ಬೆಂಗಳೂರು : ಒಳ ಮೀಸಲಾತಿ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಚಿವ ಸಂಪುಟದ ನಿರ್ಣಯ ಸ್ವಾಗತಾರ್ಹ ಎಂದು ರಾಜ್ಯದ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಮತ್ತು ಇತರ ಯಾವುದೇ ಸಮಾಜಕ್ಕೆ ಅನ್ಯಾಯ ಆಗಿಲ್ಲ. ಅತ್ಯುತ್ತಮ ನಿರ್ಣಯ ಇದಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಇಚ್ಛಾಶಕ್ತಿಯಿಂದ ಎಲ್ಲ ಸಮುದಾಯದವರಿಗೆ ಮೀಸಲಾತಿ ಮೂಲಕ ನ್ಯಾಯ ಲಭಿಸಲಿದೆ ಎಂದು ಅವರು ತಿಳಿಸಿದರು.
ಬಂಜಾರ, ಬೋವಿ, ಕೊರಚ, ಕೊರಮರನ್ನು ಎಸ್‍ಸಿ ಪಟ್ಟಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ. ಇದರ ಬಗ್ಗೆ ರಾಷ್ಟ್ರೀಯ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಎಡ, ಬಲ ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ ಎಂದು ವಿವರಿಸಿದರು. ಹಲವು ವರ್ಷಗಳಿಂದ ಗಲಾಟೆ ಇತ್ತು; ಅದು ಈಗ ಬಗೆಹರಿದಿದೆ ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಕ್ಯಾಬಿನೆಟ್ ಉಪ ಸಮಿತಿ ರಚಿಸಲಾಗಿತ್ತು. ಇದೊಂದು ಒಳ್ಳೆಯ ನಿರ್ಣಯ. ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಹಲವು ವರ್ಷಗಳಿಂದ ಇದರ ಕುರಿತು ಬೇಡಿಕೆ ಇತ್ತು ಎಂದು ನುಡಿದರು.
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ನ್ಯಾ. ಸದಾಶಿವ ಆಯೋಗವನ್ನು ಕಾಂಗ್ರೆಸ್ ಪಕ್ಷದ ಸರಕಾರ ನೇಮಿಸಿತ್ತು. ಬಿಜೆಪಿ ಅದನ್ನು ನೇಮಿಸಿದ್ದಲ್ಲ ಎಂದರಲ್ಲದೆ, ಆಯೋಗದ ವರದಿಯನ್ನು ಜಾರಿಗೊಳಿಸದೆ ಇರಲು ಕಾರಣವೇನು ಎಂದು ಪ್ರಶ್ನಿಸಿದರು.
ಕಣ್ಣೊರೆಸಲು ಆಯೋಗ ರಚಿಸಲಾಯಿತೇ?
ಕಾಂಗ್ರೆಸ್ ಪಕ್ಷದವರಿಂದ ಕಣ್ಣೊರೆಸಲು ಆಯೋಗ ರಚಿಸಲಾಯಿತೇ? ದಲಿತರ ಮೂಗಿಗೆ ತುಪ್ಪ ಸವರಲು ಆಯೋಗ ರಚಿಸಲಾಗಿತ್ತೇ? ವೋಟ್ ಬ್ಯಾಂಕಾಗಿ ಅವರನ್ನು ಉಳಿಸಿಕೊಳ್ಳಲು ಇದನ್ನು ಮಾಡಿದ್ದರೇ? ಒಂದು ವೇಳೆ ನಿಮಗೆ ನಿಜವಾದ ಕಳಕಳಿ ಇದ್ದರೆ ನಿಮ್ಮ ವರದಿಯನ್ನು ನೀವು ಜಾರಿ ಮಾಡಬೇಕಿತ್ತು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
5 ವರ್ಷಗಳಾಗಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರು, 14 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿಯವರು ವರದಿ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ನಾವು ಸಮಿತಿ ರಚಿಸಿ ಅದರ ಆಧಾರದಲ್ಲಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ವಿವರಿಸಿದರು.
ಆರು ವರ್ಷ ಜಾರಿ ಮಾಡದವರು ಈಗ ಮತ್ತೆ ಆಶ್ವಾಸನೆ ಕೊಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರದು ದಿಟ್ಟ ನಿರ್ಧಾರ. ಇದನ್ನು ನಮ್ಮ ಎಲ್ಲ ಸಮುದಾಯಗಳು ಒಕ್ಕೊರಲಿನಿಂದ ಸ್ವಾಗತಿಸುತ್ತಿವೆ ಎಂದು ತಿಳಿಸಿದರು.
ಗೊಂದಲಗಳಿಗೆ ತೆರೆ ಎಳೆಯಬೇಕು. ಅಣ್ಣತಮ್ಮಂದಿರಂತೆ ಇರಬೇಕು ಎಂದು ಎಲ್ಲ ಸಮುದಾಯಗಳಿಗೆ ಅವರು ಮನವಿ ಮಾಡಿದರು. ಮೀಸಲಾತಿ ವಿಚಾರದಲ್ಲಿ ಎಡ, ಬಲ, ಲಂಬಾಣಿ, ಬೋವಿ ಇತ್ಯಾದಿ ಗೊಂದಲ ಇತ್ತು. ಬಂಜಾರ, ಬೋವಿ, ಕೊರಚ, ಕೊರಮರನ್ನು ಎಸ್‍ಸಿ ಪಟ್ಟಿಯಿಂದ ಹೊರಗಿಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದರು.
ಕಾಂಗ್ರೆಸ್ಸಿನ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಖಂಡಿಸಿದ ಅವರು, ಕಾಂಗ್ರೆಸ್ ಪಕ್ಷದವರು ಕೇವಲ ಮತಕ್ಕಾಗಿ ಮೊಸಳೆಕಣ್ಣೀರು ಸುರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರ ಅಂಡಿಗೆ ಈಗಾಗಲೇ ಬೆಂಕಿ ಬಿದ್ದಿದೆಯೇ ಎಂದು ಪ್ರಶ್ನಿಸಿದರು.
ಬಹುದಿನಗಳ ಕಾಲದಿಂದ ನೆನೆಗುದಿಗೆ ಬಿದ್ದ ವಿಚಾರಕ್ಕೆ ಈಗ ಪರಿಹಾರ ಸಿಕ್ಕಿದೆ. ಸಾಧಕ- ಬಾಧಕ ಅಭ್ಯಸಿಸಿ ನಿರ್ಣಯ ಮಾಡಿದ್ದೇವೆ ಎಂದು ತಿಳಿಸಿದರು. ಮೀಸಲಾತಿ ಪಡೆಯುವವರೆಲ್ಲರೂ ಭಿಕ್ಷುಕರೇ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು. ಮೀಸಲಾತಿ ಎಂಬುದು ಹಕ್ಕು. ಗ್ಯಾರಂಟಿ ಕಾರ್ಡ್ ಎಂಬುದು ಭಿಕ್ಷೆ. ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಅಸಾಂವಿಧಾನಿಕ ಎಂದು ಅವರನ್ನು ಅಲ್ಲಿಂದ ಹೊರಗಿಟ್ಟು ಶೇ 10ರಷ್ಟು ಇಡಬ್ಲ್ಯುಎಸ್‍ಗೆ ಸೇರಿಸಿದ್ದೇವೆ ಎಂದು ವಿವರಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ