ಬೆಂಗಳೂರು: ಭ್ರಷ್ಟಾಚಾರದ ರಸ್ತೆಯನ್ನು ಬಂದ್ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷವು ಬಿಜೆಪಿ ಮತ್ತು ನನ್ನ (ನರೇಂದ್ರ ಮೋದಿ) ವಿರುದ್ಧ ಕಿಡಿಕಾರುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಇಂದು ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಡಬಲ್ ಎಂಜಿನ್ ಸರಕಾರವು ಆರಂಭದಲ್ಲಿ ಕರ್ನಾಟಕದಲ್ಲಿ ಅನೇಕ ಸವಾಲುಗಳನ್ನು ಎದುರಿಸಿತು. ಜೆಡಿಎಸ್- ಕಾಂಗ್ರೆಸ್ ವೈಫಲ್ಯವನ್ನು ಸರಿಪಡಿಸಲು ಸಮಯ ಬೇಕಾಯಿತು. ಕರ್ನಾಟಕದಲ್ಲಿ ರಸ್ತೆ, ರೈಲು ಸೇರಿ ಮೂಲಸೌಕರ್ಯದ ಕೆಲಸಗಳು ಇಂದು ಗರಿಷ್ಠ ವೇಗ ಪಡೆದಿವೆ ಎಂದರು.
ಕಾಂಗ್ರೆಸ್- ಜೆಡಿಎಸ್ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಸುಮಾರು 30 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ (ಎಫ್‍ಡಿಐ) ಬರುತ್ತಿತ್ತು. ಡಬಲ್ ಎಂಜಿನ್ ಸರಕಾರ ಬಂದ ಬಳಿಕ 90 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆ ಬರುತ್ತಿದೆ. ಕರ್ನಾಟಕಕ್ಕೆ ಲಾಭ ಆಗಲಿಲ್ಲವೇ? ಉದ್ಯೋಗ ಹೆಚ್ಚಲಿಲ್ಲವೇ? ಇದನ್ನು ಮಾಡಿದವರು ಯಾರು ಎಂದು ಪ್ರಶ್ನಿಸಿದರು.
ಕರ್ನಾಟಕವನ್ನು ಮುನ್ನಡೆಸುವವರು ನಿಮಗೆ ಬೇಕಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿ ಸರಕಾರದ ಮೊದಲ ಆದ್ಯತೆ ಕರ್ನಾಟಕದ ವಿಕಾಸವೇ ಆಗಿದೆ. ಭಯಂಕರ ಮಹಾಮಾರಿ ಕೋವಿಡ್ ಬಂದಿದ್ದು, ಅದರಿಂದ ಜನರನ್ನು ರಕ್ಷಿಸಿದ್ದು ಬಿಜೆಪಿ. ಬಿಜೆಪಿ ಇಲ್ಲದಿದ್ದರೆ ಏನಾಗುತ್ತಿತ್ತು? ಕೇರಳ, ಮಹಾರಾಷ್ಟ್ರವನ್ನು ನೀವು ನೋಡಿದ್ದೀರಲ್ಲವೇ ಎಂದು ಪ್ರಶ್ನಿಸಿದರು.
ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಿದ್ದೇವೆ. 100 ವರ್ಷಗಳಲ್ಲಿ ಒಮ್ಮೆ ಬರುವ ಸಾಂಕ್ರಾಮಿಕ ಕಾಡಿದರೂ ಅಭಿವೃದ್ಧಿಯಲ್ಲಿ ಕರ್ನಾಟಕ ಹಿಂದುಳಿಯಲಿಲ್ಲ ಎಂದು ವಿವರಿಸಿದರು. ನಾವು ಇಂದಿಗೂ ಬಡವರ ಕುಟುಂಬಕ್ಕೆ ಉಚಿತ ಪಡಿತರ ನೀಡುತ್ತಿದ್ದೇವೆ. ಇದರಿಂದಾಗಿ ಕರ್ನಾಟಕದ ಪ್ರತಿಯೊಬ್ಬರೂ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರಕಾರ ಎನ್ನುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ನಮ್ಮ ನಾಯಕ ನಿವೃತ್ತರಾಗುತ್ತಿದ್ದಾರೆ. ಆದ್ದರಿಂದ ನಮಗೆ ಮತ ಕೊಡಿ ಎನ್ನುತ್ತಿದೆ. ನಾವು ಅಭಿವೃದ್ಧಿಗಾಗಿ ಮತ ಕೊಡಿ ಎನ್ನುತ್ತಿದ್ದೇವೆ. ಇದೇ ನಮ್ಮ ನಡುವಿನ ಅಂತರ ಎಂದು ವಿವರಿಸಿದರು.
ಬಿಜೆಪಿ ಸಂಕಲ್ಪವು ಕರ್ನಾಟಕವನ್ನು ನಂಬರ್ ವನ್ ಮಾಡುವುದಾಗಿದೆ. ಆಧುನಿಕ ಮೂಲಸೌಕರ್ಯ, ರಾಜ್ಯವನ್ನು ಉತ್ಪಾದನಾ ಕ್ಷೇತ್ರದ ಸೂಪರ್ ಪವರ್ ಮಾಡಲು ಬಿಜೆಪಿಗೆ ಅಧಿಕಾರ ಕೊಡಿ ಎಂದು ಮನವಿ ಮಾಡಿದರು. ರಿವರ್ಸ್ ಗೇರ್‍ನಲ್ಲಿ ರಾಜ್ಯವನ್ನು ಒಯ್ಯುವ ಕಾಂಗ್ರೆಸ್ಸಿಗರನ್ನು ದೂರ ಇಡಲು ಜನತೆ ನಿರ್ಧರಿಸಿದ್ದಾರೆ. ಈ ಬಾರಿಯ ನಿರ್ಧಾರ ಬಿಜೆಪಿ ಸ್ಥಿರ ಸರಕಾರ ಎಂದು ಜನತೆ ನಿರ್ಣಯ ಮಾಡಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಮುಖಂಡರು, ಸ್ಥಳೀಯ ಅಭ್ಯರ್ಥಿಗಳು ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ