ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟು ಪ್ರತಿಭಟಿಸುವ ಮೂಲಕ ಕಾಂಗ್ರೆಸ್ ಪಕ್ಷದವರು ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಸಂಸ್ಥೆಯಾದ ಇ.ಡಿ.ಯ ಅಧಿಕಾರಿಗಳು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಗಳನ್ನು ವಿಚಾರಿಸುವುದು ಸಹಜ ಪ್ರಕ್ರಿಯೆ. ಆದರೆ, ಸೋನಿಯಾ ಗಾಂಧಿ ಅವರನ್ನು ಇ.ಡಿ. ವಿಚಾರಣೆಗೆ ಕರೆದಿದೆ ಎಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮಾಡುವುದು ಯಾವ ನೈತಿಕತೆಯ ಅಡಿಯಲ್ಲಿ ಎಂದು ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಪಕ್ಷದವರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರರು ಬರೆದ ಸಂವಿಧಾನದಲ್ಲಿ ವಿಶ್ವಾಸ ಇಲ್ಲವೇ ಎಂದು ಪ್ರಶ್ನಿಸಿದರು.
ಇಂದಿನ ಕಾಂಗ್ರೆಸ್ ಹೋರಾಟವನ್ನು ಬಿಜೆಪಿ ಖಂಡಿಸುತ್ತದೆ. ಕಾಂಗ್ರೆಸ್ಸಿನ ಭ್ರಷ್ಟಾಚಾರ ಇಡೀ ದೇಶದ ಜನರಿಗೆ ಗೊತ್ತಿದೆ. ಕಾಂಗ್ರೆಸ್ಸಿಗರಿಗೆ ನೈತಿಕತೆ ಇದ್ದರೆ, ಪ್ರಾಮಾಣಿಕತೆ, ಸತ್ಯಾಂಶ ಇದ್ದರೆ ಆ ಕೇಸನ್ನು ಎದುರಿಸಿ ಆರೋಪಮುಕ್ತರಾಗಿ ಹೊರಬರಲಿ ಎಂದು ಸವಾಲೆಸೆದರು.
ಕಾಂಗ್ರೆಸ್ ದಿಕ್ಕು ತಪ್ಪಿಸುವ ಕೆಲಸವನ್ನು ನಿಲ್ಲಿಸಲಿ. ಇ.ಡಿ. ತನಿಖೆಗೆ ಸಹಕರಿಸಬೇಕು. ಸ್ವಚ್ಛವಾಗಿದ್ದರೆ ನಿರ್ದೋಷಿಯಾಗಿ ಹೊರಬಂದೇ ಬರುತ್ತಾರೆ ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇವತ್ತಿನ ದಿನ ಕಾಂಗ್ರೆಸ್ ಮುಖಂಡರನ್ನು ದೇಶದಲ್ಲಿ ಯಾರೂ ಪ್ರಶ್ನಿಸಬಾರದು; ಮಾಡಿದರೆ ನಾವು ಬೀದಿಗಿಳಿಯುತ್ತೇವೆ ಎಂದು ತಿಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ಸಿಗರು ಪ್ರಶ್ನಾತೀತರೇ ಎಂಬ ಪ್ರಶ್ನೆ ಮೂಡುತ್ತದೆ. ಯಾರೂ ಸಂವಿಧಾನಕ್ಕಿಂತ ದೊಡ್ಡವರಲ್ಲ. ನರೇಂದ್ರ ಮೋದಿಯವರು, ಅಮಿತ್ ಶಾ ಅವರೂ ತನಿಖೆ ಎದುರಿಸಿ ಹೊರಬಂದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಪ್ರಶ್ನಿಸುವುದು ತಪ್ಪು ಎಂಬ ನಿಲುವು ಸರಿಯೇ ಎಂದು ಕೇಳಿದರು.
ಈಗಿನ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ. ಸೋನಿಯಾ ಕಾಂಗ್ರೆಸ್ ಯಾವತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು? ಎಂದ ಅವರು, ಮಹಾತ್ಮ ಗಾಂಧೀಜಿ ಅವರ ನೇತೃತ್ವದ ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿತ್ತು ಎಂದರು. ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಮಹಾತ್ಮ ಗಾಂಧೀಜಿ ಅವರು ಸಲಹೆ ನೀಡಿದ್ದರು ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ಮಾತನ್ನು ಮೀರಿ ನೆಹರೂ ಅವರು ಈ ಸಂಘಟನೆಯನ್ನು ಮುಂದುವರಿಸಿದರು ಎಂದರು.
ಆಗಿನದು ಜೋಡೆತ್ತುಗಳಿದ್ದ ಕಾಂಗ್ರೆಸ್. ಹಳೆಯ ಕಾಂಗ್ರೆಸ್ ಮಾತ್ರ ಸ್ವಾತಂತ್ರ್ಯಕ್ಕೆ ಹೋರಾಡಿತ್ತು. ನಂತರ ಇಂದಿರಾ ಗಾಂಧಿಯವರು ಬಂದಾಗ ಹಸು ಕರು ಆಯಿತು. ಈಗ ಕೈ ಬಂದಿದೆ. ದೇಶಕ್ಕೆ ಕೈ ಕೊಡುವ ಕೈ ಇದು ಎಂದು ಟೀಕಿಸಿದರು. ಈಗಿನ ಕಾಂಗ್ರೆಸ್ಸಿಗರ್ಯಾರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ ಎಂದು ತಿಳಿಸಿದರು.
ಹೊರದೇಶದಲ್ಲಿ ಹುಟ್ಟಿದವರಿಗೆ (ಸೋನಿಯಾ ಗಾಂಧಿ) ನಮ್ಮ ದೇಶ ಆಳುವ ಹಕ್ಕಿಲ್ಲ; ಅಧಿಕಾರವಿಲ್ಲ ಎಂದು ಹಿಂದಿನ ರಾಷ್ಟ್ರಪತಿಗಳಾದ ಗೌರವಾನ್ವಿತ ಡಾ. ಅಬ್ದುಲ್ ಕಲಾಂ ಅವರು ಸುಬ್ರಹ್ಮಣ್ಯನ್ ಸ್ವಾಮಿ ಅವರ ಪತ್ರಕ್ಕೆ ಉತ್ತರ ನೀಡಿದ್ದರು. ಬಳಿಕ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಲಾಗಿತ್ತು. ಇದು ಇಡೀ ದೇಶಕ್ಕೇ ಗೊತ್ತಿದೆ. ಸೋನಿಯಾರವರು ಯಾವ ತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಇದು ಕಾಂಗ್ರೆಸ್ಸಿನವರಿಗೆ ಗೊತ್ತಿಲ್ಲವೇ ಎಂದು ಕೇಳಿದರು.
ನಾಲ್ಕು ತಲೆಮಾರಿಗೆ ಬೇಕಾದಷ್ಟು ಕಾಂಗ್ರೆಸ್ಸಿಗರು ಲೂಟಿ ಮಾಡಿದ ಮೇಲೆ ಆ ಪಕ್ಷ ದೇಶ ಲೂಟಿ ಮಾಡಿದ ಕಾಂಗ್ರೆಸ್ ಆಗಲಿಲ್ಲವೇ? ಇ.ಡಿ. ವಿಚಾರಣೆಯಲ್ಲಿ ಸತ್ಯಾಂಶ ಇದೆ ಎಂದು ರಮೇಶ್‍ಕುಮಾರ್ ಅವರೇ ಹೇಳಿದ್ದಾರೆ. ಋಣಸಂದಾಯಕ್ಕಾಗಿ ಪ್ರತಿಭಟನೆ ಮಾಡುತ್ತಿರುವುದಾಗಿಯೂ ನೀವೇ ಹೇಳಿದ್ದೀರಿ. ಇದಕ್ಕೆ ನಮ್ಮ ಪುರಾವೆ ಯಾಕೆ ಬೇಕು ಎಂದರು.
ಲೂಟಿಕೋರರನ್ನು ನಿರ್ನಾಮ ಮಾಡಬೇಕು ಎಂದು ತಿಳಿಸಿದರು. ಕಾರುಗಳಿಗೆ ಬೆಂಕಿ ಹಚ್ಚುವುದು ಸಂವಿಧಾನ ರಕ್ಷಣೆಯೇ? ಆಪಾದನೆ ಬಂದಾಗ ವಿಚಾರಣೆಗೆ ಹಾಜರಾಗಿ ನಾವು ಆರೋಪಮುಕ್ತ ಆಗಬೇಕು. ಕಾಂಗ್ರೆಸ್ ಮುಕ್ತ ದೇಶ ಎಂದರೆ ಭ್ರಷ್ಟಾಚಾರಮುಕ್ತ ದೇಶ ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್‍ನವರು ಬದುಕಿದ್ದೀವಿ ಎಂದು ತೋರಿಸಲು ಈ ಪ್ರತಿಭಟನೆ ನಡೆಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮೇಲೆ ಗೂಬೆ ಕೂರಿಸದಿರಿ. ದಾರಿ ತಪ್ಪಿಸುವ ಕೆಲಸ ಬಿಟ್ಟು ವಿಚಾರಣೆ ಎದುರಿಸಿ ಎಂದು ಅವರು ಆಗ್ರಹಿಸಿದರು. ಮಾನ ಮರ್ಯಾದೆ ಇರುವವರು ಯಾರಾದರೂ ಅಂಜುತ್ತಿದ್ದರು. ಇವರು ಮಾನ ಮರ್ಯಾದೆ ಕಳಕೊಂಡಿರುವ ಕಾರಣ ಇವರೆಲ್ಲರೂ ನ್ಯಾಯ ಎದುರಿಸುವ ಬದಲಾಗಿ ಬಿಜೆಪಿಯನ್ನು ಎದುರಿಸಲು ಬೀದಿಯಲ್ಲಿ ನಿಂತು ಪಣ ತೊಡುತ್ತಿದ್ದಾರೆ. ಇದರಿಂದ ನಾವೇನೂ ಹೆದರುವುದಿಲ್ಲ ಎಂದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ