ಮಂಗಳೂರು: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ನಾರಾವಿ ಮತ್ತು ಅಳದಂಗಡಿ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಅಳದಂಗಡಿಯ ಸ್ವರಾಜ್ ಕಾಂಪ್ಲೆಕ್ಸ್ ನಲ್ಲಿ ನೆರವೇರಿತು. ಸಭೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಅಭ್ಯರ್ಥಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತಾಡುತ್ತ, “ಸಂಘಟನಾತ್ಮಕ ಹೋರಾಟದಿಂದ ಗೆಲುವು ಸಾಧ್ಯವಾಗುತ್ತದೆ. ನನ್ನ ವಿನಂತಿ ಏನೆಂದರೆ ಭಾರತೀಯ ಜನತಾ ಪಕ್ಷಕ್ಕೆ ಒಂದೇ ವೋಟ್ ಇದ್ದು ಅದನ್ನು ಎಲ್ಲರೂ ಸರಿಯಾಗಿ ಹಾಕಬೇಕು. ಕಳೆದ ಬಾರಿ 250ರಷ್ಟು ಮತಗಳು ಅಸಿಂಧುವಾಗಿದೆ. ಇದು ರಾಜಕೀಯದಲ್ಲಿ ಮಹತ್ವದ್ದಾಗಿರುವ ಕಾರಣ ಒಂದೇ ಒಂದು ಮತವನ್ನು ಬಿಜೆಪಿ ಅಭ್ಯರ್ಥಿಗೆ ಚಲಾಯಿಸಬೇಕು. ಸರಿಯಾದ ದಾಖಲೆ ಪತ್ರಗಳೊಂದಿಗೆ ಮತ ಚಲಾಯಿಸಬೇಕು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಕಾರಣ 200ರಷ್ಟಾದರೂ ಬೇರೆ ಪಕ್ಷಗಳ ಮತಗಳನ್ನು ಸೆಳೆಯಲು ಮುಂದಾಗಬೇಕು. ಈ ಮೂಲಕ 3700ಕ್ಕೂ ಹೆಚ್ಚು ಮತಗಳನ್ನು ಪಡೆದರೆ ಪಕ್ಷ ಸಂಘಟನೆ ಇನ್ನಷ್ಟು ಸದೃಢವಾಗಿರುವುದಕ್ಕೆ ಸಾಕ್ಷಿಯಾಗುತ್ತದೆ” ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಳಿಕ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು, “ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನಾವೆಲ್ಲರೂ ಸೇರಿದ್ದೇವೆ. ಮನುಷ್ಯನ ಬದುಕೇ ಇಂದು ಸಂಶಯದಿಂದ ಕೂಡಿದ್ದು ನಾವೆಲ್ಲರೂ ಭರವಸೆ ತುಂಬುವ ಅಗತ್ಯವಿದೆ. ಡಿ.10ರ ಚುನಾವಣೆಯಲ್ಲಿ ನಾವು ಸುಲಭವಾಗಿ ಗೆಲ್ಲುತ್ತೇವೆ ಆದರೆ ನೂರಕ್ಕೆ ನೂರರಷ್ಟು ಮತದಾನ ನಡೆಯುವಂತೆ ನೋಡಿಕೊಂಡರೆ ನಾವು ವಿಶ್ವಾಸವನ್ನು ಉಳಿಸಿಕೊಂಡಂತಾಗುತ್ತದೆ. ಅಭ್ಯರ್ಥಿಯ ಮುಂದೆ 1 ಎಂದು ಬರೆಯುವ ಮೂಲಕ ಆಯ್ಕೆಯನ್ನು ಮಾಡಬೇಕು. ನಾವು ಎಷ್ಟೇ ತಿಳಿದಿದ್ದರೂ ಅನೇಕ ಮತಗಳು ಹಾಳಾಗುತ್ತವೆ. ಹೀಗಾಗಿ ಅಲ್ಲಲ್ಲಿ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಮತದಾನ ಸರಿಯಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಸಂಘಟನೆ ಅಥವಾ ಪಕ್ಷಕ್ಕೆ ಯಾರ ಮೇಲೂ ಸಂದೇಹವಿಲ್ಲ. 147 ಮತಗಳು ಕೂಡ ಒಗ್ಗಟ್ಟಾಗಿ ಚಲಾಯಿಸಬೇಕು” ಎಂದು ಹೇಳಿದರು.
ಇದೇ ವೇಳೆ ಮಾತಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು, “ಬೆಳ್ತಂಗಡಿ ತಾಲೂಕಿನಲ್ಲಿ 522 ಮತಗಳು ಚಲಾವಣೆ ಆಗಬೇಕಿದೆ. ಕೋಟ ಶ್ರೀನಿವಾಸ ಪೂಜಾರಿಯವರನ್ನು ಮೊದಲ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜನರು ಆರಿಸಿ ಕಳುಹಿಸಿದ್ದು ಅವರ ಸರಳತೆಯನ್ನು ನೋಡಿ. ಬಂದರು ಮೀನುಗಾರಿಕಾ ಇಲಾಖೆ ಸಚಿವರಾಗಿದ್ದ ವೇಳೆ ಹಲವಾರು ಬದಲಾವಣೆ ತಂದ ಶ್ರೀನಿವಾಸ ಪೂಜಾರಿಯವರು ಬಳಿಕ ಮುಜರಾಯಿ ಇಲಾಖೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿ ಇದೀಗ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಲಾಲ ಸಮುದಾಯದ ಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ಅನುದಾನ, ಗೌಡ ಸಮಾಜ ಭವನ ನಿರ್ಮಾಣಕ್ಕೆ ಒಂದೂವರೆ ಕೋಟಿ ರೂಪಾಯಿ, ಬಿಲ್ಲವ ಭವನಕ್ಕೆ ಒಂದೂವರೆ ಕೋಟಿ, ವಿಶ್ವಕರ್ಮ ಭವನಕ್ಕೆ 50 ಲಕ್ಷ, ಮಡಿವಾಳ ಸಮಾಜಕ್ಕೆ 25 ಲಕ್ಷ ರೂ. ಅನುದಾನ ಘೋಷಣೆ ಮಾಡಿದ್ದಾರೆ. ತಾಲೂಕಿನ ಬಿಜೆಪಿ ಪಂಚಾಯತ್ ಸದಸ್ಯರು ಮಾತ್ರವಲ್ಲದೆ ಬೇರೆ ಪಕ್ಷಗಳ ಅಭ್ಯರ್ಥಿಗಳನ್ನೂ ಮನವೊಲಿಸುವ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡುತ್ತ, “ನಮ್ಮ ದೇಶ ಬದಲಾಗುತ್ತಿದೆ. ಗ್ರಾಮಗಳು ಬದಲಾದಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮೋದಿಯವರ ಆಡಳಿತದಲ್ಲಿ ಇಂದು ನೇರವಾಗಿ ಪಂಚಾಯತ್ ಗಳಿಗೆ ಅನುದಾನ ಸಿಗುತ್ತಿದೆ. ಸರಕಾರ ಇಲ್ಲದೆ ಇದ್ದಾಗಲೂ ಪಂಚಾಯತ್ ಮತ್ತು ಗ್ರಾಮಗಳ ಸಮಸ್ಯೆಯನ್ನು ವಿಧಾನ ಸಭೆಗೆ ಮುಟ್ಟಿಸಿದ್ದು ನಮ್ಮ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು. ಹೀಗಾಗಿ ನಮ್ಮ ಮತ ಏಕೈಕ ಅಭ್ಯರ್ಥಿಯಾದ ಅವರಿಗೆ ನೀಡಬೇಕು. ಚುನಾವಣೆ ಬಂದಾಗ ಆಮಿಷವನ್ನು ಒಡ್ಡಲಾಗುತ್ತದೆ. ಆದರೆ ಇದಾವುದಕ್ಕೂ ಕಾರ್ಯಕರ್ತರು ಮಹತ್ವ ಕೊಡದೆ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಡಬೇಕು. ಸಂಘಟನೆ ಬೆಳೆದಲ್ಲಿ ನಾವೆಲ್ಲರೂ ಬೆಳೆಯುತ್ತೇವೆ. ನಮ್ಮ ಅಭ್ಯರ್ಥಿಗಳ ಗೆಲುವಿನ ಹಿಂದೆ ಸಂಘಟನೆಯ ಅವಿರತ ಶ್ರಮವಿದೆ. ಯಾವೊಬ್ಬ ಜನಪ್ರತಿನಿಧಿಯ ಮತವೂ ಕೂಡ ಅಸಿಂಧು ಆಗಬಾರದು” ಎಂದು ಹೇಳಿದರು.
ಸಭೆಯಲ್ಲಿ ನಾರಾವಿ, ಮರೋಡಿ, ಕಾಶೀಪಟ್ಣ, ಆರಂಬೋಡಿ, ಹೊಸಂಗಡಿ, ವೇಣೂರು, ಅಳದಂಗಡಿ, ಅಂಡಿಂಜೆ, ಸುಲ್ಕೇರಿ, ಕುಕ್ಕೇಡಿ, ಪಡಂಗಡಿ, ಶಿರ್ಲಾಲು, ಬಳಿಂಜ, ಮೇಲಂತಬೆಟ್ಟು ಗ್ರಾಮಗಳ 147 ಗ್ರಾಮ ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹರಿಕೃಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷರು ಜಯಂತ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ರಾಮದಾಸ್, ರಾಜೇಶ್, ರಾಮದಾಸ್ ಬಂಟ್ವಾಳ, ಸಂತೋಷ್ ರೈ ಬೋಳಿಯಾರ್, ಮಾಧ್ಯಮ ಸಂಚಾಲಕ ರಣ್ ದೀಪ್ ಕಾಂಚನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ವೆಂಕಟ್ ಒಳಲಂಬೆ, ಸತೀಶ್ ಕುಂಪಲ, ದೇವದಾಸ್ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ