ಬೆಂಗಳೂರು: ಭಾರತವು ಈಗಾಗಲೇ 3 ಟ್ರಿಲಿಯನ್ ಇಕಾನಮಿ ಆಗಿದೆ. ನಿಗದಿತ ಕಾಲಮಾನದಲ್ಲಿ ಅದು 5 ಟ್ರಿಲಿಯನ್ ಇಕಾನಮಿ ಆಗಲಿದೆ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಸಲ್ಲುವ ರೀತಿಯಲ್ಲಿ ಸಮಾಜ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೇಶ, ರಾಜ್ಯದ ಸರ್ವತೋಮುಖ ಅಭಿವೃದ್ಧಿ, ಪ್ರತಿಯೊಬ್ಬರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು. ಜಿಎಸ್‍ಟಿ ಸಡಿಲೀಕರಣ ಆಗುತ್ತಿದೆ. ಹಿಂದೆ 30ಕ್ಕೂ ಹೆಚ್ಚು ರೀತಿಯ ತೆರಿಗೆಗಳಿದ್ದವು. ಇಡೀ ದೇಶಕ್ಕೆ ಒಂದೇ ತೆರಿಗೆ ಎಂಬಂತಾಗಿದೆ ಎಂದರು.
ಜನವರಿ 16, 17ರಂದು ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಡಿದ ಜನಪರ ಕಾರ್ಯಗಳ ಚರ್ಚೆ ಮಾಡಲಾಗಿದೆ. ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಆಧಾರದಲ್ಲಿ ಕಾರ್ಯಕ್ರಮ ರೂಪಿಸಿದ್ದು, ದೇಶದ ಅಖಂಡತೆ, ಏಕತೆ ಮತ್ತು ರಾಷ್ಟ್ರದ ಹಿತವನ್ನು ಕಾಪಾಡಲು ಶ್ರಮಿಸಿದ ಕುರಿತು ಸಚಿವರು ಅಭಿಪ್ರಾಯ ಮಂಡಿಸಿದರು ಎಂದು ತಿಳಿಸಿದರು.
ನಳಿನ್‍ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿಯವರಿಂದ ಮಾಹಿತಿ
ರಾಜ್ಯದಲ್ಲಿನ ಸಂಘಟನೆ, ಬೂತ್ ಅಭಿಯಾನಗಳ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಕಾರ್ಯಕಾರಿಣಿಗೆ ಮಾಹಿತಿ ನೀಡಿದರು ಎಂದು ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸರಕಾರದ ಉತ್ತಮ ಕಾರ್ಯಗಳನ್ನು ತಿಳಿಸಿದರು. ಇನೊವೇಟಿವ್ ರಾಜ್ಯವಾಗಿ ಹೊರಹೊಮ್ಮಿದ್ದು, ಗರಿಷ್ಠ ವಿದೇಶಿ ನೇರ ಹೂಡಿಕೆ, ವಿಶೇóಷ ಹೂಡಿಕೆ ವಲಯಗಳ ಸ್ಥಾಪನೆ, ಕೈಗಾರಿಕಾ ಟೌನ್‍ಶಿಪ್, ಕಂದಾಯ ಕಾಯ್ದೆಯಡಿ ತಿದ್ದುಪಡಿ, ಭೂಸುಧಾರಣೆ ಮತ್ತಿತರ ವಿಚಾರಗಳ ಕುರಿತು ಅವರು ಮಾಹಿತಿ ನೀಡಿದ್ದಾಗಿ ಹೇಳಿದರು. ಗರಿಷ್ಠ ಸ್ಟಾರ್ಟಪ್, ರೈತ ವಿದ್ಯಾನಿಧಿ ಸೇರಿ ಸರ್ವಾಂಗೀಣ ಅಭಿವೃದ್ಧಿ ಕುರಿತು ತಿಳಿಸಿದ್ದಾಗಿ ಹೇಳಿದರು.
ಆಡಳಿತ ವಿರೋಧಿ ಅಲೆ ಬಿಜೆಪಿಗೆ ಅನ್ವಯ ಆಗುವುದಿಲ್ಲ. ತ್ರಿಪುರ ಸೇರಿ 3 ರಾಜ್ಯಗಳಲ್ಲಿ ಸದ್ಯವೇ ಚುನಾವಣೆ ನಡೆಯಲಿದೆ. ಚುನಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಅದೆಲ್ಲಕ್ಕೂ ಬಿಜೆಪಿ ಸದಾ ಸಿದ್ಧವಾಗಿರಲು ಸೂಚಿಸಿದರು ಎಂದರು.
ಸಾಮಾಜಿಕ ರಕ್ಷಣಾ ಕಾರ್ಯಕ್ರಮ, ವಿಮೆ, ಪಿಂಚಣಿ ಸೇರಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಕಾಶಿ, ಕೇದಾರ, ಬದ್ರಿನಾಥ, ರಾಮಮಂದಿರ ಸೇರಿ ಎಲ್ಲ ದೇವಸ್ಥಾನಗಳ ಅಭಿವೃದ್ಧಿ ನಡೆಯುತ್ತಿದೆ. ಡಿಜಿಟಲೀಕರಣದ ಮೂಲಕ ಭ್ರಷ್ಟಾಚಾರರಹಿತ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ತಿಳಿಸಿದರು.
ವಿವಿಧ ರಾಜ್ಯಗಳ ಸಿಎಂಗಳು, ಸಚಿವರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಮನ್ನಣೆ ಕೊಟ್ಟು 2014ರಲ್ಲಿ ಕೇಂದ್ರದಲ್ಲಿ ಎನ್‍ಡಿಎಯನ್ನು ಅಧಿಕಾರಕ್ಕೆ ತಂದಿದ್ದರು. ಜನರು ಮತ ನೀಡಿ ಸ್ಥಿರ ಸರಕಾರ ತಂದಿದ್ದರು. ಸ್ಥಿರತೆಯಿಂದ ನಾವು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ತಿಳಿಸಿದರು. ಸ್ವಾವಲಂಬಿ, ಪ್ರಗತಿಪರ ಮತ್ತು ಅಭಿವೃದ್ಧಿಶೀಲ ಭಾರತ ಮತ್ತು ತುಷ್ಟೀಕರಣದ ರಾಜಕೀಯವನ್ನು ದೂರ ಮಾಡುವ, ಜನರ ಆಶಯಗಳನ್ನು ಕಾರ್ಯರೂಪಕ್ಕೆ ತರಲು ಜನರ ಆಶಯಗಳನ್ನು ಗೌರವಿಸುವ ಅವಕಾಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಸಮಾನತೆಯ, ಸರ್ವರಿಗೂ ಒಳಿತು ಉಂಟು ಮಾಡುವ ಧ್ಯೇಯೋದ್ದೇಶದಿಂದ ಸರಕಾರ ಕಾರ್ಯ ನಿರ್ವಹಿಸಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಈಗ ಪ್ರತಿದಿನ 30 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಗ್ರಾಮೀಣ ಸಡಕ್ ಯೋಜನೆಯಡಿ ಅತಿ ಹೆಚ್ಚು ಕಿಮೀ ರಸ್ತೆ ನಿರ್ಮಾಣ ನಡೆದಿದೆ. ರೈಲ್ವೆಯು ಹಿಂದೆ ದೂರದ ವಿಚಾರವಾಗಿತ್ತು. ಅಲ್ಲಿಯೂ ಅತ್ಯುತ್ತಮ ನಿರ್ವಹಣೆ, ಎಲ್ಲ ಕಡೆ ಬ್ರಾಡ್‍ಗೇಜ್, ಟ್ರ್ಯಾಕ್ ವಿದ್ಯುದೀಕರಣ, ಟ್ರೈನಿನ ಗುಣಮಟ್ಟ ಹೆಚ್ಚಳ ಆಗಿದೆ ಎಂದು ವಿವರ ನೀಡಿದರು.
ರೈಲ್ವೆಯಲ್ಲಿ ರಕ್ಷಣೆಗೆ ಆದ್ಯತೆ ಕೊಟ್ಟಿದ್ದು, ವಂದೇ ಭಾರತ್ ರೈಲಿನ ಮೂಲಕ ಗರಿಷ್ಠ ವೇಗ, ಗುಣಮಟ್ಟದ ಪ್ರಯಾಣ ನೀಡಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ನೆರವಾಗಿದ್ದು, ಮಣ್ಣಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಆಹಾರ ಸಂಸ್ಕರಣೆ ಎಂಬುದು ಹಿಂದೆ ಕೇವಲ ದೂರದ ಕನಸಾಗಿತ್ತು. ಈಗ ಅದು ಸೇರಿ ರೈತರ ಸಬಲೀಕರಣಕ್ಕೆ ನೆರವಾಗಿದ್ದೇವೆ ಎಂದು ತಿಳಿಸಿದರು.
ನ್ಯಾನೋ ಯೂರಿಯ ಬಳಕೆ, ಔಷಧಿ ಬಳಕೆ ಸೇರಿ ಎಲ್ಲ ಕಡೆ ಭೂಮಿ ಸಂರಕ್ಷಣೆಗೆ ಮುಂದಾಗಿದ್ದೇವೆ. ವಿಮಾ ಯೋಜನೆ, ಸಿಂಚಾಯಿ ಯೋಜನೆ ಜಾರಿ, ಇ ಮಾರ್ಕೆಟ್ ಮೂಲಕ ಸೌಕರ್ಯಗಳನ್ನು ಒದಗಿಸಿದ್ದೇವೆ. ಎಲ್ಲರಿಗೂ ವಿದ್ಯುತ್, ಗ್ಯಾಸ್ ಕನೆಕ್ಷನ್, ಕುಡಿಯುವ ನೀರಿನ ಸಂಪರ್ಕ ನೀಡುತ್ತಿದ್ದೇವೆ. ಘಟ್ಟ, ಗುಡ್ಡ ಸೇರಿ ಎಲ್ಲ ಕಡೆ ಶುದ್ಧ ಕುಡಿಯುವ ನೀರಿನ ಸರಬರಾಜಾಗುತ್ತಿದೆ ಎಂದು ತಿಳಿಸಿದರು.
2.65 ಲಕ್ಷ ಆಪ್ಟಿಕಲ್ ಫೈಬರ್ ಮೂಲಕ ಹಳ್ಳಿ ಹಳ್ಳಿಗೂ ಇಂಟರ್‍ನೆಟ್ ಸೌಕರ್ಯ ಕೊಡಲಾಗಿದೆ. ಇದು ಹಿಂದೆ ಕಷ್ಟಕರ ಎಂಬ ಸ್ಥಿತಿ ಇತ್ತು. ಇದು ಡಿಜಿಟಲ್ ಶಿಕ್ಷಣ, ಆರೋಗ್ಯ ಸೇರಿ ಎಲ್ಲ ಕ್ಷೇತ್ರಗಳ ಡಿಜಿಟಲೀಕರಣಕ್ಕೆ ಪೂರಕ ಎಂದರು. ಚೀನಾ ಮತ್ತಿತರ ಗಡಿ ಪ್ರದೇಶಗಳ ದೇಶಗಳ ನಡವಳಿಕೆಯಲ್ಲೂ ನಾವಿಂದು ಬದಲಾವಣೆ ಕಾಣುತ್ತಿದ್ದೇವೆ. ಭಯೋತ್ಪಾದನೆಗೆ ಪ್ರೋತ್ಸಾಹ ಕೊಡುವ ಚೀನಾ, ಪಾಕಿಸ್ತಾನಕ್ಕೆ ಕಡಿವಾಣ ಹಾಕಿದ್ದೇವೆ ಎಂದರು.
ಪಾಕಿಸ್ತಾನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಸೇರಿ ಹಲವಾರು ಕಾರ್ಯ ಮಾಡಲಾಗಿದೆ. ಕೋವಿಡ್ ನಿರ್ಮೂಲನೆ ಮಾಡಿದ್ದೇವೆ. ಚೀನಾವು ಕೋವಿಡ್‍ನಿಂದ ಈಗ ತತ್ತರಿಸುತ್ತಿದೆ. ಭಾರತವು ನಾಗರಿಕರ ಹಿತ ಕಾಪಾಡಿ, ಉಚಿತ ಲಸಿಕೆ, ಆಹಾರ ನೀಡಿದ್ದಲ್ಲದೆ, ಆರ್ಥಿಕವಾಗಿ ಸಹಾಯ ಮಾಡಿದೆ. 20 ಲಕ್ಷ ಕೋಟಿಯನ್ನು ಆತ್ಮನಿರ್ಭರ್ ಯೋಜನೆಯಡಿ ನೀಡಿದ್ದಲ್ಲದೆ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ 1 ಲಕ್ಷದ 70 ಸಾವಿರ ಕೋಟಿ ಕೊಟ್ಟಿದೆ. ಮನ್ ಕಿ ಬಾತ್ ಅಡಿಯಲ್ಲಿ ಪ್ರಸ್ತುತ ಎಲ್ಲ ವಿಚಾರಗಳನ್ನು ಜನರ ಮುಂದಿಡುತ್ತಿದ್ದಾರೆ. ಉತ್ತಮ ವ್ಯಕ್ತಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಪ್ರಧಾನಮಂತ್ರಿಗಳ ಈ ಕಾರ್ಯ ಶ್ಲಾಘನಾರ್ಹ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ ಸುಧಾರಣೆಗಳು ಭರವಸೆ ಮೂಡಿಸಿವೆ. ಮುಂದಿನ 25 ವರ್ಷ ಕಾಲದಲ್ಲೂ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಭಾಗವಹಿಸಬೇಕು. ಈ ಆಶಯವನ್ನು ಒಳಗೊಂಡು, ರಾಜ್ಯಗಳಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸುವ ಕೆಲಸ ಆಗಿದೆ ಎಂದು ವಿವರ ನೀಡಿದರು.
ಬಹುಮತದೊಂದಿಗೆ ಸ್ಥಿರ ಸರಕಾರ
ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು, ಪೂರ್ಣ ಬಹುಮತ ಇರುವ, ಸ್ಥಿರ ಮತ್ತು ಜನರ ನಿರೀಕ್ಷೆಗೆ ಮೀರಿ ಉತ್ತಮ ಕಾರ್ಯಕ್ರಮಗಳುಳ್ಳ ಸರಕಾರ ಕೊಡಲು ನಿರ್ಧರಿಸಿದ್ದೇವೆ ಎಂದು ಡಾ|| ಸಿ.ಎನ್.ಅಶ್ವತ್ಥನಾರಾಯಣ ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ಇದಕ್ಕಾಗಿ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಫಲಾನುಭವಿಗಳ ಜೊತೆ ಮಾತುಕತೆ, ಸ್ಟಿಕರ್ ಅಂಟಿಸಲಾಗುವುದು ಎಂದರು.
ಗುಣಮಟ್ಟದ ಶಿಕ್ಷಣದ ಜೊತೆಗೇ ಡಿಜಿಟಲ್- ತಾಂತ್ರಿಕ ಕೌಶಲ್ಯವನ್ನೂ ನೀಡಲಾಗುತ್ತಿದೆ. ಕೌಶಲ್ಯವನ್ನು ಈ ಹಿಂದೆ ಕಡೆಗಣಿಸಲಾಗಿತ್ತು. ಉದ್ಯೋಗದಾತರಾಗಲು ಮುದ್ರಾ ಯೋಜನೆಯಡಿ ನೆರವು ಕೊಡಲಾಗುತ್ತಿದೆ. ಮಹಿಳಾ ಸಶಕ್ತೀಕರಣ ಕಾರ್ಯವೂ ನಡೆದಿದೆ. ಹಾಲು ಉತ್ಪಾದನೆ, ಪಶು ಸಂಗೋಪನೆ, ಬ್ಯಾಂಕಿಂಗ್, ಕರಕೌಶಲ್ಯ, ಕಸ ನಿರ್ವಹಣೆ ಸೇರಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುವಕರ ಸಬಲೀಕರಣವೂ ನಡೆದಿದೆ ಎಂದರು.
ಮತಕ್ಕಾಗಿ ಓಲೈಕೆ ರಾಜಕೀಯವನ್ನು ಬಿಜೆಪಿ ಮಾಡುವುದಿಲ್ಲ. ಜನಪರ ಸರಕಾರವನ್ನು ನಾವು ನೀಡಲಿದ್ದೇವೆ ಎಂದು ಅವರು ತಿಳಿಸಿದರು. ಎಲ್ಲ ಮುಸಲ್ಮಾನರನ್ನು ಮತಾಂಧ- ನರಹಂತಕ ಟಿಪ್ಪುವಿಗೆ ಹೋಲಿಸುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾವು ಮುನ್ನಡೆಯುತ್ತೇವೆ ಎಂದರು. ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷವು ಮತಕ್ಕಾಗಿ ರಾಜಕೀಯ ಮಾಡುತ್ತಿಲ್ಲವೇ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ದೇವಸ್ಥಾನದ ಸುತ್ತಮುತ್ತ ಬೇರೆ ಧರ್ಮದವರು ವ್ಯಾಪಾರ ಮಾಡಬಾರದು ಎಂದು ಕಾಂಗ್ರೆಸ್ ಪಕ್ಷವು ಕಾಯ್ದೆ ಮಾಡಿತ್ತು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಯೋಗ ಕಲಿಕೆಯನ್ನು ವಿಶ್ವಕ್ಕೇ ನಾವು ನೀಡಿದ್ದೇವೆ. ಇದು ವಿಶ್ವಕ್ಕೆ ಭಾರತದ ಕೊಡುಗೆ. ಸಿರಿಧಾನ್ಯ ಮೂಲಕ ಸಶಕ್ತ ದೇಶ ನಿರ್ಮಾಣ ಮಾಡಲಾಗುತ್ತಿದೆ. ಈ ವರ್ಷವನ್ನು ಸಿರಿಧಾನ್ಯ ವರ್ಷವಾಗಿ ಪ್ರಕಟಿಸಿದ್ದೇವೆ. ಜಿ 20 ಅಧ್ಯಕ್ಷತೆ ಪಡೆದು ದೇಶದ ಉದ್ದಗಲದಲ್ಲಿ 4 ಸಾವಿರ ಸ್ಥಳದಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ವಿಶ್ವದ ಎಲ್ಲರೂ ಪಾಲ್ಗೊಳ್ಳುವ ಮತ್ತು ಆ ಸ್ಥಳವನ್ನು ತಿಳಿಯಲು ಇದು ಪೂರಕವಾಗಿದೆ ಎಂದು ವಿವರಿಸಿದರು.
ಪಶ್ಚಿಮ ಬಂಗಾಲ, ತೆಲಂಗಾಣ, ತಮಿಳುನಾಡು ಸೇರಿ ಬಿಜೆಪಿ ಆಡಳಿತ ಇರದ ರಾಜ್ಯಗಳಲ್ಲಿನ ಸಂಘಟನೆ ಕುರಿತು ಆಯಾ ರಾಜ್ಯದ ಪ್ರತಿನಿಧಿಗಳು ಮಾಹಿತಿ ಕೊಟ್ಟರು ಎಂದರು. ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ