ಬೆಂಗಳೂರು: ಕಾಂಗ್ರೆಸ್ ಭ್ರಷ್ಟಾಚಾರ, ಅವ್ಯವಹಾರ ಸಂಬಂಧ ಎಲ್ಲ ಮಾಹಿತಿ- ದಾಖಲೆಗಳನ್ನು ರಾಹುಲ್ ಗಾಂಧಿಯವರಿಗೆ ರವಾನಿಸುತ್ತೇನೆ. ಅವರು ಏನು ಮಾಡುತ್ತಾರೆಂದು ಕಾದು ನೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲೆಸೆದರು.
ಬೀದರ್ ಜಿಲ್ಲೆಯ ಔರಾದ್ನಲ್ಲಿ ಇಂದು ‘ಜನಸಂಕಲ್ಪ’ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯ ಹಗರಣಗಳ ವಿವರವನ್ನು ರಾಹುಲ್ ಗಾಂಧಿಗೆ ಕಳುಹಿಸಿ ಕೊಡಲಿದ್ದೇವೆ. 2016ರ ಶಿಕ್ಷಕರ ನೇಮಕಾತಿ ಹಗರಣ ಸೇರಿ ಎಲ್ಲ ವಿವರ ಕೊಡಲಿದ್ದೇವೆ ಎಂದು ತಿಳಿಸಿದರು. ಅರ್ಜಿ ಹಾಕದೇ ನೇಮಕಾತಿ ನಡೆದಿದೆ ಎಂದು ತಿಳಿಸಿದರು.
ಪ್ರಾಸಿಕ್ಯೂಟರ್ ನೇಮಕಾತಿ, ಪೊಲೀಸ್ ನೇಮಕಾತಿಯಲ್ಲೂ ಹೀಗೇ ಆಗಿತ್ತು. ಎಲ್ಲ ಹಗರಣಗಳನ್ನು ಮುಚ್ಚಿ ಹಾಕಿದ್ದರು. ಇದು ಕಾಂಗ್ರೆಸ್ ಸರಕಾರ ಎಂದು ತಿಳಿಸಿದರು. ನಮ್ಮಲ್ಲಿ ಪಿಎಸ್‍ಐ ನೇಮಕಾತಿ ಆದಾಗ ತಪ್ಪು ಮಾಡಿದ್ದವರನ್ನು ಬಂಧಿಸಿದ್ದೇವೆ. ಸಿದ್ದರಾಮಯ್ಯ ದೊಡ್ಡ ದೊಡ್ಡ ಮಾತನಾಡುತ್ತಾರೆ. ಅಬ್ಬರಿಸಿ ಬೊಬ್ಬಿರಿದರೆ ಕೇಳುವವರು ಯಾರಿಲ್ಲ ಎಂದು ಎಚ್ಚರಿಸಿದರು. ಮಾತನಾಡುತ್ತಾರೆ; ಆದರೆ, ಇವರಿಗೆ ದಮ್ಮಿದೆಯೇ ಎಂದು ಕೇಳಿದರು.
ಜನರ ಮೂಲಕ ನಾವೆಲ್ಲರೂ ಆಯ್ಕೆಯಾಗಿದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಆಡಳಿತ ನಡೆಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಕ್ಕಿಳಿಸಿ ಬಿಜೆಪಿಯನ್ನು ಆಯ್ಕೆ ಮಾಡಿದ್ದೀರಿ. 3 ವರ್ಷಗಳಿಂದ ಬಿಜೆಪಿ ಸರಕಾರವಿದೆ. ಜನಪರ ಆಡಳಿತ ಮತ್ತು ಹತ್ತು ಹಲವಾರು ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಪ್ರವಾಸ- ಕೋವಿಡ್ ನಡುವೆಯೂ ಸತತ ಅಭಿವೃದ್ಧಿಗೆ ಶ್ರಮಿಸಿದ್ದೇವೆ ಎಂದು ಪ್ರಕಟಿಸಿದರು.
ಅತಿವೃಷ್ಟಿ ಸಂಬಂಧ ಪರಿಹಾರವನ್ನು ನಾವು ಹೆಚ್ಚಿಸಿದ್ದೇವೆ. ಮನೆಗಳ ಸಂಬಂಧ ಪರಿಹಾರ ಮೊತ್ತವನ್ನೂ ಹೆಚ್ಚಿಸಿದ್ದು, ಕಾಂಗ್ರೆಸ್ ಸರಕಾರದಲ್ಲಿ ಒಂದರಿಂದ ಒಂದೂವರೆ ವರ್ಷದಲ್ಲಿ ಪರಿಹಾರ ಕೊಡುತ್ತಿತ್ತು. ಈಗ ಕೇವಲ ಒಂದು ತಿಂಗಳಿನಲ್ಲಿ ಪರಿಹಾರ ನೀಡುತ್ತಿದ್ದೇವೆ ಎಂದರು.
ತಾಂಡಾಗಳ ಅಭಿವೃದ್ಧಿ, ಬಡವರಿಗೆ ನೆರವಾಗಿದ್ದೇವೆ. 23 ಸಾವಿರ ತಾಂಡಾಗಳನ್ನು ಗ್ರಾಮಗಳನ್ನಾಗಿ ಆದೇಶ ಮಾಡಲಾಗಿದೆ. ಮನೆಗಳಿಗೆ ಹಕ್ಕಪತ್ರ ನೀಡಲಾಗುತ್ತಿದೆ ಎಂದು ವಿವರಿಸಿದರು. ಇದು ಹಲವು ದಶಕಗಳ ಬೇಡಿಕೆ ಎಂದರು. ಕಾಂಗ್ರೆಸ್ ಪಕ್ಷವು, ದೀನದಲಿತರ ಹೆಸರಿನಲ್ಲಿ ಅಧಿಕಾರ ಮಾಡಿದರೂ ಈ ಸಮುದಾಯಗಳ ಅಭಿವೃದ್ಧಿ ಆಗಲಿಲ್ಲ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೊಡುಗೆ ಎನ್ನಲು ಆತ್ಮಸಾಕ್ಷಿ ಬೇಕಲ್ಲವೇ ಎಂದ ಅವರು, ನಿರ್ಣಯ ತೆಗೆದುಕೊಂಡವರು ಯಾರು ಎಂದು ಪ್ರಶ್ನಿಸಿದರು. ದೀನದಲಿತರಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಟೀಕಿಸಿದರು.
ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದು, ಉಚಿತ ಪಡಿತರ ವಿತರಣೆ ಮಾಡಿದ್ದಲ್ಲದೆ ಕೋವಿಡ್ ನಡುವೆಯೂ ದೇಶ ಸರ್ವತೋಮುಖ ಅಭಿವೃದ್ಧಿ ಸಾಧಿಸಿದ್ದನ್ನು ಅವರು ವಿವರಿಸಿದರು. ರೈತ ಉಳಿದರೆ ದೇಶ ಉಳಿದೀತು ಎಂಬಂತೆ ನಮ್ಮದು ನುಡಿದಂತೆ ನಡೆದ ಸರಕಾರ ಎಂದು ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ 3 ಸಾವಿರ ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಆರಂಭವಾಗುತ್ತಿದೆ. ಮುಂದಿನ ಬಜೆಟ್‍ನಲ್ಲಿ 5 ಸಾವಿರ ಕೋಟಿ ನೀಡಲಿದ್ದೇವೆ. ಅದಕ್ಕಾಗಿ ಕ್ರಿಯಾ ಯೋಜನೆಯನ್ನೂ ಮಾಡಿದ್ದೇವೆ. 14 ಸಾವಿರ ನೇಮಕಾತಿಗೆ ಅನುಮತಿ ಕೊಟ್ಟಿದ್ದೇವೆ ಎಂದು ವಿವರಿಸಿದರು. ನೀರಾವರಿ ಯೋಜನೆಗೆ ವಿಶೇಷ ಅನುದಾನ ಕೊಟ್ಟಿದ್ದೇವೆ ಎಂದರು. ಪ್ರಭು ಚೌಹಾಣ್, ಭಗವಂತ ಖೂಬಾ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೀಸಲಾತಿ ಸೇರಿ ಜನರ ನಿರೀಕ್ಷೆಗೆ ಅನುಗುಣವಾಗಿ ನಾವು ಕೆಲಸ ಮಾಡಿದ್ದೇವೆ. ಬೀದರ್, ರಾಜ್ಯದ ಕಿರೀಟಪ್ರಾಯ ಜಿಲ್ಲೆಯಾಗಿದೆ. ಈ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು. ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬದ್ಧತೆ ತೋರಿದ್ದೇವೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನರ ಸಂಕಲ್ಪ ಮತ್ತು ಜನಶಕ್ತಿ ಮುಖ್ಯವಾಗಿದೆ. ನರೇಂದ್ರ ಮೋದಿಜಿ ಅವರ ಸಮರ್ಥ ನೇತೃತ್ವ ನಮ್ಮ ಜೊತೆಗಿದೆ. ಕಾಂಗ್ರೆಸ್ ಪಕ್ಷದ ಕನಸನ್ನು ಕನಸಾಗಿಯೇ ಉಳಿಸಿ, ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಮಾತನಾಡಿ, ಒಂದು ವರ್ಷ ಮೂರು ತಿಂಗಳ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ಅನೇಕ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೆ. ಈ ಭಾಗದ ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ತಿಳಿಸಿದರು. ಇದಕ್ಕಾಗಿ ಬೊಮ್ಮಾಯಿ ಅವರಿಗೆ ಧನ್ಯವಾದ ಸಮರ್ಪಿಸಿದರು.
ಔರಾದ್ ತಾಲ್ಲೂಕಿನ 36 ಕೋಟಿ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಮಂಜೂರಾತಿ ನೀಡಿದ್ದಾರೆ. ಬೀದರ್- ನಾಂದೇಡ್ ರೈಲ್ವೆ ಮಾರ್ಗಕ್ಕೆ ಅನುದಾನದ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸಂಕಲ್ಪ ಯಾತ್ರೆಯು ಸಂಚಲನ ಉಂಟು ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಶಾಸಕರು ಜಿಲ್ಲೆಯ ರೈತರನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಜಿಲ್ಲೆಯಲ್ಲಿ 5ರಿಂದ 6 ಶಾಸಕರನ್ನು ಬಿಜೆಪಿ ಕಾರ್ಯಕರ್ತರು ಗೆಲ್ಲಿಸಿಕೊಡಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು. ಮೋದಿಜಿ ಮತ್ತು ಬೊಮ್ಮಾಯಿಯವರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ರಾಜ್ಯದ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಈ ಭಾಗದ ನೀರಾವರಿಗೆ ಬಿಜೆಪಿ ಸರಕಾರ ಆದ್ಯತೆ ಕೊಟ್ಟಿದೆ ಎಂದು ತಿಳಿಸಿದರು. ಮೋದಿಜಿ, ಬೊಮ್ಮಾಯಿಯವರ ಸರಕಾರ ಮಾಡಿದ ಜನೋಪಯೋಗಿ ಕಾರ್ಯಗಳನ್ನು ವಿವರಿಸಿದರು.
ಕಾಂಗ್ರೆಸ್ ಪಕ್ಷದ ಜೋಡೋ ಯಾತ್ರೆ ಕೇವಲ ನಾಟಕವಷ್ಟೇ ಎಂದು ಟೀಕಿಸಿದರು. ಇದು ಕೇವಲ ಹಾಸ್ಯಾಸ್ಪದ ಎಂದು ಆಕ್ಷೇಪಿಸಿದರು. ಜನರು ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕರಿಸಲು ಮುಂದಾಗಿದ್ದಾರೆ ಎಂದರು. ಬಿಜೆಪಿ ಗೆಲುವಿಗೆ ಶ್ರಮಿಸಲು ವಿನಂತಿಸಿದರು.
ರಾಜ್ಯದ ಸಚಿವರಾದ ಪ್ರಭು ಚೌಹಾಣ್, ಬೈರತಿ ಬಸವರಾಜ್, ಶ್ರೀರಾಮುಲು, ಶಂಕರ ಪಾಟೀಲ ಮುನೇನಕೊಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ