ಬೆಂಗಳೂರು: ರಾಜ್ಯದ 16-17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಬಿಜೆಪಿ ಪರವಾದ ಸ್ಪಷ್ಟವಾದ ಅಲೆ ಇದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಬಿಜೆಪಿ ಮಂಡಲ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದಾರೆ. ಬಿಟಿಎಂ ಲೇ ಔಟ್, ಚಿತ್ರದುರ್ಗದಲ್ಲಿ ಹಲ್ಲೆ ಮಾಡಿದ್ದು ಕಾಂಗ್ರೆಸ್ ಹತಾಶ ಭಾವನೆಯ ಪ್ರತೀಕ. ಕೊಲೆ ಪ್ರಯತ್ನ ಶೋಭೆ ತರದು ಎಂದು ಎಚ್ಚರಿಸಿದರು.
2 ತಿಂಗಳ ಮೊದಲು ಮುಖ್ಯಮಂತ್ರಿ ವಿಚಾರದಲ್ಲಿ ಖರ್ಗೆ, ದಲಿತ ನಾಯಕರ ಹೆಸರು ಪ್ರಸ್ತಾಪ ಆಗುತ್ತಿರಲಿಲ್ಲ. ದಲಿತ ಪದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದಕ್ಕೆ ಹತಾಶೆಯೇ ಕಾರಣ ಎಂದು ವಿಶ್ಲೇಷಿಸಿದರು. ಛತ್ತೀಸಗಡದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕನ ಮನೆಗೆ ದಾಳಿ ನಡೆದಾಗ 2 ಸಾವಿರ ಕೋಟಿ ಹಣ ಸಿಕ್ಕಿದ್ದು, ರಮೇಶ್‍ಕುಮಾರ್ ಅವರ ಮೂರು ತಲೆಮಾರಿಗೆ ಆಗುವಷ್ಟು ಹಣ ಇದೆ ಎಂದಿರುವುದು ಕಾಂಗ್ರೆಸ್ಸಿನ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿ ಎಂದರು. ಲೂಟಿಗಾಗಿ ಅಧಿಕಾರಕ್ಕೆ ಬರುವುದು, ದೆಹಲಿಗೆ ಸೂಟ್‍ಕೇಸ್ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷ ಅಧಿಕಾರ ಬಯಸುತ್ತಿದೆ ಎಂದು ಟೀಕಿಸಿದರು.
ಅನೇಕ ರಾಜ್ಯಗಳಲ್ಲಿ ಒಳ ಮೀಸಲಾತಿಯ ಅರಿವು ಮೂಡಿದೆ. 15 ಜಿಲ್ಲೆಗಳಲ್ಲಿ ಮಾದಿಗ ಮತ್ತು ಇತರ ಸಮುದಾಯಕ್ಕೆ ಒಳ ಮೀಸಲಾತಿಯಿಂದ ಆಗಿರುವ ಪ್ರಯೋಜನದ ಜಾಗೃತಿ ಮೂಡಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಎಲ್. ಮುರುಗನ್ ಅವರು ಮಾತನಾಡಿ, ಮೀಸಲಾತಿಯು ತಳಮಟ್ಟದ ಸಮಾಜಕ್ಕೆ ತಲುಪಬೇಕೆಂಬುದು ದೀನದಯಾಳ ಉಪಾಧ್ಯಾಯರ ಆಶಯವಾಗಿತ್ತು. ಅದರ ನಿಟ್ಟಿನಲ್ಲಿ ಬೊಮ್ಮಾಯಿಯವರ ಸರಕಾರವು ಒಳ ಮೀಸಲಾತಿ ಅನುಷ್ಠಾನಕ್ಕೆ ತಂದಿದೆ. ಇದೊಂದು ಚಾರಿತ್ರಿಕ ನಿರ್ಧಾರ ಎಂದು ತಿಳಿಸಿದರು.
ಸದಾಶಿವ ಆಯೋಗದ ವರದಿ, ಸಚಿವ ಸಂಪುಟದ ಸಮಿತಿ ಶಿಫಾರಸಿನ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಇದರಿಂದ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ ಎಂದು ಮೆಚ್ಚುಗೆ ಸೂಚಿಸಿದರು.
ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಅವರು ಮಾತನಾಡಿ, ರಾಜ್ಯದ ಮಾದಿಗರೆಲ್ಲರೂ ಬಿಜೆಪಿಗೆ ಮತ ಕೊಡಲು ಮಾದಿಗ ದಂಡೋರ ರಾಜ್ಯ- ರಾಷ್ಟ್ರ ಸಮಿತಿ ತೀರ್ಮಾನ ಮಾಡಿದೆ ಎಂದು ತಿಳಿಸಿದರು. ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗಲಿಲ್ಲ ಎಂದು ತಿಳಿಸಿದರು.
ಬಿಜೆಪಿಗೆ ಮತ ಕೊಟ್ಟರೆ ಮಾದಿಗರ ಅಭಿವೃದ್ಧಿ ಖಚಿತ. ಕಾಂಗ್ರೆಸ್ಸಿಗೆ ಮತ ಕೊಟ್ಟರೆ ಪ್ರಯೋಜನವಿಲ್ಲ. ಮಾದಿಗರು ಕಾಂಗ್ರೆಸ್ಸಿಗೆ ಮತ ಕೊಟ್ಟು ಮೋಸ ಹೋಗದಿರಿ. ನಷ್ಟ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.
ಆಕಸ್ಮಿಕವಾಗಿ ಈ ನಿರ್ಣಯ ಮಾಡಿಲ್ಲ. ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ, ಬಸವರಾಜ ಬೊಮ್ಮಾಯಿಯವರ ಕಾರ್ಯ, ಯೋಜನೆಗಳನ್ನು ಗಮನಿಸಿ ಈ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು. ಕೇಂದ್ರ ಸರಕಾರವು ಗರಿಷ್ಠ ಸಚಿವ ಸ್ಥಾನಗಳನ್ನು ಎಸ್‍ಸಿ, ಎಸ್‍ಟಿ, ಒಬಿಸಿ ಸಮುದಾಯಕ್ಕೆ ನೀಡಿದೆ. ಇದು ನೈಜ ಸಾಮಾಜಿಕ ನ್ಯಾಯದ ಪ್ರತೀಕ. ಕಾಂಗ್ರೆಸ್ ಪಕ್ಷವು ಕೇವಲ ಮಾತಿನಲ್ಲಿ ಸಾಮಾಜಿಕ ನ್ಯಾಯದ ವಿಚಾರವನ್ನು ತರುತ್ತಿದೆ. ಆದರೆ, ಬಿಜೆಪಿ ಅದನ್ನು ಜಾರಿಗೊಳಿಸಿದೆ ಎಂದರು.
ಗೌರವಾನ್ವಿತರಾದ ರಾಮನಾಥ್ ಕೋವಿಂದ, ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಸ್ಥಾನ ನೀಡಿದ್ದನ್ನು ನೆನಪಿಸಿದರು. ಜಸ್ಟಿಸ್ ಸದಾಶಿವ ಆಯೋಗದ ಶಿಫಾರಸನ್ನು ಗಮನಿಸಿ ಮೀಸಲಾತಿ ಕೊಟ್ಟಿದ್ದಾರೆ ಎಂದು ವಿವರಿಸಿದರು. ಸಂಸತ್ತಿನಲ್ಲಿ ಮೀಸಲಾತಿ ವಿಷಯವನ್ನು ಮಂಡಿಸಿ ನ್ಯಾಯ ನೀಡಲು ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಆಶಿಸಿದರು.
ಮಾದಿಗರಿಗೆ ಅವಕಾಶ ಮಾಡಿಕೊಟ್ಟ ಬಿಜೆಪಿಯನ್ನು ನಾವು ಬೆಂಬಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ನಮ್ಮ ಮತ್ತು ನಮ್ಮ ಜನಾಂಗದ ಭವ್ಯ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಕೊಡುವುದು ಅನಿವಾರ್ಯವೆನಿಸಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ವೆಂಕಟೇಶ್ ದೊಡ್ಡೇರಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ