ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್ 30 ಮತ್ತು 31ರಂದು ರಾಜ್ಯಕ್ಕೆ ಭೇಟಿ ಕೊಡಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ನವೋತ್ಸಾಹ ತುಂಬಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ ಅವರ ಈ ಭೇಟಿಯು ಪಕ್ಷದ ಗೆಲುವಿನ ಓಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದೆ. ಮೈಸೂರು ಭಾಗದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ಅವರ ಭೇಟಿ ಅತ್ಯಂತ ಮಹತ್ವದ್ದಾಗಲಿದೆ ಎಂದು ತಿಳಿಸಿದ್ದಾರೆ.
30ರಂದು ಮಧ್ಯಾಹ್ನ 12.30ಕ್ಕೆ ಅವರು ಮಂಡ್ಯದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಮೈಸೂರು ಭಾಗದಲ್ಲಿ ಪಕ್ಷವನ್ನು ಹೆಚ್ಚು ಸದೃಢಗೊಳಿಸುವ ವಿಶ್ವಾಸವಿದೆ. ಎಂ. ಸಿ. ರಸ್ತೆಯ ಪ್ರವಾಸಿ ಮಂದಿರದ ಸಮೀಪದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ಈ ಸಮಾವೇಶ ನಡೆಯಲಿದೆ. ಈ ಸಮಾವೇಶದ ಯಶಸ್ಸಿಗಾಗಿ ಸಚಿವರಾದ ಗೋಪಾಲಯ್ಯ, ನಾರಾಯಣ ಗೌಡ, ಡಾ. ಅಶ್ವತ್ಥನಾರಾಯಣ್, ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
31ರಂದು ಬಿಎಲ್ 2 ಮತ್ತು ಬೂತ್ ಅಧ್ಯಕ್ಷರ ಮೇಲ್ಪಟ್ಟ ಕಾರ್ಯಕರ್ತರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಅಮಿತ್ ಶಾ ಅವರು ಈ ಸಮಾವೇಶದಲ್ಲಿ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ರಾಜ್ಯದಲ್ಲಿ 150ಕ್ಕೂ ಹೆಚ್ಚು ಶಾಸಕ ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೇರುವ ಪಕ್ಷದ ವಿಜಯ ಯಾತ್ರೆಗೆ ಹೆಚ್ಚಿನ ಬಲ ತುಂಬಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ರಾಜ್ಯ ಬಿಜೆಪಿ ವತಿಯಿಂದ ಜನವರಿ 2 ರಿಂದ ಜನವರಿ 12ರ ವರೆಗೆ ‘ಬೂತ್ ವಿಜಯ ಅಭಿಯಾನ’ವನ್ನು ಆಯೋಜಿಸಲಾಗಿದೆ. ಪಕ್ಷವು ಈಗಾಗಲೇ ಜನಸಂಕಲ್ಪ ಯಾತ್ರೆಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನೋಪಯೋಗಿ, ಜನಪರ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡಿದೆ. ಅಮಿತ್ ಶಾ ಅವರ ಭೇಟಿಯು ಪಕ್ಷದ ವಿಜಯೋತ್ಸಾಹಕ್ಕೆ ಬಲ ತುಂಬಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ