ಬೆಂಗಳೂರು: ರಸ್ತೆ, ಕುಡಿಯುವ ನೀರಿನಂಥ ಮೂಲಸೌಕರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಜಿ ಅವರು ಆದ್ಯತೆ ನೀಡಿದ್ದಾರೆ. ಎಲ್ಲ ಮನೆಗಳಿಗೆ 2024ರೊಳಗೆ ನಲ್ಲಿ ನೀರು ಒದಗಿಸುವುದಾಗಿ ಪ್ರಕಟಿಸಿದ್ದಾರೆ ಎಂದು ರಾಜ್ಯದ ಸಚಿವ ಆರ್.ಅಶೋಕ್ ಅವರು ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಶ್ರೀನಿವಾಸಪುರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ, ಗ್ಯಾರಂಟಿ ಎನ್ನುವವರು 50 ವರ್ಷಕ್ಕೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರು. ಕಾಂಗ್ರೆಸ್ ನಾಯಕ ರಮೇಶ್‍ಕುಮಾರ್ ಅವರೇ ಹೇಳಿದಂತೆ ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿ ಅವರ ಸರಕಾರ ಬಂದರೆ ಅಭಿವೃದ್ಧಿ ಆಗುವುದಿಲ್ಲ. ನರೇಂದ್ರ ಮೋದಿಜಿ ಅವರು ಇರುವವರೆಗೆ ಇವರೇನೇ ತಿಪ್ಪರಲಾಗ ಹೊಡೆದರೂ ಕಾಂಗ್ರೆಸ್ ಆಗಲೀ ಜೆಡಿಎಸ್ ಆಗಲೀ ಅಧಿಕಾರಕ್ಕೆ ಬರುವುದಿಲ್ಲ ಎಂದು ವಿಶ್ವಾಸದಿಂದ ನುಡಿದರು.
ಕಾಂಗ್ರೆಸ್- ಜೆಡಿಎಸ್ ಹೊಂದಾಣಿಕೆಯ ಸರಕಾರ ಕೇವಲ 14 ತಿಂಗಳಲ್ಲಿ ನೆಗೆದು ಬಿತ್ತು. ಸಿದ್ದರಾಮಯ್ಯ, ಕುಮಾರಸ್ವಾಮಿ ಸರಕಾರ ಇದ್ದಾಗ ಈಗಿನ ಚುನಾವಣಾ ಭರವಸೆಗಳನ್ನೇಕೆ ಈಡೇರಿಸಲಿಲ್ಲ ಎಂದು ಅವರು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟಿಲ್ಲವೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅಧಿಕಾರ ಇದ್ದಾಗ 2 ಸಾವಿರವೂ ಇಲ್ಲ; 200 ಯೂನಿಟ್ ವಿದ್ಯುತ್ ಇಲ್ಲ; ಅಲ್ಲದೇ 10 ಕೆಜಿ ಅಕ್ಕಿಯೂ ಇರಲಿಲ್ಲ ಎಂದು ಟೀಕಿಸಿದರು.
ಭರವಸೆ ಕೊಟ್ಟು ಟೋಪಿ ಹಾಕುವುದರಲ್ಲಿ ಕಾಂಗ್ರೆಸ್ಸಿನವರು ಎತ್ತಿದ ಕೈ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಪ್ರವಾಹ, ಕೋವಿಡ್ ಇರಲಿಲ್ಲ. ಆದರೂ, ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಆಕ್ಷೇಪಿಸಿದರು. ಲೂಟಿಕೋರರ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದ ಅವರು, ನುಡಿದಂತೆ ನಡೆಯುವ ಸಮರ್ಥ ನಾಯಕರಿರುವ ಪಕ್ಷ ಬಿಜೆಪಿಯನ್ನು ಬೆಂಬಲಿಸಲು ಮನವಿ ಮಾಡಿದರು.
ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಡಾ ವೇಣುಗೋಪಾಲ್, ಮುಖಂಡರಾದ ಸಚ್ಚಿದಾನಂದ ಮೂರ್ತಿ, ಮುನಿವೆಂಕಟಪ್ಪ ಅವರು ಭಾಗವಹಿಸಿದ್ದರು. ಬಳಿಕ ವಿವಿಧೆಡೆ ನಡೆದ ರೋಡ್ ಷೋದಲ್ಲಿ ಮುಖಂಡರು, ಸಹಸ್ರಾರು ಜನ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ