ಬೆಂಗಳೂರು: ಕರ್ನಾಟಕದಲ್ಲಿ ಒಂದು ಫಾರ್ಮಾ ಪಾರ್ಕ್ ಮತ್ತು ಒಂದು ಪ್ಲಾಸ್ಟಿಕ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರಕಾರ ಯೋಜಿಸಿದೆ ಎಂದು ಕೇಂದ್ರ ನವೀನ ಮತ್ತು ನವೀಕರಿಸಬಲ್ಲ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ್ ಖೂಬಾ ಅವರು ತಿಳಿಸಿದರು.
ಬೀದರ್‌ನಲ್ಲಿ ಇಂದು ಜನಾಶೀರ್ವಾದ ಯಾತ್ರೆ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ ಫಾರ್ಮ ಪಾರ್ಕ್ ಅನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಜಮೀನು ಹೊರತುಪಡಿಸಿ ಇತರ ಮೂಲಸೌಕರ್ಯಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಹೂಡಿಕೆ ಇರುವ ಯೋಜನೆ ಇದಾಗಿದೆ. ರಾಜ್ಯ ಸರಕಾರ ಜಮೀನು ನೀಡಬೇಕಾಗುವುದು. ಹೂಡಿಕೆದಾರರಿಗೆ ರಾಜ್ಯ ಸರಕಾರದಿಂದ ಕಡಿಮೆ ದರದಲ್ಲಿ ವಿದ್ಯುತ್, ನೀರು, ಜಮೀನು, ಟ್ರೀಟ್‍ಮೆಂಟ್ ಪ್ಲಾಂಟ್ ನೀಡಬೇಕಾಗುತ್ತದೆ. ಬಹುತೇಕ ನಮ್ಮ ರಾಜ್ಯಕ್ಕೆ ಇದು ಸಿಗುವ ಅವಕಾಶವಿದೆ ಎಂದರು.
ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಮಂಗಳೂರು ಮತ್ತು ಯಾದಗಿರಿಯಿಂದ ಪ್ರಸ್ತಾವನೆ ಬಂದಿದೆ. ಕೆಮಿಕಲ್ ಇಂಡಸ್ಟ್ರಿಗಳಿರುವ ಕಾರಣ ಮಂಗಳೂರಿನಲ್ಲಿ ಇದು ಸ್ಥಾಪನೆ ಆಗುವ ಸಾಧ್ಯತೆ ಹೆಚ್ಚು. ಮೂಲಸೌಕರ್ಯಕ್ಕೆ 100 ಕೋಟಿ ಹೂಡಿಕೆ ಇರುತ್ತದೆ ಎಂದು ತಿಳಿಸಿದರು.ರಾಜ್ಯ ಸರಕಾರ ಹೆಚ್ಚು ಮುತುವರ್ಜಿ – ಹಣದ ಸಹಕಾರ ವಹಿಸಿದಾಗ ಯೋಜನೆ ಸಿಗಲು ಸಾಧ್ಯವಾಗುತ್ತದೆ. ಬೀದರ್ ಜಿಲ್ಲೆಗೆ ಬರಬೇಕಿದ್ದ ಯೋಜನೆಗಳು ಹಿಂದೆ ಕಾಂಗ್ರೆಸ್ ರಾಜ್ಯ ಸರಕಾರದ ಅಸಹಕಾರ, ಜಮೀನು ಸಿಗದ ಕಾರಣದಿಂದ ಅನುಷ್ಠಾನಗೊಂಡಿರಲಿಲ್ಲ ಎಂದು ಅವರು ವಿವರಿಸಿದರು. ಈಗ ಕೇಂದ್ರ- ರಾಜ್ಯ ಸರಕಾರಗಳೆರಡೂ ಬಿಜೆಪಿಯದ್ದೇ ಇವೆ. ಆದ್ದರಿಂದ ಸಮಸ್ಯೆ ಆಗಲಾರದು ಎಂದರು.
ಪ್ರಧಾನಿಯವರ ಜನಪ್ರಿಯತೆ ಹೆಚ್ಚಳದ ಆತಂಕದಿಂದ ಬಿಜೆಪಿಯೇತರ ರಾಜ್ಯ ಸರಕಾರಗಳು ಕಡಿಮೆ ಬೆಲೆಯ ಔಷಧಿ ನೀಡುವ ಜನೌಷಧಿ ಕೇಂದ್ರಗಳನ್ನು ತೆರೆದಿಲ್ಲ. ಅಂಥ ರಾಜ್ಯಗಳಲ್ಲಿ ತಮ್ಮ ಖಾತೆ ವತಿಯಿಂದ ಜನೌಷಧಿ ಕೇಂದ್ರಗಳನ್ನು ತೆರೆದು ವಹಿವಾಟು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.
ಬೀದರ್‍ನಲ್ಲಿ ಮುನ್ಸಿಪಾಲಿಟಿ ಜೊತೆ ಸಹಭಾಗಿತ್ವದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಯಾರಾದರೂ ಹೂಡಿಕೆದಾರರು ಮುಂದಾದರೆ ಅವಕಾಶ ನೀಡಲಾಗುವುದು ಎಂದರು. ಒಂದು ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ 3.75 ಕೋಟಿಯಿಂದ 4 ಕೋಟಿ ಹೂಡಿಕೆ ಅಗತ್ಯವಿದೆ. ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ 4ರಿಂದ 5 ಹೂಡಿಕೆದಾರರು ಖಾಸಗಿ- ಸಾರ್ವಜನಿಕ ರಂಗದ ಸಹಭಾಗಿತ್ವದಡಿ ವಿದ್ಯುತ್ ಉತ್ಪಾದನೆಗೆ ಉತ್ಸಾಹ ತೋರುತ್ತಿದ್ದಾರೆ ಎಂದು ವಿವರಿಸಿದರು.
ರೈತರಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಜನಪ್ರಿಯಗೊಳಿಸಲು ಮಾಧ್ಯಮಗಳ ನೆರವು ಪಡೆಯಲಾಗುವುದು ಎಂದ ಅವರು, ಈ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರದ ಸಚಿವನಾಗಿ ಗರಿಷ್ಠ ಪ್ರಯತ್ನ ಮಾಡಲಿದ್ದೇನೆ ಎಂದು ತಿಳಿಸಿದರು.
ಜಿಲ್ಲೆಯ ಆರು ಶಾಸಕರು ಪಕ್ಷಭೇದ ಮರೆತು ಜಿಲ್ಲೆಗೆ ಅವಶ್ಯಕ ಯೋಜನೆಗಳ ಜಾರಿಗೆ ಶ್ರಮಿಸಬೇಕಿದೆ. ರಾಜಕಾರಣ ಮಾಡಲು ಹತ್ತಾರು ವಿಷಯ ಇರುತ್ತದೆ. ಆದರೆ, ಅಭಿವೃದ್ಧಿ ಯೋಜನೆ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು. ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ, ವಿಭಾಗ ಸಹಪ್ರಭಾರಿಗಳಾದ ಶ್ರೀ ಈಶ್ವರ್ ಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಶೋಕ್ ಹೊಕ್ರಾಣೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ