಾಡುವ ತಾಕತ್ತಿದ್ದರೆ ಅದು ಯಡಿಯೂರಪ್ಪರ ನೇತೃತ್ವದ ಬೊಮ್ಮಾಯಿ ಸರಕಾರಕ್ಕೆ ಮಾತ್ರ ಸಾಧ್ಯ ಎಂಬುದು ಕರ್ನಾಟಕದ ಜನತೆ ನಿಶ್ಚಯ ಮಾಡಿದ್ದಾರೆ. ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಸ್‍ಸಿ, ಎಸ್‍ಟಿಗಳ ಕಣ್ಣೀರನ್ನು ಬೊಮ್ಮಾಯಿ ಒರೆಸಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಪಕ್ಷ ಜಾರಿಗೊಳಿಸಿದ್ದು, ರೈತ ವಿದ್ಯಾನಿಧಿಯನ್ನು ಪ್ರಕಟಿಸಿದ ದೇಶದ ಏಕೈಕ ಸಿಎಂ ಬೊಮ್ಮಾಯಿ ಎಂದು ವಿವರಿಸಿದರು.
ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದ ಅವರು, ಮತಾಂಧ ದೊರೆ ಟಿಪ್ಪು ಸಾವಿರಾರು ಜನರ ಮತಾಂತರ ಮಾಡಿದ್ದಲ್ಲದೆ, 2 ಸಾವಿರ ಕ್ರೈಸ್ತರ ಹತ್ಯೆ ಮಾಡಿದ್ದ. ಸಾವಿರಾರು ಹಿಂದೂ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದ. ಅವನನ್ನು ಕೊಂದ ಗೌಡರ ಕುಟುಂಬಕ್ಕೆ ಪ್ರಣಾಮ ಸಲ್ಲಿಸಲು ಇಲ್ಲಿ ಬಂದಿದ್ದೇನೆ ಎಂದು ತಿಳಿಸಿದರು.
ಭಾರತ ದೇಶವು ವಿಶ್ವವಂದ್ಯ ರಾಷ್ಟ್ರವಾಗಿ ಜಗತ್ತಿನ ಎತ್ತರಕ್ಕೆ ಏರುತ್ತಿದೆ. ಅತ್ಯುತ್ತಮ ಕಾರ್ಯಕ್ರಮಗಳ ಮೂಲಕ ನರೇಂದ್ರ ಮೋದಿಜಿ ಅವರು ದೇಶದ ಮಾತ್ರವಲ್ಲದೆ ಜಗತ್ತಿನ ನಾಯಕರಾಗಿ ಹೊರಹೊಮ್ಮಿದ್ದಾರೆ. ನರೇಂದ್ರ ಮೋದಿಜಿ ಭಾರತ್ ಜೋಡೋ ಮಾಡಿದ್ದಾರೆ. ಅಯೋಧ್ಯೆ, ಕಾಶಿ ಮತ್ತಿತರ ಕಡೆ ಹಿಂದೂಗಳಿಗೆ ಬಿಜೆಪಿ ಗೌರವ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷವು ಟಿಪ್ಪುವಿಗೆ ಗೌರವ ನೀಡುತ್ತ ಆಡಳಿತ ಕೊಟ್ಟಿತ್ತು ಎಂದು ಟೀಕಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯದ ಸಚಿವ ಕೆ. ಗೋಪಾಲಯ್ಯ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಕಾರ್ಯದರ್ಶಿಗಳಾದ ಮುನಿರಾಜು ಗೌಡ, ಜಗದೀಶ್ ಹಿರೇಮನಿ, ಮಾಜಿ ಸಚಿವ ಸೋಮಶೇಖರ್, ಜಿಲ್ಲಾ ಅಧ್ಯಕ್ಷ ಉಮೇಶ್, ಮುಖಂಡ ಡಾ. ಸಿದ್ದರಾಮಯ್ಯ, ಜಿಲ್ಲಾ ಮತ್ತು ಮಂಡಲ ಮುಖಂಡರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ