ಬೆಂಗಳೂರು: ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡುವ ಸರ್ಕಾರ ಬೇಕೆಂದು ರಾಜ್ಯದ ಜನತೆ ಇಚ್ಛಿಸಿದ್ದು, ಅದರಂತೆ ಈ ಬಾರಿ ಬಿಜೆಪಿ ಪೂರ್ಣ ಬಹುಮತ ಗಳಿಸಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಿದೆ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2-3 ತಿಂಗಳಿಂದ ಪಕ್ಷದ ರಾಜ್ಯ ಮತ್ತು ಕೇಂದ್ರೀಯ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸಿದ್ದಾರೆ. ನಾಯಕರು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದರು.
2008 ಮತ್ತು 2018ರಲ್ಲಿ ಬಹುಮತಕ್ಕೆ ಸ್ವಲ್ಪ ಸ್ಥಾನ ಕಡಿಮೆ ಬಂದಿತ್ತು. ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ ಮೂರು ವರ್ಷಗಳ ಹಿಂದೆ ಆ ಪಕ್ಷಗಳ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿ ಉಪ ಚುನಾವಣೆ ನಡೆದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚಿಸಿತ್ತು. ಅಂದಿನಿಂದ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜನಪರ ಮತ್ತು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಕೇಂದ್ರದ ಎಲ್ಲ ಯೋಜನೆಗಳು ವೇಗಗೊಂಡಿವೆ. ನರೇಂದ್ರಮೋದಿಯವರು ರಾಜ್ಯಕ್ಕೆ ಹೆದ್ದಾರಿಗಳು, ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಬಂದರು, ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.
ಬಿ.ಎಸ್.ಯಡಿಯೂಪ್ಪ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ ಸೇರಿದಂತೆ 16 ರಾಜ್ಯ ನಾಯಕರ ತಂಡ 231 ಸಭೆಗಳನ್ನು, 48 ರೋಡ್ ಶೋಗಳನ್ನು ನಡೆಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವರು ಸೇರಿದಂತೆ ಇತರ ರಾಜ್ಯಗಳ 31 ನಾಯಕರು 206 ಸಭೆಗಳನ್ನು ನಡೆಸಿದ್ದಾರೆ. ಪ್ರಧಾನಿಯವರು 9 ಸಭೆಗಳು, 6 ರೋಡ್‍ಶೋಗಳು, ಜೆ.ಪಿ.ನಡ್ಡಾ ಅವರು 10 ಸಭೆಗಳು, 16 ರೋಡ್ ಶೋಗಳು, ಅಮಿತ್ ಶಾ ಅವರು 16 ಸಭೆಗಳು, 15 ರೋಡ್‍ಶೋಗಳು, ಸ್ಮøತಿ ಇರಾನಿ ಅವರು 17 ಸಭೆಗಳು, 2 ರೋಡ್ ಶೋಗಳು, ಯೋಗಿ ಆಧಿತ್ಯ ನಾಥ್ ಅವರು 9 ಸಭೆಗಳು, 3 ರೋಡ್ ಶೋಗಳನ್ನು ನಡೆಸಿದ್ದಾರೆ ಎಂದು ತಿಳಿಸಿದರು.
ಏ.25,26ರಂದು ಬೂತ್ ಹಾಗೂ ಜಿಲ್ಲಾ ಮಟ್ಟದಲ್ಲಿ ಎಲ್ಲರನ್ನೂ ತಲುಪುವ ವಿನೂತನ ಮಹಾ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದಲ್ಲಿ 9,125 ಸಭೆಗಳು 1,137 ರೋಡ್ ಶೋಗಳನ್ನು ನಡೆಸಲಾಗಿತ್ತು. ಕೇವಲ ಒಂದೂವರೆ ದಿನದಲ್ಲಿ 20 ಲಕ್ಷ ಜನರನ್ನು ತಲುಪಲಾಗಿದೆ ಎಂದು ಅವರು ವಿವರಿಸಿದರು.
ಅಭಿವೃದ್ಧಿಗಾಗಿ, ರಕ್ಷಣೆಗಾಗಿ, ವಿಶ್ವದಲ್ಲಿ ಭಾರತದ ಗೌರವ ಹೆಚ್ಚಲು, ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ, ಕೇಂದ್ರದಲ್ಲಿನ ಸರ್ಕಾರಕ್ಕೆ ಶಕ್ತಿ ತುಂಬಲು ಜನರು ಬಿಜೆಪಿಯವನ್ನು ಆಶೀರ್ವಾದಿಸಲಿದ್ದಾರೆ. ನರೇಂದ್ರಮೋದಿಯವರ ವೇಗದ ಹೆಜ್ಜೆಯಲ್ಲಿ ಕರ್ನಾಟಕ ಸಾಗುವಂತಾಗಲು ಹಾಗೂ ಕೇಂದ್ರದ ಜೊತೆಗಿರುವ ಸರ್ಕಾರ ಬೇಕೆಂದು ಜನರು ಇಚ್ಛಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಸಹಕರಿಸಿದ ಹಾಗೂ ಶ್ರಮವಹಿಸಿ ಕೆಲಸ ಮಾಡಿದ ಚುನಾವಣಾ ಆಯೋಗ, ಪೊಲೀಸ್, ಸೇರಿದಂತೆ ಎಲ್ಲ ಇಲಾಖೆ ಸಿಬ್ಬಂದಿಗೆ, ಮಾಧ್ಯಮಗಳಿಗೆ ಧನ್ಯವಾದಗಳು. ಪ್ರಜಾತಂತ್ರದ ದೊಡ್ಡ ಶಕ್ತಿಯಾದ ಮತದಾನದಲ್ಲಿ ಎಲ್ಲರೂ ತಪ್ಪದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಕು.ಶೋಭಾ ಕರಂದ್ಲಾಜೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರÀ ಎಂ.ಜಿ.ಮಹೇಶ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ