ಬೆಂಗಳೂರು: ನರಗುಂದದಲ್ಲಿ ಇಂದು ಹೇಳಿಕೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ‘ನರೇಂದ್ರಮೋದಿ ವಿಷದ ಹಾವು. ಆ ಹಾವಿನ ವಿಷ ನೆಕ್ಕಿದರೆ ಸತ್ತಂತೆ. ಮಲಗಿಬಿಡ್ತೀರಾ.’ ಎಂದಿದ್ದಾರೆ. ಈ ಹೇಳಿಕೆ ಸಂಬಂಧ ಮಲ್ಲಿಕಾರ್ಜುನ ಖರ್ಗೆ ತಕ್ಷಣವೇ ಮೋದಿಯವರು ಮತ್ತು ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವರಾದ ಕು.ಶೋಭಾ ಕರಂದ್ಲಾಜೆ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿ ಒಂದು ಪಕ್ಷದ ಪ್ರತಿನಿಧಿಯಲ್ಲ. 140 ಕೋಟಿ ಜನರನ್ನು ಪ್ರತಿನಿಧಿಸುತ್ತಾರೆ. ಜಗತ್ತು ಇಂದು ಭಾರತದ ಕಡೆ ನೋಡುತ್ತಿದೆ. ಕೆಲವರು ವಿಶ್ವಾಸದಿಂದ, ಕೆಲವರು ಆತಂಕದಿಂದ ನೋಡುತ್ತಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ವಿದೇಶಗಳಲ್ಲಿ ಗೌರವವಿದ್ದು, ಕೆಂಪು ಹಾಸಿನ ಸ್ವಾಗತವಿದೆ. ದೇಶ ಸೇವೆಗಾಗಿ ಹಗಳಿರಲು ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು.
ಕಾಂಗ್ರೆಸ್ ಇಂತಹ ವಿಶ್ವವಂದ್ಯ ನಾಯಕರನ್ನು ಪದೇ ಪದೇ ಅವಮಾನ ಮಾಡುತ್ತಿದೆ. ಪ್ರಧಾನಮಂತ್ರಿ ಕುರ್ಚಿ ತಮಗೇ ಶಾಶ್ವತ ಎಂದು ಭಾವಿಸಿರುವ ಕಾಂಗ್ರೆಸ್, ಬೇರೆಯವರು ಕುರ್ಚಿ ಅಲಂಕರಿಸಿದರೆ ಅವರನ್ನು ಕೆಟ್ಟ ಭಾಷೆಯಲ್ಲಿ ನಿಂದಿಸುತ್ತದೆ ಎಂದು ಟೀಕಿಸಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣ್‍ದೀಪ್ ಸುರ್ಜೇವಾಲ, ನರೇಂದ್ರಮೋದಿಯವರನ್ನು ಕ್ರೂರಿ, ಕೋತಿ, ತುಘಲಕ್ ಮುಂತಾದ ಪದಗಳಿಂದ ನಿಂದಿಸಿದ್ದಾರೆ. ಉಗ್ರಪ್ಪ ಇನ್ನೂ ಮುಂದೆ ಹೋಗಿ ಮೋದಿಯವರನ್ನು ಆಧುನಿಕ ಭಸ್ಮಾಸುರ ಎಂದಿದ್ದಾರೆ. ಖರ್ಗೆಯವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಮೋದಿಯವರನ್ನು ಇಲಿ, ರಾವಣ ಎಂದಿದ್ದಾರೆ. ಇನ್ನು ಪ್ರಿಯಾಂಕ ಗಾಂಧಿ ಪ್ರಧಾನಿಯವರನ್ನು ಹಿಟ್ಲರ್ ಎಂದು ಜರಿದಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ರಾಜಕೀಯ ಕಾರಣಕ್ಕೆ ಕಾಂಗ್ರೆಸ್‍ನವರು ಇಂತಹ ನಿಂದನೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಆಕ್ಷೇಪಿಸಿದರು.
ಎಐಸಿಸಿ ಅಧ್ಯಕ್ಷರಾಗಿರುವ ಅವರ ಮಾತನ್ನು ಪ್ರಪಂಚ ಕೇಳಿಸಿಕೊಳ್ಳುತ್ತದೆ. ಕಾಂಗ್ರೆಸ್ ಎಷ್ಟು ನೀಚ ಮಟ್ಟಕ್ಕೆ, ಅಧೋಗತಿಗೆ ಇಳಿದು ನೆಲ ಕಚ್ಚಿದೆ ಎಂಬುದಕ್ಕೆ ಈ ಹೇಳಿಕೆಯೇ ನಿದರ್ಶನವಾಗಿದೆ. ಜನಸೇವೆ, ಅಭಿವೃದ್ಧಿ ಹೆಸರಲ್ಲಿ ಮತ ಕೇಳಬೇಕು. ಆದರೆ, ಈ ರೀತಿ ನಿರಂತರ ಅಪಮಾನ ಮಾಡುವುದರ ಮೂಲಕ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಾಲದಲ್ಲಿ ತಾನೇ ಮಾಡಿದ ಪಾಪದಿಂದ ಕಾಂಗ್ರೆಸ್, ಲೋಕಸಭೆಯಲ್ಲಿ ಮತ್ತು ಕೆಲ ರಾಜ್ಯಗಳ ವಿಧಾನಸಭೆಗಳಲ್ಲಿ ವಿರೋಧ ಪಕ್ಷದ ಸ್ಥಾನವನ್ನೂ ಕಳೆದುಕೊಂಡಿತ್ತು. ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸೋಲಿನ ಸೂಚನೆ ಸಿಕ್ಕಿದೆ. ಜನರ ಬೆಂಬಲ ಇಲ್ಲ. ಖರ್ಗೆಯವರ ಸಭೆಗಳಿಗೆ ಜನ ಸೇರುತ್ತಿಲ್ಲ. ಇದೇ ಕಾರಣದಿಂದ ಮಾಧ್ಯಮಗಳನ್ನು ಬೇರೆಡೆ ಸೆಳೆಯಲು, ಪಡ್ಡೆ ಹುಡುಗರ ಚಪ್ಪಾಳೆ ಗಿಟ್ಟಿಸಲು ಖರ್ಗೆ ಇಂತಹ ಹೇಳಿಕೆ ನೀಡಿದ್ದಾರೆ. ಹಿರಿಯ ನಾಯಕರೊಬ್ಬರಿಂದ ಈ ರೀತಿಯ ಹೇಳಿಕೆ ಯಾರೂ ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ವಕ್ತಾರ ಗಿರಿಧರ್ ಉಪಾಧ್ಯಾಯ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ