ಬೆಂಗಳೂರು : ದೇಶದ ಆರ್ಥಿಕತೆಯನ್ನು ಬಲಪಡಿಸುವ ರೈತರು, ಶ್ರಮಿಕ ವರ್ಗದವರೇ ನಿಜವಾಗಿ ನಾಡು ಕಟ್ಟುವವರು. ಈ ವರ್ಗದವರನ್ನು ಸರ್ ಎಂ ವಿಶ್ವೇಶ್ವರಯ್ಯ ಪ್ರತಿನಿಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಇಂಜಿನಿಯರುಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿ ಹಾಗೂ ಬಿ.ಬಿ.ಎಂ.ಪಿ ವತಿಯಿಂದ ನಿರ್ಮಿಸಿರುವ 160ಅಡಿ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪಿರಮಿಡ್ನ ಅತ್ಯಂತ ಕೆಳಸ್ತರದಲ್ಲಿ ದುಡಿಯುವ ವರ್ಗದವರು ನಮ್ಮ ಆರ್ಥಿಕತೆಯನ್ನು ಬೆಳೆಸುವ ಮೂಲ ಪುರುಷರು ಹಾಗೂ ತಾಯಂದಿರು. ವಿಶ್ವೇಶ್ವರಯ್ಯ ಅವರು ಈ ವರ್ಗದವರನ್ನು ಪ್ರತಿನಿಧಿಸುತ್ತಾರೆ. ವಿಶ್ವೇಶ್ವರಯ್ಯ ಅವರ ಸಾಧನೆ ಅಪಾರ. ಕೆ.ಆರ್.ಎಸ್. ಅಣೆಕಟ್ಟಿನಿಂದ ಹಿಡಿದು ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳ ನಿರ್ಮಾಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹಲವಾರು ಕಾರ್ಖಾನೆಗಳು, ಮಹಿಳೆಯರಿಗೆ ಮೀಸಲಾತಿ, ಮುಂತಾದ ಕ್ರಮಗಳ ಮೂಲಕ ಅತ್ಯಂತ ಪ್ರಗತಿಪರ ಚಿಂತನೆಗಳಿಂದ ಅವರು ನಾಡು ಕಟ್ಟಿದ್ದಾರೆ. ಅಂಥ ವ್ಯಕ್ತಿಗೆ ನಮನ ಸಲ್ಲಿಸುವ ದಿನವಿದು. ನಾವೂ ಸಹ ಅವರ ಹಾದಿಯಲ್ಲಿ ನಡೆದು, ಅವರಂತೆ ನಾಡು ಕಟ್ಟಲು ಸಣ್ಣ ಪ್ರಯತ್ನ ಮಾಡಲು ಸಂಕಲ್ಪ ಮಾಡುವ ದಿನವೆಂದು ನಾನು ಭಾವಿಸಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆ.ಆರ್. ವೃತ್ತದಲ್ಲಿ ವಿಶ್ವೇಶ್ವರಯ್ಯ ಪ್ಲಾಜಾ ಕಟ್ಟಲಾಗಿದೆ. ಇಲ್ಲಿ ಮಿನಿ ಗ್ರಂಥಾಲಯ ಇದೆ. ಸಾರ್ವಜನಿಕರು ಇಲ್ಲಿ ಕುಳಿತುಕೊಂಡು ಓದಬಹುದು. ಇದೇ ರೀತಿ 30 ಜಂಕ್ಷನ್ ಗಳನ್ನು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲು ಬಿಬಿಎಂಪಿ ತೀರ್ಮಾನಿಸಿದೆ. ಬೆಂಗಳೂರನ್ನು ಅಂದವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
160 ಅಡಿ ನೀರಿನ ಕಾರಂಜಿಯನ್ನು ಇದೇ ಸಂದರ್ಭದಲ್ಲಿ ಸಿಎಂ ಉದ್ಘಾಟಿಸಿದರು.
ವಿಶ್ವೇಶ್ವರಯ್ಯ ಅವರ ವಿದ್ಯುತ್ ಉತ್ಪಾದನೆ, ಶಿಕ್ಷಣ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಮರಿಸಿದರು.
ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ರಿಜ್ವಾನ್ ಅರ್ಷದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ