ಬೆಂಗಳೂರು: ಬಿಜೆಪಿ ಮೂಲಕ ಎಲ್ಲ ರೀತಿಯ ಅಧಿಕಾರ ಪಡೆದು ಈಗ ಕಾಂಗ್ರೆಸ್ ಸೇರಿರುವ ಜಗದೀಶ ಶೆಟ್ಟರ್ ಅವರು ನಮ್ಮ ಪಕ್ಷದ ವಿರುದ್ಧ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾರವರು ಶೆಟ್ಟರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಜಗದೀಶ ಶೆಟ್ಟರ್ ಅವರು ರಾಜ್ಯದ ಮುಖ್ಯಮಂತ್ರಿ, ಸಚಿವ, ಶಾಸಕರೂ ಆಗಿದ್ದವರು. ಬಿಜೆಪಿ ಮೂಲಕ ಎಲ್ಲಾ ಸ್ಥಾನಗಳನ್ನು ಪಡೆದು, ಪಕ್ಷದ ನೀತಿ ನಿಯಮಗಳು, ಪ್ರಕ್ರಿಯೆಗಳ ಬಗ್ಗೆ ಅರಿವಿದ್ದರೂ, ಅವೆಲ್ಲವನ್ನು ಮರೆತು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ನಮ್ಮ ಪಕ್ಷದ ವಿರುದ್ಧ ಆರೋಪ ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‍ನಂಥ ಸಿದ್ಧ್ದಾಂತಗಳು ಬಿಜೆಪಿಯಲ್ಲಿದ್ದರೆ ನೀವು ಮುಖ್ಯಮಂತ್ರಿಯಾಗುವ ಅವಕಾಶ ಸಿಗುತ್ತಿತ್ತೇ? ಪಕ್ಷದಲ್ಲಿ ದೊಡ್ಡ ಹುದ್ದೆಗೆ ಏರುವ ಅವಕಾಶ ಇರುತ್ತಿತ್ತೇ? ಎಂದು ಅವರು ಪ್ರಶ್ನಿಸಿದ್ದಾರೆ. ಶೆಟ್ಟರ್ ಅವರಿಗೆ ಇಂತಹ ಹೇಳಿಕೆ ಶೋಭೆ ತರುವುದಿಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.
ಪಕ್ಷವು ಎಲ್ಲಿಯೂ ಜಗದೀಶ ಶೆಟ್ಟರ್ ಅವರಿಗೆ ಅನ್ಯಾಯ ಮಾಡಿಲ್ಲ. ರಾಷ್ಟ್ರಮಟ್ಟದ ರಾಜಕಾರಣಕ್ಕೆ ನಿಮ್ಮ ಅವಶ್ಯಕತೆ ಇದೆ, ನಿಮ್ಮ ಸ್ಥಾನವನ್ನು ಪಕ್ಷದ ಯುವಕರೊಬ್ಬರಿಗೆ, ತಾವು ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಅಹ್ವಾನಿಸಲಾಗಿತ್ತು. ಆದರೆ, ಶೆಟ್ಟರ್ ಅವರು ಇದನ್ನು ತಿರಸ್ಕರಿಸಿ, ಹಟ ಮಾಡಿ, ಪಕ್ಷ ಬಿಟ್ಟು, ಸುಳ್ಳು ಆರೋಪಗಳು ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಜಗದೀಶ ಶೆಟ್ಟರ್ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ, ಇಷ್ಟು ವರ್ಷಗಳ ಕಾಲ ಜಗದೀಶ ಶೆಟ್ಟರ್ ಅವರ ಗೆಲುವಿಗಾಗಿ ಶ್ರಮಿಸಿದ ಮಹೇಶ ಟೆಂಗಿನಕಾಯಿಯವರಿಗೆ ಪಕ್ಷವು ಟಿಕೆಟ್ ನೀಡಿದೆ. ಶೆಟ್ಟರ್ ಅವರು ಇದನ್ನು ಸ್ವಾಗತಿಸಿ, ದೊಡ್ಡಗುಣದಿಂದ ಈ ಚುನಾವಣೆಯ ನೇತೃತ್ವವಹಿಸಿ, ತನಗಾಗಿ ದುಡಿದ ಮಹೇಶ ಟೆಂಗಿನಕಾಯಿಯವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕಿತ್ತು. ಆದರೆ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಸಚಿವ ಭಗವಂತ ಖೂಬಾ ಕಿಡಿ ಕಾರಿದ್ದಾರೆ.
ಇತರ ಪಕ್ಷಕ್ಕಿಂತ ವಿಭಿನ್ನ ಪಕ್ಷ ಬಿಜೆಪಿ
ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವಂತಹ ಪಕ್ಷ, ಅದಕ್ಕೆ ನೇರ ಉದಾಹರಣೆ ನಾನಾಗಿದ್ದೇನೆ, ನನ್ನಂತ ಸಣ್ಣ ಕಾರ್ಯಕರ್ತನಿಗೆ 2014ರಲ್ಲಿ ಟಿಕೆಟ್ ನೀಡಿ ಇಂದು ರಾಷ್ಟ್ರಮಟ್ಟದಲ್ಲಿ ಕೇಂದ್ರ ಸಚಿವ ಸ್ಥಾನ ನೀಡಿದೆ, ಇದುವೇ ನಮ್ಮ ಪಕ್ಷದ ತತ್ವ ಸಿದ್ದಾಂತ ಪಾರ್ಟಿ ವಿಥ್ ಢಿಪರೇನ್ಸ್ ಎಂಬುದು ಎತ್ತಿ ತೋರಿಸುತ್ತದೆ ಎಂದು ಭಗವಂತ ಖೂಬಾ ತಿಳಿಸಿದ್ದಾರೆ.
ಯಾರಿಗೆ ಯಾವಾಗ ಟಿಕೆಟ್ ನೀಡಬೇಕು, ಎಷ್ಟು ಜನ ಹೊಸಬರಿಗೆ ಅವಕಾಶ ನೀಡಬೇಕೆಂದು ಪಕ್ಷವು ನಿರ್ಣಯ ಮಾಡುತ್ತದೆ. ತಾವು ಪಕ್ಷದ ಹಿರಿಯ ವ್ಯಕ್ತಿಯಾಗಿ ಇದನ್ನರಿತು ಪಕ್ಷದ ಸೇವೆಗೆ ಮುಂದಾಗಬೇಕಿತ್ತು. ಆದರೆ ನಿಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಇನ್ನೊಬ್ಬರನ್ನು ದೂಷಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಭಗವಂತ ಖೂಬಾರವರು ಪಕ್ಷದ ವರಿಷ್ಠರ ಮೇಲೆ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ. ನಿಮ್ಮ ಕಣ ಕಣದಲ್ಲಿಯೂ ಸಂಘದ ಸಿದ್ಧಾಂತವಿರುವ ನೀವು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಹೇಗೆ ಸಮರ್ಥಿಸಿಕೊಳ್ಳುವಿರಿ? ಮತಾಂಧ ಟಿಪ್ಪು, ಪಿ.ಎಫ್.ಐ, ಕೆ.ಎಫ್.ಡಿ ಸಂಘಟನೆಗಳನ್ನು ಸಮರ್ಥಿಸಿಕೊಳ್ಳುವವರ ಜೊತೆ ಹೇಗೆ ವೇದಿಕೆ ಹಂಚಿಕೊಳ್ಳುವಿರಿ? ಅಧಿಕಾರ ದಾಹಕ್ಕಾಗಿ ಇಂತಹ ರಾಜಕಾರಣ ಬೇಕಾ ಎಂದು ಜಗದೀಶ ಶೆಟ್ಟರವರಿಗೆ ಕೇಂದ್ರ ಸಚಿವ ಭಗವಂತ ಖೂಬಾರವರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರಿ 24 ಗಂಟೆಯೊಳಗೆ ನಿಮ್ಮ ಬಾಯಿಂದ ಇಂತಹ ಮಾತುಗಳು, ಆರೋಪಗಳು ಬರುತ್ತಿರುವುದು, ನಿಮಗಾಗಿ ಇಷ್ಟು ದಿನ ದುಡಿದ ಕಾರ್ಯಕರ್ತರಿಗೆ ಹಾಗೂ ಎಲ್ಲರಿಗೂ ನೋವಾಗುತ್ತಿದೆ, ಮೇ 13 ರಂದು ನಿಮ್ಮ ವಿರುದ್ಧ ಬರುವ ಫಲಿತಾಂಶದ ನಂತರ ಮತ್ತೆ ನಿಮಗೆ ನೆನಪಾಗುವುದು ನಮ್ಮ ಭಾರತೀಯ ಜತನಾ ಪಕ್ಷವೇ ನೆನಪಿಡಿ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು, ಲಿಂಗಾಯತರಿಗೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದೆಲ್ಲಾ ಹೇಳಿಕೊಂಡು, ಮೊಸಳೆ ಕಣ್ಣೀರು ಹಾಕಿ, ಕೆಳಮಟ್ಟದ ಪ್ರಚಾರಕ್ಕೆ ಕೈ ಹಾಕುತ್ತಿದ್ದಾರೆ, ಮೊದಲು ನಿಮ್ಮ ಪಕ್ಷದಲ್ಲಿರುವ ಲಿಂಗಾಯತರಿಗೆ ಗೌರವಯುತವಾಗಿ ನಡೆಸಿಕೊಳ್ಳುವಂತೆ ಮಾಡಿ, ನಿಮ್ಮಲ್ಲಿರುವ ಲಿಂಗಾಯತರಿಗೆ ಅನ್ಯಾಯವಾಗುತ್ತಿರುವುದು ಸರಿಪಡಿಸಿಕೊಳ್ಳಿ ಎಂದು ಸಚಿವರು ಕಾಂಗ್ರೇಸ್ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನಿಮ್ಮ ಪಕ್ಷದ ಲಿಂಗಾಯತ ನಾಯಕರಾದ ಶಾಮನೂರ ಶಿವಶಂಕರಪ್ಪ, ಎಮ್.ಬಿ.ಪಾಟೀಲ್, ಈಶ್ವರ ಖಂಡ್ರೆಯವರು ಲಿಂಗಾಯತರಿಗೆ 70 ಕ್ಕೂ ಹೆಚ್ಚು ಸೀಟುಗಳು ನೀಡಬೇಕೆಂದು ಭಿಕ್ಷೆ ಬೇಡುವಂತೆ ಬೇಡಿದ್ದರು. ಅಷ್ಟಾದರೂ ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ನೀಡಿರುವುದು ಕೇವಲ 51 ಸೀಟುಗಳು. ಆದರೆ ನಮ್ಮ ಪಕ್ಷ ಉದಯಿಸಿದ ದಿನದಿಂದಲು ಲಿಂಗಾಯತರಿಗೆ, ಒಕ್ಕಲಿಗರಿಗೆ ಹಾಗೂ ಎಲ್ಲಾ ಜಾತಿ ಜನಾಂಗದವರಿಗೆ ಸಮಾನವಾದ ಗೌರವ ಹಾಗೂ ಅವಕಾಶ ನೀಡುತ್ತಿದೆ. ಯುವಕರಿಗೆ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಸಚಿವರು ಪಕ್ಷದ ನಿರ್ಧಾರಗಳನ್ನು ಸ್ವಾಗತಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ