ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರಕಾರದ ವಿರುದ್ಧ ಶೇ 40 ಕಮಿಷನ್‍ನ ಯಾವುದೇ ದಾಖಲೆಗಳಿಲ್ಲದೆ ಪೋಸ್ಟರ್ ಮಾಡಿ, ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಅದನ್ನು ಗಮನಿಸಿ ಬಿಜೆಪಿ ವತಿಯಿಂದ ನಾವು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಲೋಕಾಯುಕ್ತದಲ್ಲಿ ಇವತ್ತು ದೂರು ದಾಖಲಿಸಿದ್ದೇವೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಲೋಕಾಯುಕ್ತ ಕಚೇರಿ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ದೂರಿಗೆ ಪುರಾವೆ ಇದೆ. ಅವರ ಆಪಾದನೆಗೆ ಪುರಾವೆ ಇಲ್ಲ. ನಮ್ಮ ಮೇಲೆ ದಾಖಲೆ ಇಲ್ಲದೆ ಅಪಪ್ರಚಾರ ಮಾಡಿದ್ದಾರೆ. ಇವತ್ತಿಗೂ ದಾಖಲೆ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಈ ದೂರನ್ನು ಮಾನ್ಯ ಲೋಕಾಯುಕ್ತರು ಅಂಗೀಕರಿಸಿದ್ದಾರೆ. ಏನಾದರೂ ಹೆಚ್ಚಿನ ದಾಖಲೆ ಬೇಕಿದ್ದರೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಪಡಕೊಳ್ಳುವುದಾಗಿ ತಿಳಿಸಿದ್ದಾರೆ. ದಾಖಲೆ ಸಾಕಿದ್ದರೆ ನೇರವಾಗಿ ಸಿದ್ದರಾಮಯ್ಯರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.
ದೂರಿನ ಜೊತೆಗೇ 2013-14ರಲ್ಲಿ ನಡೆದ ಟೆಂಡರ್ ಶೂರ್ ಸಂಬಂಧಿಸಿದ ಹಲವು ಕಾಮಗಾರಿಗಳಲ್ಲಿ ಟೆಂಡರ್ ಇಟ್ಟಿದ್ದ ಹಣಕ್ಕಿಂತ 53.86 ಶೇಕಡಾ ಹೆಚ್ಚುವರಿ ಹಣ ಬಿಡುಗಡೆ ಮಾಡಿದ 10-12 ದಾಖಲೆಗಳನ್ನು ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ಅಂಥದ್ದು ನಡೆದಿಲ್ಲ. ಇವತ್ತಿನವರೆಗೆ ಕಾಂಗ್ರೆಸ್ಸಿನವರು ತಮ್ಮ ಆಪಾದನೆಗೆ ಯಾವುದೇ ದಾಖಲೆ ನೀಡಿಲ್ಲ. ಬೀದಿಯಲ್ಲಿ ಅವರು ಆರೋಪಿಸುತ್ತಾರೆ. ಇದೇ ಕಾರಣಕ್ಕೆ ಒಂದೇ ಒಂದು ದೂರು ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಲ್ಲಿ ನಿಜವಾಗಿಯೂ ತಾಕತ್ತಿದ್ದರೆ ತಮ್ಮ ಆಪಾದನೆಯನ್ನು ಸಾಬೀತುಪಡಿಸಲು ಸಾಕ್ಷ್ಯ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕುವುದಾಗಿ ತಿಳಿಸಿದರು. ದಾಖಲೆ ಕೊಡದಿದ್ದರೆ ನಿಮ್ಮ ಮುಖಕ್ಕೆ ಜನರೇ ಮಂಗಳಾರತಿ ಮಾಡುತ್ತಾರೆ. ಬೀದಿಯಲ್ಲಿ ಆಪಾದನೆ ಮಾಡುವುದಲ್ಲ. ತಾಕತ್ತಿದ್ದರೆ ಲೋಕಾಯುಕ್ತಕ್ಕೆ ಬನ್ನಿ ಎಂದು ತಿಳಿಸಿದರು.
ಸಿದ್ದರಾಮಯ್ಯರ ವಿರುದ್ಧ 65 ಕೇಸುಗಳಿದ್ದವು. ಲೋಕಾಯುಕ್ತವನ್ನೇ ಮುಚ್ಚಿ ಬಿಟ್ಟರು. 10 ಕೇಸುಗಳನ್ನು ಎಸಿಬಿಗೆ ಕೊಟ್ಟು ಖುಲಾಸೆ ಮಾಡಿಸಿಕೊಂಡರು. ಇನ್ನೂ 50 ಕೇಸುಗಳಿವೆ. ಅವುಗಳ ತನಿಖೆ ಮಾಡಬೇಕೆಂದು ಮನವಿ ಮಾಡಿದ್ದಾಗಿ ತಿಳಿಸಿದರು. ಅಲಿಬಾಬಾ 40 ಕಳ್ಳರ ಮಾದರಿಯಲ್ಲಿ ಸಿದ್ದರಾಮಯ್ಯರ ಸರಕಾರವು ಸಿದ್ದರಾಮಯ್ಯ ಮತ್ತು 40 ಕಳ್ಳರ ಸರಕಾರವಾಗಿತ್ತು. ಅಂಥವರು ಇದೀಗ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯರಿಗೆ ನೋಟಿಸ್ ಕೊಟ್ಟು, ಅವರ ಕರ್ಮಕಾಂಡವೆಲ್ಲವನ್ನೂ ಬಯಲಿಗೆ ತರುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು. ಸಿದ್ದರಾಮಯ್ಯ ಹರಿಶ್ಚಂದ್ರರೇನೂ ಅಲ್ಲ. ಅವರ ಕಾಲದಲ್ಲಿ ಮಾಡಿರುವುದು ಬಹಳಷ್ಟಿದೆ. ಆದರೆ, ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಅವರು ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು? ಕರ್ನಾಟಕದಲ್ಲಿ 120ರಷ್ಟಿದ್ದ ಸ್ಥಾನ 80ಕ್ಕೆ ಯಾಕೆ ಬಂತು? ಎಂದು ಕೇಳಿದ ಅವರು, ಅವರು ಮಾಡಿದ ಕರ್ಮಕಾಂಡಗಳನ್ನು ಸಹಿಸಲಾರದೆ ಜನರು ಮನೆಗೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
5 ವರ್ಷದಲ್ಲಿ ಜನರು ಎಲ್ಲ ಮರೆತಿದ್ದಾರೆ ಎಂದು ಭಾವಿಸಿ ನಮ್ಮ ಮೇಲೆ ಆಪಾದನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯರಿಗೆ ಮಾನ, ಮರ್ಯಾದೆ ಇದ್ದರೆ ಬಂದು ಇದನ್ನು ಎದುರಿಸಲಿ. ನೇರವಾಗಿ ದಾಖಲೆಗಳನ್ನು ಕೋರ್ಟಿಗಾದರೂ ನೀಡಲಿ ಎಂದು ಸವಾಲು ಹಾಕಿದರು.
ಇದಲ್ಲದೆ ಇನ್ನೂ ಹಲವಾರು ಕೇಸುಗಳಿವೆ. ಎಲ್ಲದರಲ್ಲೂ ಶೇ 25- 30ರಷ್ಟು ಹೆಚ್ಚುವರಿ ಹಣ ಕೊಟ್ಟು ಇವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಆರೋಪ ಮಾಡಿದರು. ಅವರು ನಮ್ಮ ಮೇಲೆ ಬೆಂಗಳೂರು ನಗರದ ವಿಚಾರವಾಗಿ ಆರೋಪಿಸಿದ್ದಾರೆ. ನಾವು ಹೊರಗಡೆ ನಡೆದ ಕಾಂಗ್ರೆಸ್ ಭ್ರಷ್ಟಾಚಾರದ ಮಾಹಿತಿಯನ್ನೂ ಲೋಕಾಯುಕ್ತಕ್ಕೆ ಕೊಡಲಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಾಕಿ ಇರುವ 50 ಕೇಸುಗಳ ಮರುತನಿಖೆಗೆ ಆಗ್ರಹಿಸುವುದಾಗಿ ಹೇಳಿದ ಅವರು, ಕ್ರಮ ಜರುಗಿಸಲು ಒತ್ತಾಯಿಸಿದರು. ಇದರ ಸಂಪೂರ್ಣ ತನಿಖೆ ಆದರೆ ಇವರ ಕಳ್ಳತನ ಹೊರಗೆ ಬರಲಿದೆ; ಈ ಕಳ್ಳಖರೀಮರು ಹೊರಗೆ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಘಟ್ಟ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ