ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 6ರಂದು ಶನಿವಾರ ಬೆಂಗಳೂರಿನಲ್ಲಿ ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಡಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಮಲ್ಲೇಶ್ವರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ರೋಡ್ ಶೋ ಕುರಿತು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ವಿವರಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕರ್ನಾಟಕದ ಜನತೆ 9 ವರ್ಷಗಳಿಂದ ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಲು ಪ್ರಧಾನಿಯವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೇ 6ರಂದು ಪ್ರಧಾನಿಯವರು ರಾಜಧಾನಿಯ 17 ಕ್ಷೇತ್ರಗಳಲ್ಲಿ ಒಟ್ಟು 36.6 ಕಿ.ಮೀ ದೂರ ರೋಡ್ ಶೋ ನಡೆಸಲಿದ್ದಾರೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ 10.1 ಕಿ.ಮೀ, ಸಂಜೆ 4ರಿಂದ ರಾತ್ರಿ 10 ರವರೆಗೆ 26.5 ಕಿ.ಮೀ ದೂರ ರೋಡ್ ಶೋ ನಡೆಯಲಿದ್ದು, ಹತ್ತು ಲಕ್ಷಕ್ಕೂ ಅಧಿಕ ಪಾಲ್ಗೊಳ್ಳಲಿದ್ದಾರೆ ಎಂದರು.
ಬೆಳಿಗ್ಗೆ ಸುರಂಜನ್‍ದಾಸ್ ರಸ್ತೆಯಿಂದ ಆರಂಭವಾಗುವ ಯಾತ್ರೆ, ಮಹದೇವಪುರ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಲಿದೆ. ಸಂಜೆ ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ, ಜಯನಗರ, ಪದ್ಮನಾಭ ನಗರ, ಬಸವನಗುಡಿ, ಚಿಕ್ಕಪೇಟೆ, ಚಾಮರಾಜಪೇಟೆ, ಗಾಂಧಿನಗರ, ವಿಜಯನಗರ, ಗೋವಿಂದರಾಜ ನಗರ, ರಾಜಾಜಿನಗರ, ಮಹಾಲಕ್ಷ್ಮಿ ಲೇ ಔಟ್, ಮಲ್ಲೇಶ್ವರ ಕ್ಷೇತ್ರಗಳಲ್ಲಿ ರೋಡ್ ಶೋ ಸಾಗಲಿದೆ. ಇಡೀ ಕರ್ನಾಟಕದ ಜನ ರೋಡ್ ಶೋ ನಲ್ಲಿ ಪಾಲ್ಗೊಳ್ಳುತ್ತಿದ್ದು, ರೋಡ್ ಶೋ ಸಾಗುವ ಮಾರ್ಗದ ಬಗ್ಗೆ ತಿಳಿಸಲಾಗುವುದು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂಜಾಗ್ರತೆಗಳನ್ನು ವಹಿಸಲಾಗಿದೆ ಎಂದು ತಿಳಿಸಿದರು.
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಪ್ರಧಾನಿಯವರು ನಮ್ಮ ಮನೆ-ಬಾಗಿಲ ಹತ್ತಿರ ಬರುತ್ತಿರುವುದು ಇಡೀ ಬೆಂಗಳೂರಿಗರು ಖುಷಿ ಪಡುವ ಹಬ್ಬವಾಗಿದೆ. ನವ ಬೆಂಗಳೂರಿಗೆ ಪ್ರಧಾನಿಯವರು ಹಾಕಿರುವ ಅಡಿಪಾಯಕ್ಕಾಗಿ ಜನರು ಅವರನ್ನು ಹೂಮಳೆಯೊಂದಿಗೆ ಸ್ವಾಗತಿಸಲು ಕಾತರರಾಗಿದ್ದಾರೆ ಎಂದು ನುಡಿದರು.
ಬೆಂಗಳೂರು ಬಿಜೆಪಿ ಭದ್ರಕೋಟೆಯಾಗಿದ್ದು, ಸಬರ್ಬನ್ ರೈಲು, ಉಪ ನಗರ ಟೌನ್ ಶಿಪ್ ವರ್ತುಲ ರಸ್ತೆ, ಮೆಟ್ರೋ ರೈಲು ಮಾರ್ಗ 70 ಕಿ.ಮೀಗೆ ವಿಸ್ತರಣೆ, 1,500 ಎಲೆಕ್ಟ್ರಿಕ್ ಬಸ್‍ಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್, ಸ್ಟಾರ್‍ಟಪ್, ಯೂನಿಕಾರ್ನ್‍ಗೆ ಪ್ರೋತ್ಸಾಹ, ಪಿಎಂ ಆವಾಸ್ ಯೋಜನೆಯಡಿ 40 ಸಾವಿರ ಮನೆಗಳ ನಿರ್ಮಾಣ, ಸ್ವನಿಧಿ ಯೋಜನೆಯಡಿ ವ್ಯಾಪಾರಿಗಳಿಗೆ ಆರ್ಥಿಕ ನೆರವು, ಮೂರುವರೆ ವರ್ಷದಿಂದ ಉಚಿತ ಪಡಿತರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ನರೇಂದ್ರ ಮೋದಿಯವರ ಸರ್ಕಾರ ನಗರಕ್ಕೆ ನೀಡಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಬಿ.ನಾರಾಯಣ ಗೌಡ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ