ಬೆಂಗಳೂರು: ದಲಿತ ಪರ ಕಾಳಜಿ, ದಲಿತೋದ್ಧಾರ, ಸಾಮಾಜಿಕ ನ್ಯಾಯ ಎಂಬ ಬರಿ ಬಾಯಿ ಮಾತಿನ ಮೂಲಕ ತುಟಿಗೆ ತುಪ್ಪ ಸವರುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ದಲಿತೋದ್ಧಾರ ಎಂಬುದು ಗಂಟಲಿಂದ ಹೊರಗೆ ಅಷ್ಟೇ. ಅವರ ಹೃದಯದಲ್ಲಿ ಎಂದೂ ಸಹ ನೈಜವಾಗಿ ಬೆಳೆದಿಲ್ಲ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ವಕ್ತಾರರೂ ಆದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಅವರು ಪಕ್ಷದಲ್ಲಿ ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿದ್ದಾರೆ. ʼಅಳಿಯನ ಕುರುಡು ಬೆಳಗಾದರೆ ಗೊತ್ತಾಗುತ್ತೆʼ ಎಂಬ ಗಾದೆಮಾತು ರಾಮಲಿಂಗಾರೆಡ್ಡಿ ಮತ್ತು ಧ್ರುವನಾರಾಯಣ್ ಸೇರಿದಂತೆ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಕತ್ತಿ ಗುರಾಣಿ ಹಿಡಿದು ಮುಂದೆ ಬರುವ ಕಾಂಗ್ರೆಸ್ ನಾಯಕರಿಗೆ ಚುನಾವಣೆಗಳು ಬಂದಾಗಲೇ ಅವರ ಬಣ್ಣಗಳು ಬಯಲಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ನಾಯಕರ ಬಗ್ಗೆ ಮಾತನಾಡುತ್ತಲೇ ಇದ್ದರೆ ನಾವೂ ರಾಷ್ಟ್ರಮಟ್ಟದ ನಾಯಕರಾಗಿ ಮಿಂಚುತ್ತೇವೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಇಡೀ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮಿಂಚು ಹುಳವಾಗಿ ಕಾಣಿಸಿಕೊಂಡು ಮಾಯವಾಗಿದೆ. ಭಾರತದ ಇತಿಹಾಸದಲ್ಲೇ ದೊಡ್ಡ ಪಕ್ಷ ಕಾಂಗ್ರೆಸ್‍ನಲ್ಲಿ ನಾಯಕರಿಲ್ಲದೇ ಕುಟುಂಬ ರಾಜಕಾರಣ ಕೇಂದ್ರೀಕೃತವಾಗಿ ಬೆಳೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ʼಹಾಳೂರಿಗೆ ಉಳಿದವನೇ ಗೌಡʼನ ದಬ್ಬಾಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರ ಹೆಮ್ಮರವಾಗಿ ಬೆಳೆದಿದ್ದಕ್ಕೆ ಇಡೀ ದೇಶದಲ್ಲೇ ಅದು ತಿರಸ್ಕಾರಕ್ಕೆ ಒಳಗಾಗಿರುವ ಪಕ್ಷವಾಗಿದೆ. ದೊಡ್ಡ ದೊಡ್ಡ ನಾಯಕರೇ ತಿಹಾರ್ ಜೈಲಿನಲ್ಲಿ ವಾಸವಾಗಿ ಹೊರ ಬಂದಿದ್ದಾರೆ. ಅವರೇನು ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೇ? ಅಧಿಕಾರ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ನೀರಿನಿಂದ ಹೊರ ತೆಗೆದ ಮೀನಿನಂತೆ ಆಗಿದ್ದಾರೆ. ಅಲ್ಲಿನ ಕಾಂಗ್ರೆಸ್ ಮುಖಂಡರು. ಹೇಗಾದರೂ ಸರಿ ಅಧಿಕಾರ ಹಿಡಿದು ದೇಶದಲ್ಲಿ ಭ್ರಷ್ಟಾಚಾರದ ಹೆಮ್ಮರವನ್ನಾಗಿಸಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚಾಮರಾಜನಗರದಲ್ಲಿ ಸೋತು ಸುಣ್ಣವಾಗಿರುವ ಮಾಜಿ ಸಂಸದ ಧ್ರುವನಾರಾಯಣ್ ಸ್ವಾರ್ಥ ರಾಜಕಾರಣಿ. ಎಂದೂ ಸಹ ದಲಿತ ಪರವಾದ ನಿಲುವನ್ನು ಹೊಂದದ ವ್ಯಕ್ತಿ. ಅವರು ಸಮುದಾಯದ, ಜಾತಿಗಳ ಅಭಿವೃದ್ಧಿಗೆ ಅವರ ಕೊಡುಗೆ ಏನು? ಅವರೊಬ್ಬ ಬಿಳಿ ಆನೆಯ ರೀತಿ. ಸೋತ ಅವರನ್ನು ಅವರ ಪಕ್ಷದಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ ಮೇಲೆ ‘ಕಾಡಿಗೆಗಣ್ಣಿನ ಚಲುವೆ ಮನೆಗೆ ಕೇಡು ತಂದಳು ಎಂಬಂತಾಗಿದೆʼ ಎಂದು ತಿಳಿಸಿದ್ದಾರೆ.
ಅವರು ಸಂಸದರಾಗಿದ್ದಾಗ ತಳ ಸಮುದಾಯದ, ದಲಿತರ ಅಭಿವೃದ್ಧಿಗೆ ಎಂದೂ ಸಹ ಸಂಸತ್ತಿನ ಅಧಿವೇಶನದಲ್ಲಿ ತುಟಿ ಬಿಚ್ಚಲಿಲ್ಲ. ಸೋತ ನಂತರ ತನ್ನ ಉಳಿವಿಗಾಗಿ ಗುಂಗಾಡಿ ಹುಳುವಿನಂತೆ ಸದ್ದು ಮಾಡಿ ಮಾಧ್ಯಗಳ ಮುಂದೆ ಅಬ್ಬರಿಸುತ್ತಿದ್ದಾರೆ ಎಂದಿದ್ದಾರೆ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆಯಿಂದ ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಅದನ್ನು ಸಹಿಸದ ಕಾಂಗ್ರೆಸ್ ನಾಯಕರು ಮತ್ತೆ ನಾವು ಮೂಲೆ ಸೇರುವುದು ನಿಶ್ಚಿತ ಎಂದು ಈಗಿನಿಂದಲೇ ಸುಳ್ಳುಗಳನ್ನು ಬಿತ್ತುತ್ತ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಜನರೇನು ದಡ್ಡರಲ್ಲ. ಸಾಮಾಜಿಕ, ರಾಜಕೀಯ ಪ್ರಜ್ಞೆ ಅವರಲ್ಲಿ ಆಳವಾಗಿ ಬೆಳೆದು ಹೆಮ್ಮರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ಪಕ್ಷದಲ್ಲಿ ಇದ್ದ ನನಗೆ ಆ ಪಕ್ಷದ ಆಂತರಿಕ ಮನಸ್ಥಿತಿಯ ಬಗ್ಗೆ ಅರಿವಿದೆ. ಅಲ್ಲಿಯ ಉನ್ನತ ನಾಯಕರಲ್ಲೇ ಜಿಜ್ಞಾಸೆಗಳಿವೆ. ಭಿನ್ನಾಭಿಪ್ರಾಯಗಳಿವೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ಸಹಿಸಿಕೊಳ್ಳುತ್ತಿಲ್ಲ. ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ ಭಾವಿ ಸಿಎಂಗಾಗಿ ಗುದ್ದಿಗೆ ಗುದ್ದಾಟ ಬೂದಿ ಮುಚ್ಚಿದ ಕೆಂಡದಂತಿದೆ. ಸಿದ್ದರಾಮಯ್ಯನವರನ್ನು ಕಂಡರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಗದು. ಮೂಲ-ವಲಸಿಗ ಮುಖಂಡರು ಎಂಬ ಭಾವನೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಹೋಗಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಸಬ್ ಕಾ ಸಾಥ್; ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಾತಿನಂತೆ ದೇಶದ ಎಲ್ಲರನ್ನೂ ಒಳಗೊಂಡ ಪಕ್ಷವಾಗಿದೆ. ಪ್ರಧಾನಿ ಮೋದಿಜಿ ಒಬ್ಬ ಹಿಂದುಳಿದ ನಾಯಕರು. ಅವರ ಜಾತಿಯ ಜನ ಇಡೀ ದೇಶದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯಲ್ಲಿದ್ದಾರೆ. ಅಂತಹ ದಕ್ಷ, ಪ್ರಾಮಾಣಿಕ ವ್ಯಕ್ತಿ ಇಂದು ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ಅವರ ಕೊಡುಗೆ ಅನನ್ಯ. ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 60 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಶ್ರೀ ನರೇಂದ್ರ ಮೋದಿ ಅವರು ಕೇವಲ 7 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ ನಾಯಕರಿಗೆ ಹೊಟ್ಟೆಯಲ್ಲಿ ಚಿಟ್ಟೆಬಿಟ್ಟಂತಾಗಿದೆ ಎಂದಿದ್ದಾರೆ.
ರಾಮಲಿಂಗಾರೆಡ್ಡಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಾನು ಮೂಲೆಗುಂಪು ಆಗುತ್ತೇನೆ ಎಂಬ ಭಯ ಅವರನ್ನು ಆವರಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಮಧ್ಯೆ ಎಲ್ಲಿ ನಾನು ಕಳೆದು ಹೋಗುತ್ತೇನೋ ಎನ್ನುವ ಭಯ ಆವರಲ್ಲಿ ಕಾಡತೊಡಗಿದೆ. ಬೆಂಗಳೂರು ಬಿಟ್ಟು ಹೊರ ಬಂದರೆ ರಾಮಲಿಂಗಾರೆಡ್ಡಿ ಯಾರು ಎಂದು ಜನರಿಗೆ ಗೊತ್ತೇ ಇಲ್ಲ. ಹೀಗಾಗಿ ಅವರು ತಮ್ಮ ಉಳಿವಿಗಾಗಿ ಬಿಜೆಪಿಯ ರಾಷ್ಟ್ರೀಯ ನಾಯಕರನ್ನು ಟೀಕಿಸುವ ಮೂಲಕ ಉಳಿವಿಗಾಗಿ ಹೋರಾಟ ಆರಂಭಿಸಿದ್ದಾರೆ. ಅವರೊಬ್ಬ ಹೊಂದಾಣಿಕೆಯ ರಾಜಕಾರಣಿ. ಅನುಕೂಲಕರ ವಾತಾವರಣದಲ್ಲಿ ಬೆಳೆಯುವವರು. ಅವರ ಹಿರಿತನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷರಾಗಬೇಕಿತ್ತು. ಆದರೆ ಇಂದು ಅವರು ಮೂರನೇ ದರ್ಜೆಯ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ತಮಗೆ ಅಧಿಕಾರ ಸಿಗದೇ ಇದ್ದಾಗ ತಮ್ಮನ್ನು ಸುತ್ತುವರೆದಿದ್ದ ಹಿತೈಷಿಗಳನ್ನು ಬಾವಿಗೆ ತಳ್ಳಿ ಆಳ ನೋಡಿದ್ದು ಯಾರಿಗೂ ಗೊತ್ತಿಲ್ಲವೇ? ಅವರೊಬ್ಬ ಅನುಕೂಲ ಸಿಂಧು ರಾಜಕಾರಣಿ. ‘ಜಡ್ಡುಗಟ್ಟಿದ ಕಾಂಗ್ರೆಸ್‍ಗಿಂತ ಬಿಜೆಪಿ ಹೆಚ್ಚು ಚುರುಕಾಗಿ ತಳವರ್ಗದ ಸಮಸ್ಯೆಗಳಿಗೆ ಸ್ಪಂದಿಸಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವಿಧಾನಸಭೆಯ ನಂತರ ಸಮ್ಮಿಶ್ರ ಸರ್ಕಾರ ರಚನೆಯಾದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡಕ್ಕೂ ದಲಿತ ಸಿಎಂ ಮಾಡಬೇಕೆಂಬ ಜ್ಞಾನೋದಯವಾಗಲಿಲ್ಲ. ಸಿದ್ದರಾಮಯ್ಯನವರೂ ಚಾತುರ್ವರ್ಣ ಪರಿಪಾಲಕರಂತೆ ಏಣಿಶ್ರೇಣಿಯ ಅಡಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ಶೂದ್ರರ ನಂತರ ದಲಿತರು ಎಂಬಂತೆ ತಾವೇ ಅಧಿಕಾರ ಹಿಡಿದುಬಿಟ್ಟರು. ಆದರೆ ಕೇಂದ್ರದ ಮೋದಿ ಸರ್ಕಾರ ತಮ್ಮ ಸಂಪುಟದಲ್ಲಿ ದಲಿತರಿಗೆ ಹೆಚ್ಚು ಸಚಿವ ಸ್ಥಾನ ನೀಡುವ ಮೂಲಕ ತಳ ಸಮುದಾಯದ ಅಭಿವೃದ್ಧಿಗೆ ಬದ್ಧ ಎಂದು ತೋರಿಸಿಕೊಟ್ಟಿದೆ ಎಂದು ತಿಳಿಸಿದ್ದಾರೆ.
ಈಗಲಾದರೂ ಕಾಂಗ್ರೆಸ್ ನಾಯಕರು ಮಾತನಾಡುವುದನ್ನು ನಿಲ್ಲಿಸಿ 60 ವರ್ಷ ಅವರು ಮಾಡದ ಕೆಲಸವನ್ನು ಮಾಡಿ ತೋರಿಸಲಿ. ಮತ ಕೊಟ್ಟ ಮತದಾರರ ಋಣ ತೀರಿಸಲಿ. ಅದು ಬಿಟ್ಟು ಹಳೆಯ ವಿಚಾರಗಳನ್ನೇ ಕೆದಕಿ ಪ್ರಚಾರ ಪಡೆದರೆ ಲಾಭವಿಲ್ಲ. ನೈಜ ದಲಿತೋದ್ಧಾರ ಮಾಡಲು ಇನ್ನಾದರೂ ಕಾಂಗ್ರೆಸ್ ಮುಖಂಡರು ಕಾರ್ಯೋನ್ಮುಖರಾಗಲಿ ಎಂದು ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ