ಬೆಂಗಳೂರು: ಭವಿಷ್ಯದಲ್ಲಿ ಕೌಶಲ್ಯಾಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಲಾಗುವುದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್ ಅವರು ತಿಳಿಸಿದರು.
ಜನಾಶೀರ್ವಾದ ಯಾತ್ರೆ ಸಂಬಂಧ ಇಂದು ಬೆಂಗಳೂರು ನಗರ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡೋತ್ತರ ಕಾಲಘಟ್ಟದಲ್ಲಿ ಯುವಕರಿಗೆ ಹೆಚ್ಚಿನ ಕೌಶಲ್ಯ ನೀಡುವ ಸವಾಲಿನ ಜವಾಬ್ದಾರಿ ನನ್ನ ಸಚಿವ ಸ್ಥಾನದ ಮೇಲೆ ಇದೆ. ಇದನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ. ಇಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಬೆಂಗಳೂರು ನಗರ ಮಹತ್ವದ ಸಾಧನೆ ಮಾಡಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಚ್ಚಿನ ಅವಕಾಶವಿದೆ.. ಕೌಶಲಯುಕ್ತ ಯುವಜನರನ್ನು ಜಗತ್ತು ಬಯಸುತ್ತಿದ್ದು, ಹೆಚ್ಚಿನ ಉದ್ಯೋಗಾವಕಾಶವೂ ಲಭಿಸಲಿದೆ ಎಂದು ವಿಶ್ಲೇಷಿಸಿದರು.
ದೇಶದಲ್ಲಿ ಯುವಜನರ ಕೌಶಲಾಭಿವೃದ್ಧಿಗೆ 800 ಪ್ರಧಾನಿ ಕೌಶಲ ಕೇಂದ್ರ, ಅಲ್ಪಕಾಲೀನ ತರಬೇತಿ ಕೊಡುವ 20 ಸಾವಿರ ತರಬೇತಿ ಕೇಂದ್ರಗಳು, 14 ಸಾವಿರ ಐಟಿಐಗಳು, 2 ಸಾವಿರ ಜನ ಶಿಕ್ಷಣ ಸಂಸ್ಥಾನಗಳು ಕಾರ್ಯ ನಿರ್ವಹಿಸುತ್ತಿವೆ. ಈ ಜಾಲದ ಮೂಲಕ 2 ಕೋಟಿ ಯುವಜನರಿಗೆ ತರಬೇತಿ ನೀಡಲಾಗಿದೆ. ಹೊಸ ಶಿಕ್ಷಣ ನೀತಿ (ಎನ್‍ಇಪಿ) ಅಡಿಯಲ್ಲಿ ವೃತ್ತಿಪರ ತರಬೇತಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಉನ್ನತ ಶಿಕ್ಷಣಕ್ಕೆ ಸೇರಬೇಕು ಅಥವಾ ಶಿಕ್ಷಣ ಮುಕ್ತಾಯಗೊಳಿಸಬೇಕು ಎಂಬ ಸಾಧ್ಯತೆಯನ್ನಷ್ಟೇ ಈಗಿನ ಶಿಕ್ಷಣ ಪದ್ಧತಿ ನೀಡುತ್ತದೆ. ಆದರೆ, ಶ್ರೀ ನರೇಂದ್ರ ಮೋದಿ ಅವರ ಹೊಸ ಶಿಕ್ಷಣ ನೀತಿಯಡಿ ಆರನೇ ತರಗತಿಯಿಂದಲೇ ವೃತ್ತಿಪರ ತರಬೇತಿ ಅವಕಾಶ ಸಿಗಲಿದೆ ಎಂದು ವಿವರಿಸಿದರು.
ಜನಾಶೀರ್ವಾದ ಯಾತ್ರೆಯಡಿ 800 ಕಿಮೀ ದೂರ ಕ್ರಮಿಸಿ ಆರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಇಂದು ಕೊನೆಯ ದಿನದ ಯಾತ್ರೆ ನಡೆಯುತ್ತಿದೆ. ಕಾರ್ಯಕರ್ತರು, ಜನರು, ವಿವಿಧ ಸಮುದಾಯದ ಜನರ ಭೇಟಿ ಮಾಡಿ ಮಾತನಾಡಲು ಸಾಧ್ಯವಾಗಿದೆ ಎಂದರು.
ಹೊಸ ಜವಾಬ್ದಾರಿ ಬಗ್ಗೆ ಅರಿವಿರದೆ ಜುಲೈ 4ರಂದು ದೆಹಲಿಗೆ ಹೋಗಿದ್ದೆ. ಶ್ರೀ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿ ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದು, ಇದು ಕಾರ್ಯಕರ್ತರಿಗೆ ಮತ್ತು ಇಲ್ಲಿನ ಜನತೆಗೆ ಸಂದ ಗೌರವ ಎಂದು ವಿವರಿಸಿದರು. ಆದರ್ಶ ಭಾರತದ ಪ್ರಧಾನಿಯವರ ಪರಿಕಲ್ಪನೆ ಸಾಕಾರಗೊಳಿಸಲು ನನ್ನ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದು ಆಶಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೌಲಭ್ಯ ವಿಸ್ತರಣೆಗೆ ಆದ್ಯತೆ ಕೊಡುವುದಾಗಿ ಅವರು ತಿಳಿಸಿದರು. ಸಣ್ಣ ನಗರಗಳಲ್ಲೂ ವರ್ಚುವಲ್ ಐಟಿ ಪಾರ್ಕ್ ಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ. ರಾಜ್ಯದ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯರಾದ ಶ್ರೀ ಪಿ.ಸಿ.ಮೋಹನ್, ಪುತ್ತೂರು ಶಾಸಕರು ಹಾಗೂ ಜನಾಶೀರ್ವಾದ ಯಾತ್ರೆ ಸಂಚಾಲಕರಾದ ಶ್ರೀ ಸಂಜೀವ ಮಠಂದೂರು, ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಜನಾಶೀರ್ವಾದ ಯಾತ್ರೆ ಸಹ ಸಂಚಾಲಕರಾದ ಕೇಶವಪ್ರಸಾದ್, ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಎನ್.ಆರ್.ರಮೇಶ್, ಬಿಜೆಪಿ ಬೆಂಗಳೂರು ಉತ್ತರ ಅಧ್ಯಕ್ಷರಾದ ಶ್ರೀ ನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಶ್ರೀ ವೈ.ಎನ್.ನಾರಾಯಣಸ್ವಾಮಿ ಹಾಗೂ ಬೆಂಗಳೂರು ನಗರದ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ