ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆಧುನಿಕ ಶಕುನಿ’ ಎಂದು ಸಂಬೋಧಿಸಿ ಅವರ ಘನತೆಗೆ ಚ್ಯುತಿ ತಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಮನವಿ ಮಾಡಿದೆ. ಈ ಕುರಿತು ಬಿಜೆಪಿ ಕಾನೂನು ಪ್ರಕೋಷ್ಠದ ವತಿಯಿಂದ ಇಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸುರ್ಜೇವಾಲಾ ಅವರು “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಧುನಿಕ ಶಕುನಿ, ಮೀಸಲಾತಿ ಮೂಲಕ ಜನರನ್ನು ಒಡೆದು ಸಂಘರ್ಷ ಸೃಷ್ಟಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ಅದು ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಈ ಹೇಳಿಕೆಯಿಂದ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ಉಂಟಾಗಿದೆ. ಈ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗುವ ಮತ್ತು ಕೆರಳುವ ಸಂಭವವಿದೆ. ಆದ್ದರಿಂದ ಇಂಥ ಹೇಳಿಕೆ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಕೋರಿದೆ.
ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ರಾಜ್ಯ ಸಮಿತಿ ಸದಸ್ಯ ವಸಂತ್‍ಕುಮಾರ್, ಜಿಲ್ಲಾ ಸಂಚಾಲಕ ಯಶವಂತ ಎಂ. ಅವರು ಈ ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.
ಇನ್ನೊಂದು ಮನವಿ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್‌ಬಿಐ ವಿಧಿಸಿದ ದಂಡವನ್ನು ಮೋದಿ ಅವರ ಬಿಜೆಪಿ ಸರಕಾರ ತಿರುಪತಿ ಮೇಲೆ ದಾಳಿ ಮಾಡಿಸಿದೆ ಎಂದು ಸುಳ್ಳು ಆರೋಪ ಮಾಡಿ ಬಿಜೆಪಿ ವಿರುದ್ಧ ದುರುದ್ದೇಶಪೂರ್ವಕ ಹೇಳಿಕೆ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಈ ಸಂಬಂಧ ಇನ್ನೊಂದು ದೂರು ನೀಡಲಾಗಿದೆ.
ಸುರ್ಜೇವಾಲಾ ಅವರು ನಿನ್ನೆ, ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್‌ಬಿಐ ವಿಧಿಸಿದ ದಂಡವನ್ನು ಮೋದಿ ಅವರ ಬಿಜೆಪಿ ಸರಕಾರ ತಿರುಪತಿ ಮೇಲೆ ದಾಳಿ ಮಾಡಿಸಿ 3.10 ಕೋಟಿ ದಂಡ ವಿಧಿಸಿದೆ ಎಂದು ಸುಳ್ಳು ಆರೋಪ ಮಾಡಿ, ಜನರ ಧಾರ್ಮಿಕ ಭಾವನೆಗಳು ಕೆರಳುವಂತೆ ಮಾಡಿದ್ದಾರೆ. ಈ ಮೂಲಕ ಸರಕಾರ ಮತ್ತು ಪಕ್ಷದ ವಿರುದ್ಧ ಜನತೆಯನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ. ಈ ರೀತಿಯ ಸುಳ್ಳು ಹೇಳಿಕೆಗಳು ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಕೊಟ್ಟ ದೂರಿನಲ್ಲಿ ತಿಳಿಸಲಾಗಿದೆ.
ರಿಸರ್ವ್ ಬ್ಯಾಂಕಿನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ಉಲ್ಲಂಘನೆಗಾಗಿ ಈ ದಂಡ ವಿಧಿಸಲಾಗಿದೆ. ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಈ ರೀತಿ ಹೇಳಿಕೆ ಕೊಟ್ಟ ಸುರ್ಜೇವಾಲಾರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.
ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ರಾಜರಾಜೇಶ್ವರಿ ನಗರ ಸಂಚಾಲಕ ಶಿವಕುಮಾರ್.ಎಲ್, ಜಿಲ್ಲಾ ಸಮಿತಿ ಸದಸ್ಯ ವೆಂಕಟಮುನಿ ಶೆಟ್ಟಿ ಅವರು ಈ ಮನವಿಗೆ ಸಹಿ ಮಾಡಿದ್ದಾರೆ.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ರಾಜ್ಯ ಪ್ಯಾನಲಿಸ್ಟ್ ಮಧು ಎನ್ ರಾವ್, ಕಾನೂನು ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ವಸಂತ್ ಕುಮಾರ್, ಯಶವಂತಕುಮಾರ್ ಅವರು ಈ ನಿಯೋಗದಲ್ಲಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ