ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇವತ್ತು ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರದ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕವನ್ನು, ಕರ್ನಾಟಕದ ನೆಲವನ್ನು ಇಷ್ಟು ವರ್ಷಗಳ ಕಾಲದಿಂದ ಹನುಮನುದಿಸಿದ ನಾಡು ಎಂದು ಕರೆಯುತ್ತಿದ್ದೆವು. ಹನುಮನುದಿಸಿದ ನಾಡಿಗೆ ಸುರ್ಜೇವಾಲಾ ಅವರು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದ್ದಾರೆ. ‘ಹನುಮ ಗಂಗಾವತಿಯಲ್ಲಿ ಹುಟ್ಟಿದ್ದಾರೋ ಇಲ್ಲವೋ, ನನ್ನ ಊರಿಗೆ ಕೂಡ ಕಪಿಗಳ ನಾಡು ಎನ್ನುತ್ತಾರೆ’ ಎಂದಿದ್ದಾರೆ. ಯಾವ ಕಿಷ್ಕಿಂಧೆಯಲ್ಲಿ ಹನುಮನ ಜನನ ಆಗಿದೆಯೋ ಇದರ ಕುರಿತು ಅನೇಕ ಕಥೆಗಳಿವೆ ಎಂದು ತಿಳಿಸಿದರು.
ಪುರಾಣಗಳಲ್ಲಿ ಅಂಥ ಕಥೆ ಕೇಳುತ್ತೇವೆ. ಹಂಪಿಯಲ್ಲಿ ಓಡಾಡುವಾಗ ಹನುಮ ಇಲ್ಲಿಂದ ಸೂರ್ಯನನ್ನು ಹಿಡಿಯಲು ನೆಗೆದ ಬಗ್ಗೆ ಕೇಳುತ್ತೇವೆ. ಸುರ್ಜೇವಾಲಾರವರು ಇವತ್ತು ಬಿಜೆಪಿಯವರಿಗೆ, ಬಜರಂಗದಳದವರಿಗೆ ಹನುಮಾನ್ ಚಾಲೀಸ ಹೇಳಲು ಬರುವುದಿಲ್ಲ ಎಂದಿದ್ದಾರೆ. ನಾಳೆ ಸಂಜೆ 7 ಗಂಟೆಗೆ ಹನುಮಾನ್ ಚಾಲೀಸ ಪಠಿಸುತ್ತೇವೆ. ನೀವೂ ಬನ್ನಿ ಎಂದು ಆಹ್ವಾನ ನೀಡಿದರು.
ಹನುಮಾನ್ ಚಾಲೀಸ ಕೇಳಲು ಬನ್ನಿ..
ನಮಗೆ ಹನುಮಾನ್ ಚಾಲೀಸ ಬರುತ್ತದೋ ಇಲ್ಲವೋ ಎಂಬುದನ್ನು ನೀವು ನೋಡಬೇಕು. ಹನುಮಾನ್ ಚಾಲೀಸ ಪಠಣವನ್ನು ಕೇಳಲೇ ಬೇಕು ಎಂದು ಸವಾಲೆಸೆದರು. ಹನುಮನ ತಂದೆ ಸೂರ್ಯ ಎಂದಿದ್ದೀರಿ. ನಾವು ಹನುಮನನ್ನು ವಾಯುಪುತ್ರ ಎನ್ನುತ್ತೇವೆ. ಹನುಮನ ಬಗ್ಗೆ ನಿಮಗೆ ತಿಳಿದಿಲ್ಲ ಎಂದು ಟೀಕಿಸಿದರು. ಹನುಮನ ತಂದೆ- ತಾಯಿಯ ಬಗ್ಗೆ ನಿಮಗೆ ಗೊತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಅವರು ತಿಳಿಸಿದರು.
ಕನ್ನಡಿಗರು, ಬಿಜೆಪಿಯವರಿಗೆ ಸಂಸ್ಕøತಿ, ಪುರಾಣದ ಪಾಠ ಹೇಳುತ್ತಾರೆ. ಸುರ್ಜೇವಾಲಾ ಅವರೇ, ನೀವು ಈ ರಾಜಕೀಯವನ್ನು ಎಲ್ಲಿವರೆಗೆ ಒಯ್ಯುತ್ತೀರಿ ಎಂದು ಪ್ರಶ್ನಿಸಿದರು. ಬಜರಂಗದಳ ನಿಷೇಧಿಸುವ ಬಗ್ಗೆ ತಿಳಿಸಿದ ನೀವು ಹನುಮನುದಿಸಿದ ಕರುನಾಡಿಗೆ ಅವಮಾನ ಮಾಡಲು ಹೊರಟಿದ್ದೀರಿ ಎಂದು ಆಕ್ಷೇಪಿಸಿದರು.
ಹನುಮನ ಜನನ ಕಿಷ್ಕಿಂಧೆಯಲ್ಲಿ ಎಂದು ಸಾಬೀತಾಗಿದೆ. ಕಿಷ್ಕಿಂಧೆ ಮತ್ತು ಅಯೋಧ್ಯೆಗೆ ದೊಡ್ಡ ಸಂಬಂಧ ಇದೆ ಎಂದು ಸಾಬೀತಾಗಿದೆ. ಇವತ್ತಿಗೆ ಕೂಡ ಕಿಷ್ಕಿಂಧೆಯಲ್ಲಿ, ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಮಾಡುವ ಭಕ್ತರು, ಪೂಜೆ ಮಾಡುವ ಪೂಜಾರಿಗಳು ಅಯೋಧ್ಯೆ ಜೊತೆ ಸಂಪರ್ಕ ಇಟ್ಟುಕೊಂಡವರಿದ್ದರು. ಅದಕ್ಕಾಗಿ ಇವತ್ತು ಅಂಜನಾದ್ರಿ ಬೆಟ್ಟದ ಬಗ್ಗೆ ನಿಮ್ಮ ಸಂಶಯ, ಆಂಜನೇಯನ ತಂದೆ ಬಗ್ಗೆ ನಿಮ್ಮ ಮಾತು ನಿಮ್ಮ ಕೆಳಮಟ್ಟದ ಪ್ರತೀಕ ಎಂದು ಟೀಕಿಸಿದರು.
ರಾಜಕೀಯ ಮಾಡಲು ಹನುಮನ ತಂದೆಯನ್ನೇ ಬದಲಾಯಿಸಿದ ನೀವು ಹನುಮಾನ್ ಚಾಲೀಸದ ಬಗ್ಗೆ ನಮಗೆ ಪಾಠ ಹೇಳುತ್ತಿದ್ದೀರಿ. ಇದನ್ನು ಖಂಡಿಸುತ್ತೇವೆ. ಸುರ್ಜೇವಾಲಾ ಮತ್ತು ಕಾಂಗ್ರೆಸ್‍ನವರು ಕ್ಷಮೆ ಯಾಚಿಸಬೇಕು ಎಂದು ಶೋಭಾ ಕರಂದ್ಲಾಜೆ ಅವರು ಆಗ್ರಹಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ