ಬೆಂಗಳೂರು: ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ‘ಬಿಜೆಪಿಯ ಮಿಷನ್ 150’ ಸಾಧಿಸುವಲ್ಲಿ ಒಬಿಸಿ ಮೋರ್ಚಾದ ಪಾತ್ರ ಅತ್ಯಂತ ಪ್ರಮುಖವಾದುದು ಎಂದು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ತಿಳಿಸಿದರು.
ಹಾಸನದಲ್ಲಿ ಇಂದು ಇಂದು ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಒಬಿಸಿ ಮೋರ್ಚಾದ ಕೃಷಿ ಕಾಯಕ ನಡೆದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದರ ಫಸಲು ತೆಗೆಯುವ ಕಾರ್ಯ ನಡೆಯಬೇಕಿದೆ. ಬೂತ್ ವಿಜಯ ಅಭಿಯಾನದ ಬಳಿಕ ವಿಜಯ ಸಂಕಲ್ಪ ಅಭಿಯಾನ ಈಗ ನಡೆಯುತ್ತಿದೆ ಎಂದು ವಿವರಿಸಿದರು.
ಇವತ್ತು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗಗಳ ಮತ ನಿರ್ಣಾಯಕ ಪಾತ್ರ ವಹಿಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಈ ವಿಚಾರವನ್ನು ನಾನು ಹಿರಿಯರ ಗಮನಕ್ಕೆ ತಂದಿದ್ದೇನೆ. ಪಕ್ಷದ ನಿಗದಿತ ಸ್ಥಾನ ಗುರಿ ತಲುಪಲು ಶ್ರಮಿಸಬೇಕು. ಒಬಿಸಿ ವರ್ಗಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ತಿಳಿಸಬೇಕು ಎಂದು ಅವರು ಮನವಿ ಮಾಡಿದರು.
ನಿತಿನ್ ಗಡ್ಕರಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಕರ್ನಾಟಕದಲ್ಲಿ ಪಿ.ಸಿ.ಮೋಹನ್ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಮೋರ್ಚಾವು ಆರಂಭವಾಯಿತು. ಈಗ 224 ಕ್ಷೇತ್ರ, 312 ಮಂಡಲ, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಮೋರ್ಚಾ ಕಾರ್ಯ ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ನರೇಂದ್ರ ಮೋದಿಯವರು ಒಬಿಸಿ ವರ್ಗಕ್ಕೆ ಗರಿಷ್ಠ ಸಚಿವ ಸಂಪುಟದ ಸ್ಥಾನ ನೀಡಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಈಶ್ವರಪ್ಪ ಅವರ ಮಾರ್ಗದರ್ಶನದೊಂದಿಗೆ ತಾವು ಅಧ್ಯಕ್ಷರಾಗಿ ಒಬಿಸಿ ಮೋರ್ಚಾ ಕಟ್ಟಿ ಬೆಳೆಸಿದ್ದನ್ನು ವಿವರಿಸಿದರು.
ಗುಲ್ಬರ್ಗದ ವಿರಾಟ್ ಸಮಾವೇಶ ಯಶಸ್ಸಿಗೆ ನೀವೆಲ್ಲರೂ ಕಾರಣ ಎಂದು ತಿಳಿಸಿದರು. ಸರ್ವರಿಗೂ ಸಮಪಾಲು, ಸಮಬಾಳ್ವೆ, ಸಮಾನ ಅವಕಾಶ ಎಂಬ ಸಂವಿಧಾನದ ತಿರುಳು ನಮ್ಮದು. ನಮ್ಮ ನಾಯಕರ ಅಂತ್ಯೋದಯದ ಕನಸು ನನಸಾಗಿಸಲು ಮತ್ತು ದೇಶವನ್ನು ಸದೃಢ ರಾಷ್ಟ್ರವಾಗಿ ಮಾಡಲು ನಮ್ಮ ನೇತಾರರು ಪ್ರಾಣತ್ಯಾಗ ಮಾಡಿದ್ದಾರೆ. ಹಿಂದುಳಿದ ವರ್ಗವು ಶ್ರಮಿಕ- ದುಡಿಯುವ ವರ್ಗ. ಮೌನವಾಗಿರುವ ವರ್ಗ. ರಾಜಕೀಯ ಪಾಲನ್ನು ಪಡೆಯುವಲ್ಲೂ ನಾವು ವಿಫಲವಾಗಿದ್ದೇವೆ ಎಂದರು.
ಬಿಜೆಪಿ ಪ್ರಜಾಪ್ರಭುತ್ವ ಮೌಲ್ಯ ಉಳಿಸಿಕೊಂಡ ಪಕ್ಷ. ಇಲ್ಲಿ ಪ್ರೀತಂ ಗೌಡ ಶಾಸಕ ಆಗಲು ಕಾರ್ಯಕರ್ತರ ಶ್ರಮವೇ ಕಾರಣ ಎಂದು ಶಾಸಕ ಪ್ರೀತಂ ಗೌಡ ಅವರು ತಿಳಿಸಿದರು. ಪಕ್ಷವನ್ನು ಬಲಪಡಿಸಲು ಶ್ರಮಿಸುವಂತೆ ಅವರು ಮನವಿ ಮಾಡಿದರು.
ನಾಳೆ ನಮ್ಮ ಪಕ್ಷ ತೀರ್ಮಾನಿಸಿ ಅರಸೀಕೆರೆ, ಚನ್ನರಾಯಪಟ್ಟಣಕ್ಕೋ ಅವಕಾಶ ಕೊಟ್ಟರೆ ಅಲ್ಲಿ ಸ್ಪರ್ಧಿಸಬೇಕಾಗುತ್ತದೆ. ಕಾಂಗ್ರೆಸ್, ಜೆಡಿಎಸ್‍ನಲ್ಲಿ ಆ ಥರ ನಡೆಯುವುದಿಲ್ಲ. ಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಅವರ ಸರಕಾರ ಮತ್ತು ಕಾರ್ಯಕ್ರಮಗಳು ಅವರಿಗೆ ನೈತಿಕತೆ ಮತ್ತು ಶಕ್ತಿ ಕೊಟ್ಟಿರಲಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದರು.
ಪ್ರೈವೇಟ್ ಲಿಮಿಟೆಡ್, ಸಿಂಗಲ್ ಆರ್ಮಿ ರಾಜಕಾರಣ
ಶಾಸಕ ಪ್ರೀತಂ ಗೌಡ ಅವರು ಮಾತನಾಡಿ, ದೇವೇಗೌಡರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ ತಮ್ಮ ಸಮಾಜ, ಹಿಂದುಳಿದ ವರ್ಗದವರಿಗೆ ತಮ್ಮ ಸಂಪುಟದಲ್ಲಿ ಅವಕಾಶ ಕೊಟ್ಟಿರಲಿಲ್ಲ. ಹಾಸನದ ದೊಡ್ಡ ಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ರಾಜಕೀಯವಾದರೆ, ಸಿದ್ದರಾಮಯ್ಯರದು ಸಿಂಗಲ್ ಆರ್ಮಿ ಲಿಮಿಟೆಡ್ ರಾಜಕಾರಣ ಎಂದು ಟೀಕಿಸಿದರು. ದೊಡ್ಡ ಗೌಡರು ಕನಿಷ್ಠ ಕುಟುಂಬಕ್ಕಾದರೂ ಅಧಿಕಾರ ಹಂಚಿದರೆ, ಇವರು ಬೇರೆಯವರಿಗೆ ಅಧಿಕಾರವೇ ಸಿಗದಂತೆ ಮಾಡಿದ್ದಾರೆ ಎಂದು ತಿಳಿಸಿದರು.
ನನ್ನ ತಮ್ಮ ಸಿಎಂ ಆಗಲಿ, ಇನ್ನೊಬ್ಬರು ಎಂಪಿ ಕ್ಯಾಂಡಿಡೇಟ್ ಆಗಲಿ ಎಂದು ದೊಡ್ಡ ಗೌಡರು -ರೇವಣ್ಣರವರು ಯೋಚಿಸಿದರೆ ಸಿದ್ದರಾಮಯ್ಯ ಅಪ್ಪಿತಪ್ಪಿಯೂ ಅವರು ಬಿಟ್ಟು ಬೇರೆ ಯಾರಿಗೂ ಅವಕಾಶ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಅಕ್ಕಪಕ್ಕದವರು ಕೇಳಿದಾಗ ಸಮಾಜಕ್ಕಾಗಿ ಕೊಟ್ಟ ಕೊಡುಗೆ ತೋರಿಸಲು ಮಗನಾದರೂ ಇರಲಿ ಎಂದು ಮಗನಿಗೆ ವರುಣಾ ಸೀಟ್ ಕೊಟ್ಟಿದ್ದಾರೆ ಎಂದು ನುಡಿದರು.
ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಅವರು ಮಾತನಾಡಿ, ಕೇಂದ್ರ- ರಾಜ್ಯ ಸರಕಾರಗಳ ಸಾಧನೆ, ಅನುದಾನ, ಅಭಿವೃದ್ಧಿ ಕಾಮಗಾರಿಗಳನ್ನು ಜನರಿಗೆ ತಿಳಿಸುವಂತೆ ಕೋರಿದರು. ನಮ್ಮ ಸಾಧನೆಗಳ ಪರೀಕ್ಷೆಯ ಸಮಯ 2023ರಲ್ಲಿ ಬಂದಿದೆ ಎಂದು ತಿಳಿಸಿದರಲ್ಲದೆ, ಅದನ್ನು ಸವಾಲಾಗಿ ಸ್ವೀಕರಿಸಲು ತಿಳಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೋರ್ಚಾದ ಪ್ರಮುಖರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ