ಬೆಂಗಳೂರು: ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವವದಲ್ಲಿ ಕಳೆದ 7 ವರ್ಷಗಳಲ್ಲಿ ಭಾರತವು ಅದ್ವಿತೀಯ ಸಾಧನೆ ಮಾಡಿದೆ. ಇನ್ನು ಮುಂದಿನ 25 ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಇರಬೇಕು. ಆಗ 2047 ರಲ್ಲಿ ದೇಶವು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರು ಶ್ರೀ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದರು.
ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಡಿಜಿಟಲ್ ಗ್ರಾಮ, ಅಂತ್ಯೋದಯ- ಇವೆಲ್ಲವೂ ದೇಶದ ಕಟ್ಟಕಡೆಯ ಮನುಷ್ಯರ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟಿವೆ. ಬಿಜೆಪಿ ಅತ್ಯುತ್ತಮ ಆಡಳಿತ ನೀಡುತ್ತಿದ್ದು, ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ ಎಂದು ವಿವರಿಸಿದರು.
ಕರ್ನಾಟಕದ ಬಿಜೆಪಿ ಸರಕಾರವು ಕೋವಿಡ್, ನೆರೆಯಂಥ ಸವಾಲುಗಳನ್ನು ಎದುರಿಸಿದರೂ ಅತ್ಯುತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆ ಸಮನ್ವಯದೊಂದಿಗೆ ದೇಶ ಮತ್ತು ನಾಡಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.
ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಸಾಫ್ಟ್‍ವೇರ್ ಉದ್ಯಮ ಸ್ಥಾಪಿಸಲಾಗುವುದು. ಟೆಕ್ಕಿಗಳ ಮನವಿಗೆ ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಹುಬ್ಬಳ್ಳಿ- ಧಾರವಾಡದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ನಂತರ ವರ್ಕ್ ಫ್ರಂ ಹೋಂ ಹೆಚ್ಚಾಗುತ್ತಿದೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದು. ಇಂಟರ್‍ನೆಟ್ ಸೌಲಭ್ಯ ನೀಡಲಾಗುವುದು. ಇದಕ್ಕೆ ನಿಮ್ಮಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಕೇಂದ್ರ ಸರಕಾರ ನೀಡುತ್ತಿರುವ ಉಚಿತ ಪಡಿತರ ಕುರಿತು ಮಾಹಿತಿ ಪಡೆದರು. ಕೊರೊನಾ ವಾರಿಯರ್‍ಗಳಿಗೆ ಅಭಿನಂದನೆ ಸಲ್ಲಿಸಿದರು. ಕೋವಿಡ್ ಸೇವಾ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‍ಗಳು ಸೇರಿದಂತೆ ವಿವಿಧ ವಾರಿಯರ್‍ಗಳ ಬೇಡಿಕೆಯನ್ನು ಸರಕಾರದ ಗಮನಕ್ಕೆ ತರಲಾಗುವುದು ಮತ್ತು ಬೇಡಿಕೆ ಅನುಷ್ಠಾನಕ್ಕೆ ಕೋರುವುದಾಗಿ ತಿಳಿಸಿದರು. ಬೆಳಿಗ್ಗೆ ಜನಸಂಘ- ಬಿಜೆಪಿ ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಹುಬ್ಬಳ್ಳಿ ನಗರ ಗೋಕುಲ್ ರಸ್ತೆಯಲ್ಲಿರುವ ಕ್ಯೂಬೆಕ್ಸ್ ಫಂಕ್ಷನ್ ಹಾಲ್ ನಲ್ಲಿ ಜನಾಶೀರ್ವಾದ ಯಾತ್ರೆಯ ಸಭೆ ನಡೆಯಿತು. ಕೋವಿಡ್ ಸೇನಾನಿಗಳಿಗೆ ಸನ್ಮಾನಿಸಿ ಜ್ಯೋತಿ ಬೆಳಗಿಸಿ ಭಾರತಮಾತೆಯ ಭಾವಚಿತ್ರಕ್ಕೆ ಪುμÁ್ಷರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಮತದಾರರ ಮನೆ ಬಾಗಿಲಿಗೆ ಯಾತ್ರೆ: ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಯಾತ್ರೆ ಉದ್ಘಾಟನೆ ವೇಳೆ ಮಾತನಾಡಿ, ಬಿಜೆಪಿ ಗೆದ್ದ ಬಳಿಕವೂ ಜನಾಶೀರ್ವಾದ ಕೇಳುತ್ತಿದೆ. ಇದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು. ಚುನಾವಣೆ ಬಂದಾಗ ಮತದಾರ ದೇವರನ್ನು ಸ್ಮರಿಸುತ್ತೇವೆ. ಆದರೆ, ಬಹುತೇಕ ಎಲ್ಲ ಪಕ್ಷಗಳೂ ಗೆದ್ದ ಮೇಲೆ “ನೀನ್ಯಾಕೋ ನಿನ್ನ ಹಂಗ್ಯಾಕೋ. ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎನ್ನುವ ಕಾಲಘಟ್ಟದಲ್ಲಿದೆ ಎಂದರು.
ರಾಜ್ಯದಲ್ಲಿ ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಬಂದಾಗ ಮೆರವಣಿಗೆ ಕಾಣುತ್ತಿದೆ. ದೊಡ್ಡ ಕ್ರೇನ್ ಮೂಲಕ ಹಾರ ಹಾಕಿದ್ದನ್ನು ಕಂಡಿದ್ದೇವೆ. ಆದರೆ, ಇದು ಅಂಥ ಯಾತ್ರೆಯಲ್ಲ. ಇದು ಮತದಾರರ ಮನೆ ಬಾಗಿಲಿಗೆ ಯಾತ್ರೆ ಎಂದು ವಿವರಿಸಿದರು.
ಎರಡು ವರ್ಷಗಳ ಹಿಂದೆ ಪರಿವರ್ತನೆಯನ್ನು ಬಯಸಿ, ಜಗದ್ವಂದ್ಯ ಭಾರತ ನಿರ್ಮಾಣದ ಕನಸುಗಳನ್ನು ಹೊತ್ತು ಈ ದೇಶದ ಜನರು ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರಕ್ಕೆ ಆಶೀರ್ವಾದ ಮಾಡಿದರು. ಏಳು ವರ್ಷಗಳ ಸತತ ಪ್ರಯತ್ನದ ಮೂಲಕ ಈಗ ಜಗದ್ವಂದ್ಯ ಭಾರತ ನಿರ್ಮಾಣ ಆಗುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಭಾರತವು ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸಂವಿಧಾನ ಕರ್ತೃಗಳಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಅಂತ್ಯೋದಯದ ಡಾ. ದೀನದಯಾಳ್ ಉಪಾಧ್ಯಾಯರ ಚಿಂತನೆಯನ್ನು ಶ್ರೀ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಸಾಕಾರಗೊಳಿಸಿದ್ದಾರೆ ಎಂದು ತಿಳಿಸಿದರು. ಹಿರಿಯರ ಮತ್ತು ಯುವಕರನ್ನೊಳಗೊಂಡ, ಎಲ್ಲ ಜಾತಿಗೂ ಆದ್ಯತೆ ನೀಡಿದ ಅದ್ಭುತ ಮಂತ್ರಿಮಂಡಲ ರಚನೆಯಾಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಅಭಿವೃದ್ಧಿಯ ಪಥದಲ್ಲಿ ದೇಶ ಮುಂದಡಿ ಇಡುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಸಾಧನೆಗಳು ಹಾಗೂ ಕಾಂಗ್ರೆಸ್ ವಿರೋಧಕ್ಕಾಗಿಯೇ ವಿರೋಧ ಮಾಡುತ್ತಿರುವುದನ್ನು ಜನರಿಗೆ ಈ ಯಾತ್ರೆ ಮೂಲಕ ತಿಳಿಸಲಾಗುವುದು ಎಂದರು. ಶ್ರೀ ನರೇಂದ್ರ ಮೋದಿ ಅವರ ಆಧಾರದಲ್ಲಿ ನೀವು ನೀಡಿದ ಒಂದು ಮತ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯದ ಜವಳಿ ಹಾಗೂ ಸಕ್ಕರೆ ಸಚಿವರು ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರ್, ಬಿಜೆಪಿ ಧಾರವಾಡ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಅರವಿಂದ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಟೆಂಗಿನಕಾಯಿ, ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಕೇಶವಪ್ರಸಾದ್, ಜಿಲ್ಲೆಯ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ