ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಅವರ ಆತ್ಮೀಯ ಸಂಬಂಧದ ಪರಿಣಾಮವಾಗಿ ಬಿಜೆಪಿಗೆ ಅವರು ಪ್ರಚಾರ ಮಾಡಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರಿನ ಅಶೋಕ ಹೋಟೆಲ್‍ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ನಡುವೆ ಆತ್ಮೀಯ ಸಂಬಂಧವಿದೆ ಆದ್ದರಿಂದ ಕಿಚ್ಚ ಸುದೀಪ್ ಅವರು ನಾನು ಹೇಳಿದ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು. ಸುದೀಪ್ ಅವರ ಬೆಂಬಲದಿಂದ ಪಕ್ಷಕ್ಕೆ ಭಾರಿ ಬೆಂಬಲ ಸಿಕ್ಕಿದಂತಾಗಿದೆ. ಅವರ ಸಮಯ ಮತ್ತು ಗೌರವವನ್ನು ಗಮನದಲ್ಲಿಟ್ಟುಕೊಂಡು ಅವರ ಪ್ರಚಾರದ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ನನ್ನ ಅತ್ಯಂತ ಪ್ರೀತಿ ಪಾತ್ರರಾದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲ ನೀಡುತ್ತೇನೆ ಎಂದು ಚಿತ್ರನಟ ಕಿಚ್ಚ ಸುದೀಪ್ ಅವರು ತಿಳಿಸಿದರು. ಬೊಮ್ಮಾಯಿ ಅವರು ಸೂಚಿಸಿದ ಆಯ್ದ ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ರಾಜ್ಯಾದ್ಯಂತ ಎಲ್ಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ನನಗೆ ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಬೊಮ್ಮಾಯಿ ಅವರನ್ನು ಮಾಮ ಎಂದೇ ಸಂಬೋಧಿಸಿದ ಅವರು, ಪ್ರಕಾಶ್ ರಾಜ್ ಒಳ್ಳೆಯ ಕಲಾವಿದ. ಅವರ ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದೇನೆ ಎಂದು ತಿಳಿಸಿದರು. ನಾನು ರಾಜಕಾರಣ ಸೇರುತ್ತಿಲ್ಲ ಎಂದ ಅವರು, ಇದು ಮಾನವೀಯತೆಯ ಪರವಾದ ನಿಲುವು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಪ್ರಚಾರಕ್ಕೆ ಹಣ ಪಡೆಯುವಿರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲ ಎಂದರಲ್ಲದೇ, ಸಿನಿಮಾ ಕ್ಷೇತ್ರದಲ್ಲಿ ಹಲವರು ಹಣಕೊಡಲು ಬಾಕಿ ಇದೆ. ಮಾಮನಿಗೋಸ್ಕರ ಬಂದಿದ್ದೇನೆ ಅವರ ಪರವಾಗಿ ನಿಲ್ಲುತ್ತೇನೆ. ಸಿನಿಮಾ ಕ್ಷೇತ್ರ ಬಿಟ್ಟು ರಾಜಕೀಯಕ್ಕೆ ಬಂದು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ಬೊಮ್ಮಾಯಿ ಅವರು ಮತ್ತು ಅವರು ತಿಳಿಸಿದ ಕೆಲವು ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಲಿದ್ದೇನೆ ಎಂದು ಅವರು ಪುನರುಚ್ಚರಿಸಿದರು.
ಬೊಮ್ಮಾಯಿ ಅವರು ನನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದಾರೆ ಆದ್ದರಿಂದ ಅವರ ಪರವಾಗಿ ನಿಲ್ಲುತ್ತಿದ್ದೇನೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ನನಗೆ ಗೌರವ ಇದೆ ಎಂದು ತಿಳಿಸಿದರು. ಒತ್ತಡಕ್ಕಾಗಿ ಬಂದಿಲ್ಲ; ಪ್ರೀತಿಗಾಗಿ ಬೊಮ್ಮಾಯಿ ಅವರ ಪರವಾಗಿ ನಿಂತಿದ್ದೇನೆ ಎಂದರು. ಪ್ರಚಾರದ ಬ್ಲೂಪ್ರಿಂಟ್ ಇನ್ನು ಸಿದ್ದವಾಗಿಲ್ಲ ಆದರೆ, ನನ್ನ ಕಷ್ಟಗಳ ಕುರಿತು ಅವರಿಗೂ ಅರಿವಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಕೊಟ್ಟರು.
ರಾಜ್ಯದ ಕಂದಾಯ ಸಚಿವ ಆರ್ ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ|| ಕೆ. ಸುಧಾಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ