ಬೆಂಗಳೂರು: ಬ್ರಿಟಿಷರ ದುರಾಡಳಿತವನ್ನು ಅಂತ್ಯಗೊಳಿಸಲು ಮತ್ತು ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ನಮ್ಮ ಲಕ್ಷ ಲಕ್ಷ ಪೂರ್ವಜರು ಭಾಗವಹಿಸಿದ್ದರು. ತ್ಯಾಗ ಬಲಿದಾನಗಳ ಮಧ್ಯೆ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ ಎಂದು ರಾಜ್ಯದ ಬೃಹತ್ ಮತ್ತು ಮಾಧ್ಯಮ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬೆಳಿಗ್ಗೆ 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ದೇಶದ ಉದ್ದಗಲಕ್ಕೆ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಜೆಯೂ ಇದನ್ನು ಸಂಭ್ರಮದಿಂದ ಆಚರಿಸಬೇಕು ಎಂಬ ಉದ್ದೇಶದಿಂದ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಒಂದು ಅಭಿಯಾನವನ್ನೇ ಆರಂಭಿಸಿದ್ದಾರೆ. ಇಂದು ದೇಶದ ಸುಮಾರು 20 ಕೋಟಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಾಡುತ್ತಿದೆ ಎಂದು ನುಡಿದರು.
ಈ ಸಂಭ್ರಮವನ್ನು ನಮ್ಮ ಯುವಕರು ಮತ್ತು ಹಿರಿಯರು ಸೇರಿ ಆಚರಿಸುತ್ತಿದ್ದಾರೆ. ಪ್ರತಿಯೊಬ್ಬರ ಮನೆಯ ಮೇಲೆ 13ರಿಂದ 15ರವರೆಗೆ ತ್ರಿವರ್ಣ ಧ್ವಜ ಹಾರಿಸಲಾಗುತ್ತಿದೆ. ದೇಶಕ್ಕಾಗಿ ತಮ್ಮ ಪ್ರಾಣ, ಆಸ್ತಿಪಾಸ್ತಿ ಕಳೆದುಕೊಂಡವರ ಹಾಗೂ ಹೋರಾಟ ಮಾಡಿದ ಎಲ್ಲ ಮಹನೀಯರನ್ನು ನಾವಿಂದು ಸ್ಮರಿಸಬೇಕು ಎಂದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಸಮರ್ಪಕವಾಗಿ ಜಾರಿಯಲ್ಲಿದೆ. ನಮ್ಮ ನೆರೆಯ ದೇಶಗಳಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ; ಪ್ರಜೆಗಳು ದಂಗೆಯೆದ್ದು ಸಾರ್ವಜನಿಕ ಆಸ್ತಿ ಹಾನಿ ಮಾಡುತ್ತಿದ್ದಾರೆ. ಸರಕಾರಿ ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ. ಇಂಥ ದುರಂತ ನಮ್ಮ ನೆರೆಯ ರಾಷ್ಟ್ರಗಳಲ್ಲಿದೆ ಎಂದು ತಿಳಿಸಿದರು.
ಭಾರತದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯನ್ನು ಅತ್ಯಂತ ಕ್ರೀಡಾ ಮನೋಭಾವದಿಂದ ಎದುರಿಸಿ ಎಲ್ಲರೂ ಕೂಡ ಪ್ರಜಾಪ್ರಭುತ್ವಕ್ಕೆ ಗೌರವ ಕೊಡುತ್ತಿದ್ದಾರೆ. ಇದು ಭಾರತದ ಪ್ರಜಾಪ್ರಭುತ್ವದ ಸೌಂದರ್ಯ ಎಂದು ವಿಶ್ಲೇಷಿಸಿದರು.
ಭಾರತದಲ್ಲಿ ಶೇ 50ಕ್ಕೂ ಹೆಚ್ಚು ವಿದ್ಯಾವಂತ ಯುವಕರಿದ್ದಾರೆ. ದೇಶದ ಪ್ರಗತಿ, ಏಳಿಗೆಗೆ ಹಾಗೂ ದೇಶವನ್ನು ಹಿರಿಯಣ್ಣನ ಸ್ಥಾನಕ್ಕೆ ಒಯ್ಯಲು ಎಲ್ಲ 130 ಕೋಟಿ ಜನರೂ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಪ್ರಪಂಚವೇ ಮೆಚ್ಚುವಂಥ ಆಡಳಿತ ಮಾಡುವ ಜೊತೆಗೆ ದೇಶದ ಏಕತೆ, ಐಕ್ಯತೆ ಮತ್ತು ಭದ್ರತೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ತಿಳಿಸಿದರು. ಅಮೃತ ಮಹೋತ್ಸವವನ್ನು ಜಗತ್ತೇ ಮೆಚ್ಚುವ ಮಾದರಿಯಲ್ಲಿ ಆಚರಿಸಬೇಕು ಎಂದು ಅವರು ಕರೆ ನೀಡಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ಪಕ್ಷದ ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ