ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದೇ ಪಡೆದು ಮತ್ತೆ ಸರಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಂತೆ ನೋವು ನಿಮಗಿರದು. ಇಲ್ಲಿ ಆನಂದ ನಿಮಗೆ ಸಿಗಲಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷವು ಅಧಿಕಾರವನ್ನು ಗಳಿಸಲು ಹೋರಾಡುವ ಪಕ್ಷ. ಬಿಜೆಪಿ ದೇಶವನ್ನು ಉಳಿಸಲು ಕಾರ್ಯ ಮಾಡುವ ಪಕ್ಷ ಎಂದು ವಿವರಿಸಿದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅತ್ಯುನ್ನತ ಸ್ಥಾನಕ್ಕೆ ಏರಿದೆ. ಮೋದಿಯವರ ಶತಾಯುಷಿ ತಾಯಿಯವರ ನಿಧನ ಆದಾಗ ಮಗನಾಗಿ ಅಂತ್ಯಸಂಸ್ಕಾರವನ್ನು ಮಾಡಿ, ಕೇವಲ ಎರಡೂವರೆ ಗಂಟೆಯಲ್ಲಿ ದೇಶದ ಕಾರ್ಯಕ್ಕೆ ಮತ್ತೆ ಮರಳಿದರು. ಇದು ನಮ್ಮ ನಾಯಕರ ಆದರ್ಶ. ಇಂಥ ಆದರ್ಶಗಳಿಂದ ನಮ್ಮ ಪಕ್ಷ ಬೆಳೆದಿದೆ ಎಂದು ತಿಳಿಸಿದರು.
ನಮ್ಮ ಪಕ್ಷ ಕಾರ್ಯಕರ್ತರ ಆಧರಿತ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ನಿವಾಸಿಗರು ಮತ್ತು ವಲಸಿಗರು ಎಂಬ ಭಾವನೆ, ಕಿತ್ತಾಟ ಇದೆ. ವಲಸಿಗ ಮುಖ್ಯಮಂತ್ರಿ ಆಗಬೇಕೇ ಅಥವಾ ಮೂಲ ನಿವಾಸಿ ಸಿಎಂ ಆಗಬೇಕೇ ಎಂಬ ಚರ್ಚೆ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದೆ. 5 ವರ್ಷ ಆಡಳಿತ ಮಾಡಿ 2018ರಲ್ಲಿ ಚುನಾವಣೆಗೆ ಹೋದಾಗ ಮುನಿರತ್ನ, ಸುಧಾಕರ್, ಲಕ್ಷ್ಮೀನಾರಾಯಣ ಅಲ್ಲಿದ್ದರು. ಆದರೂ ಪಡೆದುದು ಕೇವಲ 80 ಸೀಟು. ಅವರೆಲ್ಲ ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ನಮ್ಮ ಸೀಟು ಹೆಚ್ಚಲಿದೆ. ಕಾಂಗ್ರೆಸ್ ಸೀಟು ಇನ್ನಷ್ಟು ಕಡಿಮೆ ಆಗಲಿದೆ ಎಂದರು.
ನಮ್ಮ ಪಕ್ಷ ಹಾಲು ಇದ್ದಂತೆ. ಸ್ವಲ್ಪ ಸಕ್ಕರೆ ಹಾಕಿದಾಗ ಸಕ್ಕರೆ ಕಾಣುವುದಿಲ್ಲ. ಆದರೆ, ಹಾಲು ಸಿಹಿ ಆಗುತ್ತದೆ ಎಂದು ವಿಶ್ಲೇಷಿಸಿದರು.
ಪರಿವಾರವಾದದಿಂದ ಬೇಸತ್ತು ರಾಷ್ಟ್ರವಾದದ ಚಿಂತನೆಯನ್ನು ಅಳವಡಿಸಿಕೊಳ್ಳಲು ಬಂದ ಎಲ್ಲ ನಾಯಕರಿಗೂ ಸ್ವಾಗತ ಎಂದರು. ರಾಜಕಾರಣದಲ್ಲಿ ಪಕ್ಷ ತೊರೆದಾಗ ಆತಂಕ, ಉದ್ವೇಗ ಸಹಜ. ಆದರೆ, ಸ್ವಲ್ಪ ದಿನಗಳ ಬಳಿಕ ನೀವೂ ಬಿಜೆಪಿಯಲ್ಲಿ ಖುಷಿಯಲ್ಲಿ ಇರುವಂತಾಗಲಿದೆ; ಅದು ನಮ್ಮ ಪಕ್ಷದ ವಿಶೇಷತೆ ಎಂದು ನುಡಿದರು.
ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ|| ಕೆ.ಸುಧಾಕರ್ ಅವರು ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ಗ್ರಾಮಾಂತರ ಮತ್ತಿತರ ಜಿಲ್ಲೆಗಳಿಂದ ಅನೇಕ ಮುಖಂಡರು ಬಿಜೆಪಿ ಸೇರುತ್ತಿರುವುದು ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದರು.
ಸೋತ ಕಡೆಗಳಲ್ಲಿ ಸೋಲಿನ ವಿಶ್ಲೇಷಣೆ ಮಾಡಬೇಕು. ಗೆಲ್ಲಲು ಸಂಘಟನೆಯನ್ನು ಬಲಪಡಿಸಬೇಕಿದೆ. ಮೋದಿಜಿ ಅವರು ಕೊಟ್ಟ ರೈತ ಸಮ್ಮಾನ್ ಸೇರಿ ಅನೇಕ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕು. ರಾಜ್ಯ ಬಿಜೆಪಿ ಸರಕಾರದ ಸಾಧನೆಗಳನ್ನು ನಾವು ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ತೋಟಗಾರಿಕಾ ಸಚಿವ ಎನ್. ಮುನಿರತ್ನ ಅವರು ಮಾತನಾಡಿ, ಬಿಜೆಪಿಯಲ್ಲಿ ಪ್ರೀತಿ ಮತ್ತು ಅಭಿಮಾನ ಇದೆ. ಕಲ್ಮಷ ಇಲ್ಲದೆ ನಮ್ಮವರು ಎಂದು ಆದರಿಸುತ್ತಾರೆ. ಅದು ಬೆಲೆ ಕಟ್ಟಲಾಗದ ವಿಷಯ ಎಂದು ನುಡಿದರು.
ಕಾಂಗ್ರೆಸ್ ಮುಖಂಡರು ಗೆಲ್ಲುವ ಮಾತನಾಡುತ್ತಾರೆ. 5 ವರ್ಷ ಅಧಿಕಾರ ನಡೆಸಿದ್ದ ಸಿದ್ದರಾಮಯ್ಯ ಅಧಿಕಾರ ಪಡೆಯಲಾಗಲಿಲ್ಲ. ಸಮ್ಮಿಶ್ರ ಸರಕಾg ರಚನೆಯ ಸ್ವಯಂಕೃತ ಅಪರಾಧ ಮಾಡಿದ್ದು, ಅದಕ್ಕೆ ಕ್ಷಮೆ ಇಲ್ಲ. ಕಾಂಗ್ರೆಸ್ ಮತ್ತೆ ಬಲಹೀನವಾಗಿದೆ. ಅದು ಸರಕಾರ ಮಾಡಲು ಅಸಾಧ್ಯ. 60ಕ್ಕಿಂತ ಹೆಚ್ಚು ಸೀಟನ್ನು ಕಾಂಗ್ರೆಸ್ ಗೆಲ್ಲಲಾಗದು ಎಂದು ತಿಳಿಸಿದರು. ಬಿಜೆಪಿ ಮತ್ತೆ ಸರಕಾರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಮುನಿರಾಜು, ಹಿರಿಯ ನಾಯಕ ಲಕ್ಷ್ಮೀನಾರಾಯಣ ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾಂಗ್ರೆಸ್ ಮಾಜಿ ರಾಜ್ಯ ಕಾರ್ಯದರ್ಶಿ ಸಪ್ತಗಿರಿ ಶಂಕರ್ ನಾಯಕ್, ವೀರಶೈವ ಮಹಾಸಭಾ ಅಧ್ಯಕ್ಷ ರೇಣುಕಾ ಪ್ರಸಾದ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬುದಿಹಾಳ್ ಹನುಮಂತರಾಜು, ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ತುಳಸಿ ರಾಮ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಅವರು ಬೆಂಬಲಿಗರ ಜೊತೆಗೆ ಬಿಜೆಪಿ ಸೇರಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ