ಬೆಂಗಳೂರು: ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ, ಹೆಚ್ಚು ಅನುದಾನ, ಗೌರವಧನವನ್ನು ಬಿಜೆಪಿ ಸರಕಾರಗಳು ನೀಡಿವೆ. ಆದ್ದರಿಂದ ಸ್ವಾಭಿಮಾನದ ಬದುಕು ನೀಡಲು ಪಂಚಾಯಿತಿ ಸದಸ್ಯರ ಗೌರವಧನವನ್ನು 10 ಸಾವಿರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.
ಕೊಪ್ಪಳದಲ್ಲಿ ಇಂದು ನಡೆದ ಜನಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚು ಅನುದಾನವನ್ನು ನೀಡಲಾಗಿದೆ. ಮುಂದಿನ ಸಾಲಿನಲ್ಲಿ 5,500 ಗ್ರಾಮಗಳಿಗೆ ಅಮೃತ ಯೋಜನೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. ಗರಿಷ್ಠ ಪ್ರಮಾಣದ ಪಂಚಾಯಿತಿ ಸದಸ್ಯರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚಿನ ವಿಧಾನಪರಿಷತ್ ಸ್ಥಾನಗಳು ಸಿಗಲಿವೆ. ಇನ್ನೆರಡು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿವರ ಪ್ರಕಟಗೊಳ್ಳಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಕೇವಲ ಮೋಸ, ಸುಳ್ಳು, ವಂಚನೆಯನ್ನೇ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಕಾಲದಲ್ಲೇ ರಫೇಲ್ ಹಗರಣ ನಡೆದಿದೆ. ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನವರು ಬಿಟ್ ಕಾಯಿನ್‍ನ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಇರುವುದನ್ನು ಪತ್ರಿಕೆಗಳೇ ಬರೆದಿವೆ ಎಂದರು.
ಕಾಂಗ್ರೆಸ್ ಆಡಳಿತ ಡ್ರಗ್ ಮಾಫಿಯಾದಡಿ ಬದುಕಿತ್ತು. ಡ್ರಗ್ ಮಾಫಿಯಾವನ್ನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನಿಯಂತ್ರಿಸಿದೆ. ಬೊಮ್ಮಾಯಿಯವರ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ ಎಂದು ವಿವರಿಸಿದರು.
ಅಭಿವೃದ್ಧಿಗೆ ಹಲವು ಯೋಜನೆ
ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆ ಆಧುನೀಕರಣಕ್ಕೆ 1,200 ಕೋಟಿ ಮಂಜೂರು ಮಾಡಿ ಕೆಲಸ ಮಾಡಿಸಿದ ಸಮಾಧಾನ ನನಗಿದೆ. 10-15 ವರ್ಷ ಕಾಂಗ್ರೆಸ್ ಆಡಳಿತವಿದ್ದರೂ ಇದನ್ನು ಗಮನಿಸಿರಲಿಲ್ಲ. ಇದು ಕಾಂಗ್ರೆಸ್ ನೀತಿ ಎಂದರು. ಕೃಷ್ಣಾ ನೀರಾವರಿ ಯೋಜನೆಗಳ ವಿಚಾರದಲ್ಲೂ ಇದೇ ಮಾದರಿಯಲ್ಲಿ ಕಾಂಗ್ರೆಸ್‍ನಿಂದ ಕಡೆಗಣನೆ ಮಾಡಲಾಯಿತು ಎಂದು ಆಕ್ಷೇಪಿಸಿದರು. ಕೊಪ್ಪಳಕ್ಕೆ ನೀರಾವರಿ ವಿಚಾರದಲ್ಲಿ ಸತತ ಅನ್ಯಾಯ ಮಾಡಲಾಗಿತ್ತು ಎಂದರು.
ವಿವಿಧ ಏತ ನೀರಾವರಿ ಕಾಮಗಾರಿ ಅನುಷ್ಠಾನ, ಕೊಪ್ಪಳ ಜಿಲ್ಲೆಗೇ ನೀರಾವರಿಗೆ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಘೋಷಣೆಯು ಕೇವಲ ಘೋಷಣೆಗೇ ಸೀಮಿತವಾಯಿತು. ಉತ್ತರ ಕರ್ನಾಟಕದ ರೈತರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯ ಮಾಡಿದೆ ಎಂದರು. ಒಂದೂವರೆ ವರ್ಷದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆ ಪೂರ್ಣಗೊಳ್ಳಲಿದೆ ಎಂದರು. ಸಿಂಗಟಾಲೂರು ಏತ ನೀರಾವರಿ ಯೋಜನೆಯನ್ನೂ ಕಡೆಗಣಿಸಲಾಗಿದೆ. ಅದನ್ನು ಬೇಗನೆ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ಜನಪರ ಕೆಲಸಗಳ ಬದ್ಧತೆ, ದೂರದೃಷ್ಟಿ ಸರಕಾರಕ್ಕೆ ಇರಬೇಕು. ಹೈದರಾಬಾದ್ ಕರ್ನಾಟಕ ಗುಲಾಮಗಿರಿಯ ಸಂಕೇತ. ಅದರ ಹೆಸರನ್ನು ಕಲ್ಯಾಣ ಕರ್ನಾಟಕ ಮಾಡಲು ನಮ್ಮ ನಾಯಕರಾದ ಯಡಿಯೂರಪ್ಪ ಅವರು ಪ್ರೇರಣೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ನೀಡಲಾಗುವುದು ಎಂದು ತಿಳಿಸಿದರು. ತುಂಗಭದ್ರಾ ಅಣೆಕಟ್ಟಿನ ಹೂಳು ತೆಗೆಸಲು ಕೊಪ್ಪಳದ ಶ್ರೀಗಳು ಕ್ರಾಂತಿಕಾರಿ ಕೆಲಸ ಮಾಡಿದ್ದಾರೆ. ಸಮಾನಾಂತರ ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ಸಿದ್ಧವಿದೆ. ಬ್ಯಾರೇಜ್ ಕಟ್ಟಲು ಹೆಜ್ಜೆ ಮುಂದಿಡಲಿದ್ದೇವೆ ಎಂದು ಹೇಳಿದರು.
ಕನ್ನಡ ನಾಡನ್ನು ಸುಭಿಕ್ಷ, ಸುರಕ್ಷಿತ, ಸಂಪದ್ಭರಿತ ನಾಡಾಗಿ ಪರಿವರ್ತಿಸುವ ಸಂಕಲ್ಪ ನನ್ನದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಎಲ್ಲ ರೀತಿಯ ಸೌಕರ್ಯ ನೀಡಲಾಗುವುದು. ಅದಕ್ಕಾಗಿಯೇ ರಾಜ್ಯದ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಕೊಡುವ ಯೋಜನೆ ಜಾರಿಗೊಳಿಸಲಾಗಿದೆ. ರೈತರು, ರೈತ ಕುಟುಂಬ ಉಳಿದರೆ ದೇಶ ಉಳಿದೀತೆಂಬ ಚಿಂತನೆ ಇದರ ಹಿಂದಿದೆ. ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಮಾಸಾಶನವನ್ನೂ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಅಮೃತ ಯೋಜನೆಯಡಿ 750 ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದು ತಿಳಿಸಿದರು. ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ವಿವರಿಸಿದರು. ನೈಜ ಅಧಿಕಾರ ವಿಕೇಂದ್ರೀಕರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಅಧಿಕಾರದ ಕನಸು ಭಗ್ನವಾಗಿದೆ. ಅದಕ್ಕಾಗಿಯೇ ಕೆಸರೆರೆಚಾಟ ಮುಂದುವರಿಸಿದ್ದು, ಅವರ ಕೈಗೇ ಕೆಸರು ಹತ್ತಿದೆ. ಕಾಂಗ್ರೆಸ್ ಕಾಲದಲ್ಲೇ ಬಿಟ್ ಕಾಯಿನ್ ಅವ್ಯವಹಾರ ಆಗಿದೆ ಎಂದು ಸ್ಪಷ್ಟಪಡಿಸಿದರು. 2016ರಲ್ಲೇ ತನಿಖೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಮಾತನಾಡಿ, ವಿಧಾನಪರಿಷತ್‍ನ 25 ಸ್ಥಾನಗಳ ಪೈಕಿ 20 ಅನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ಸುಳ್ಳು ಹೇಳುವುದೇ ಕಾಂಗ್ರೆಸ್ ಸಾಧನೆ ಎಂದು ಅವರು ಟೀಕಿಸಿದರು. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲುವುದು ಅನಿವಾರ್ಯ ಎಂದರು.
ರಾಜ್ಯ ಸಚಿವರಾದ ಹಾಲಪ್ಪ ಆಚಾರ್, ಮುರುಗೇಶ್ ನಿರಾಣಿ, ಸಂಸದರುಗಳಾದ ಕರಡಿ ಸಂಗಣ್ಣ, ಪ್ರತಾಪ್ ಸಿಂಹ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ