ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್-19 ನಿಂದ ಅಸುನೀಗಿದವರ ಕುಟುಂಬಗಳಿಗೆ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಗೋವಿಂದರಾಜನಗರ ಕ್ಷೇತ್ರದ ಶಾಸಕರಾದ ವಿ. ಸೋಮಣ್ಣ ಅವರು ಇಂದು ಪರಿಹಾರ ಚೆಕ್ ಹಾಗೂ ಮಂಜೂರಾತಿ ಪತ್ರವನ್ನು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ನಿಂದ ಅಸುನೀಗಿದ ಕುಟುಂಬಗಳ ನೋವಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಕೋವಿಡ್ ಎರಡನೇ ಅಲೆಯ ವೇಳೆ ಸಾವಿರಾರು ಕುಟುಂಬಗಳು ಆರ್ಥಿಕವಾಗಿ, ಮಾನಸಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ . ಇಂಥ ಕುಟುಂಬಗಳಿಗೆ ಸಹಾಯಹಸ್ತ ಚಾಚಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಬದ್ಧವಾಗಿವೆ. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಚಿಂತನೆ ಮತ್ತು ರಾಜ್ಯ ಸರ್ಕಾರದ ದಿಟ್ಟ ಕ್ರಮಗಳಿಂದ ಕೊರೋನಾ ಹತೋಟಿಯಲ್ಲಿದೆ ಎಂದರು.
ಇನ್ನು, ಕ್ಷೇತ್ರದಲ್ಲಿ ಕೋವಿಡ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸಿದ್ಧನಿದ್ದೇನೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಡನೆ ಚರ್ಚಿಸಿದ್ದೇನೆ. ಈ ಮೂಲಕ ನೋವಿನಲ್ಲಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಆಸರೆಯಾಗುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು. ಗೋವಿಂದರಾಜನಗರ ಕ್ಷೇತ್ರದ ಒಂಭತ್ತು ವಾರ್ಡ್ಗಳ ಮುನ್ನೂರಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಚೆಕ್ಗಳನ್ನು ವಿತರಿಸಲಾಗುತ್ತಿದ್ದು, ಎಪಿಎಲ್ ಕಾರ್ಡ್ದಾರರಿಗೆ ಒಂದು ಲಕ್ಷ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ 50 ಸಾವಿರ ರೂ. ಪರಿಹಾರ ಧನವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸೇನಾಧಿಕಾರಿಗಳಿಗೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ವಿಶ್ವನಾಥ ಗೌಡ, ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ದಾಸೇಗೌಡ, ಶ್ರೀಧರ, ಉಮೇಶ್ ಶೆಟ್ಟಿ, ರೂಪ ಲಿಂಗೇಶ್ವರ್, ಬಿಜೆಪಿ ಯುವ ಮುಖಂಡ ಡಾ.ಅರುಣ್ ಸೋಮಣ್ಣ,ಕರ್ನಾಟಕ ಕೊಳಚೆ ಮಂಡಳಿ ನಿರ್ದೇಶಕರಾದ ಕ್ರಾಂತಿರಾಜು ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ