ಬೆಂಗಳೂರು: ಜೆಡಿಎಸ್- ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಕುಟುಂಬವಾದ, ಭ್ರಷ್ಟಾಚಾರವನ್ನು ದೂರವಿಡಲು ಬಿಜೆಪಿ ಬೆಂಬಲಿಸಿ ಎಂದು ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಅವರು ತಿಳಿಸಿದರು.
ಬಿಜೆಪಿ ಬೂತ್ ವಿಜಯ ಸಂಕಲ್ಪ ಸಮಾವೇಶವನ್ನು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿ ಮಾತನಾಡಿದ ಅವರು, ನಾವು ಸ್ಪಷ್ಟ ಬಹುಮತದೊಂದಿಗೆ ಗೆದ್ದು ಆಡಳಿತ ನಡೆಸಲಿದ್ದೇವೆ. ಜೆಡಿಎಸ್ ನಮಗೆ ಲೆಕ್ಕಕ್ಕಿಲ್ಲ. ಆ ಪಕ್ಷ ಸೇರಿದಂತೆ ಯಾವುದೇ ಪಕ್ಷದ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು. ದೇಶಭಕ್ತರ ಜೊತೆ ನಿಲ್ಲಬೇಕೇ ಅಥವಾ ದೇಶವನ್ನು ಭಾಗಗಳನ್ನಾಗಿ ಮಾಡುವವರ ಜೊತೆ ನಿಲ್ಲಬೇಕೇ ಎಂದು ಜನರು ನಿರ್ಧಾರ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪಿಎಫ್‍ಐ ಬೆಂಬಲಿಗರ ಜೊತೆ ಇರಬೇಕೇ ಅಥವಾ ದೇಶವನ್ನು ಕಾಪಾಡುವ, ರಾಮಮಂದಿರ ನಿರ್ಮಿಸುವ ಪಕ್ಷದ ಜೊತೆ ನಿಲ್ಲಬೇಕೇ ಎಂದು ಜನರು ತೀರ್ಮಾನ ಮಾಡಬೇಕು. ಟಿಪ್ಪು ಸುಲ್ತಾನನನ್ನು ಹೀರೋ ಮಾಡುವವರನ್ನು ದೂರವಿಡಿ ಎಂದು ಮನವಿ ಮಾಡಿದರು.
ಮೆಟ್ರೋ ರೈಲು ಯೋಜನೆ ಮೂಲಕ ಇಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಿಸಿದ್ದೇವೆ. ಬೆಂಗಳೂರು ನಗರ– ವಿಮಾನನಿಲ್ದಾಣ ನಡುವಿನ ಮೆಟ್ರೋ ರೈಲು ಸಂಪರ್ಕ ಕಾಮಗಾರಿ ನಡೆದಿದೆ. ಯಡಿಯೂರಪ್ಪ- ಬೊಮ್ಮಾಯಿ ಜೋಡಿ ಬೆಂಗಳೂರು ವಿಕಾಸಕ್ಕಾಗಿ 2 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ತಂದಿದ್ದಾರೆ ಎಂದು ವಿವರ ನೀಡಿದರು.
ಸ್ಟಾರ್ಟಪ್‍ಗಳ ಕೇಂದ್ರ ಬೆಂಗಳೂರು. ಅಭಿವೃದ್ಧಿ, ಬಂಡವಾಳ ಹೂಡಿಕೆಯಲ್ಲೂ ಅದು ಅತ್ಯಂತ ಮುಂದಿದೆ ಎಂದು ಅವರು ತಿಳಿಸಿದರು. ಹೈವೇಗಳ ನಿರ್ಮಾಣ, ರೈಲ್ವೆ ಮಾರ್ಗಗಳ ಆಧುನೀಕರಣಕ್ಕೆ ಗರಿಷ್ಠ ಹಣ ಹರಿದುಬಂದಿದೆ ಎಂದ ಅವರು, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದತಿ ಮಾಡಿದ್ದನ್ನು ಸಮರ್ಥಿಸಿಕೊಂಡರು. ಕಾಂಗ್ರೆಸ್- ಜೆಡಿಎಸ್- ಸಮತಾ- ಮಮತಾ ಇದನ್ನು ವಿರೋಧಿಸಿದ್ದರು ಎಂದು ತಿಳಿಸಿದರು. ಕಾಶ್ಮೀರದಲ್ಲಿ ರಕ್ತಪ್ರವಾಹ ಹರಿಯುತ್ತದೆ ಎಂದು ಬೆದರಿಸಿದ್ದರು ಎಂದರು.
ಮೋದಿಜಿ ಅವರು ದೇಶವನ್ನು ಸುರಕ್ಷತೆಯಿಂದ ಕಾಪಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮತಬ್ಯಾಂಕಿಗಾಗಿ ಪಿಎಫ್‍ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಬೇಕಿದೆ ಎಂದು ತಿಳಿಸಿದರು.
ಗುಜರಾತ್ ಸೇರಿ 7 ರಾಜ್ಯಗಳ ಚುನಾವಣೆಯಲ್ಲಿ 5 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನೆಲಕಚ್ಚಿದೆ. ಗುಜರಾತ್‍ನಲ್ಲಿ ವಿಪಕ್ಷ ಸ್ಥಾನಮಾನವನ್ನೂ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಅವರು ನೆನಪಿಸಿದರು. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ಹೇಳಲು ಹಲವಷ್ಟು ದಿನಗಳೇ ಬೇಕು. ಅದನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ಮತ್ತು ಸಫಲತೆಯೊಂದಿಗೆ ನಾವು ಕರ್ನಾಟಕದಲ್ಲಿ ಚುನಾವಣೆ ಎದುರಿಸಲಿದ್ದೇವೆ. ನರೇಂದ್ರ ಮೋದಿಜಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮೋದಿಜಿ ಅವರು ಚುನಾವಣೆಗೆ ಸನ್ನದ್ಧರಾಗಿದ್ದಾರೆ. ಆದರೆ, ಅವರ ಸಾಧನೆಗಳನ್ನು ಬೂತ್ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದೆ ಎಂದು ಮನವಿ ಮಾಡಿದರು.
40 ಕೋಟಿಗೂ ಹೆಚ್ಚು ಜನರಿಗೆ ಜನಧನ್ ಖಾತೆ, ಕೋಟಿಗಟ್ಟಲೆ ಶೌಚಾಲಯ ನಿರ್ಮಾಣ, ಬಡವರ ಮನೆಗೆ ಸಿಲಿಂಡರ್ ಸಂಪರ್ಕ, 5 ಲಕ್ಷ ವಿಮೆ- ಇವೆಲ್ಲವೂ ನಮ್ಮ ಸರಕಾರದ ಸಾಧನೆಗಳು ಎಂದ ಅವರು, ಚೀನಾದಲ್ಲಿ ಮತ್ತೆ ಕೋವಿಡ್ ಹರಡುತ್ತಿದೆ. ಆದರೆ, ಮೋದಿಜಿ ಸರಕಾರವು 130 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಿ ಕೋವಿಡ್‍ಮುಕ್ತ ದೇಶವನ್ನಾಗಿ ಮಾಡಿದೆ ಎಂದು ವಿವರಿಸಿದರು.
ಉಚಿತ ಪಡಿತರ ಕೊಡುಗೆ ನಮ್ಮ ಸರಕಾರದ್ದು. ದೇವೇಗೌಡ, ಸಿದ್ದರಾಮಯ್ಯ ಅವರು ಬಡವರ ಬಗ್ಗೆ ಕೇವಲ ಮಾತನಾಡುತ್ತಾರೆ. ನಿಮ್ಮ ಮತ್ತು ನಮ್ಮ ಸಾಧನೆಯ ಹೋಲಿಕೆಗೆ ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲೆಸೆದರು.
ದಕ್ಷಿಣದಲ್ಲಿ ಬಿಜೆಪಿಯ ಆಡಳಿತದ ಮಹಾದ್ವಾರ ಕರ್ನಾಟಕ. ಮಂಡ್ಯದ ರ್ಯಾಲಿ ಅತ್ಯಂತ ಬೃಹತ್ತಾದುದು ಎಂದು ಮೆಚ್ಚುಗೆ ಸೂಚಿಸಿದ ಅವರು, ಕಾಂಗ್ರೆಸ್ ಪಕ್ಷದವರು ಹೊಸ ವಿಚಾರಗಳನ್ನು ತಂದು ಮತ ಕೇಳುತ್ತಾರೆ. ಕಾಂಗ್ರೆಸ್ಸಿಗೆ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ ಎಂದು ನೆನಪಿಸಿದರು.
ಜೆಡಿಎಸ್- ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜೊತೆಗೂಡುತ್ತವೆ. 2018ರಲ್ಲೂ ಹೀಗೇ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ತಿಳಿಸಿದರು.
ಬೂತ್ ಅಧ್ಯಕ್ಷರು ನಮ್ಮ ಪಕ್ಷದ ಮಾಲೀಕರು ಎಂದ ಅವರು, ನಾಡಪ್ರಭು ಕೆಂಪೇಗೌಡರಿಗೆ ನಮನ ಸಲ್ಲಿಸಿದರು. ವಿಮಾನನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ, ಕೆಂಪೇಗೌಡರ ಬೃಹತ್ ಪ್ರತಿಮೆ ಉದ್ಘಾಟನೆ ಆಗಿದೆ. ಬೆಂಗಳೂರಿನಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆದ್ದು ಕರ್ನಾಟಕದಲ್ಲಿ ಬಿಜೆಪಿ ಬಹುಮತ ಪಡೆಯುವಂತೆ ಮಾಡಬೇಕಿದೆ ಎಂದರು.
ಬೂತ್ ಸಶಕ್ತೀಕರಣ ಕೆಲಸ ನಿಮ್ಮದು. ದೇಶ ಸಶಕ್ತವಾಗಿ ಮಾಡುವ ಕೆಲಸ ಮೋದಿಜಿ ಅವರದು. ಸಾಮಥ್ರ್ಯವಂತ ದೇಶಕ್ಕಾಗಿ ಬಿಜೆಪಿ ಬೆಂಬಲಿಸಿ ಎಂದು ವಿನಂತಿಸಿದರು. ಬೆಂಗಳೂರಿನ ಬೂತ್ ಅಧ್ಯಕ್ಷರು ಮತ್ತು ಬಿಎಲ್‍ಎ-2 ಸಭೆ ಇದಾಗಿದ್ದು, ಎಲ್ಲ ಅಪೇಕ್ಷಿತರು ಪಾಲ್ಗೊಂಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಕರ್ನಾಟಕದ ಸಹ ಉಸ್ತುವಾರಿ ಶ್ರೀಮತಿ ಡಿ.ಕೆ. ಅರುಣಾ, ರಾಜ್ಯದ ಸಚಿವರು, ಶಾಸಕರು, ಪಕ್ಷದ ಮುಖಂಡರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ