ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಶೀಲಿಸಲು ಅರುಣ್ ಶಹಾಪುರ ಆಗ್ರಹ
ಬೆಂಗಳೂರು: ವಿಶ್ವವಿದ್ಯಾಲಯಗಳ ಒಟ್ಟು ಪಠ್ಯಕ್ರಮವನ್ನು ಪರಿಶೀಲಿಸುವ ನಿಟ್ಟಿನಲ್ಲಿ ಮಾನ್ಯ ರಾಜ್ಯಪಾಲರು ಇದರ ಕುರಿತು ವರದಿ ತರಿಸಿಕೊಳ್ಳಬೇಕು; ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪರಿಶೀಲಿಸಬೇಕು ಎಂದು ವಿಧಾನಪರಿಷತ್ತಿನ ಮಾಜಿ ಸದಸ್ಯ ಅರುಣ್ ಶಹಾಪುರ ಅವರು ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉನ್ನತ ಶಿಕ್ಷಣ ಪರಿಷತ್, ವಿವಾದಿತ ಅಂಶವಿರುವ ಪಠ್ಯಗಳ ಕುರಿತು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು. ವಿವಾದಿತ ಅಂಶಗಳನ್ನು ಒಳಗೊಂಡ ಪಠ್ಯದ ಮೂಲಕ ಸಮಾಜವನ್ನು ವಿಭಜಿಸುವ ಮಾನಸಿಕತೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು; ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ. ಪ್ರಥಮ ಸೆಮಿಸ್ಟರ್‍ನ ಬೆಳಗು ಲೇಖನಗಳ ಸಂಗ್ರಹದ ಕನ್ನಡ ಪಠ್ಯಪುಸ್ತಕದಲ್ಲಿ ರಾಮಲಿಂಗಪ್ಪ ಟಿ.ಬೇಗೂರು ಅವರ ಬರಹದಲ್ಲಿ ರಾಷ್ಟ್ರವಾದದ ಆಚರಣೆಯ ಸುತ್ತಮುತ್ತ ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅದರಲ್ಲಿ ಅತ್ಯಂತ ವಿವಾದಾತ್ಮಕ ಅಂಶಗಳಿವೆ ಎಂದು ಗಮನ ಸೆಳೆದರು.
ಬರಹಗಾರರ ಬಹಳ ಪೂರ್ವಾಗ್ರಹ ಪೀಡಿತ ವಿಚಾರಗಳನ್ನು ಇದರಲ್ಲಿ ಸೇರಿಸಿದ್ದಾರೆ. ರಾಷ್ಟ್ರವಾದದ ಆಚರಣೆಯ ಸುತ್ತಮುತ್ತ ಎಂಬ ವಿಷಯದಡಿ ರಾಷ್ಟ್ರವಾದವನ್ನೇ ಹೀಗಳೆಯುವ ಕೆಲಸ ಮಾಡಿದ್ದಾರೆ. ಹಿಂದೂ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದು, ಭಾರತ ಮಾತೆ ಎಂಬುದು ಕಲ್ಪನೆ ಎಂದಿದ್ದಾರೆ. ಈಕೆ ಹಿಂದೂ ಎಂಬ ಕಲ್ಪಿತ ಮಾತೆ ಎಂದು ತಿಳಿಸಿದ್ದನ್ನೂ ವಿವರಿಸಿದರು. ಬೋಲೋ ಭಾರತ್ ಮಾತಾಕಿ ಜೈ ಎಂಬುದನ್ನೂ ವಿರೋಧಿಸಿದ್ದಾರೆ ಎಂದು ಟೀಕಿಸಿದರು.
ವಿಶ್ವವಿದ್ಯಾಲಯ ಪಠ್ಯಪುಸ್ತಕ ವಾಪಸ್ ಪಡೆಯಲಿ
ವಿಶ್ವವಿದ್ಯಾಲಯದಲ್ಲಿ ಇದು ಬೌದ್ಧಿಕ ಭಯೋತ್ಪಾದಕತೆ ಎಂದ ಅರುಣ್ ಶಹಾಪುರ ಅವರು, ಇಲ್ಲಿನವರೆಗೆ ಪೊಲೀಸರು ಈ ವಿಷಯದಲ್ಲಿ ಯಾಕೆ ಮೊಕದ್ದಮೆ ಹೂಡಿಲ್ಲ? ಎಂದು ಕೇಳಿದರು. ಅವರ ಮೇಲೆ ಕ್ರಮ ಕೈಗೊಳ್ಳಿ; ಪಠ್ಯಪುಸ್ತಕವನ್ನು ವಾಪಸ್ ಪಡೆಯುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮಾನ್ಯ ಕುಲಾಧಿಪತಿಗಳಾದ ರಾಜ್ಯಪಾಲರು ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.
ಸಂವಿಧಾನದ ಆಶಯಕ್ಕೆ ವಿರೋಧವಾಗಿ ಹಲವಾರು ವಿಷಯಗಳನ್ನು ಅವರು ಹೇಳಿದ್ದಾರೆ. ಭಾರತ ಮಾತೆ, ತಾಯಿ ಭುವನೇಶ್ವರಿ (ಕನ್ನಡಮ್ಮನ) ಕುರಿತಂತೆ ಕೆಟ್ಟದಾಗಿ ಮಾತನಾಡಿದ್ದಾರೆ. ಇದು ಒಂದು ಮತೀಯವಾದ ಎಂದು ಬಿಂಬಿಸಿದ್ದಾರೆ. ಒಂದು ಪಠ್ಯಪುಸ್ತಕವನ್ನು ಒಂದು ವಿಶ್ವವಿದ್ಯಾಲಯವು ದುರುಪಯೋಗ ಪಡಿಸಲಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರು ಈಗ ಇರುವ ಪಠ್ಯಗಳನ್ನು ಪರಿಶೀಲಿಸಬೇಕು. ರಾಜ್ಯದಲ್ಲಿ ಉನ್ನತ ಶಿಕ್ಷಣ ಪರಿಷತ್ ಇದ್ದು, ಅದು ಯಾಕೆ ವಿವಾದಾತ್ಮಕ ಅಂಶಗಳಿರುವ ಪಠ್ಯದ ಕುರಿತು ಪ್ರತಿಕ್ರಿಯಿಸಿಲ್ಲ ಎಂದು ಕೇಳಿದರು. ಶಿಕ್ಷಣದ ಇಂಥ ವಿಕೃತಿಯನ್ನು ಎಳೆಯ ಮನಸ್ಸುಗಳಿಗೆ ತುಂಬುತ್ತಿದ್ದು, ಇದು ಅಪಾಯಕಾರಿ ಎಂದು ತಿಳಿಸಿದರು.
ಭಾಷಾವಾರು ಪ್ರಾಂತ್ಯಗಳ ರಚನೆಯನ್ನು ಇದರಲ್ಲಿ ಪ್ರಶ್ನಿಸಲಾಗಿದೆ. ವಿಘಟಕ ವಿಷಯಗಳಿಗೆ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಮುಸ್ಲಿಮರು ಈಚೆಗೆ ಕರ್ಮಠರಾಗಲು ಹಿಂದೂ ಎಂಬ ಕಲ್ಪಿತ ರಾಷ್ಟ್ರೀಯ ಯಜಮಾನಿಕೆಯೂ ಕಾರಣವಾಗಿದೆ ಎಂದು ಹೇಳಿದ್ದು, ಯುವ ಮನಸ್ಸುಗಳಿಗೆ ಇದನ್ನು ತುಂಬುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ಇವರ ಮೇಲೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, ಈ ಪಠ್ಯದ ಮೇಲಿನ ಲೇಖನವು ಪ್ರತ್ಯೇಕತೆ ಮತ್ತು ದ್ವೇಷದ ಭಾವನೆಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಲೇಖಕರ ಮೇಲೆ ಕ್ರಮ ಕೈಗೊಳ್ಳಬೇಕು. ಲೇಖನವನ್ನು ಅತ್ಯಂತ ಶೀಘ್ರವಾಗಿ ಆ ಪಠ್ಯಕ್ರಮದಿಂದ ತೆಗೆದುಹಾಕಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ತಿನ ಸದಸ್ಯ ಹನುಮಂತ ನಿರಾಣಿ ಅವರು ಹಾಜರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ