ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಈ ಬಾರಿ 130 ರಿಂದ 135 ಶಾಸಕ ಸ್ಥಾನ ಗೆಲ್ಲುವುದು ನಿಶ್ಚಿತ. ಇದು ಸೂರ್ಯ ಚಂದ್ರರಿರುವಷ್ಟೇ ಸತ್ಯ ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಲೇಬೇಕೆಂದು ಸನ್ಮಾನ್ಯ ನರೇಂದ್ರ ಮೋದಿಜಿ ಅವರು, ಅಮಿತ್ ಶಾಜಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾಜಿ ಅವರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಇದು ಫಲ ಕೊಡಲಿದೆ ಎಂದರು.
ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಪ್ರಧಾನಿ ನಮ್ಮವರು. ಜಾತಿ, ಧರ್ಮದ ಎಲ್ಲೆ ಮೀರಿ ಜಗಜ್ಯೋತಿ ಬಸವೇಶ್ವರರ ತತ್ವದಂತೆ ಅವರು ಆಡಳಿತ ಮಾಡುತ್ತಿದ್ದಾರೆ. ಅವರ ಹೆಜ್ಜೆಗೆ ಹೆಜ್ಜೆ ಹಾಕುವ ಸರಕಾರ ಕರ್ನಾಟಕದಲ್ಲಿ ಬೇಕಾಗಿದೆ. ರಾಜ್ಯದ ಅಭಿವೃದ್ಧಿ, ರೈತರು, ಮಹಿಳೆಯರು, ಯುವಕರು, ಮಕ್ಕಳ ಭವಿಷ್ಯಕ್ಕಾಗಿ ಮೋದಿಜಿ ಕೈಯನ್ನು ಬಲಪಡಿಸಬೇಕಿದೆ ಎಂದು ತಿಳಿಸಿದರು.
ರಸ್ತೆ, ರೈಲ್ವೆ, ವಿಮಾನನಿಲ್ದಾಣ, ಬಂದರು ಸೇರಿ ಮೂಲಸೌಕರ್ಯ ಅಭಿವೃದ್ಧಿ ವೇಗವಾಗಿ ಸಾಗಿದೆ. ಮನೆಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಶೌಚಾಲಯಗಳ ಸೌಕರ್ಯ ಕೊಡಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ನಾಯಕ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ನುಡಿದರು.
ಕೋವಿಡ್ ಬಂದಾಗ ನಮ್ಮ ಜೊತೆಗಿದ್ದು ಪರಿಹಾರ ನೀಡಿದ್ದಾರೆ. ನಮ್ಮ ಆರೋಗ್ಯ, ದೇಶ ರಕ್ಷಿಸಿದವರು ಮೋದಿಜಿ. ಅವರ ಸರಕಾರ ಬಂದ ಬಳಿಕ ದೇಶ ಆರ್ಥಿಕ ಪ್ರಗತಿ ಹೊಂದಿದೆ. ಪ್ರಪಂಚದಲ್ಲಿ ಆರ್ಥಿಕ ಸದೃಢ ದೇಶಗಳ ಪೈಕಿ ನಮ್ಮ ದೇಶ 5ನೇ ಸ್ಥಾನಕ್ಕೇರಿದೆ. ಮುಂದಿನ ಒಂದೆರಡು ದಶಕದಲ್ಲಿ ನಮ್ಮ ದೇಶವು ಪ್ರಪಂಚದಲ್ಲಿ ಒಂದು ಅಥವಾ ಎರಡನೇ ಸ್ಥಾನಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದು ಪ್ರಧಾನಿಯವರ ಸಂಕಲ್ಪವೂ ಆಗಿದೆ ಎಂದರು.
ಮೀಸಲಾತಿ ಹೆಚ್ಚಿಸಿ ಇತಿಹಾಸ ಸೃಷ್ಟಿ
ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ. ಇದರಿಂದ ಇತಿಹಾಸ ಸೃಷ್ಟಿಯಾಗಿದೆ. ಶೇ 75-80 ರಷ್ಟು ಎಸ್‍ಸಿ, ಎಸ್‍ಟಿ ಸಮುದಾಯ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಯಡಿಯೂರಪ್ಪ ಅವರು ತಿಳಿಸಿದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಭಾಗ್ಯಲಕ್ಷ್ಮಿ ಯೋಜನೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ರೈತರಿಗೆ ಪ್ರತ್ಯೇಕ ಬಜೆಟ್, ಪಂಪ್‍ಸೆಟ್‍ಗೆ ಉಚಿತ ವಿದ್ಯುತ್ ನೀಡಿದ್ದೆ. ಇಂದಿನ ನಮ್ಮ ಸರಕಾರ ರೈತ ವಿದ್ಯಾನಿಧಿ ಜಾರಿ ಮಾಡಿದೆ. ಸಂಧ್ಯಾ ಸುರಕ್ಷಾದಡಿ ಮಾಸಿಕ ವೇತನ ಹೆಚ್ಚಿಸಿದ್ದೇವೆ ಎಂದು ವಿವರಿಸಿದರು. ನಾವು ಯಾವತ್ತೂ ಜಾತಿ ರಾಜಕೀಯ ಮಾಡಿಲ್ಲ. ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯದಡಿ ಕೆಲಸ ಮಾಡುತ್ತಿದ್ದೇವೆ ಎಂದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದೊಡನೆ ಹಾಲಿನ ಬೆಂಬಲ ಬೆಲೆ ಹೆಚ್ಚಿಸುತ್ತೇವೆ. ಪಿಎಂ ಕಿಸಾನ್ ಯೋಜನೆಯಡಿ 10 ಸಾವಿರ ನೀಡುತ್ತಿದ್ದು ಲಕ್ಷಾಂತರ ರೈತರಿಗೆ ಪ್ರಯೋಜನ ಆಗಲಿದೆ. ರೈತ ಸಿರಿ ಯೋಜನೆಯಡಿ ನೆರವು ಕೊಡಲಿದ್ದೇವೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಅಡಿಕೆ ಮಂಡಳಿ ಸ್ಥಾಪಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು
ಲಿಂಗಾಯತ, ಒಕ್ಕಲಿಗರಿಗೆ 2ಡಿ ಮೀಸಲಾತಿ ತರಲಾಗಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಕಳೆದ ಬಾರಿ ಉತ್ತರಪ್ರದೇಶದಲ್ಲಿ ಓಡಾಡಿದರೂ ಬೆರಳೆಣಿಕೆಯ ಸೀಟನ್ನಷ್ಟೇ ಕಾಂಗ್ರೆಸ್ ಪಕ್ಷ ಗೆದ್ದಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷ ಸಮರ್ಥ ನಾಯಕರನ್ನು ಹೊಂದಿಲ್ಲ. ರಾಹುಲ್ ಗಾಂಧಿ, ಮೋದಿಜಿ, ಅಮಿತ್ ಶಾ ಅವರಿಗೆ ಸರಿಸಾಟಿಯಾದ ನಾಯಕರಲ್ಲ ಎಂಬುದು ಜಗತ್ತಿಗೇ ಗೊತ್ತಿದೆ ಎಂದರು. ಮೋದಿಜಿ ಅವರು ಪ್ರಧಾನಿಯಾದ ಬಳಿಕ ಸಣ್ಣ ಭ್ರಷ್ಟಾಚಾರದ ಆರೋಪವೂ ಇಲ್ಲದೆ ದೇಶದ ಜನರಿಗಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯವನ್ನು ಎತ್ತಿಕಟ್ಟುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರ ಇದ್ದಾಗ ಕಾಂಗ್ರೆಸ್‍ಗೆ ಲಿಂಗಾಯತರ ನೆನಪಾಗಲಿಲ್ಲ. ಅಧಿಕಾರ ಇಲ್ಲದಾಗ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮಾಜ, ಎಸ್‍ಸಿ, ಎಸ್‍ಟಿ, ಒಬಿಸಿ ಸೇರಿ ಎಲ್ಲರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೆ. ವೀರಶೈವ ಲಿಂಗಾಯತ ಸಮಾಜ ಬಿಜೆಪಿ ಜೊತೆಗಿದೆ. ಕರ್ನಾಟಕದ ಜನರು ದೇಶದ ಅಭಿವೃದ್ಧಿ, ಸಮಗ್ರತೆಗಾಗಿ ಬಿಜೆಪಿಗೆ ಬೆಂಬಲ ಕೊಡುತ್ತಾರೆ ಎಂದು ಆಶಿಸಿದರು. ಕರ್ನಾಟಕಕ್ಕೆ ಡಬಲ್ ಎಂಜಿನ್ ಸರಕಾರ ಬೇಕಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ