ಬೆಂಗಳೂರು: ಬಿಜೆಪಿ ವಿರೋಧ ಪಕ್ಷವಾಗಿ ಜನರ ಭಾವನೆಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಹೊಸ ಸರಕಾರ ಬಂದಿದೆ. ಮಂತ್ರಿಕಾರ್ಡ್ ಯಾರ್ಯಾರಿಗೆ ಗ್ಯಾರಂಟಿ ಎಂದು ಗೊತ್ತಿಲ್ಲ. ಇದೊಂದು ಡಬಲ್ ಸ್ಟೇರಿಂಗ್ ಸರಕಾರ ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ ಅಲ್ಲ. ಪಾರ್ಟಿ ಘೋಷಣೆಯಿಂದ ಇದು ಸಿಕ್ಕಿದೆ. ಪ್ರತಿ ಸಭೆಯಲ್ಲೂ ಸಿಎಂ ಮಾತನಾಡುವ ಮೊದಲು ಉಪ ಮುಖ್ಯಮಂತ್ರಿ ಮಾತನಾಡುತ್ತಾರೆ. ಹೊಸ ಸರಕಾರ ಬಂದಾಗ ಮುಖ್ಯಮಂತ್ರಿಗಳು ಖಡಕ್ ಮಾತನಾಡುವುದು ಪರಿಪಾಠ. ಆದರೆ, ಇಲ್ಲಿ ಸಿಎಂ ಸೈಲೆಂಟ್, ಡೆಪ್ಯುಟಿ ಸಿಎಂ ವಯಲೆಂಟ್. ಅಧಿಕಾರಿಗಳು, ಪೊಲೀಸರು, ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಧಮ್ಕಿ ಹಾಕುವುದು ಅವರ ಹಣೆಬರಹ ಎಂದು ನುಡಿದರು.
ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಸಿದ್ದರಾಮಯ್ಯ- ಡಿಕೆ ಶಿವಕುಮಾರ್‍ರವರ ಡಬಲ್ ಸ್ಟೇರಿಂಗ್ ಸರಕಾರ ಮಾಡದೆ ಇರುವುದು ರಾಜ್ಯದ ಜನರಿಗೆ ಮಾಡಿದ ದೊಡ್ಡ ಅಪÀಮಾನ. ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಅವರು ಪ್ರತ್ಯೇಕ ಗ್ಯಾರಂಟಿ ಕಾರ್ಡ್ ಹಿಡಿದರು. ಸರಕಾರ ಬಂದು 24 ಗಂಟೆಗಳ ಒಳಗೆ ಮಾಡುವುದಾಗಿ ಹೇಳಿದ್ದರು. 240 ಗಂಟೆ ಕಳೆದರೂ ಅವು ಈಡೇರಿಲ್ಲ. ಶಾಸಕರು ಮತ್ತು ಸಿಎಂ, ಡಿಸಿಎಂರವರು ಸೋನಿಯಾ- ರಾಹುಲ್ ಮನೆಗೆ ಹೋಗಿ ಖಾತೆ ಗ್ಯಾರಂಟಿ ಮಾಡುತ್ತಿದ್ದಾರೆ. ಜನರ ಭಾವನೆಗೆ ಬೆಲೆ ಇಲ್ಲ ಎಂದು ಟೀಕಿಸಿದರು.
ಡಬಲ್ ಸ್ಟಾಂಡರ್ಡ್ ಸರಕಾರ
ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಡಲು ಸಾಧ್ಯವೇ ಎನ್ನುವ ಡಿಸಿಎಂ ದಾರಿಯಲ್ಲಿ ಹೋಗುವವರಿಂದ ಮತ ಹಾಕಿಸಿದ್ದಾರೆ ಅಲ್ಲವೇ? ಎಲ್ಲರಿಗೂ ದಾರಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಕೊಟ್ಟು ಈಗ ಅಪಮಾನ ಮಾಡುತ್ತೀರಲ್ಲಾ? ನಿಮಗೆ ನಾಚಿಕೆ ಆಗುವುದಿಲ್ಲವೇ? ಪ್ರತಿಯೊಬ್ಬರ ಮನೆಗೂ 200 ಯೂನಿಟ್ ಉಚಿತ ಎಂದಿದ್ದ ಸಿದ್ದರಾಮಯ್ಯರವರು ಈಗ ಶರ್ತ ವಿಧಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ಡಬಲ್ ಸ್ಟಾಂಡರ್ಡ್ ಎಂದು ಆರ್.ಅಶೋಕ್ ಅವರು ಟೀಕಿಸಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ‘ಮಾವನ ಮನೆಗೆ ಹೋಗುವವರಿಗೆ, ಸೊಸೆ ಕರೆದುಕೊಂಡು ಬರಲು ಅತ್ತೆ ಹೋದರೆ ಫ್ರೀ, ಹಾಸನಕ್ಕೆ ಹೋಗಲು ಫ್ರೀ’ ಕೆಎಸ್‍ಆರ್‍ಟಿಸಿ ಬಸ್ಸಿನಲ್ಲಿ ಮಹಿಳೆಯರು ಯಾರೂ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ದ್ವಿಮುಖ ನೀತಿ ಅನಾವರಣ ಆಗುತ್ತಿದೆ ಎಂದು ಆಕ್ಷೇಪಿಸಿದರು.
ಆರ್ಥಿಕ ಸಂಪನ್ಮೂಲದ ಬಗ್ಗೆ ಈಗ ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯನವರು 13 ಬಜೆಟ್ ಮಂಡಿಸಿದವರು. ನಿಮಗೆ ಮಾಹಿತಿ- ಜ್ಞಾನ ಇರಲಿಲ್ಲವೇ? ವಿದ್ಯುತ್ ಬಗ್ಗೆ ಅರಿವಿಲ್ಲವೇ? ಜ್ಞಾನ ಇಲ್ಲದೆ ನಿಮ್ಮ ಪ್ರಣಾಳಿಕೆ ಪ್ರಿಂಟ್ ಮಾಡಿದ್ದೀರಾ? ಎಂದು ಕೇಳಿದರು. ಜನ ನಗುವಂತಾಗಿದೆ ಅಲ್ಲವೇ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಪದವಿ ಪಡೆದ ನಿರುದ್ಯೋಗಿ ಯುವಕರಿಗೆ 3 ಸಾವಿರ, ಡಿಪ್ಲೊಮಾ ಆದವರಿಗೆ 1,500 ರೂಪಾಯಿ ಎಂದಿದ್ದೀರಿ. ಪ್ರಣಾಳಿಕೆಯಲ್ಲಿ ಎಲ್ಲರಿಗೆ ಎಂದು ಹೇಳಿದವರು ಈಗ ಶರ್ತಗಳಿವೆ ಎನ್ನುತ್ತೀರಿ. ಹೊಸದಾಗಿ ಪಾಸ್ ಆದವರಿಗೆ ಎನ್ನುತ್ತೀರಿ. ಗೆದ್ದ ಮೇಲೆ ಎಲ್ಲ ಕಂಡಿಷನ್. ಗೃಹಿಣಿಯರಿಗೆ 2 ಸಾವಿರ ವಿಷಯದಲ್ಲೂ ಹೀಗೆ ಮಾಡುತ್ತಿದ್ದೀರಿ. ಇದೆಲ್ಲವೂ ರಾಜ್ಯದ ಜನತೆಗೆ ಮಾಡಿದ ಮೋಸ. ಇದಕ್ಕೆ ಜನತೆ ಸಕಾಲದಲ್ಲಿ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು. ಕರೆಂಟ್ ಬಿಲ್ ಕಟ್ಬೇಡಿ, ಮಹಿಳೆಯರು ಬಸ್ ಟಿಕೆಟ್ ತೆಗೆದುಕೊಳ್ಳದಿರಿ ಎಂದು ರಾಜ್ಯದ ಜನತೆಗೆ ವಿನಂತಿಸಿದರು.
ಫ್ರೀ ಫ್ರೀ ವಿಚಾರವನ್ನು ದೂರವಿಟ್ಟು ವಿಷಯಾಂತರ ಮಾಡಲು ಆರೆಸ್ಸೆಸ್ ಬ್ಯಾನ್ ಮಾಡುವ ಮಾತನಾಡುತ್ತಿದ್ದಾರೆ. ನೀವು ಬಿಡಿ. ನಿಮ್ಮಪ್ಪ, ನಿಮ್ಮ ಅಜ್ಜಿ, ಮುತ್ತಾತನಿಗೇ ಬ್ಯಾನ್ ಮಾಡಲು ಆಗಲಿಲ್ಲ. ಸಂಸತ್ತಿನಲ್ಲಿ ಮೆಜಾರಿಟಿ ಇತ್ತು. ಆಗಲೇ ಬೇಳೆ ಬೇಯಲಿಲ್ಲ. ನೀವು ತಾಕತ್ತಿದ್ದರೆ, ದಮ್ಮಿದ್ರೆ, ಶಕ್ತಿ ಇದ್ರೆ ಬ್ಯಾನ್ ಮಾಡಿ. ನಿಮ್ಮ ಸರಕಾರ ಮೂರು ರಾಜ್ಯಗಳಲ್ಲಿವೆ. ಆರೆಸ್ಸೆಸ್‍ನ ಲಕ್ಷಾಂತರ ಶಾಖೆಗಳಿವೆ. ಆರೆಸ್ಸೆಸ್ ಮತ್ತು ಬಜರಂಗದಳ ಹಿಂದೂಗಳ ಧ್ವನಿ. ಹಿಂದೂಗಳ ಪರವಾಗಿ ನಿಲ್ಲುವ ಸಾರ್ವಜನಿಕ ಸಂಸ್ಥೆ ಎಂದು ತಿಳಿಸಿದರು.
ಆರೆಸ್ಸೆಸ್ ಬ್ಯಾನ್ ಮಾಡಿದರೆ ನಿಮ್ಮ ಗೂಟದ ಕಾರು ಮೂರು ತಿಂಗಳು ಇರುವುದಿಲ್ಲ. ಅವು ವಿಧಾನಸೌಧದ ಮುಂದೆ ನಿಲ್ಲುತ್ತವೆ ಎಂದು ಎಚ್ಚರಿಸಿದರು. ಈ ದೇಶದ ಪ್ರಧಾನಿ, ದೇಶದ ಗೃಹ ಸಚಿವರು, ರಾಷ್ಟ್ರಪತಿಗಳೂ ಆರೆಸ್ಸೆಸ್‍ನವರು. ನಾವೂ ಆರೆಸ್ಸೆಸ್‍ನವರು ಎಂದರಲ್ಲದೆ, ಇವರು ದೇಶವಿರೋಧಿ ಪಿಎಫ್‍ಐ, ಕೆ.ಎಫ್.ಡಿ. ಹಿಜಾಬ್, ಗೋಹತ್ಯೆ ನಿಷೇಧ ರದ್ದು ಮಾಡುವ ಬೇಡಿಕೆ ಇಟ್ಟ ಅಮ್ನೆಸ್ಟಿ ಇಂಟರ್‍ನ್ಯಾಶನಲ್ ಪರ ಇರುವವರು. ಅವರನ್ನು ಸಂತುಷ್ಟಗೊಳಿಸಲು ಆರೆಸ್ಸೆಸ್ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಇದನ್ನು ಬಿಜೆಪಿ ಎದುರಿಸಲಿದೆ ಎಂದು ತಿಳಿಸಿದರು.
ಶಾಸಕರಾದ ಡಾ.ಅಶ್ವತ್ಥನಾರಾಯಣ, ಹರೀಶ್ ಪೂಂಜ ಅವರ ಮೇಲೆ ಕೇಸು ಹಾಕುವ ಹೀನ- ಹಗೆತನದ ರಾಜಕೀಯ ಹೆಚ್ಚು ದಿನ ನಡೆಯುವುದಿಲ್ಲ. ವಿದ್ಯುತ್ ಬಿಲ್ ಕೇಳಲು ಹೋದವರಿಗೆ ಹೊಡೆದಿದ್ದಾರೆ. ಬಸ್ಸಿನಲ್ಲಿ ಒಬ್ಬ ಅಜ್ಜಿ ಜನ್ಮ ಜಾಲಾಡಿದ್ದಾರೆ. ಕಾಂಗ್ರೆಸ್ಸಿನವರೇ ಜಾಗ್ರತೆಯಿಂದಿರಿ ಎಂದು ಎಚ್ಚರಿಸಿದರು. ಕಾಂಗ್ರೆಸ್ ಮನೆಗೆ ಹೋಗುವುದು ಖಚಿತ. ಜನರ ಶಾಪ ತಟ್ಟಲಿದೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.
ಇದು ಕಾಂಗ್ರೆಸ್ ಗೂಂಡಾಗಿರಿಯ ಸರಕಾರ. ಗೂಂಡಾಗಿರಿಯ ಪ್ರತೀಕ ಜಗಜ್ಜಾಹೀರು ಆಗುತ್ತಿದೆ. ಈ ಸರಕಾರ ಹೋಗುವುದು ಖಚಿತ ಎಂದು ನುಡಿದರು.
ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ನಡವಳಿಕೆ ನನಗೆ ಆಶ್ಚರ್ಯ ತಂದಿದೆ. 28ರಂದು ಉದ್ಘಾಟನೆ ಆಗಲಿರುವ ನೂತನ ಸಂಸತ್ ಭವನ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕುವುದಾಗಿ ತಿಳಿಸಿದ್ದಾರೆ ಎಂದು ಟೀಕಿಸಿದರಲ್ಲದೆ, ಪ್ರಧಾನಿ ಹುದ್ದೆ ಸಾಂವಿಧಾನಿಕ ಹುದ್ದೆ. ಅದನ್ನು ಗೌರವಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.
ತಮ್ಮ ಪ್ರಧಾನಿ ನರಸಿಂಹರಾವ್, ಡಾ. ಮನಮೋಹನ ಸಿಂಗ್ ಅವರಿಗೆ ಕಾಂಗ್ರೆಸ್ಸಿಗರು ಗೌರವ ಕೊಡಲಿಲ್ಲ. ಎಂದೂ ಅವರು ಇವರಿಬ್ಬರಿಗೆ ಜಯವಾಗಲಿ ಎನ್ನಲಿಲ್ಲ. ಪ್ರಧಾನಿ ಹುದ್ದೆಗೆ ಗೌರವ ಕೊಡಲಿಲ್ಲ. ಅಂಥ ನೀತಿಗೆಟ್ಟ ಜನ ಕಾಂಗ್ರೆಸ್ಸಿನಲ್ಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಉದ್ಘಾಟನಾ ಸಮಾರಂಭಕ್ಕೆ ಬರುತ್ತಿರುವುದು ಸ್ವಾಗತಾರ್ಹ ಎಂದರು. ಪ್ರಧಾನಿ ದೇವೇಗೌಡರನ್ನು ವಿನಾಕಾರಣ ಆ ಹುದ್ದೆಯಿಂದ ಕೆಳಗಿಳಿಸಿ 6 ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದೀರಿ ಎಂದು ಟೀಕಿಸಿದರು.
ದೇವೇಗೌಡರದು ಯಾವುದೇ ಆಪಾದನೆ, ಹಗರಣ ಇಲ್ಲದ ಆಡಳಿತ. ಅವರನ್ನು ಯಾಕೆ ಕೆಳಕ್ಕೆ ಇಳಿಸಿದ್ದೀರಿ ಎಂದು ಕನ್ನಡಿಗರಿಗೆ ತಿಳಿಸಿ ಎಂದು ಆಗ್ರಹಿಸಿದರು. ಇವತ್ತಿಗೂ ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವು ಉತ್ತರ ಹೇಳಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಗರಣಗಳನ್ನು ಮಾಡಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಇರುವ ವ್ಯಕ್ತಿಗಳು ನಮ್ಮ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಕೀಳುಶಬ್ದದಲ್ಲಿ ಮಾತನಾಡುತ್ತಿದ್ದಾರೆ. ಅವರು ಮೊದಲು ಸಂವಿಧಾನಕ್ಕೆ ಗೌರವ ನೀಡಬೇಕು. ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು. ವಿಶ್ವವೇ ಮೆಚ್ಚಿರುವ ನಾಯಕ ಮೋದಿಜಿ ಅವರನ್ನು ಗೌರವಿಸಿ ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ