ಬೆಂಗಳೂರು ಅಭಿವೃದ್ಧಿಗೆ ವಿಶೇಷ ಅನುದಾನಕ್ಕೆ ಮೆಚ್ಚುಗೆ
ಬೆಂಗಳೂರು: ಸಾವಿರ ಕೋಟಿ ವಹಿವಾಟು ನಡೆಸುವ 35 ಪ್ರಮುಖ ಕಂಪೆನಿಗಳು ಬೆಂಗಳೂರು ನಗರಕ್ಕೆ ಬರುತ್ತಿವೆ. ರೂ. 8 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಹೂಡಲು ಅವು ಮುಂದಾಗಿವೆ ಎಂದು ರಾಜ್ಯದ ತೋಟಗಾರಿಕಾ ಸಚಿವ ಎನ್. ಮುನಿರತ್ನ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ಕಡಿಮೆ ಮಾಡುವುದಕ್ಕೆ ಇದು ಪೂರಕ. ನಗರದಲ್ಲಿ ಹೂಡಿಕೆ ಹೆಚ್ಚಳ ಮತ್ತು ಅದನ್ನು ಜನಸ್ನೇಹಿಯನ್ನಾಗಿ ಮಾಡಲು ಕಾರ್ಯಕ್ರಮಗಳ ಪಟ್ಟಿ ಮಾಡಿದ್ದೇವೆ. ಟರ್ಮಿನಲ್ 2 ಅನ್ನು 5 ಸಾವಿರ ಕೋಟಿಯಲ್ಲಿ ನಿರ್ಮಿಸಿದ್ದು, ಅದನ್ನು ಪ್ರಧಾನಿಯವರು ಉದ್ಘಾಟಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಬಜೆಟ್‍ನಲ್ಲಿ ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿಯನ್ನು ಘೋಷಿಸಿದ್ದಾರೆ. ರಾಜಕಾಲುವೆಗಳಿಗೆ ಪ್ರತ್ಯೇಕವಾಗಿ, 110 ಹಳ್ಳಿಗಳ ರಸ್ತೆ ಅಭಿವೃದ್ಧಿ ಸೇರಿ 9,600 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ. ಬೇರೆ ಯಾವ ಸರಕಾರಗಳೂ ಇಷ್ಟು ಹಣ ಕೊಟ್ಟಿರಲಿಲ್ಲ. ಕಾವೇರಿ 5ನೇ ಹಂತಕ್ಕೆ ಸಂಬಂಧಿಸಿ ಸುಮಾರು 5,500 ಕೋಟಿ ವೆಚ್ಚದಲ್ಲಿ 2023-24ರಲ್ಲಿ 775 ಎಂಎಲ್‍ಡಿ ನೀರನ್ನು ಇಲ್ಲಿಗೆ ತರಲಾಗುವುದು ಎಂದು ವಿವರಿಸಿದರು.
775 ಎಂಎಲ್‍ಡಿ ನೀರು ತಂದಾಗ 110 ಹಳ್ಳಿಗಳ ಮತ್ತು ನಗರದಲ್ಲಿ ಕೆಲವೆಡೆ ಇರುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಿದೆ ಎಂದು ತಿಳಿಸಿದರು. ಬೆಂಗಳೂರು ನಗರ ಸುರಕ್ಷತೆಯ ದೃಷ್ಟಿಯಿಂದ 1,640 ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದೇವೆ. ಸರಗಳ್ಳತನದಂಥ ಅಪರಾಧ ಪ್ರಮಾಣ ಇನ್ನಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂದು ನುಡಿದರು. ಸರಕಾರದ ಮುಂಜಾಗ್ರತೆಯಿಂದ ಅಪರಾಧ ಕಡಿಮೆ ಆಗಿದೆ ಎಂದರು.
5 ಜಿ ನೆಟ್‍ವರ್ಕ್‍ನಡಿ ಎಂಜಿ ರಸ್ತೆಯಲ್ಲಿ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಪೌರಕಾರ್ಮಿಕರ ಅವಶ್ಯಕತೆಯು ಕೋವಿಡ್ ವೇಳೆ ಸ್ಪಷ್ಟಗೊಂಡಿದೆ. ಅವರಿಗಾಗಿ 5,155 ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. 3,078 ಮನೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಉಳಿದವನ್ನು ಶೀಘ್ರವೇ ಪೂರ್ಣಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಭಾರತ್‍ಮಾಲಾ ಪರಿಯೋಜನೆ ಅಡಿಯಲ್ಲಿ 15 ಸಾವಿರ ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ಟೌನ್, ವರ್ತುಲ ರಸ್ತೆ ಕಾಮಗಾರಿ ಆರಂಭಿಸಿದ್ದೇವೆ. ಕಳೆದ ಜೂನ್‍ನಲ್ಲಿ ಪ್ರಧಾನಿಯವರು ಯೋಜನೆಗೆ ಅಡಿಗಲ್ಲು ಹಾಕಿದ್ದಾರೆ. ಕೃಷಿ ಇಳುವರಿಗೆ ರೈತರ ಆದಾಯ ಹೆಚ್ಚಳದ ದೃಷ್ಟಿಯಿಂದ ಬೆಂಗಳೂರು ನಗರ ಜಿಲ್ಲೆಯÀಲ್ಲಿ ಒಟ್ಟು 4,15,236 ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ ಮಾಡಿದ್ದೇವೆ. ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದು ವಿವರ ನೀಡಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಮ್ಮ ಸರಕಾರವು 2,753 ವೈಯಕ್ತಿಕ ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದೇವೆ. ದೇವನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೌಶಲಾಭಿವೃದ್ಧಿ ಕೇಂದ್ರದ ವಿಸ್ತರಣೆಗೆ 2 ಕೋಟಿ ಮಂಜೂರು ಮಾಡಿದ್ದೇವೆ. ರೈಲ್ವೆ ಜೋಡಿ ಮಾರ್ಗ ಯೋಜನೆಗೆ ಕೇಂದ್ರ ಸರಕಾರ ಆದ್ಯತೆ ಕೊಡುತ್ತಿದೆ. ಬೈಯಪ್ಪನಹಳ್ಳಿ- ಹೊಸೂರು ಜೋಡಿ ಮಾರ್ಗಕ್ಕೆ 100 ಕೋಟಿಯನ್ನು ಹೂಡಲಾಗುತ್ತಿದೆ. ಕೆ.ಆರ್.ಪುರ- ವೈಟ್‍ಫೀಲ್ಡ್ ಯೋಜನೆಗೆ 250 ಕೋಟಿ ವಿನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳು ಸೌಲಭ್ಯ, ಗುಣಮಟ್ಟ ಮತ್ತು ಕಡಿಮೆ ಬೆಲೆ ಮೂಲಕ ಅತ್ಯಂತ ಜನಪ್ರಿಯವಾಗಿವೆ. 265 ಕಡೆ ಅವು ಕಾರ್ಯ ನಿರ್ವಹಿಸುತ್ತಿವೆ. ಅವು ಜನರಿಗೆ ಪ್ರಯೋಜನ ಕೊಡುತ್ತಿವೆ. ಪ್ರಧಾನಮಂತ್ರಿ ಕೌಶಲ ಯೋಜನೆಯಡಿ ಯುವಕರಿಗೆ ಹೆಚ್ಚು ಉದ್ಯೋಗ ಕೊಡಲು ಆದ್ಯತೆ ನೀಡುತ್ತಿದ್ದೇವೆ. 33,252 ಅಭ್ಯರ್ಥಿಗಳಿಗೆ ತರಬೇತಿ ಕೊಟ್ಟಿದ್ದು, ಅವರ ಜೀವನ ಅನುಕೂಲಕರ ಆಗಲು ಎಲ್ಲ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,065 ಮನೆ ನಿರ್ಮಿಸಿ ಹಸ್ತಾಂತರ ಮಾಡಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ಇದೇ ಜಿಲ್ಲೆಯಲ್ಲಿ ಆಶ್ರಯ, ಬಸವ ಯೋಜನೆಯಡಿ 165 ಮನೆ ನಿರ್ಮಿಸಿದ್ದೇವೆ. ಎಸ್‍ಸಿ, ಎಸ್‍ಟಿ ಕಾಲೊನಿಗಳಿಗೆ ವಸತಿ ಸೌಲಭ್ಯದಡಿ 95 ಮನೆ ನಿರ್ಮಿಸಿದ್ದೇವೆ ಎಂದರು.
ರಾಮನಗರ, ದೊಡ್ಡಬಳ್ಳಾಪುರ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಡಿ 50 ಹಾಸಿಗೆಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಮಾರುಕಟ್ಟೆ ಮತ್ತಿತರ ಕಡೆ ಸ್ತ್ರೀ ಶೌಚಾಲಯ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆ ಮಾಡಿ ಕಮಾಂಡ್ ಸೆಂಟರ್ ತೆರೆದಿದ್ದೇವೆ ಎಂದರು.
4 ಹೊಸ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ. ಹವಾಮಾನ ಬದಲಾವಣೆ, ಪ್ರವಾಹ ನಿಯಂತ್ರಣಕ್ಕೆ ವಿಶ್ವ ಬ್ಯಾಂಕ್ ನೆರವಿನಡಿ ಯೋಜನೆ ಜಾರಿ ಮಾಡಲಾಗುತ್ತಿದೆ. 195 ಕಿಮೀಗಳ ಒಳಚರಂಡಿ ಮತ್ತು ಮೋರಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
ಬೆಂಗಳೂರು ಮೆಟ್ರೊ 3ನೇ ಹಂತದ ಕಾಮಗಾರಿಯ ಡಿಪಿಆರ್ (44.65 ಕಿಮೀ) ಕೇಂದ್ರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ 16,328 ಕೋಟಿಗೂ ಹೆಚ್ಚು ವೆಚ್ಚ ಆಗಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್‍ನಿಂದ ಕೆಂಪೇಗೌಡ ಏರ್‍ಪೋರ್ಟ್ ವರೆಗೆ ಮೆಟ್ರೊ ಸಂಪರ್ಕ 58 ಕಿಮೀಗೂ ಹೆಚ್ಚು ಉದ್ದ ಇರಲಿದ್ದು, 40.15 ಕಿಮೀ ಈ ವರ್ಷವೇ ಪ್ರಾರಂಭ ಆಗಲಿದೆ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಮಟ್ಟದ 25 ಗ್ಲೋಬಲ್ ಸಿಟಿಗಳಲ್ಲಿ ಬೆಂಗಳೂರು ನಗರ ಕೂಡ ಒಂದು ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಬೆಂಗಳೂರು ಇನ್ನೂ ಹೆಚ್ಚು ಜನಪ್ರಿಯತೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿಗೆ ಹೆಚ್ಚುವರಿ ಹಣ ಕೊಡಲಾಗಿದೆ. ಬೆಂಗಳೂರು ನಗರ ದೇಶದಲ್ಲೇ ಅತಿ ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎಂದ ಅವರು, ವಿರೋಧ ಪಕ್ಷದವರು ಕಾರಣವಿಲ್ಲದೆ ಟೀಕಿಸುತ್ತಾರೆ; ಸಂಘ ಸಂಸ್ಥೆಗಳನ್ನು ಎತ್ತಿ ಕಟ್ಟುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಕಾಂಗ್ರೆಸ್ ಕಚೇರಿ ಬಾಗಿಲು ಮುಚ್ಚಬಹುದು..
ನಮ್ಮ ಸಂಪರ್ಕದಲ್ಲಿ ಇರುವವರನ್ನು ಪಟ್ಟಿ ಮಾಡಿದರೆ ಇವತ್ತೇ ಕಾಂಗ್ರೆಸ್ ಕಚೇರಿ ಬಾಗಿಲು ಮುಚ್ಚಿ ಹೋಗುತ್ತದೆ ಎಂದು ಸಚಿವ ಎನ್. ಮುನಿರತ್ನ ಅವರು ತಿಳಿಸಿದರು. ಆದರೆ, ಈಗ ಅದರ ಪ್ರಸ್ತಾಪ ಬೇಡ ಎಂದು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್‍ನವರು ಸೋಲುವ ಆತಂಕ ಇರುವ ಕಡೆ ಆಪರೇಷನ್ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲುವುದಾದರೆ ನಾವು 17 ಜನರಿಗೆ ಅವರು ಯಾಕೆ ಬಾಗಿಲು ತೆಗೆದು ಕಾಯುತ್ತಿದ್ದರು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಾವೇ ಮತ್ತೆ ಸರಕಾರ ಮಾಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಕಿವಿಗೆ ಹೂವು ಇಟ್ಟುಕೊಂಡ ಪೋಸ್ಟರ್ ಅಂಟಿಸುವುದು ಬಿಜೆಪಿ ಗೆಲುವನ್ನು ತಿಳಿಸುವ ಕ್ರಮ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಬಿಜೆಪಿಗೆ, ಹೂವಿನ ಗುರುತಿಗೆ ಮತ ಹಾಕಲು ಅವರು ಜನರಿಗೆ ಪರೋಕ್ಷವಾಗಿ ತಿಳಿಸುತ್ತಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್‍ನವರು ಚಲಾವಣೆಗೆ ಬರಲು ಏನಾದರೂ ಆರೋಪ ಮಾಡುತ್ತಾರೆ. ನಿರುದ್ಯೋಗದಿಂದ ಇರುವ ಕಾರಣ ಹೀಗಾಗಿದೆ ಎಂದು ಟೀಕಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 23ರಂದು ಕರ್ನಾಟಕಕ್ಕೆ ಭೇಟಿ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ತಿಳಿಸಿದರು. ಅವತ್ತು ಬೆಳಿಗ್ಗೆ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸಾರ್ವಜನಿಕ ಸಭೆ, ಪ್ರಮುಖರ ಸಭೆ, ಸಂಜೆ ಬೆಂಗಳೂರಿನಲ್ಲಿ ಪ್ರಬುದ್ಧರ ಸಭೆ ಹಾಗೂ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಬೆಂಗಳೂರಿನ ಸಚಿವರು, ಸಂಸದರು, ಶಾಸಕರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಗೋಪಿನಾಥ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ