ಬೆಂಗಳೂರು: ಈಗ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವ ಕಾರಣ ಎಲೆಕ್ಟ್ರಿಕ್ ರಿಚಾರ್ಜ್ ಸೆಂಟರ್‍ಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ತೆರೆಯಲಾಗುವುದು ಎಂದು ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನೀಲ್ ಕುಮಾರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಲು ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾಸೋದ್ಯಮ ಕೇಂದ್ರಗಳಲ್ಲಿ ರಿಚಾರ್ಜ್ ಸೆಂಟರ್ ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡಲಾಗುವುದು. ರಾಜ್ಯದ ಸರಕಾರಿ ಕಛೇರಿಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆ ಇತ್ತು. ಇದಕ್ಕಾಗಿ ವಿವಿಧೆಡೆ 60ಕ್ಕೂ ಹೆಚ್ಚು ಸಬ್ ಸ್ಟೇಷನ್‍ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್ ಮೂಲಕ ನಿರ್ಮಿಸಲಾಗುವುದು. ಕೃಷಿ ಪಂಪ್‍ಸೆಟ್‍ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ವಿವರಿಸಿದರು.
ಜೆಇ, ಲೈನ್‍ಮ್ಯಾನ್ ನೇಮಕಾತಿ, ಜೆಇ ಹುದ್ದೆಗೆ ಬಡ್ತಿ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ವರ್ಗಾವಣೆ ದಂಧೆಯನ್ನು ಯಾವುದೇ ಅಧಿಕಾರಿಗಳು ಮಾಡುವಂತಿಲ್ಲ. ವರ್ಷಪೂರ್ತಿ ವರ್ಗಾವಣೆ ಇರುವುದಿಲ್ಲ ಎಂದು ತಿಳಿಸಿದರು.
ಎರಡೂ ಇಲಾಖೆಗಳಲ್ಲಿ 100 ದಿನಗಳ ಕಾರ್ಯಕ್ರಮ ಯೋಜಿಸಿದ್ದೇವೆ. ಈ 100 ದಿನಗಳಲ್ಲಿ ಗ್ರಾಮಾಂತರದಲ್ಲಿ ಮನೆಗಳನ್ನು ಕಟ್ಟಿ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಮನೆಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಇದನ್ನು ಮುಖ್ಯಮಂತ್ರಿಗಳ ಆಶಯದಂತೆ “ಬೆಳಕು” ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.
ಅತ್ಯಂತ ನಾದರುಸ್ತಿ ಸ್ಥಿತಿಯಲ್ಲಿರುವ ಟ್ರಾನ್ಸ್‍ಫಾರ್ಮರ್ ಬದಲಾವಣೆಗೆ ಟ್ರಾನ್ಸ್‍ಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗುವುದು. ಕೇವಲ 24 ಗಂಟೆಗಳಲ್ಲಿ ಹಾಳಾದ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಬದಲಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಗಂಗಾಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆದಿದ್ದು, ತುಂಬಾ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ವಿಳಂಬವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಬೋರ್‍ವೆಲ್ ಸಿದ್ಧವಾದ 30 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಅನಗತ್ಯವಾಗಿ ರೈತರ ಓಡಾಟವನ್ನು ತಪ್ಪಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿಗಾಗಿ ಅರ್ಜಿ ಹಾಕುವುದು ನಿಧಾನವಾಗಿ ಕಡಿಮೆ ಆಗಬೇಕೆಂಬ ಚಿಂತನೆ ಇದೆ. ಸಾಧಕರನ್ನು ಗುರುತಿಸುವ ಪರಂಪರೆ ನಾಡಿನಾದ್ಯಂತ ನಿರ್ಮಾಣವಾಗಬೇಕು. ಎಲೆಯ ಮರೆ, ತೆರೆಯ ಮರೆಯಲ್ಲಿರುವ ಸಾಧಕರನ್ನು ಗುರುತಿಸುವ ಯೋಜನೆ ಇದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಸಾವಿರಾರು ಕಲಾವಿದರಿದ್ದಾರೆ. ಕೆಲವು ಕಲಾವಿದರು ಮಂತ್ರಿಗಳ ವರೆಗೆ ಬಂದರೆ, ಇನ್ನೂ ಕೆಲವರು ಅಧಿಕಾರಿಗಳವರೆಗೆ ಬರುತ್ತಾರೆ. ಇನ್ನೂ ಕೆಲವರು ಬೆಂಗಳೂರಿಗೆ ಬರುತ್ತಾರೆ. ಯಾವುದೇ ಶಕ್ತಿ ಇಲ್ಲದ ನೂರಾರು ಕಲಾವಿದರು ಗ್ರಾಮೀಣ ಪ್ರದೇಶದಲ್ಲಿ ಉಳಿದಿದ್ದಾರೆ. ಹಾಗಾಗಿ ಕಲಾವಿದರ ಡಾಟಾ ಬ್ಯಾಂಕ್ ಹೊಂದಬೇಕೆಂಬ ಯೋಜನೆ ಇದೆ. ಈ ವಿವರ ಸಂಗ್ರಹ ಕಾರ್ಯ ಮುಂದಿನ 100 ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಚೆನ್ನಾಗಿ ಆಗಬೇಕು. ಸ್ವಾತಂತ್ರ್ಯ ಚಳವಳಿಗೆ ಕರ್ನಾಟಕದ ಕೊಡುಗೆ ಎಲ್ಲರಿಗೂ ತಿಳಿಯಬೇಕು. ನೂರಾರು ಜನರ ಬಲಿದಾನ ಆಗಿದ್ದು, ನೂರಾರು ಗ್ರಾಮಗಳು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಶೌರ್ಯ ಪ್ರದರ್ಶನ ಮಾಡಿವೆ. ಇಂಥ ಗ್ರಾಮಗಳನ್ನು ಗುರುತಿಸಿ ಅದನ್ನು ನಾಡಿಗೆ ಪರಿಚಯಿಸಲಾಗುವುದು ಎಂದರು.