ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ಮನೆಗೆ ಇವತ್ತು ಮಧ್ಯಾಹ್ನ ಕೆಲವು ಕಾಂಗ್ರೆಸ್ ಪ್ರಚೋದಿತ ಕಿಡಿಗೇಡಿಗಳು ನುಗ್ಗಿ ಹಲ್ಲೆ ನಡೆಸುವ ಮತ್ತು ಬೆಂಕಿ ಹಾಕುವ ಪ್ರಯತ್ನ ಮಾಡಿದ್ದನ್ನು ಖಂಡಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಸಂವಾದ ಹಾಗೂ ಚರ್ಚೆ ಮೂಲಕ ಅಭಿಪ್ರಾಯ ರೂಪಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ಆದರೆ, ಸಚಿವರ ಧ್ವನಿಯನ್ನು ಹತ್ತಿಕ್ಕಲು ಬೆದರಿಸುವುದು, ದೌರ್ಜನ್ಯ ನಡೆಸುವುದು ಮತ್ತು ಕೊಲೆ ಬೆದರಿಕೆ ಹಾಕಿ ಮನೆಗೆ ಬೆಂಕಿ ಹಾಕುವ ಹೀನ ಕೃತ್ಯಕ್ಕೆ ಕೈ ಹಾಕುವ ಮನೋಭಾವವು ಪ್ರಜಾಪ್ರಭುತ್ವ ವಿರೋಧಿ. ಇದು ತಾಲಿಬಾನ್‍ಗಳು ನಡೆಸುವ ಕೃತ್ಯ ಎಂದು ಆಕ್ಷೇಪಿಸಿದರು.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದ ಪ್ರಚೋದನೆಯನ್ನು ಕಾಂಗ್ರೆಸ್ ಇಲ್ಲೂ ಪ್ರಯೋಗ ಮಾಡಲು ಹೊರಟಂತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಬಿ.ಸಿ.ನಾಗೇಶ್ ಅವರು ಅಧೀರರಾಗಬಾರದು. ಪ್ರಜಾಪ್ರಭುತ್ವದಲ್ಲಿ ದೌರ್ಜನ್ಯ ಮನೋಭಾವ ಯಾವತ್ತೂ ಗೆದ್ದಿಲ್ಲ ಎಂದರು. ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸಚಿವರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಇದೇ ಮನೋಭಾವ ರಾಜ್ಯದ ಬೇರೆಬೇರೆ ಕಡೆ ವ್ಯಕ್ತವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಅದನ್ನು ಖಂಡಿಸುತ್ತೇನೆ ಎಂದು ಪ್ರಶ್ನೆಗೆ ಉತ್ತರಿಸಿದರು. ದುಷ್ಕøತ್ಯವನ್ನು ಬೇರುಸಹಿತ ಕಿತ್ತುಹಾಕಬೇಕು ಎಂದು ಅವರು ನುಡಿದರು.
ಪಠ್ಯಪುಸ್ತಕದಲ್ಲಿ ದೋಷವಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಸರಕಾರ ಖಂಡಿತವಾಗಿಯೂ ಮಾಡಲಿದೆ. ಪೂರ್ವಾಗ್ರಹ ಪೀಡಿತ ಮನಸ್ಥಿತಿಯ ಜನರು ಅವರ ಮನೋಭಾವಕ್ಕೆ ತಕ್ಕಂತೆ ಇರಬೇಕೆಂದು ಬಯಸಿದರೆ ಅದು ಅವರ ಮನೋಭಾವದ ದೋಷ. ಪಠ್ಯದಲ್ಲಿ ಮಕ್ಕಳ ಮನಸ್ಸಿಗೆ ವಿಷಬೀಜ ಬಿತ್ತುವ ವಿಷಯ ಇದ್ದರೆ ಖಂಡಿತ ಅದನ್ನು ದೂರ ಮಾಡಬೇಕು. ವಿಷಬೀಜ ಬಿತ್ತಿದ್ದನ್ನೇ ಮುಂದುವರಿಸಬೇಕೆಂದು ಯಾರಾದರೂ ಬಯಸಿದರೆ ಅದು ಸಮರ್ಥನೀಯ ಅಥವಾ ಒಪ್ಪಿಕೊಳ್ಳುವ ವಿಚಾರ ಅಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಸ್ವಾಮೀಜಿಗಳಿಗೆ ಮನವರಿಕೆ ಮಾಡುವ ಕೆಲಸವನ್ನು ಸಚಿವರು ಮಾಡಿದ್ದಾರೆ. ಸಮಾಜಸುಧಾರಕ ಬಸವಣ್ಣನವರನ್ನು ಪ್ರಧಾನಿಯವರೇ ನೂರಾರು ಬಾರಿ ಮೆಚ್ಚಿಕೊಂಡಿದ್ದಾರೆ. ವಿದೇಶದಲ್ಲೂ ಅನುಭವ ಮಂಟಪದ ಉಲ್ಲೇಖ ಮಾಡಿದ್ದಾರೆ. ನಮ್ಮ ಸರಕಾರ ಅನುಭವ ಮಂಟಪದ ಪುನರುತ್ಥಾನಕ್ಕೆ 600 ಕೋಟಿ ರೂಪಾಯಿ ಅನುದಾನ ನೀಡಿದೆ. ಆಕಸ್ಮಿಕವಾಗಿ ದೋಷವಿದ್ದರೆ ಅದನ್ನು ಸರಿಪಡಿಸುತ್ತಾರೆ. ಸ್ವಾಮೀಜಿಗಳಿಗೆ ತಪ್ಪು ಮಾಹಿತಿ ಬಂದಿದ್ದರೆ ಅದನ್ನು ಮನವರಿಕೆ ಮಾಡುವ ಕೆಲಸವನ್ನು ಮಾಡಲಿದ್ದೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ತಪ್ಪು ಸಮರ್ಥಿಸುವ ಭಂಡತನ ಅಥವಾ ಅಹಂಭಾವ ನಮ್ಮಲ್ಲಿಲ್ಲ ಎಂದು ನುಡಿದರು.
ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಲಾಗದ ಪೂರ್ವಾಗ್ರಹ ಪೀಡಿತರಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆದುದನ್ನು ಸಹಿಸಲಾಗದವರೂ ಇದ್ದಾರೆ. ಅವರು ಆರಂಭದಿಂದ ನಮ್ಮ ವಿಚಾರವನ್ನು ವಿರೋಧಿಸುತ್ತ ಬಂದಿದ್ದಾರೆ. ಅವರ ವಿರೋಧವನ್ನು ಮೀರಿಯೇ ಬಿಜೆಪಿ ಬೆಳೆದಿದೆ. ಅಂಥ ಜನರಿಗೆ ನಾವು ಸಮಜಾಯಿಷಿ ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.
2017ರಲ್ಲಿ ರೋಹಿತ್ ಚಕ್ರತೀರ್ಥರ ವಿರುದ್ಧ ಕೇಸ್ ಹಾಕಿ ಬಳಿಕ ತಪ್ಪಿಲ್ಲವೆಂದು ‘ಬಿ ರಿಪೋರ್ಟ್’ ಕೊಡಲಾಗಿತ್ತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಗ್ಯಾಕೆ ಆರೋಪಿಸುತ್ತಾರೆ? ಹಾಗೆ ಆರೋಪಿಸಲು ಯಾವ ನೈತಿಕತೆ ಇದೆ? ವಿಪಕ್ಷ ನಾಯಕ ಸಿದ್ದರಾಮಯ್ಯ ಸರಿ ಇಲ್ಲ; ಅವರು ರಾಜೀನಾಮೆ ಕೊಡಬೇಕೆಂದು 10 ಜನ ಹೇಳಿದರೆ ಅವರು ರಾಜೀನಾಮೆ ಕೊಡುತ್ತಾರಾ ಎಂದು ಮರುಪ್ರಶ್ನೆ ಹಾಕಿದರು. ಪಠ್ಯದ ವಿಚಾರದಲ್ಲಿ ನಡೆಯುತ್ತಿರುವುದೆಲ್ಲವೂ ಟೂಲ್‍ಕಿಟ್ ರಾಜಕೀಯ ಅನಿಸುವುದಿಲ್ಲವೇ ಎಂದು ಕೇಳಿದರು. ಅಂಥ ಅನುಮಾನ ನನಗೆ ಬರುತ್ತಿದೆ ಎಂದರು.
ಹಿಂದೆ ಸಿ.ಎ.ಎ. ಸಂದರ್ಭ, ರೈತ ಚಳವಳಿ ಸಂದರ್ಭದಲ್ಲಿ ಪೂರ್ವ ನಿರ್ಧರಿತ ಟೂಲ್‍ಕಿಟ್ ಡಿಸೈನ್ ಮಾಡಿ ಅದನ್ನು ಅನುಷ್ಠಾನಕ್ಕೆ ತರಲಾಗಿತ್ತು. ಅಂಥ ಜಾಲ ಇರುವುದು ಆಗ ಜಾಹೀರಾಗಿತ್ತು ಎಂದು ತಿಳಿಸಿದರು. ಪಠ್ಯಗಳನ್ನು ತುಲನೆ ಮಾಡದೆ ಹಿಂದಿನದು ತಪ್ಪೇ; ಈಗಿನದು ಸರಿ ಇಲ್ಲ ಎನ್ನಲು ಸಾಧ್ಯವಾದೀತೇ ಎಂದು ಕೇಳಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ