ಬೆಂಗಳೂರು: ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಇದ್ದರೆ ಕರ್ನಾಟಕದ ಜನ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಆದ್ದರಿಂದ ಅವರು ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದರು.
ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ದಲಿತ ವಿರೋಧಿ ಎಂದು ನೂರು ಸಾರಿ ಹೇಳಿದ್ದೇನೆ. ಅದನ್ನೇ ಮತ್ತೊಮ್ಮೆ ಹೇಳುವುದಾಗಿ ತಿಳಿಸಿದ ಅವರು, ಹಿಂದೆ ಸಿದ್ದರಾಮಯ್ಯ ಐದು ವರ್ಷ ಆಡಳಿತದಲ್ಲಿದ್ದರು. ಆಗ ಸದಾಶಿವ ಆಯೋಗದ ಕುರಿತಂತೆ ನಿರ್ಧಾರ ತೆಗೆದುಕೊಂಡಿರಲಿಲ್ಲವೇಕೆ? ಆಗ ಕಡ್ಲೆಪುರಿ ತಿನ್ನುತ್ತಿದ್ದರೇ ಎಂದು ವ್ಯಂಗ್ಯವಾಡಿದರು.
ಅಧಿಕಾರ ಕಳಕೊಂಡ ಮೇಲೆ ಅವರು ನೀರಿನಿಂದ ಹೊರತೆಗೆದ ಮೀನಿನಂತೆ ವಿಲವಿಲ ಒದ್ದಾಡುತ್ತಿದ್ದಾರೆ. ಅವರ ತಲೆ ಕೆಟ್ಟಿದೆ. ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಿದ್ದರೆ ಅದು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ. ನಿಮ್ಮ ಯೋಗ್ಯತೆಗೆ ಅದು ಸಾಧ್ಯವಾಗದು ಎಂದು ಸವಾಲೆಸೆದರು.
ನಳಿನ್‍ಕುಮಾರ್ ಕಟೀಲ್ ಅವರು ಹೇಳಿದ್ದು ಸತ್ಯ
ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಹೇಳಿದ್ದು ಸತ್ಯವಿದೆ. ದೇವೇಗೌಡರ ಕಾಲು ಹಿಡಿದು ಉಪ ಮುಖ್ಯಮಂತ್ರಿ ಆದರು. ಸೋನಿಯಾ ಗಾಂಧಿಯವರ ಕಾಲು ಹಿಡಿದು ಸಿಎಂ ಆದರು. ಅವರ ಕಾಲು ಮಾತ್ರ ಹಿಡಿದಿದ್ದಲ್ಲ; ದಲಿತರ ತಲೆಹಿಡಿದಿರಲ್ಲವೇ? ದಲಿತರ ತಲೆ ಹಿಡಿದು, ಕುತ್ತಿಗೆ ಹಿಚುಕಿ, ಡಾ. ಪರಮೇಶ್ವರ್ ಅವರನ್ನು ಸೋಲಿಸಿ ನೀವು ಮುಖ್ಯಮಂತ್ರಿ ಆದುದಲ್ಲವೇ ಎಂದು ಕೇಳಿದರು.
ನಿಮಗೆ ಸಿಎಂ ಸ್ಥಾನ ಪುಕ್ಕಟೆ ಬಂತೇ? ದಲಿತರ ತಲೆ ಹಿಡಿದು- ಕುತ್ತಿಗೆ ಹಿಚುಕಿಯೇ ನೀವು ಆ ಸ್ಥಾನಕ್ಕೆ ಏರಿದ್ದೀರಿ. ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ವಿಷಸರ್ಪದಂತೆ ಸೇರಿಕೊಂಡು ಇವತ್ತು ಕಾಂಗ್ರೆಸ್, ದಲಿತರನ್ನು ಹಾಳು ಮಾಡಿದ್ದಲ್ಲದೆ, ಹಿಂದುಳಿದವರನ್ನೂ ಹಾಳು ಮಾಡಿದಿರಿ. ಯಾರನ್ನು ಬಿಟ್ಟಿದ್ದೀರಿ ನೀವು ಎಂದು ಪ್ರಶ್ನಿಸಿದರು.
ನಿಮ್ಮ ಅಧಿಕಾರದ ಅವಧಿಯಲ್ಲಿ ಮೀಸಲಾತಿ ವಿಷಯದಲ್ಲಿ ಚಿಂತನೆ ಮಾಡುವ ಯೋಗ್ಯತೆಯೂ ನಿಮಗಿರಲಿಲ್ಲ. ಇವತ್ತು ಬಿಜೆಪಿ ಸರಕಾರ ಮೀಸಲಾತಿ ಕುರಿತ ನಿರ್ಧಾರವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿಗೆ ಶೇ 17, ಪರಿಶಿಷ್ಟ ವರ್ಗಗಳಿಗೆ ಶೇ 7ರಷ್ಟು ಮೀಸಲಾತಿ ಕೊಟ್ಟದ್ದು ನಮ್ಮ ಸರಕಾರ ಎಂದು ನುಡಿದರು. ನಿಮ್ಮಂತೆ ಬಿಟ್ಟಿ ಭಾಗ್ಯಗಳ ಕುರಿತು ನಾವು ಮಾತನಾಡುವುದಿಲ್ಲ. ನಿಮ್ಮ ಆ ಕಾಲದ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಕಾಲವೂ ಬರುತ್ತಿದೆ ಎಂದು ಎಚ್ಚರಿಸಿದರು.
ಇವತ್ತು ರಾಜ್ಯದೆಲ್ಲೆಡೆ ಜನರು ನಿಮಗೆ ಛೀಮಾರಿ ಹಾಕುತ್ತಿದ್ದಾರೆ. ನಿಮ್ಮ ಪಕ್ಷದ ದೇಶದ- ರಾಜ್ಯದ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಇಲ್ಲಸಲ್ಲದ ಟೀಕೆ, ಆರೋಪ ಮಾಡುವ ನಿಮಗೆ ಜನರೇ ಛೀಮಾರಿ ಹಾಕುವ ಕಾಲ ಬಂದಿದೆ ಎಂದು ಸಿದ್ದರಾಮಯ್ಯರಿಗೆ ಎಚ್ಚರಿಕೆ ನೀಡಿದರು.
ಮೀಸಲಾತಿ ಕುರಿತ ನಿರ್ಧಾರವನ್ನು ಯಾರು ವಿರೋಧಿಸುತ್ತಾರೋ ಅವರಿಗೆ ವಿರೋಧಿಸಲು ಕಾರಣವಿಲ್ಲ. ಭೋವಿಗಳಿಗೆ ಭೋವಿ ನಿಗಮ, ಲಂಬಾಣಿಗಳಿಗೆ ಅವರದೇ ನಿಗಮ ಇದೆ. ಮಾದಿಗ ಸಮುದಾಯಕ್ಕೂ ಒಂದು ನಿಗಮವಿದೆ. ಇನ್ನು ಉಳಿದಿರೋದನ್ನು ಬೇಡ ಅನ್ನೋದ್ಯಾಕೆ? ಹಾಗಿದ್ದರೆ ನೀವು ನಿಗಮಗಳನ್ನು ಕೇಳಿ ಪಡೆದದ್ದೇಕೆ ಎಂದು ಕೇಳಿದರು.
ನಾಲಿಗೆ ಮೇಲೆ ಹಿಡಿತ ಇಲ್ಲವೇ?
ಒಬ್ಬ ವ್ಯಕ್ತಿಯ ಆರೋಗ್ಯದ ವಿಚಾರದಲ್ಲಿ ಯಾರೂ ಕೀಳಾಗಿ ಮಾತನಾಡಬಾರದು. ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಕಾಲಿನ ತೊಂದರೆ ಇರುವುದು ರಾಜ್ಯಕ್ಕೆ ಗೊತ್ತಿದೆ. ಅವರು ಕುಂಟುತ್ತ ನಡೆದಾಗ ಅವರನ್ನು ‘ಕುಂಟ’ ಎನ್ನುವುದು, ಒಂದು ಕಿಮೀ ನಡೆದುಬಿಡು ಎನ್ನುವುದು ನಿಮ್ಮ ಚಾಲೆಂಜಾ? ನಿಮ್ಮ ನಾಲಿಗೆಗೆ ಹಿಡಿತ ಇಲ್ಲವೇ? ಇಂಥ ಕೀಳು ಮಟ್ಟಕ್ಕೆ ಇಳಿದು ರಾಜಕಾರಣ ಮಾಡಬೇಕೇ? ಎಂದು ಪ್ರಶ್ನೆಗಳ ಸುರಿಮಳೆಗೈದರು.
ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಪಂಜಾಬ್‍ನ ಸಿಕ್ಸರ್ ಸಿದ್ದು, ಅವರದೇ ಪಕ್ಷದವರು ಮತ್ತು ದೇಶ ಹೇಳುತ್ತದೆ. ಯಡಿಯೂರಪ್ಪ ಅವರ ಎತ್ತರಕ್ಕೆ ಹೋಲಿಸಿದರೆ ರಾಹುಲ್ ಗಾಂಧಿ ಅವರು ಬಚ್ಚಾ ಅಲ್ಲವೇ? ಪ್ರಧಾನಮಂತ್ರಿಯವರನ್ನು ಕೀಳಾಗಿ ಮಾತನಾಡಿದ ಯಾರೇ ಆದರೂ ಅವರು ಬಚ್ಚಾ ಎಂದು ಟೀಕಿಸಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ