ಬೆಂಗಳೂರು: ನಿಷೇಧಿತ ಪಿಎಫ್‍ಐ ಮತ್ತು ಎಸ್‍ಡಿಪಿಐನಂತಹ ಶಕ್ತಿಗಳೊಂದಿಗೆ ತಾವು ಹೊಂದಿರುವ ಸಂಬಂಧವೇನು ಎಂಬುದನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರು ಆಗ್ರಹಿಸಿದರು.
ಬೆಂಗಳೂರಿನ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಹೇಳಿ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿನ 1,700 ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಇದು ಆ ಸಂಘಟನೆಗಳ ಮೇಲೆ ಕಾಂಗ್ರೆಸ್‍ಗಿರುವ ಪ್ರೀತಿ ಮತ್ತು ಸಂಬಂಧವನ್ನು ತೋರುತ್ತದೆ ಎಂದು ಟೀಕಿಸಿದರು.
ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಹಿಂತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂದು ಎಸ್‍ಡಿಪಿಐ ಅಧ್ಯಕ್ಷ ಹೇಳಿದ್ದಾರೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಸಂಬಂಧವಿತ್ತು ಎಂದು ಎಸ್‍ಡಿಪಿಐನ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಕಾಂಗ್ರೆಸ್, ಇಂತಹ ಶಕ್ತಿಗಳೊಂದಿಗೆ ಹೊಂದಿರುವ ಸಂಬಂಧ ರಾಷ್ಟ್ರೀಯವಾಗಿ ಅಂತರಾಷ್ಟ್ರೀಯವಾಗಿ ಪರಿಣಾಮ ಬೀರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಂಪಿ ಉತ್ಸವ ನಿರ್ಲಕ್ಷಿಸಿ, ಟಿಪ್ಪು ಜಯಂತಿ ಆಚರಣೆಗೆ ಆಸಕ್ತಿ ತೋರಿತು. 2019ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಟಿಪ್ಪುಗೆ ಗೌರವ ನಮನ ಸಲ್ಲಿಸಿದ್ದರು. ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಕುಮ್ಮಕ್ಕು ನೀಡಿದ್ದವು. ಹಿಜಾಬ್ ವಿವಾದವನ್ನು ಸಹ ಇದೇ ಸಂಘಟನೆಗಳು ಹುಟ್ಟು ಹಾಕಿದ್ದವು ಎಂದು ಅವರು ಆರೋಪಿಸಿದರು.
ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ಸ್ಫೋಟ ಪ್ರಕರಣವನ್ನು ಹೇಗೆ ಭಯೋತ್ಪಾದಕ ಕೃತ್ಯ ಎನ್ನಲಾಗುತ್ತದೆ. ಈ ಪ್ರಕರಣದ ಆರೋಪಿ ಅಮಾಯಕ ಎಂದು ಹೇಳಿದ್ದರು. ಇದು ಆ ಸಂಘಟನೆಯ ಮೇಲೆ ಡಿ.ಕೆ.ಶಿವಕಕುಮಾರ್‍ಗೆ ಇರುವ ಪ್ರೀತಿ ತೋರುತ್ತದೆ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪಕ್ಷಗಳಿಗೆ ಮತದಾರರು ತಕ್ಕ ಉತ್ತರ ಉತ್ತರವನ್ನು ನೀಡಲಿದ್ದು ಶಾಂತಿ ಮತ್ತು ಪ್ರಗತಿಯೊಂದಿಗೆ ರಾಜ್ಯವನ್ನು ಕೊಂಡೊಯ್ಯುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಅವರು ಹೇಳಿದರು.
ಆಂತರಿಕ ಮತ್ತು ಭಾಹ್ಯ ಭದ್ರತೆ ಇದ್ದರೆ ದೇಶದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಯಾಗುತ್ತದೆ. ಅದರಂತೆ ನರೇಂದ್ರಮೋದಿಯವರ ಸರ್ಕಾರ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಿದ್ದರಿಂದ ಮತ್ತು ಸುರಕ್ಷತೆ ಒದಗಿಸಿದ್ದರಿಂದ ವಿದೇಶಗಳ ಉದ್ಯಮಗಳು ಸಹ ಭಾರತಕ್ಕೆ ಸ್ಥಳಾಂತರಗೊಳ್ಳಲಾರಂಭಿಸಿವೆ ಎಂದು ಸುಧಾಂಶು ತ್ರಿವೇದಿ ಹೇಳಿದರು.
ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಚಾಮರಾಜಪೇಟೆ ನಿಯೋಜಿತ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಮಾತನಾಡಿ ಅವರು ಕಾಂಗ್ರೆಸ್ ಪಕ್ಷ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಿಮಿಯನ್ನು ನಿಷೇಧಿಸಿದ ನಂತರ 2016ರಲ್ಲಿ ಅದೇ ಸಂಘಟನೆಯ ಮುಂದಿನ ಭಾಗವಾಗಿ ಪಿಎಫ್‍ಐ ಹುಟ್ಟಿಕೊಂಡಿತು. ಪಿಎಫ್‍ಐಯನ್ನು ನಿಷೇಧಿಸಿದ ನಂತರ ಅದರ ಚಟುವಟಿಕೆಗಳು ಎಸ್‍ಡಿಪಿಐ ಮೂಲಕ ನಡೆಯುತ್ತಿವೆ ಎಂದರು.
ಕಾಲದಿಂದ ಕಾಲಕ್ಕೆ ಒಂದೇ ಉದ್ದೇಶದ ಶಕ್ತಿ ಬೇರೆ, ಬೇರೆ ರೂಪ ಪಡೆಯುತ್ತಿದೆ. ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಸ್ಥೆಗಳ ಹೆಸರಿನಲ್ಲಿ ಎಸ್‍ಡಿಪಿಐ ನಂತಹ ಸಂಘಟನೆಗಳು ಮಧ್ಯ ಏಷ್ಯಾ ದೇಶಗಳಿಂದ ಅಪಾರ ಮೊತ್ತದ ದೇಣಿಗೆ ಪಡೆಯುತ್ತಿವೆ. ಈ ಹಣವನ್ನು ಕೇರಳದ ಮೂಲಕ ಇಡೀ ದೇಶಕ್ಕೆ ರಾಷ್ಟ್ರ ವಿರೋಧಿ, ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಕೆಲವೇ ಬಡವರ ಖಾತೆಗಳಲ್ಲಿ ವಿದೇಶಿ ಹಣವನ್ನು ತುಂಬಲಾಗುತ್ತಿದೆ. ಅವರಿಗೆ ಸುಳ್ಳು ಆಶ್ವಾಸನೆ ನೀಡಿ ಮೂಲಭೂತವಾದ ಬಿತ್ತಲಾಗುತ್ತಿದೆ. ಬಾಂಗ್ಲಾದೇಶದಿಂದಲೂ ಜನರನ್ನು ಕರೆ ತಂದು ಆಶ್ರಯ ನೀಡಿ, ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಭಯೋತ್ಪಾದನೆಗೆ ಹಣಕಾಸು ನೆರವು ಗಂಭೀರ ವಿಷಯವಾಗಿದೆ ಎಂದು ಗಮನ ಸೆಳೆದರು.
ಎಸ್‍ಡಿಪಿಎಐ ನಂತಹ ಸಂಘಟನೆಗಳು ಇತರ ಅಂಗ ಸಂಸ್ಥೆಗಳ ಮೂಲಕವೂ ಹಲವು ಮಾರ್ಗಗಳಿಂದ ವಿದೇಶಗಳಿಂದ ಹಣ ಪಡೆಯುತ್ತಿವೆ. ಪಿಎಫ್‍ಐ ಮೇಲೆ 19 ಕೊಲೆ ಪ್ರಕರಣಗಳು ಧೃಡಪಟ್ಟಿದ್ದು, ಇದರ 160ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಾಗೆಯೇ ಈ ಸಂಘಟನೆಯ ನೂರಾರು ಸದಸ್ಯರ ಕೊಲೆ ಯತ್ನ ಪ್ರಕರಣಗಳಿವೆ ಎಂದು ಹೇಳಿದರು.
ಭಯೋತ್ಪಾದಕ ಚಟುವಟಿಕೆಗಳಿಗೆ ದೂರಸಂಪರ್ಕ ಮತ್ತು ಡಿಜಿಟಲ್ ಕರೆನ್ಸಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ನಿಯಂತ್ರಿಸುವತ್ತ ಮತ್ತು ನಿಷೇಧಿತ ಸಂಘಟನೆಗಳು ಮತ್ತೆ ಇತರ ಸಂಘಟನೆಗಳಲ್ಲಿ ಮುಂದವರೆಯುವುದನ್ನು ಗುರುತಿಸುವತ್ತ ಅಪಾಯ ವಿಶ್ಲೇಷಣೆ ಮತ್ತು ಕಣ್ಗಾವಲು ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ಭಾಸ್ಕರ್ ರಾವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರರಾದ ಗಿರಿಧರ್ ಉಪಾಧ್ಯಾಯ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ