ಜೆಡಿಎಸ್, ಭೋಜೇಗೌಡರಿಂದ ದಾರಿ ತಪ್ಪಿಸುವ ಚುನಾವಣಾ ಸ್ಟಂಟ್- ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
ಬೆಂಗಳೂರು: ಪ್ರಲ್ಹಾದ್ ಜೋಶಿ ಅವರ ವಿರುದ್ಧ ಜೆಡಿಎಸ್‍ನ ಭೋಜೇಗೌಡರ ಹೇಳಿಕೆ ಕೇವಲ ಚುನಾವಣಾ ಸ್ಟಂಟ್ ಎಂದು ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯನ್ನು ನವಗ್ರಹ ಯಾತ್ರೆ ಎಂದು ಟೀಕಿಸಿದ್ದರು. ಇದರಿಂದ ಕುಪಿತರಾದ ಜೆಡಿಎಸ್‍ನ ಎಲ್ಲ ನಾಯಕರು ಬ್ರಾಹ್ಮಣರಾದ ಜೋಶಿಯವರನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದಲ್ಲದೆ 8 ಜನ ಉಪ ಮುಖ್ಯಮಂತ್ರಿ ಮಾಡಲು ತೀರ್ಮಾನಿಸಿದ್ದಾಗಿ ದಾರಿ ತಪ್ಪಿಸುವ ಕೆಲಸ ಮಾಡಿದ್ದರು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬ್ರಾಹ್ಮಣರ ಕುರಿತ ಹೇಳಿಕೆಗೆ ತೀವ್ರ ವಿರೋಧ ಗಮನಿಸಿ ಇದೀಗ ಜೋಶಿಯವರು ನೇಮಕಾತಿಗೆ ಸಂಬಂಧಿಸಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇವೆಲ್ಲವೂ ಅವರು ಜನರನ್ನು ದಾರಿ ತಪ್ಪಿಸುವ ಚುನಾವಣಾ ಸ್ಟಂಟ್ ಎಂದು ತಿಳಿಸಿದ್ದಾರೆ.
ಭೋಜೇಗೌಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದೆ ಕುಮಾರಸ್ವಾಮಿಯವರು ಸಭೆಯಲ್ಲಿ ಮಾತನಾಡಿ, ಈ ಸಾರಿ ಅಧಿಕಾರಕ್ಕೆ ಬಂದಲ್ಲಿ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದರು. ಒಂದೇ ತಿಂಗಳಲ್ಲಿ ಹೇಳಿಕೆ ಬದಲಿಸಿ ದಲಿತರನ್ನು ಸಿಎಂ ಮಾಡುವುದಾಗಿ ತಿಳಿಸಿದರು. ಈಗ ತಾವೇ ಸಿಎಂ ಆಗುವುದಾಗಿ ಹೇಳುತ್ತಿದ್ದಾರೆ. ಜೆಡಿಎಸ್ ಮತ್ತು ಕುಮಾರಸ್ವಾಮಿಯವರಿಗೆ ಇದು ಕೊನೆಯ ಚುನಾವಣೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೂಟ್‍ಕೇಸ್ ಕೊಟ್ಟರೆ ಜೆಡಿಎಸ್ ಪಕ್ಷದಲ್ಲಿ ಗೌರವ
ಕುಮಾರಸ್ವಾಮಿ ಅವರ ಅಣ್ಣನ ಮಗನಾದ ಪ್ರಜ್ವಲ್ ರೇವಣ್ಣ ಅವರು ಎಚ್‍ಡಿಕೆ ವಿರುದ್ಧ ಆಪಾದನೆ ಮಾಡಿದ್ದರು. ನಮ್ಮ ಪಕ್ಷದಲ್ಲಿ ಕುಮಾರಸ್ವಾಮಿಯವರು ಸೂಟ್‍ಕೇಸ್ ನೋಡಿದರೆ ಮಾತ್ರ ಗೌರವ ಕೊಡುತ್ತಾರೆ. ಸೂಟ್‍ಕೇಸ್ ಕೊಟ್ಟವರಿಗೆ ಮಾತ್ರ ನಮ್ಮ ಪಕ್ಷದಲ್ಲಿ ಬೆಲೆ ಎಂದು ಪ್ರಜ್ವಲ್ ಹೇಳಿದ್ದರು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಗಮನ ಸೆಳೆದಿದ್ದಾರೆ.
ಬಿಜಾಪುರದಲ್ಲಿ ಎಂಎಲ್‍ಸಿ ಮಾಡಲು ಜೆಡಿಎಸ್‍ನವರು ಕೋಟಿಗಟ್ಟಲೆ ಹಣ ಕೇಳಿದ ನಿದರ್ಶನ ಇದೆ. ಚುನಾವಣೆ ಮಾಡಲು ನಮಗೆ ಹಣ ಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅದನ್ನು ಒಪ್ಪಿಕೊಂಡಿದ್ದಾರೆ. ಇವರೆಷ್ಟು ಭ್ರಷ್ಟರು ಎಂಬುದು ಇವರಿಗೇ ಗೊತ್ತಿಲ್ಲ. ಹೊರರಾಜ್ಯದವರಾದ ರಾಮಸ್ವಾಮಿಯವರನ್ನು ಹಣ ಪಡೆದು ರಾಜ್ಯಸಭಾ ಸದಸ್ಯ ಮಾಡಲು ಆ ಸ್ಥಾನವನ್ನು ಮಾರಾಟ ಮಾಡಿದ್ದರು. ಇದೆಲ್ಲವನ್ನೂ ಭ್ರಷ್ಟಾಚಾರ ಎನ್ನುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇವರಿಗೆ ಜನಮನ್ನಣೆ ಇಲ್ಲ. ಹತಾಶರಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇವರ ಮಾತಿಗೆ ಕವಡೆ ಕಾಸಿನ ಗೌರವವೂ ಸಮಾಜದಲ್ಲಿ ಇಲ್ಲ. ಇದು ರಾಜಕೀಯ ಹತಾಶತನವನ್ನು ಎತ್ತಿ ತೋರಿಸುತ್ತದೆ. ಭೋಜೇಗೌಡರು ಮತ್ತು ಕುಮಾರಸ್ವಾಮಿಯವರ ಆಪಾದನೆಯು ತೀರಾ ಹಾಸ್ಯಾಸ್ಪದ ಮತ್ತು ಸತ್ಯಕ್ಕೆ ದೂರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇವರು ಏನೇ ಸುಳ್ಳು ಹೇಳಿದರೂ ರಾಜಕೀಯ ಭವಿಷ್ಯ ಬರುವುದಿಲ್ಲ. ಇವರ ಹೇಳಿಕೆಗಳನ್ನು ಗಮನಿಸಿದ ಜನರು ನಗುತ್ತಿದ್ದಾರೆ. ಪ್ರಲ್ಹಾದ ಜೋಶಿಯವರು ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರೊಬ್ಬ ಸ್ವಚ್ಛ, ಪ್ರಾಮಾಣಿಕ ಮತ್ತು ಸರಳ ರಾಜಕಾರಣಿ. ಅವರನ್ನು ನೋಡಿ ಇವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇವರಿಗೆ ರಾಜಕೀಯ ಪ್ರಬುದ್ಧತೆಯೇ ಇಲ್ಲ. ನಮ್ಮ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬ ಎಬಿಸಿಡಿ ಅವರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.
ಒಂದು ಸಾರಿ ಸಿ.ಟಿ.ರವಿ ಅವರು ಒಂದು ಹೇಳಿಕೆ ಕೊಟ್ಟರೆ ಅವರ ವಿರುದ್ಧ ಕೆಟ್ಟದಾಗಿ ಬಿಂಬಿಸಲು ಮುಂದಾಗುತ್ತಾರೆ. ಯಡಿಯೂರಪ್ಪ ಅವರು ಜೆಡಿಎಸ್ ವಿರುದ್ಧ ಟೀಕಿಸಿದರೆ ಅವರನ್ನು ಕೆಟ್ಟದಾಗಿ ಬೈಯುತ್ತಾರೆ. ಯಾರೇ ಇವರ ವಿರುದ್ಧ ಹೇಳಿಕೆ ಕೊಟ್ಟರೆ ಅವರನ್ನು ಬೈಯುವ ಪರಂಪರೆಯನ್ನು ರೂಢಿಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ