ಬೆಂಗಳೂರು: ಬಿಜೆಪಿ ಪ್ರಣಾಳಿಕೆಯು ಕರ್ನಾಟಕ ಮಹಿಳೆಯರ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ ಹಾಗೂ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನವ ಭಾರತದ ನಿರ್ಮಾಣಕ್ಕೆ ಬಲಿಷ್ಠ ಕರ್ನಾಟಕವನ್ನು ರೂಪಿಸಲು ಜನರ ಒಳಗೊಳ್ಳುವಿಕೆಯೊಂದಿಗೆ ಪ್ರಣಾಳಿಕೆ ಸಿದ್ಧ ಪಡಿಸಲಾಗಿದೆ. ಪ್ರಣಾಳಿಕೆಯಲ್ಲಿ ಬಿಪಿಎಲ್ ಕುಟುಂಬಗಳಿಗೆ ಪ್ರತಿ ಅರ್ಧ ಲೀಟರ್ ಹಾಲು, ಪ್ರತಿ ತಿಂಗಳು 5 ಕೆ.ಜಿ. ಸಿರಿಧಾನ್ಯ ವಿತರಣೆ ಸೇರಿವೆ. ರಾಜ್ಯದಲ್ಲಿ 54 ಲಕ್ಷ ರೈತರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ರೂ. ಪಡೆಯುತ್ತಿದ್ದಾರೆ. ಸಿರಿಧಾನ್ಯ ಬೆಳೆಯಲು ಪ್ರತಿ ಹೆಕ್ಟೇರ್‍ಗೆ 10 ಸಾವಿರ ರೂ. ನೀಡಲಾಗುತ್ತಿದೆ ಎಂದು ವಿವರಿಸಿದರು.
ಇದರಿಂದ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಹೈನುಗಾರಿಕೆಯಲ್ಲಿ ಮಹಿಳೆಯರು ಪ್ರಮುಖ ಭಾಗವಾಗಿದ್ದು, 8 ಲಕ್ಷ 94 ಸಾವಿರ ಹಾಲು ಉತ್ಪಾದಕರಿಗೆ 1 ಸಾವಿರದ 644 ಕೋಟಿ ರೂ. ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ. ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ. ಪ್ರಣಾಳಿಕೆಯಲ್ಲಿ ಕೃಷಿ ಉತ್ಪನ್ನಗಳಿಗೆ 50 ಕೆ.ಜಿ.ವರೆಗೆ ಉಚಿತ ಸಾಗಾಣಿಕೆ, ಎಲ್ಲ ಬಡವರಿಗೆ ಸೂರು ಒದಗಿಸಲು ನಗರ ಪ್ರದೇಶದಲ್ಲಿ 5 ಲಕ್ಷ ಮನೆ ನಿರ್ಮಾಣ ಸೇರಿವೆ. ಇದರಿಂದ ಮಹಿಳೆಯರು ಪ್ರಯೋಜನವಾಗಲಿದೆ. ಆರೋಗ್ಯ ಮತ್ತು ಪೌಷ್ಠಿಕತೆಗೆ ಸರ್ಕಾರ ಒತ್ತು ನೀಡಿದ್ದು, ಆಯುಷ್ಮಾನ್ ಭಾರತ್ ಯೋಜನೆಯಡಿ 1.38 ಕೋಟಿ ಜನರಿಗೆ 5 ಲಕ್ಷ ರೂ.ವರೆಗೆ ವಿಮೆ ಒದಗಿಸಲಾಗಿದೆ. ಇದನ್ನು 10 ಲಕ್ಷ ರೂ.ಗೆ ಏರಿಸುವ ಭರವಸೆ ನೀಡಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಆರೋಗ್ಯ ರಕ್ಷಣೆ ಬಲಪಡಿಸಲು ಪ್ರತಿ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ನಿರ್ಮಿಸಲಾಗುವುದು. ಅಲ್ಲದೆ, ಕರ್ನಾಟಕ ರಾಜ್ಯ ನರ್ಸಿಂಗ್ ಮಂಡಳಿ ರಚಿಸಲಾಗುವುದು. ಇದರಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗಲಿದೆ. ರಾಜ್ಯದಲ್ಲಿ 1,052 ಜನೌಷಧಿ ಕೇಂದ್ರಗಳಿದ್ದು, ಇದರಿಂದ ಮಹಿಳೆಯರು ಕಡಿಮೆ ದರದಲ್ಲಿ ಔಷಧ ಪಡೆಯಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ 1.5 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‍ಗಳನ್ನು ನೀಡಿದ್ದು, ಪ್ರಥಮ ದರ್ಜೆ ಕಾಲೇಜುಗಳ 2,500 ಶಾಲಾ ಕೊಠಡಿಗಳನ್ನು ಸ್ಮಾರ್ಟ್ ರೂಮ್‍ಗಳಾಗಿ ಪರಿವರ್ತಿಸಲಾಗಿದೆ. ರೈತ ವಿದ್ಯಾ ನಿಧಿ ಯೋಜನೆಯಡಿ 11 ಲಕ್ಷ ವಿದ್ಯಾರ್ಥಿಗಳಿಗೆ 725 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದ್ದು, ಇದರಡಿ, 65,911 ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಿ, ಸಕ್ಷಮ್ ಅಂಗನವಾಡಿಗಳಾಗಿ ಪರಿವರ್ತಿಸಲಾಗುವುದು. 2.35 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, 43 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ, 37 ಲಕ್ಷ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ನೀಡಲಾಗಿದೆ.
10 ಲಕ್ಷ ಮಕ್ಕಳಿಗೆ 2 ಲಕ್ಷ ಗರ್ಭಿಣಿಯರಿಗೆ ಜೀವ ಅಪಾಯದ ಕಾಯಿಲೆ ನಿರೋಧಕ ಲಸಿಕೆ ನೀಡಲಾಗಿದೆ. 19.5 ಲಕ್ಷ ಗರ್ಭಿಣಿಯರಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ನಗದು ನೀಡಲಾಗಿದೆ. ಲಿಂಗಸಮಾನತೆ ಸಾಧಿಸುವಲ್ಲಿ ಸರ್ಕಾರದ ಯೋಜನೆಗಳು ಪ್ರಮುಖ ಕೊಡುಗೆ ನೀಡಲಿವೆ. ಕೆಲಸ ಮಾಡುವ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗಾಗಿ ಹುಬ್ಬಳ್ಳಿ, ಬೆಳಗಾವಿ, ಮೈಸೂರು ದಾವಣಗೆರೆ, ಮಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಂಶವಿದ್ದು, ಮಹಿಳೆಯರನ್ನು ಸಮನಾಗಿ ಪರಿಗಣಿಸುವಲ್ಲಿ ಇದು ನೆರವಾಗಲಿದೆ ಎಂದು ಸ್ಮೃತಿ ಇರಾನಿ ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆ ಸುಳ್ಳುಗಳಿಂದ ಕೂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದಾಗಿ ಹೇಳಿದೆ. ಆದರೆ, ವರ್ಷಗಳ ಕಾಲ ನೀತಿ ರೂಪಿಸುವಲ್ಲಿ ಕಾಂಗ್ರೆಸ್ ನ ಸಂಸದರು ಹಲವು ನಾಯಕರೂ ಇದ್ದರು. ಕಾಂಗ್ರೆಸ್ ಪಕ್ಷ ಸದಾ ಹಿಂದೂ ಜೀವನ ಕ್ರಮದ ವಿರುದ್ಧವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ, ಬೆಂಗಳೂರು ಉತ್ತರ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಆಶಾ ರಾವ್, ಕೇಂದ್ರ ಜಿಲ್ಲಾಧ್ಯಕ್ಷೆ ರೇಖಾ ಗೋವಿಂದ, ದಕ್ಷಿಣ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಆನಂದ್ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ