ಬೆಂಗಳೂರು: ಮುಡಾದಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಡಿ.ನೋಟಿಫಿಕೇಶನ್ ಮಾಡಿಸಿ, ಅದನ್ನು ಪತ್ನಿ ಹೆಸರಿಗೆ ಖರೀದಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ಜಮೀನಿಗೆ ಪರಿಹಾರವಾಗಿ ವಿಜಯನಗರದಲ್ಲಿ 14 ನಿವೇಶನಗಳನ್ನು ಪಡೆದು 40 ಕೋಟಿ ರೂಗೂ ಹೆಚ್ಚು ಭ್ರಷ್ಟಾಚಾರವನ್ನು ನಡೆಸಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಮೈಸೂರಿನ ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ನಡೆಸಿರುವ ಭೂ ಹಗರಣದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ದೇವನೂರು 3ನೇ ಹಂತದ ಬಡಾವಣೆ ಗಾಗಿ ಕೆಸರೆ ಗ್ರಾಮದ ಸರ್ವೇ ನಂಬರ್ 464 ರಲ್ಲಿ ಶ್ರೀ ನಿಂಗ ಎಂಬವರ ಹೆಸರಿನಲ್ಲಿ ದ್ದ 3-16 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿತ್ತು. ಆ ನಂತರದ ದಿನಗಳಲ್ಲಿ ಭೂಸ್ವಾಧೀನವನ್ನು ಕೈಬಿಟ್ಟು ಅಧಿಸೂಚನೆಯನ್ನು ರದ್ದುಪಡಿಸಲಾಯಿತು ಎಂದು ತಿಳಿಸಿದರು.
2005ರಲ್ಲಿ ಈ ಜಮೀನನ್ನು ಸಿದ್ದರಾಮಯ್ಯನವರ ಭಾಮೈದ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಖರೀದಿ ಮಾಡಿ, ಆ ಜಮೀನನ್ನು ತಮ್ಮ ಸಹೋದರಿ, ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ಅರಿಶಿಣ-ಕುಂಕುಮದ ಉಡುಗೊರೆ ಎಂದು ನೀಡಿದ್ದಾರೆ. ಅದನ್ನು ಪಾರ್ವತಿಯವರು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇ ಪಾರ್ವತಿ ಅವರು ಮುಡಾಗೆ ಅರ್ಜಿ ಸಲ್ಲಿಸಿ, ಭೂಸ್ವಾಧೀನದಿಂದ ಹೊರತುಪಡಿಸಿ ರುವ ಭೂಮಿಯನ್ನು ಪ್ರಾಧಿಕಾರವು ಉಪಯೋಗಿಸಿ ಕೊಂಡಿರುವುದರಿಂದ, ತಮ್ಮ ಜಮೀನಿನ ಬದಲಿಗೆ ಅಷ್ಟೇ ವಿಸ್ತೀರ್ಣದ ಜಮೀನನ್ನು ಪ್ರಾಧಿಕಾರದ ಸಮಾನಾಂತರ ಬಡಾವಣೆಯಲ್ಲಿ ನೀಡುವಂತೆ ಕೋರಿದ್ದರ ಮೇರೆಗೆ 2017ರ ಡಿಸೆಂಬರ್ 15ರಂದು ಮತ್ತು ಅದೇ ತಿಂಗಳ 30 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಸದರಿ ಜಮೀನಿಗೆ ಬದಲಾಗಿ ಅಭಿವೃದ್ಧಿ ಪಡಿಸದೆ ಇರುವ ಜಮೀನನ್ನು ನೀಡುವುದೆಂದು ನಿರ್ಣಯಿಸಲಾಯಿತು ಎಂದರು.
ಅಲ್ಲದೇ ವಿಜಯನಗರ ಎರಡನೇ ಹಂತದಲ್ಲಿ ಶೇ 50-50 ಅನುಪಾತ ದಲ್ಲಿ 14 ನಿವೇಶನಗಳನ್ನು ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನೀಡಲಾಗಿದೆ. ಕೆಸರೆಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನಿನ ಚದರ ಅಡಿ ಬೆಲೆ ಮೂರು ಸಾವಿರ ರೂಗಳಾದರೆ, ಮೈಸೂರಿನ ವಿಜಯ ನಗರದಲ್ಲಿ ಪಾರ್ವತಿ ಯವರಿಗೆ ನೀಡಿರುವ ನಿವೇಶನದ ಚದರ ಅಡಿ ಬೆಲೆ 8ರಿಂದ 9 ಸಾವಿರ ರೂಗಳಾಗಿದೆ. ಕಾನೂನು ಪ್ರಕಾರ ಸ್ವಾಧೀನ ಪಡಿಸಿಕೊಂಡ ಜಮೀನಿನ ಆಸುಪಾಸಿನಲ್ಲಿ ಬದಲಿ ನಿವೇಶನ ನೀಡಬೇಕಾಗಿತ್ತು. ಆದರೆ ಮೈಸೂರಿನ ವಿಜಯನಗರದ ದಲ್ಲಿ ಸುಮಾರು 40 ಕೋಟಿ ಬೆಲೆ ಬಾಳುವ ನಿವೇಶನಗಳನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ಸುಮಾರು 30 ಕೋಟಿ ರೂಗಳ ಹಗರಣ ನಡೆದಿದೆ ಎಂದು ಆರೋಪಿಸಿದರು.
ಸಂಬಂಧಿಸಿದ ಅಧಿಕಾರಿಗಳು, ಮುಡಾ ಅಧ್ಯಕ್ಷರು ಸಿದ್ದರಾಮಯ್ಯ ನವರ ಪತ್ನಿಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಭ್ರಷ್ಟಾಚಾರವನ್ನು ಬಿಡಿಸಿಟ್ಟರು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರೇ ಪತ್ನಿ ಹೆಸರಿನಲ್ಲಿ ಅತಿದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇವರಿಗಿಲ್ಲ ಎಂದರು.
ಸಿದ್ದರಾಮಯ್ಯನವರೇ ಅತಿ ದೊಡ್ಡ ಭ್ರಷ್ಟಾಚಾರ ನಡೆಸಿದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ನವರು ವರುಣ ಕ್ಷೇತ್ರದಲ್ಲಿ ಈ ಬಾರಿ ಸೋಲುವುದು ನಿಶ್ಚಿತ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿ ಹೋದ ಬಳಿಕ ಎಲ್ಲೆಲ್ಲೂ ಬಿಜೆಪಿ ಅಲೆ ಹೆಚ್ಚಾಗಿ. ನಿಗದಿತ ಗುರಿಗಿಂತ ಹೆಚ್ಚಾಗಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಸಹ ವಕ್ತಾರ ಡಾ.ಕೆ.ವಸಂತ್ ಕುಮಾರ್, ಬಿಜೆಪಿ ಮೈಸೂರು ವಿಭಾಗ ಮಾಧ್ಯಮ ಕೇಂದ್ರದ ಸಂಯೋಜಕ ನಾಗೇಶ್, ಮಾಧ್ಯಮ ಸಹ ಸಂಚಾಲಕ ಕೇಬಲ್ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ