ಬೆಂಗಳೂರು: ಪಾಕಿಸ್ಥಾನದ ವಿದೇಶಾಂಗ ಸಚಿವ ಭಿಲಾವಲ್ ಭುಟ್ಟೊ ಅವರು ಮಾನ್ಯ ನರೇಂದ್ರ ಮೋದಿಜಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಪಾಕಿಸ್ಥಾನದ ನ್ಯೂನತೆಯನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಡಾ|| ಸಂದೀಪ್ ಕುಮಾರ್ ಕೆ.ಸಿ. ಅವರು ತಿಳಿಸಿದರು.
ಪಾಕಿಸ್ಥಾನದ ಸಚಿವರ ಹೇಳಿಕೆ ಮತ್ತು ಕಾಂಗ್ರೆಸ್ ಪಕ್ಷದ ವರ್ತನೆಯನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇಂದು ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಪಾಕಿಸ್ಥಾನವು ಭಯೋತ್ಪಾದಕರ ತಾಣವಾಗಿದೆ. ಜಗತ್ತಿಗೇ ಮಾರ್ಗದರ್ಶನ ಮಾಡುತ್ತಿರುವ ಮೋದಿಜಿ ಅವರ ಬಗ್ಗೆ ಅಂಥ ದೇಶದ ಸಚಿವರು ಮಾತನಾಡಿ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.
ನಮ್ಮ ಸೈನಿಕರು ಚೀನಾವನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿಯವರು ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನಿಸುವ ಮತ್ತು ಅಣಕಿಸುವ ಮಾದರಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇದು ಖಂಡನೀಯ ಎಂದು ತಿಳಿಸಿದರು.
ರಾಜ್ಯದಲ್ಲಿ ಚುನಾವಣೆ ದೃಷ್ಟಿಯಿಂದ ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಇಲ್ಲಿನ ಕಾಂಗ್ರೆಸ್ ನಾಯಕರು ಪ್ರತಿಯೊಂದು ವಿಚಾರದಲ್ಲೂ ಭಯೋತ್ಪಾದಕರ ಪರ ನಿಂತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಯ ಪರ ವಹಿಸಿಕೊಂಡು ಮಾತನಾಡುವ ಹೀನ ಪರಿಸ್ಥಿತಿಗೆ ತಲುಪಿಸಿದ್ದಾರೆ ಎಂದು ಆಕ್ಷೇಪಿಸಿದರು.
ಮುಸಲ್ಮಾನರ ಮತಕ್ಕಾಗಿ ಕೀಳುಮಟ್ಟದ ರಾಜಕೀಯ ಮಾಡಲು ಸಿದ್ಧ ಎಂಬುದನ್ನು ಕಾಂಗ್ರೆಸ್ ರಾಜ್ಯ ಅಧ್ಯಕ್ಷರು ರುಜುವಾತು ಮಾಡಿದ್ದಾರೆ. ಸಿದ್ದರಾಮಯ್ಯರವರು ಕೂಡ ಟಿಪ್ಪು ಓಲೈಕೆ ಮಾಡುತ್ತಿದ್ದಾರೆ. ಇದು ಶಾಂತಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವುದಿಲ್ಲ. ಮತ್ತೆ ಬಿಜೆಪಿಗೇ ಅಧಿಕಾರ ಖಚಿತ. ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರ ಪಡೆದರೆ ಭಯೋತ್ಪಾದಕರಿಗಾಗಿ ಒಂದು ಸಂಪುಟ ದರ್ಜೆಯ ಸಚಿವ ಸ್ಥಾನ ಮೀಸಲಿಡುವ ಸ್ಥಿತಿ ಬರಬಹುದು. ಇದನ್ನು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು.
ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಬೇಕು. ಕಾಂಗ್ರೆಸ್ಸಿನ ಈ ಧೋರಣೆ ಕುರಿತು ಜಿಲ್ಲೆ, ತಾಲ್ಲೂಕು ಮತ್ತು ಮಂಡಲ ಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕು ಎಂದು ವಿನಂತಿಸಿದರು. ಪಾಕ್ ಸಚಿವರು ಮೋದಿಜಿ ಅವರ ಕ್ಷಮೆ ಯಾಚಿಸಬೇಕು. ಡಿ.ಕೆ.ಶಿವಕುಮಾರ್ ಅವರು ಜನತೆ, ಪೊಲೀಸರು ಮತ್ತು ದೇಶದ ರಕ್ಷಣಾ ಇಲಾಖೆಯ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ಬೆಂಗಳೂರು ದಕ್ಷಿಣ ಜಿಲ್ಲೆ ಅಧ್ಯಕ್ಷ ಎನ್.ಆರ್.ರಮೇಶ್, ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷ ಜಿ. ಮಂಜುನಾಥ್, ಬಿಜೆಪಿ- ಯುವ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ