ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷವು ನೀಡಿದ ವಿವಿಧ ಗ್ಯಾರಂಟಿ ಯೋಜನೆಗಳನ್ನು ಷರತ್ತುಗಳಿಲ್ಲದೆ ಅನುಷ್ಠಾನಕ್ಕೆ ತರಬೇಕು ಎಂದು ರಾಜ್ಯದ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಕಾಂಗ್ರೆಸ್‍ನವರು, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಅಧ್ಯಕ್ಷ ಹಾಗೂ ಈಗಿನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ನಾಡಿನ ಜನತೆಗೆ 5 ಗ್ಯಾರಂಟಿಗಳನ್ನು ಕೊಟ್ಟಿದ್ದರು. ಅಲ್ಲದೆ, ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಕಾರ್ಡ್ ಜೋಪಾನವಾಗಿ ಇಟ್ಟುಕೊಳ್ಳಿ; ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೊದಲನೇ ಸಂಪುಟ ಸಭೆಯಿಂದ ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ನಿಮ್ಮ ಕುಟುಂಬಕ್ಕೆ ಪ್ರತಿ ತಿಂಗಳೂ ಕನಿಷ್ಠ ರೂ. 10 ಸಾವಿರದಷ್ಟು ಅನುಕೂಲ ಆಗಲಿದೆ ಎಂದು ಜನರಿಗೆ ಭರವಸೆ ಕೊಟ್ಟು ಮೋಸ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ಮೋಸ, ವಂಚನೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಹೋಗುವುದನ್ನು ಸ್ವಾತಂತ್ರ್ಯಾನಂತರದ 60 ವರ್ಷಗಳಲ್ಲಿ ಮಾಡುತ್ತಲೇ ಬಂದಿದೆ. ಮೊದಲ 60 ವರ್ಷಗಳಲ್ಲಿ ಜಾತಿ, ಜಾತಿ, ಧರ್ಮ, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಆಡಳಿತ ಮಾಡಿದ್ದರು. ಬಡವರ ಮೂಗಿಗೆ ತುಪ್ಪ ಸವರಿದರು; ಗರೀಬಿ ಹಠಾವೋ ಮಾಡುವುದಾಗಿ ಹೇಳಿದ್ದರೂ ಬಡತನ ನಿರ್ಮೂಲನೆÀ, ಬಡವರ ಕಲ್ಯಾಣ, ದೀನದಲಿತರ ಉದ್ಧಾರ ಮಾಡಲಿಲ್ಲ ಎಂದು ತಿಳಿಸಿದರು.
ಜನರಿಗೆ ಸತತವಾಗಿ ಮೋಸ ಮಾಡುತ್ತ ಬಂದ ಕಾಂಗ್ರೆಸ್ ಪಕ್ಷವು ಇವತ್ತು ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಗ್ಯಾರಂಟಿಗಳನ್ನು ಕೊಟ್ಟಿದೆ. ಕುಟುಂಬದ ಯಜಮಾನಿಗೆ 2 ಸಾವಿರ ಕೊಡುವುದಾಗಿ ತಿಳಿಸಿದ್ದರು. ಈಗ ಅತ್ತೆಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ. ಅದೇ ಅತ್ತೆಗೆ 4 ಮಕ್ಕಳಿದ್ದರೆ ಅವರು ಬೇರೆ ಬೇರೆ ಮನೆಯಲ್ಲಿರುತ್ತಾರೆ. ಇದನ್ನು ಗಮನಿಸಿ ಯಾವುದೇ ಶರ್ತವಿಲ್ಲದೆ ಪ್ರತಿ ಕುಟುಂಬದ ಯಜಮಾನ್ತಿಗೆ 2 ಸಾವಿರ ಕೊಡಬೇಕು ಎಂದು ಆಗ್ರಹಿಸಿದರು.
ಪದವೀಧರ ನಿರುದ್ಯೋಗಿಗೆ 3 ಸಾವಿರ ಕೊಡುವ ಭರವಸೆ ಕೊಟ್ಟಿದ್ದರು. ಇದೀಗ ಈ ವರ್ಷ ಉತ್ತೀರ್ಣರಾದವರಿಗೆ ಮಾತ್ರ ಎನ್ನುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ದಿನ ಎಷ್ಟು ಜನ ನಿರುದ್ಯೋಗಿ ಪದವೀಧರರು, ಡಿಪ್ಲೊಮಾ ಪಡೆದವರು ಇದ್ದರೋ ಅಂದರೆ ಸುಮಾರು 50 ಲಕ್ಷದಿಂದ 60 ಲಕ್ಷ ಯುವಜನರಿಗೆ 3 ಸಾವಿರ ಮತ್ತು ಒಂದೂವರೆ ಸಾವಿರ ಕೊಡಲೇಬೇಕು ಎಂದು ಒತ್ತಾಯಿಸಿದರು. ಈ ವರ್ಷ ಪಾಸಾದವರಿಗೆ ನಿಮ್ಮ ಪ್ರಣಾಳಿಕೆಯಲ್ಲಿ ಹೇಳಬೇಕಿತ್ತು; ಹೇಳಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.
ವಿದ್ಯುತ್ ನನಗೂ ಫ್ರೀ, ನಿಮಗೂ ಫ್ರೀ, ಹಿಂದೆ ಕುಂತವರಿಗೂ ಫ್ರೀ, ಮುಂದೆ ಕುಳಿತವರಿಗೂ ಫ್ರೀ ಎಂದಿದ್ದರು. ಮಹದೇವಪ್ಪಗೂ ಫ್ರೀ; ಮತ್ತೊಬ್ಬರಿಗೂ ಫ್ರೀ ಎಂದು ತಿಳಿಸಿದ್ದರು. ಆದಾಯ ತೆರಿಗೆ ಪಾವತಿಸುವ ತಮಗೂ ಫ್ರೀ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಆದ್ದರಿಂದ ಷರತ್ತು ರಹಿತವಾಗಿ ಎಲ್ಲರಿಗೂ ಉಚಿತ ವಿದ್ಯುತ್ ನೀಡಬೇಕು. ಅದನ್ನು ತಪ್ಪಿಸಬೇಡಿ ಎಂದು ಸಿದ್ದರಾಮಯ್ಯರನ್ನು ಒತ್ತಾಯಿಸಿದರು.
10 ಕೆಜಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದಾರೆ. ಕೇಂದ್ರಕ್ಕೆ ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿದರಲ್ಲದೆ, ಮಾರ್ಕೆಟ್‍ನಲ್ಲಿ ಅಕ್ಕಿ ಬೇಕಾದಷ್ಟು ಸಿಗುತ್ತದೆ. ಖರೀದಿಸಿ ನಾಳೆಯಿಂದಲೇ ವಿತರಣೆ ಆರಂಭಿಸಿ ಎಂದು ಅವರು ಆಗ್ರಹಪೂರ್ವಕವಾಗಿ ನುಡಿದರು. ಉಚಿತ ಬಸ್ ಪ್ರಯಾಣ ಕೊಡುವುದಾಗಿ ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಕಾದು ನೋಡೋಣ ಎಂದು ತಿಳಿಸಿದರು.
ಉಚಿತಗಳ ಗ್ಯಾರಂಟಿ ಜಾರಿ ಮಾಡದಿದ್ದರೆ ನಾಡಿನ ಜನ ಇವರಿಗೆ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ದೀನದಲಿತರಿಗೆ ಶಿಕ್ಷಣ ಕ್ಷೇತ್ರಕ್ಕಾಗಿ ಕೊಡುವ ಅನುದಾನದ ಹಣವನ್ನು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಳಸುವ ಮಾಹಿತಿ ಇದೆ. ಹೀಗೆ ಮಾಡಿದರೆ ದೊಡ್ಡ ಹೋರಾಟ ಆಗಲಿದೆ ಎಂದು ತಿಳಿಸಿದರು.
ದೀನದಲಿತರ ವಿದ್ಯಾಭ್ಯಾಸ, ಊಟ ವಸತಿ, ಸುಸಜ್ಜಿತ ವಸತಿ ಶಾಲೆ ನಿರ್ಮಾಣ, ಹಾಸ್ಟೆಲ್ ನಿರ್ಮಾಣ, ನಿಗಮಗಳ ಮೂಲಕ ಭೂಮಿ ಖರೀದಿಗೆ ಮತ್ತು ಸಾಲ ಸೌಲಭ್ಯಗಳಿಗೆ, ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದ ಅನುದಾನವನ್ನು ಗ್ಯಾರಂಟಿಗಾಗಿ ಬಳಸಿ ಮೋಸ ಮಾಡಿದರೆ ಈ ದೀನದಲಿತರು ರಸ್ತೆಗೆ ಇಳಿದು ಹೋರಾಡುತ್ತಾರೆ ಎಂದೂ ಅವರು ಎಚ್ಚರಿಕೆ ನೀಡಿದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ