ಬೆಂಗಳೂರು: ಬಿಜೆಪಿ ಜನಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿ ಅತ್ಯದ್ಭುತವಾದ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷವು 3 ತಂಡಗಳಲ್ಲಿ ಜನಸಂಕಲ್ಪ ಯಾತ್ರೆ ನಡೆಸುತ್ತಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಈಗಾಗಲೇ ಧಾರವಾಡ ಮತ್ತು ಬೆಳಗಾವಿ ವಿಭಾಗಗಳ 13 ವಿಧಾನಸಭಾ ಕ್ಷೇತ್ರಗಳನ್ನು ಪ್ರವಾಸ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ 6 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮುಕ್ತಾಯವಾಗಿದೆ ಎಂದು ವಿವರ ನೀಡಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರ ನೇತೃತ್ವದಲ್ಲಿ 3 ವಿಧಾನಸಭಾ ಕ್ಷೇತ್ರಗಳ ಯಾತ್ರೆ ಮುಗಿದಿದೆ ಎಂದರಲ್ಲದೆ, ಮೂರು ತಂಡಗಳ ಎರಡನೇ ಹಂತದ ಪ್ರವಾಸದ ವಿವರವನ್ನೂ ಅವರು ಬಿಡುಗಡೆ ಮಾಡಿದರು. ರಾಜ್ಯಾಧ್ಯಕ್ಷರು ಬೂತಿನ ಅಧ್ಯಕ್ಷರು ಮತ್ತು ಬಿ.ಎಲ್.ಎ 2ಗಳ ಜೊತೆ ಸಂವಾದ ಮಾಡಿ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದ್ದಾರೆ. ಮಿಷನ್ 150 ಹಿನ್ನೆಲೆಯಲ್ಲಿ ಬೂತ್ ಅಧ್ಯಕ್ಷರ ಕೆಲಸಗಳನ್ನು ಮನವರಿಕೆ ಮಾಡಿದ್ದಾರೆ ಎಂದರು. ಫಲಾನುಭವಿಗಳ ಸಭೆಯಲ್ಲಿ ಅತ್ಯದ್ಭುತ ಪ್ರತಿಕ್ರಿಯೆ ಲಭಿಸಿದೆ ಹಾಗೂ ಅಂತ್ಯೋದಯದ ಕಲ್ಪನೆ ಸಾಕಾರಗೊಳುತ್ತಿದೆ ಎಂದು ತಿಳಿಸಿದರು. ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರ ಮಾಡುತ್ತಿರುವ ಜನಸಂಕಲ್ಪ ಯಾತ್ರೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನ ಸೇರುತ್ತಿರುವುದನ್ನು ನೋಡಿ ಕಾಂಗ್ರೆಸ್ಸಿಗೆ ಹೊಟ್ಟೆ ಉರಿ ಪ್ರಾರಂಭವಾಗಿದೆ. ಫಲಾನುಭವಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಫಲಾನುಭವಿಗಳೇ ಇವತ್ತು ನಮ್ಮ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಬಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ವಿವರಿಸಿದರು.
ಒಬಿಸಿ ಸಮುದಾಯದ ವಿಶೇಷ ಸಮಾವೇಶವು ಇದೇ 30ರಂದು ಕಲಬುರ್ಗಿಯಲ್ಲಿ ನಡೆಯಲಿದೆ. ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಎಸ್‍ಸಿ ಮೋರ್ಚಾದ ಪರಿಶಿಷ್ಟ ಜಾತಿ, ಸಮುದಾಯಗಳ ವಿಶೇಷ ಸಮಾವೇಶವು ನವೆಂಬರ್ 6 ರಂದು ಮೈಸೂರಿನಲ್ಲಿ ನಡೆಯಲಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಕೇಂದ್ರದ ನಾಯಕರು ಇವೆರಡೂ ಸಮಾವೇಶಗಳಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಯುವ ಮೋರ್ಚಾದ ಸಮಾವೇಶವು ಶಿವಮೊಗ್ಗದಲ್ಲಿ, ಮಹಿಳಾ ಸಮಾವೇಶವು ಬೆಂಗಳೂರಿನಲ್ಲಿ, ರೈತರ ಸಮಾವೇಶವು ಹುಬ್ಬಳ್ಳಿಯಲ್ಲಿ ಹಾಗೂ ಎಸ್‍ಟಿ ಮೋರ್ಚಾದ ಸಮುದಾಯಗಳ ಸಮಾವೇಶವು ಬಳ್ಳಾರಿಯಲ್ಲಿ ನಡೆಯಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ವಿವರ ನೀಡಿದರು. ಒಟ್ಟು 6 ಸಮಾವೇಶಗಳಿಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಒಂದು ಕಡೆಯಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆ ಪ್ರಾರಂಭ ಮಾಡಿದರೆ ಇನ್ನೊಂದು ಕಡೆ ಕಾಂಗ್ರೆಸ್ ಚೋಡೋ ಎನ್ನುವ ಯಾತ್ರೆ ಈಗಾಗಲೇ ಪ್ರಾರಂಭವಾಗಿದೆ. ಉದಾಹರಣೆಗೆ: ಗೋವಾದ ಎಂಟು ಶಾಸಕರು ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದು. ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ಕೂಡಿಸಲಾಗದ ರಾಹುಲ್ ಗಾಂಧಿ ಭಾರತವನ್ನು ಹೇಗೆ ಜೋಡಿಸುತ್ತಾರೆ?, ಇದೊಂದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಭಾರತ ಸನ್ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವಗುರು ಆಗುವತ್ತ ದಾಪುಗಾಲು ಹಾಕುತ್ತಿದೆ ಎಂದು ತಿಳಿಸಿದರು.
ಗೊಂದಲದಿಂದ ಆರಂಭವಾದ ಭಾರತ್ ಜೋಡೋ: ಅಶ್ವತ್ಥನಾರಾಯಣ್
ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಮಾತನಾಡಿ, ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆಯಿಂದ ಆರಂಭಗೊಂಡಿತು. ನಿವೃತ್ತ ಐಎಎಸ್ ಅಧಿಕಾರಿ ಸೆಂಥಿಲ್ ಕುಮಾರ್ ಅವರು ಭಾರತ್ ಜೋಡೋ ಯಾತ್ರೆ ಸಂಬಂಧ ರಾಹುಲ್ ಅವರ ಜೊತೆ ಸಂವಾದಕ್ಕೆ ಆಸಕ್ತರು ಪ್ರಶ್ನೆ- ಮಾಹಿತಿ ಕಳುಹಿಸಿ ಕೊಡಲು ತಿಳಿಸಿದ್ದರು. ಜಾವಗಲ್ ಅವರು ಸಂವಾದಕ್ಕೆ ಅವಕಾಶ ಕೋರಿದ್ದರು. ಗಡಿನಾಡ ಸಮಸ್ಯೆ- ಕೇಂದ್ರ ಸರಕಾರದ ಹಿಂದಿ ನೀತಿ ಬಗ್ಗೆ ಮಾತನಾಡಲು ಬಯಸಿದ್ದರು. ಕೊನೆಯಲ್ಲಿ ಸೆಂಥಿಲ್ ಅವರು ಈ ಸಂವಾದವನ್ನು ರದ್ದುಪಡಿಸಿದ್ದರು. ಹೀಗೆ ಗೊಂದಲದೊಂದಿಗೆ ಆರಂಭವಾದ ಭಾರತ್ ಜೋಡೋ ಯಾತ್ರೆ ಇದು ಎಂದರು.
ಕಾವೇರಿ ಸಮಸ್ಯೆ- ಮೇಕೆದಾಟು ಯೋಜನೆ ಕುರಿತು ವಿಷಯ ಜೋಡಿಸುವ ಕಾರ್ಯಕ್ರಮದ ನಿರೀಕ್ಷೆ ನಮಗಿತ್ತು. ಆದರೆ, ಅಂಥ ವಿಷಯಗಳು ಚರ್ಚೆ ಆಗಿಲ್ಲ. ರಾಹುಲ್ ಅವರು ಹಿಂದೆ ಚಾಮರಾಜನಗರಕ್ಕೆ ಭೇಟಿ ಕೊಟ್ಟಾಗ ಬ್ರೆಡ್ಡಿಗೆ ಜಾಮ್ ಹಾಕಿಕೊಂಡು ರಾಗಿ ರೊಟ್ಟಿ ಎಂದು ತಿಂದಿದ್ದರು. ಈ ಬಾರಿ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಒಂದುಗೂಡಿಸುವುದೇ ಹರಸಾಹಸವಾಗಿ ಪರಿವರ್ತನೆಗೊಂಡ ಯಾತ್ರೆ ಇದಾಗಿದೆ ಎಂದು ಆರೋಪಿಸಿದರು.
ಮಂಡ್ಯದಲ್ಲಿ ತಾನು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಸಿಗಲಿಲ್ಲ ಎಂದು ಕಬ್ಬಿನ ಗದ್ದೆಗೆ ಬೆಂಕಿ ಇಟ್ಟು ಆತ್ಮಹತ್ಯೆ ಮಾಡಿಕೊಂಡ ನಿಂಗೇಗೌಡರ ಕುಟುಂಬವನ್ನು ರಾಹುಲ್ ಅವರು ಭೇಟಿ ಮಾಡಬಹುದೆಂಬ ನಿರೀಕ್ಷೆ ಇತ್ತು. ಮೈಸೂರಿನಲ್ಲಿ ಹೊಗೆಸೊಪ್ಪು ಬೆಳೆಗಾರರಿಗೆ ನ್ಯಾಯ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿವೆ. ಮಂಡ್ಯದಲ್ಲಿ ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ ಕಬ್ಬಿಗೆ ನ್ಯಾಯಯುತ ದರ ಸಿಗದೆ ಆತ್ಮಹತ್ಯೆ ಮಾಡಿಕೊಂಡ ನೂರಾರು ರೈತರ ಕುಟುಂಬಗಳಿದ್ದು, ಆ ಕುಟುಂಬಗಳಲ್ಲಿ ಒಂದಿಬ್ಬರನ್ನು ಭೇಟಿ ಮಾಡಿಸುತ್ತಾರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಅದು ಆಗಿಲ್ಲ ಎಂದರು.
ಸಿದ್ದರಾಮಯ್ಯರು ಸಿಎಂ ಆದ ಬಳಿಕ ಬೆಳಗಾವಿಯಲ್ಲಿ ನಡೆದ ಮೊದಲ ಅಧಿವೇಶನದ ಸಂದರ್ಭದಲ್ಲಿ ವಿಠ್ಠಲ ಅರಭಾವಿ ಎಂಬ ರೈತ ಸಿದ್ದರಾಮಯ್ಯರಿಗೆ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನೀವು ಕುರುಬ, ನಾನೂ ಜಾತಿಯಲ್ಲಿ ಕುರುಬ. ನಾನು ಬೆಳೆದ ಕಬ್ಬಿಗೆ ನ್ಯಾಯಯುತ ಬೆಲೆ ಸಿಕ್ಕಿಲ್ಲ’ ಎಂದು ತಿಳಿಸಿ ವಿಷ ಸೇವಿಸಿದ್ದರು. ಅವರ ಕುಟುಂಬವನ್ನು ಕರೆಸಿ ಬಳ್ಳಾರಿಯಲ್ಲಿ ಮಾತನಾಡಿಸಬಹುದೆಂಬ ನಿರೀಕ್ಷೆಯೂ ಈಡೇರಿಲ್ಲ ಎಂದು ತಿಳಿಸಿದರು.
ಮಹದಾಯಿ ಸಂಬಂಧ ಕರ್ನಾಟಕ- ಗೋವಾ ಮುಖಂಡರ ನಡುವೆ ಮಾತುಕತೆ ಮಾಡಿ ಜೋಡೋ ಯಾತ್ರೆಗೆ ಅರ್ಥ ತರಬಹುದೆಂಬ ಆಶಯವಿತ್ತು. ಅದೂ ಆಗಿಲ್ಲ. ಕೆಲವೆಡೆ ಪರಮೇಶ್ವರ್ ಜೋಡಣೆ ಆದರು; ಇನ್ನೂ ಹಲವೆಡೆ ಇರಲೇ ಇಲ್ಲ ಎಂದು ಟೀಕಿಸಿದರು.
ಜೋಡೋ ಯಾತ್ರೆ ಸಂದರ್ಭದಲ್ಲೇ ಗೋವಾದ ಅನೇಕ ಕಾಂಗ್ರೆಸ್ ಶಾಸಕರು ಪಕ್ಷ ತೊರೆದರು. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್- ಸಚಿನ್ ಪೈಲಟ್ ನಡುವಿನ ಗೊಂದಲ ಹೊರಬಂತು. ಅಲ್ಲಿನ ಸಮಸ್ಯೆಗಳು ಪರಿಹಾರವಾಗಿಲ್ಲ. ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಬಣಗಳಿದ್ದವು. ಈಗ ಹರಿಪ್ರಸಾದ್, ಎಂ.ಬಿ.ಪಾಟೀಲ್, ಖರ್ಗೆ ಅವರ ಬಣಗಳಾಗಿವೆ. ಕರ್ನಾಟಕದ ನಾಯಕರ ಸಮನ್ವಯತೆಯ ಕೊರತೆಯನ್ನೇ ಬಗೆಹರಿಸಲು ಸಾಧ್ಯವಾಗದ ರಾಹುಲ್ ಗಾಂಧಿ ಅವರಿಗೆ ಗೊಂದಲ ಮೂಡಿದೆ ಎಂದು ವಿವರಿಸಿದರು. ಯಾಕೆ ಈ ರಾಜ್ಯಕ್ಕೆ ಬಂದೆ ಎಂಬ ಗೊಂದಲ ಹೆಚ್ಚಾಗಿದೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಅಂತಿಮ ಯಾತ್ರೆಗೆ 3 ಲಕ್ಷ, 4 ಲಕ್ಷ, 5 ಲಕ್ಷ ಜನರು ಎಂದು ಸುದ್ದಿಯನ್ನು ಪುಂಖಾನುಪುಂಖವಾಗಿ ತಿಳಿಸಿದ್ದೀರಿ. ಬಳ್ಳಾರಿಯ ಪಕ್ಷದ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮುನ್ಸಿಪಲ್ ಮೈದಾನದಲ್ಲಿ 25 ಸಾವಿರ ಜನರ ಸಾಮಥ್ರ್ಯವಿದೆ. ಅಲ್ಲಿ 3ರಿಂದ 5 ಲಕ್ಷ ಜನ ಸೇರಿದ್ದಾರೆಂದು ಸುಳ್ಳು ಹೇಳಿಕೊಂಡಿದ್ದೀರಿ ಎಂದು ಆಕ್ಷೇಪಿಸಿದರು. ಸಂತೋಷ್ ಲಾಡ್, ಅನಿಲ್ ಲಾಡ್ ಸಮಾವೇಶದ ಹತ್ತಿರ ಸುಳಿದಿಲ್ಲ. ಕರ್ನಾಟಕದ ಯಾತ್ರೆ ವೇಳೆ ಕಾಂಗ್ರೆಸ್‍ನ 4 ಬಣಗಳನ್ನು ಜೋಡಿಸುವ ಸಮಸ್ಯೆಯ ಯಾತ್ರೆ ಆಗಿತ್ತು ಎಂದು ವಿಶ್ಲೇಷಿಸಿದರು.
ಕಪ್ಪ ಕಾಣಿಕೆಯ ಸ್ಪಷ್ಟನೆ ಕೊಡಲು ಸವಾಲು
ಹಿರಿಯ ನಾಯಕ ಹರಿಪ್ರಸಾದ್ ಅವರು ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಸುಷ್ಮಾ ಸ್ವರಾಜ್, ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಬಗ್ಗೆ ಏಕವಚನದಿಂದ ಮಾತನಾಡಿ ತಮ್ಮ ಕೀಳು ಮಟ್ಟದ ಅಭಿರುಚಿಯನ್ನು ತೋರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು ತಮ್ಮ ಡೈರಿಯಲ್ಲಿ ತಮ್ಮ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ಕೊಟ್ಟ ಬಗ್ಗೆ ಉಲ್ಲೇಖಿಸಿದ್ದರು. ಆರ್.ಜಿ ಎಂದರೆ ರಾಹುಲ್ ಗಾಂಧಿ, ಎ.ಪಿ. ಅಂದರೆ ಅಹ್ಮದ್ ಪಟೇಲ್, ಎಸ್.ಜಿ. ಎಂದರೆ ಸೋನಿಯಾ ಗಾಂಧಿ ಅವರಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂದು ಡೈರಿಯಲ್ಲಿ ತಿಳಿಸಿದ್ದರು. ಇದರ ಕುರಿತು ಹರಿಪ್ರಸಾದ್ ಅವರು ಮೊದಲು ಮಾತನಾಡಬೇಕು ಎಂದು ಸವಾಲೆಸೆದರು.
ಕೆಳಮಟ್ಟದ ಮಾತನ್ನಾಡುವುದನ್ನು ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಬಿಡಬೇಕು ಎಂದು ಅವರು ಆಗ್ರಹಿಸಿದರು. ಕಾಂಗ್ರೆಸ್ ಯಾತ್ರೆ ವಿಫಲವಾದುದು ರಾಹುಲ್ ಗಾಂಧಿಯವರಿಗೂ ಬೇಸರ ತಂದಿದೆ ಎಂದರು. ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಪಕ್ಷದ ಬಣಗಳನ್ನು ಅನಾವರಣಗೊಳಿಸಿದೆ. ಕೆಲವೆಡೆ ಬಿಜೆಪಿ ಟೀಕೆಗೆ ಈ ಯಾತ್ರೆಯನ್ನು ಬಳಸಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು. ಪಕ್ಷದ ಬೆಂಗಳೂರು ಉತ್ತರ ವಕ್ತಾರ ಎಸ್. ಹರೀಶ್ ಅವರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ