Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121
ಬಂದ್ ಕರೆಗೆ ಸ್ಪಂದಿಸದ ರೈತರಿಗೆ ಧನ್ಯವಾದ ಸಮರ್ಪಣೆ ; ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ: ಸಿ. ಟಿ. ರವಿ – I am BJP
May 6, 2025

ಬಂದ್ ಕರೆಗೆ ಸ್ಪಂದಿಸದ ರೈತರಿಗೆ ಧನ್ಯವಾದ ಸಮರ್ಪಣೆ ; ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ: ಸಿ. ಟಿ. ರವಿ

ಬೆಂಗಳೂರು : ಕೃಷಿ ಮಸೂದೆ ನೆಪದಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ, ಪಟ್ಟಭದ್ರ ಹಿತಾಸಕ್ತಿಗಳ, ಅರಾಜಕತೆ ಸೃಷ್ಟಿಸುವ, ಬಿಜೆಪಿ ವಿರೋಧಿಗಳ ಷಡ್ಯಂತ್ರದ ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ. ರವಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆ ಹೆಸರಿನಲ್ಲಿ 3 ಪ್ರಮುಖ ಕೃಷಿ ಮಸೂದೆಗಳನ್ನು ವಿರೋಧಿಸಿ 19ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, 100ಕ್ಕೂ ಹೆಚ್ಚು ಸಂಘಟನೆಗಳು ದೇಶದ ಉದ್ದಗಲಕ್ಕೆ ಕರೆಕೊಟ್ಟ ಬಂದ್‍ಗೆ ನಿರೀಕ್ಷಿತ ಪ್ರಮಾಣದಲ್ಲಿ ರೈತರ ಬೆಂಬಲ ಸಿಗದೆ ವಿಫಲಗೊಳಿಸಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕೃಷಿ ಸುಧಾರಣಾ ಕ್ರಮಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ. ಶ್ರೀ ಮೋದಿಯವರ ಪ್ರಾಮಾಣಿಕತೆ ಮತ್ತು ಕೃಷಿ ಕ್ಷೇತ್ರದಲ್ಲಿ ಸುಧಾರಣೆ ಆಗಬೇಕೆಂಬ ಅವರ ಹಂಬಲವನ್ನು ರೈತರು ಅರ್ಥ ಮಾಡಿಕೊಂಡಿದ್ದಾರೆ. ರೈತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಬಂದ್ ವೇಳೆ ಒಂದು ಹಕ್ಕಿಯೂ ಹಾರಾಡದಂಥ ವಾತಾವರಣ ಇರಬಹುದೇ ಎಂಬ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಕೆಲವು ಸಂಘಟನೆಗಳು ಚಳವಳಿ ನಡೆಸಿವೆ. ಜನಸಾಮಾನ್ಯರು, ರೈತರು ಈ ಬಂದ್ ಬೆಂಬಲಿಸಿಲ್ಲ. ಅರಾಜಕತೆ ಸೃಷ್ಟಿಯಿಂದ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಬಂದ್ ಸಂಘಟಕರು ಮನವರಿಕೆ ಮಾಡಿಕೊಳ್ಳಬಹುದೆಂದು ಆಶಿಸಿದರು.

3 ಕೃಷಿ ಮಸೂದೆಗಳು ರೈತಪರವಾಗಿವೆ. ರೈತ ವಿರುದ್ಧವಾದ ಅಂಶಗಳೇನಿವೆ ಎಂದು ಕೃಷಿ ಸಚಿವರು ಸೇರಿ ಎಲ್ಲರೂ ಕಳೆದೊಂದು ವರ್ಷದಿಂದ ಕೇಳುತ್ತಲೇ ಬಂದಿದ್ದಾರೆ. ತಿದ್ದುಪಡಿಗೂ ಸಿದ್ಧ ಎಂದಿದ್ದೇವೆ. ರೈತರಿಗೆ ಆರ್ಥಿಕ ಬಲ ನೀಡುವ ಮಸೂದೆಗಳು ಇವಾಗಿದ್ದು, ಈ ಸುಧಾರಣೆಗೆ ಅಡ್ಡಗಾಲು ಹಾಕಲು ಷಡ್ಯಂತ್ರವನ್ನು ಕೆಲವರು ಪೂರ್ವಾಗ್ರಹ ಪೀಡಿತರಾಗಿ, ಇನ್ನೂ ಕೆಲವರು ಅರಿವಿಲ್ಲದೆ ಹಾಗೂ ಮತ್ತೆ ಹಲವರು ಬಿಜೆಪಿಯನ್ನು ವಿರೋಧಿಸುವ ಉದ್ದೇಶದಿಂದ ವಿರೋಧಿಸುತ್ತಿದ್ದಾರೆಯೇ ಹೊರತು ರೈತರು ಇದನ್ನು ವಿರೋಧಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯನ್ನು ರೈತವಿರೋಧಿ ಎಂದು ಬಿಂಬಿಸುವ ಷಡ್ಯಂತ್ರ ಇದರ ಹಿಂದಿದೆ. ಬಿಜೆಪಿ ದಲಿತ ವಿರೋಧಿ ಎಂದು ಬಿಂಬಿಸಲು ಹೊರಟು ಸೋತರು. ಅಸಹಿಷ್ಣುತೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೂ ಮುಂದಾದರು. ಪ್ರಶಸ್ತಿ ವಾಪಸ್‍ನ ನಾಟಕ ನಡೆಯಿತು. ಸಿಎಎ ಹೆಸರಿನಲ್ಲಿ ಅರಾಜಕತೆ ಸೃಷ್ಟಿಗೆ ಯತ್ನ ನಡೆಯಿತು. ಕೃಷಿ ಎಂದರೆ ಏನೆಂದೇ ತಿಳಿಯದವರೂ ಈ ಮಸೂದೆಗಳ ವಿರುದ್ಧ ಚಳವಳಿಗೆ ಇಳಿದಿದ್ದನ್ನೂ ಕಂಡಿದ್ದೇವೆ ಎಂದು ವಿವರಿಸಿದರು.

ಬಿಜೆಪಿ ರೈತರ ವಿರೋಧಿ ಆಗಿದ್ದರೆ ಸ್ವಾಮಿನಾಥನ್ ವರದಿಯ ಬಹುತೇಕ ಅಂಶಗಳನ್ನು ಅನುಷ್ಠಾನಕ್ಕೆ ತರುತ್ತಿತ್ತೇ ಎಂದು ಪ್ರಶ್ನಿಸಿದ ಅವರು, ರೈತರ 28 ಉತ್ಪನ್ನಗಳ ಬೆಂಬಲ ಬೆಲೆಯನ್ನು ಶ್ರೀ ಮೋದಿ ಅವರ ನೇತೃತ್ವದ ಸರಕಾರ ಹೆಚ್ಚಿಸಿದೆ. ಆದರೆ, ಹಿಂದೆ ಬೆಂಬಲ ಬೆಲೆಗೆ (ಎಂಎಸ್‍ಪಿ) ಸಂಬಂಧಿಸಿ ಕಾಂಗ್ರೆಸ್ ಸರಕಾರವು ಬಜೆಟ್‍ನಲ್ಲಿ 40 ರಿಂದ 45 ಸಾವಿರ ಕೋಟಿ ನೀಡುತ್ತಿತ್ತು. ಈಗ ಈ ವರ್ಷದಲ್ಲಿ 1.21 ಲಕ್ಷ ಕೋಟಿ ರೂಪಾಯಿಯಡಿ ರೈತರ ಉತ್ಪನ್ನ ಖರೀದಿ ನಡೆದಿದೆ. ರಸಗೊಬ್ಬರ ಸಬ್ಸಿಡಿಗೆ ಹಿಂದೆ ಕಾಂಗ್ರೆಸ್ ಸರಕಾರ 30ರಿಂದ 32 ಸಾವಿರ ಕೋಟಿ ನೀಡುತ್ತಿತ್ತು. ಈಗ 79 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದು ವಿವರಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇರಲಿಲ್ಲ. ಈಗ 9.75 ಕೋಟಿ ಕೃಷಿಕರಿಗೆ ವರ್ಷಕ್ಕೆ 58 ಸಾವಿರ ಕೋಟಿ ಹಣವನ್ನು ತಲಾ 6 ಸಾವಿರ ರೂಪಾಯಿಯಂತೆ ನೀಡಲಾಗುತ್ತಿದೆ. ರಸಗೊಬ್ಬರ ಸಬ್ಸಿಡಿ ಹೆಚ್ಚಳ, ಕಿಸಾನ್ ಸಮ್ಮಾನ್ ಯೋಜನೆಯಡಿ ನೇರ ಹಣ ಬಿಡುಗಡೆ, ಸಾಯಿಲ್ ಹೆಲ್ತ್ ಕಾರ್ಡ್ ಯೋಜನೆ, ಫಸಲ್ ಬಿಮಾ ಯೋಜನೆಯಂಥ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಜಾಣಮರೆವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ನುಡಿದರು. ಸುಧಾರಣೆ ತರುವುದೇ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ಕಾಂಗ್ರೆಸ್ ಮತ್ತು ಇತರ ರಾಜಕೀಯ ಪಕ್ಷಗಳಿಂದ ನಡೆದಿದೆ ಎಂದರು.

5 ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ದೂಳೀಪಟವಾದ ನಂತರ ಕಾಂಗ್ರೆಸ್ ಹೋರಾಟಕ್ಕೆ ಹೊಸದೇನನ್ನಾದರೂ ಹುಡುಕಬಹುದು ಎಂದರು. ಉತ್ಪನ್ನಗಳನ್ನು ಎಲ್ಲಿಯಾದರೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂಬುದು ರೈತ ವಿರೋಧಿ ಅಂಶವೇ? ಬೆಲೆ ಖಾತರಿಗೆ ಒಪ್ಪಂದ ಮಾಡಿಕೊಳ್ಳುವುದು ರೈತ ವಿರೋಧಿಯೇ? ಸುಧಾರಣೆಯ ಲಾಭ ರೈತರಿಗೆ ಸಿಗಬಾರದೇ? ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದು ಬರಬಾರದೇ ಎಂದು ಪ್ರಶ್ನಿಸಿದರು.

ಕೃಷಿಕರು ಮೌಲ್ಯವರ್ಧನೆ ಮಾಡಿ, ಉದ್ಯೋಗ ಸೃಷ್ಟಿಸಿ ತನ್ನ ಆದಾಯವನ್ನು ಎರಡು ಪಟ್ಟು ಮಾಡುವುದು ತಪ್ಪಾ ಎಂದು ಕೇಳಿದರು. ಫಾರ್ಮರ್ಸ್ ಪ್ರೊಡ್ಯೂಸರ್ ಆರ್ಗನೈಸೇಶನ್ ಮೂಲಕ ಕೃಷಿಯನ್ನು ಉದ್ದಿಮೆಯನ್ನಾಗಿ ಪರಿವರ್ತಿಸಿ ಮೌಲ್ಯವರ್ಧನೆ ಮಾಡುವ ಅವಕಾಶವನ್ನು ರೈತರಿಗೇ ನೀಡಲಾಗಿದೆ. ರೈತರನ್ನು ಮುಗಿಸಲು ರೈತರ ಹೆಸರಿನಲ್ಲೇ ಹೋರಾಟ ಮಾಡಲು ಇವರೆಲ್ಲರೂ ಮುಂದಾಗಿದ್ದಾರೆ ಎಂದರು.
60 ವರ್ಷಕ್ಕಿಂತ ಹೆಚ್ಚು ವಯಸ್ಸಾದ ರೈತರನ್ನು ಅಟಲ್ ಪಿಂಚಣಿ ಯೋಜನೆಯಡಿ ತಂದು ಅವರಿಗೂ ಪಿಂಚಣಿ ಸೌಲಭ್ಯ ನೀಡುವ ಚಿಂತನೆಯನ್ನು ನಮ್ಮ ಸರಕಾರ ಮಾಡುತ್ತಿದೆ. ಪಿಎಫ್ ಹೊರತಾದ ಅಸಂಘಟಿತ ಕೃಷಿ ಕಾರ್ಮಿಕರಿಗೂ ಪಿಂಚಣಿ, ವಿಮಾ ಸೌಕರ್ಯ ನೀಡಲು ಶ್ರೀ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರಕಾರ ಯೋಜಿಸಿದೆ. ಹಾಗಿದ್ದರೆ ನಾವು ಕೃಷಿಕರ ವಿರೋಧಿ ಆಗಲೇ ಸಾಧ್ಯವೇ ಎಂದು ಕೇಳಿದರು.

ಈಗ ನಾವು ಅದಾನಿ ಪರ, ಅಂಬಾನಿ ಪರ ಎನ್ನುತ್ತಿದ್ದಾರೆ. ಅದಾನಿ, ಅಂಬಾನಿ ನಿನ್ನೆ ಮೊನ್ನೆ ಹುಟ್ಟಿದವರೇ? ಶ್ರೀ ಮೋದಿಯವರು ಬಂದ ಮೇಲೆ ಅದಾನಿ, ಅಂಬಾನಿ ಶ್ರೀಮಂತರಾದರೇ ಎಂದು ಕೇಳಿದರು. ನಮ್ಮ ಯೋಜನೆಗಳು ಅದಾನಿ, ಅಂಬಾನಿ ಪರ ಇಲ್ಲ. ರೈತರು, ಬಡವರು, ಕೃಷಿ ಕೂಲಿ ಕಾರ್ಮಿಕರ ಪರವಾಗಿವೆ ಎಂದು ವಿವರಿಸಿದರು.

ಯುಪಿಎ 10 ವರ್ಷ ಕಾಲದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ, ಫಸಲ್ ಬಿಮಾ ಯೋಜನೆ ಇತ್ತಾ, ರಸಗೊಬ್ಬರಕ್ಕೆ 1,700 ರೂಪಾಯಿ ಸಬ್ಸಿಡಿ ನೀವು ಕೊಟ್ಟಿದ್ದೀರಾ ಎಂದು ಸಿದ್ದರಾಮಯ್ಯರನ್ನು ಕೇಳಿದರಲ್ಲದೆ, ಸಂಸತ್ತಿನಲ್ಲಿ ಚರ್ಚೆ ಮಾಡದೆ ಕಾಂಗ್ರೆಸ್ ಓಡಿ ಹೋಯಿತು. ರೈತರಿಗೆ ಬ್ರಿಟಿಷ್ ಕಾಯ್ದೆಗಳಿಂದ ಬಿಡುಗಡೆ ಭಾಗ್ಯವನ್ನು ಬಿಜೆಪಿ ನೀಡುತ್ತಿದೆ ಎಂದರು.

ರೈತ ಮುಖಂಡ ನಂಜುಂಡಸ್ವಾಮಿಯವರು ರೈತರು ಉತ್ಪನ್ನಗಳನ್ನು ಎಲ್ಲ ಕಡೆ ಮಾರಾಟ ಮಾಡಲು ಅವಕಾಶ ಕೊಡಿ ಎಂದು ಕೇಳಿದ್ದರು. ಅವರ ಹಳೆಯ ಭಾಷಣ ಮರೆತಂತೆ ಕುರುಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ರೈತ ನಾಯಕರು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು. ಕೆಲವರಿಗೆ ಬಿಜೆಪಿ ವಿರೋಧಿಸಿದರೆ ಮಾತ್ರ ತಿಂದ ಅನ್ನ ಅರಗುತ್ತದೆ ಎಂದರು.

ಎಪಿಎಂಸಿಯಲ್ಲಿ ಉತ್ತಮ ದರ ಸಿಗುತ್ತಿದ್ದರೆ, ಶೋಷಣೆ ಇಲ್ಲದಿದ್ದರೆ ರೈತರು ಉತ್ಪನ್ನಗಳನ್ನು ಚರಂಡಿಗೆ ಸುರಿಯುವ ಸ್ಥಿತಿ ಬರುತ್ತಿತ್ತೇ, ಉತ್ತಮ ಬೆಲೆ ಸಿಕ್ಕಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ ಎಂದೂ ಅವರು ಕೇಳಿದರು. ರೈತರ ಆದಾಯ ದ್ವಿಗುಣ ಆಗಬಾರದೇ ಎಂದು ಪ್ರಶ್ನಿಸಿದರು.

ಸಿಎಎ, ಅಸಹಿಷ್ಣುತೆ ಮತ್ತಿತರ ವೇಷಧರಿಸಿ ಹೋರಾಟಗಳಲ್ಲಿ ವಿಫಲವಾದವರು ಪೂತನಿ ತರದಲ್ಲಿ ಹೊಸ ವೇಷ ಧರಿಸಿ ಬರುತ್ತಿದ್ದಾರೆ. ಹೋರಾಟಕ್ಕೆ ಬಂದವರಿಗೆ ಉಳುಮೆ ಮಾಡಲು ಬರುತ್ತದೆಯೇ, ಭೂಮಿತಾಯಿ ಸೇವೆ ಮಾಡುವ ರೈತರು ಮುಷ್ಕರದಲ್ಲಿ ಭಾಗವಹಿಸಿದ್ದರೇ ಎಂದು ಕೇಳಿದರು. ಇಂದು ಬಂದವರಲ್ಲಿ ಕೆಲವರು ಪೂರ್ವಗ್ರಹ ಪೀಡಿತರು, ಇನ್ನೂ ಕೆಲವರಿಗೆ ತಪ್ಪು ಮಾಹಿತಿ ಕೊಡಲಾಗಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

ಉತ್ಪಾದನೆ, ಸರಬರಾಜಿನ ವ್ಯತ್ಯಾಸ ಹಾಗೂ ಕೋವಿಡ್ ಕಾರಣಕ್ಕೆ ಜಗತ್ತಿನಾದ್ಯಂತ ಬೆಲೆ ಏರಿಕೆ ಆಗಿದೆ. ಯಾವ ಕಾಲಕ್ಕೂ ಸಿಗದ ಬೆಲೆ ಅಡಿಕೆಗೆ ಸಿಕ್ಕಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ನಮ್ಮ ಸರಕಾರ ರೈತರಿಗೆ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದೆ. ಯುಪಿಎ 10 ವರ್ಷಗಳ ಅವಧಿಯಲ್ಲಿ 54 ಸಾವಿರ ಕೋಟಿ ಸಾಲದ ಬಡ್ಡಿ ಮನ್ನಾ ಆಗಿತ್ತು. ಅದರಲ್ಲಿ 18 ಸಾವಿರ ಕೋಟಿ ಮೊತ್ತವನ್ನು ನಕಲಿ ಖಾತೆಗಳಿಗೆ ಹಾಕುವ ಮೂಲಕ ಹಣ ದುರ್ಬಳಕೆ ಆಗಿತ್ತು ಎಂಬುದೂ ಪತ್ತೆಯಾಗಿದೆ. ಈಗ ಹಣ ನೇರವಾಗಿ ರೈತರ ಖಾತೆಗೆ ಹೋಗುತ್ತಿದೆ ಎಂದು ತಿಳಿಸಿದರು.

ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ಅವರು ಸುಳ್ಳುರಾಮಯ್ಯ ಆಗಿದ್ದಾರೆ. ವಯಸ್ಸಾದ ಮೇಲೆ ಕಣ್ಣಿನ ಪೊರೆ ಜಾಸ್ತಿ ಆಗುತ್ತಂತೆ. ಅವರಿಗೆ ಯಾವ್ಯಾವ ಪೊರೆ ಬೆಳೆದಿದೆಯೋ ಗೊತ್ತಿಲ್ಲ. ಅದೇ ಕಾರಣಕ್ಕೆ ತಾಲಿಬಾನ್ ಮತ್ತು ಆರೆಸ್ಸೆಸ್ ಒಂದೇ ತರ ಕಾಣುತ್ತಿದೆ ಎಂದು ಆಕ್ಷೇಪಿಸಿದರು. ಪೊರೆ ಸರಿಸಿದರೆ ತಾಲಿಬಾನ್ ಏನೆಂದು ಗೊತ್ತಾಗುತ್ತದೆ. ತಾಲಿಬಾನ್ ಇದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ ಎಂದು ಕೇಳಿದರು.

ಅಕಸ್ಮಾತ್ ತಾಲಿಬಾನ್ ಸ್ಥಿತಿ ಇಲ್ಲಿ ಇದ್ದರೆ ಪಂಚೆ ಮಾತ್ರ ನೇತಾಡುತ್ತಿರಲಿಲ್ಲ. ಅವರೂ ನೇತಾಡುವ ಸ್ಥಿತಿ ಇರುತ್ತಿತ್ತು. ತಾಲಿಬಾನ್ ಏನು, ಬಿಜೆಪಿ ಏನು, ಆರೆಸ್ಸೆಸ್ ಏನು ಎಂದು ಅರ್ಥ ಮಾಡಿಕೊಳ್ಳದಷ್ಟು ಏನಾದರೂ ವ್ಯತ್ಯಾಸ ಆಗಿದೆಯೇ ಎಂದು ಪ್ರಶ್ನೆ ಮುಂದಿಟ್ಟರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ನವರು ಎಸ್‍ಡಿಪಿಐ, ಪಿಎಫ್‍ಐ, ಎಂಐಎಂ ಇವರೆಲ್ಲ ಯಾರಿಗೆ ನೆಂಟರು? ನಮಗಂತೂ ಅಲ್ಲ. ನಾವು ಯಾವತ್ತೂ ಮತಕ್ಕಾಗಿ ರಾಜಕಾರಣ ಮಾಡಿಲ್ಲ ಎಂದರು. ತುಕಡೇ ಗ್ಯಾಂಗ್ ಜೊತೆ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಳಿದರು.

ಕಾಂಗ್ರೆಸ್ಸಿಗರು ಕೋವಿಡ್ ವಿಷಯದಲ್ಲಿ ಚೀನಾವನ್ನು ಯಾವತ್ತಾದರೂ ಟೀಕಿಸಿದ್ದಾರಾ ಎಂದು ಕೇಳಿದರಲ್ಲದೆ, 84 ಕೋಟಿ ಜನರಿಗೆ 20 ತಿಂಗಳು ಉಚಿತ ರೇóಶನ್ ನೀಡುವ ಕೆಲಸ ಯಾವ ಕಾಲದಲ್ಲಾದರೂ ನಡೆದಿದೆಯೇ, 100 ಕೋಟಿ ಜನರಿಗೆ ವರ್ಷದೊಳಗೆ ವ್ಯಾಕ್ಸಿನ್ ಹಾಕುವ ಕೆಲಸ ಯಾವ ಸರಕಾರವಾದರೂ ಮಾಡಿತ್ತೇ ಎಂದು ಕೇಳಿದರು.

ಬಿಜೆಪಿ- ಆರೆಸ್ಸೆಸ್ ಇರುವ ಕಾರಣಕ್ಕೆ ದೇಶ ಸ್ವತಂತ್ರವಾಗಿ ಉಳಿದಿದೆ. ಆರೆಸ್ಸೆಸ್‍ನ ಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರು, ಕಾಂಗ್ರೆಸ್‍ನ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಕಾಂಗ್ರೆಸ್ಸಿಗರು ಟೀಕಿಸುವ ಮೊದಲು ಅವರದೇ ಚರಿತ್ರೆಯನ್ನು ಅಭ್ಯಸಿಸಲಿ ಎಂದು ತಿಳಿಸಿದರು. ಜಂಗಲ್ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೊದಲು ಹೆಡಗೇವಾರ್ ಅವರು ತಮ್ಮ ಸರಸಂಘಚಾಲಕ ಸ್ಥಾನದಿಂದ ಬಿಡುಗಡೆ ಹೊಂದಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.

1962ರಲ್ಲಿ ಚೀನಾ ಜೊತೆ ಯುದ್ಧದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಆರೆಸ್ಸೆಸ್‍ನವರೇ ನೆರವಾಗಿದ್ದರು. ಅದಕ್ಕಾಗಿ ಪೊಲೀಸ್ ಅಲ್ಲದ, ಸ್ಕೌಟ್ –ಗೈಡ್ಸ್ ಅಲ್ಲದ, ಎನ್‍ಸಿಸಿಯೂ ಅಲ್ಲದ, ಸೈನಿಕರೂ ಅಲ್ಲದ ಆರೆಸ್ಸೆಸ್‍ನವರಿಗೆ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲು ನೆಹರೂ ಜಮಾನಾದಲ್ಲಿ 63-64ರಲ್ಲೇ ಅವಕಾಶ ನೀಡಲಾಗಿತ್ತು ಎಂದು ನೆನಪಿಸಿದರು. ಆರೆಸ್ಸೆಸ್ ಸ್ವಯಂಸೇವಕ ಪ್ರಧಾನಿ ಆದ ಕಾರಣಕ್ಕೇ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದಾರೆ ಎಂದರು.

ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದಾಗ ಅತಿ ಹೆಚ್ಚು ಸಂಖ್ಯೆಯಲ್ಲಿ ಜೈಲಿಗೆ ಹೋಗಿ ಸಂಕಷ್ಟಕ್ಕೆ ಒಳಗಾದವರು ಬಿಜೆಪಿ, ಆರೆಸ್ಸೆಸ್‍ನವರು. ಆದರೆ, ಕಾಂಗ್ರೆಸ್‍ನವರು ಇಂದಿರಾರನ್ನು ಹೊಗಳಿಕೊಂಡೇ ಕಾಲ ಕಳೆದರು. ನಮ್ಮಿಂದ ಸ್ವಾತಂತ್ರ್ಯ ಉಳಿಯಿತು. ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು ಎಂದು ಕೇಳಿದರು. ನಿಮ್ಮ ಮಕ್ಕಳು, ಮೊಮ್ಮಕ್ಕಳು ಸುರಕ್ಷಿತವಾಗಿರಲು ಆರೆಸ್ಸೆಸ್ ಮಜಬೂತಾಗಿ ಇರಬೇಕೆಂದು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ತಿಳಿಸಿದರು.

ವಯಸ್ಸಾಗುತ್ತಿದ್ದಂತೆ ಪಕ್ವತೆ ಬರಬೇಕು. ಬುದ್ಧಿ ಭ್ರಮಣೆಗೆ ಒಳಗಾದಂತೆ ಆಡಬಾರದು. ದೇಶಭಕ್ತಿ, ಸೇವೆ, ಸಮರ್ಪಣೆಯಿಂದಲೇ ಬದುಕು ನಡೆಸುವ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ನೈತಿಕ ಮೌಲ್ಯ ಪ್ರತಿಷ್ಠಾಪಿಸುವ ಸಂಘ ಎಲ್ಲಿ, ಮಧ್ಯಪ್ರಾಚ್ಯದ 7ನೇ ಶತಮಾನದ ಬರ್ಬರತೆಯನ್ನೇ ಇವತ್ತಿಗೂ ತರಲು ಹೊರಟು, ಮಹಿಳಾ ಸ್ವಾತಂತ್ರ್ಯವನ್ನು ಕಿತ್ತುಕೊಂಡು ತನ್ನನ್ನು ಪ್ರಶ್ನಿಸಿದವರು, ವಿರೋಧಿಸಿದವರನ್ನು ಹತ್ಯೆ ಮಾಡುವ ತಾಲಿಬಾನ್ ಎಲ್ಲಿ ಎಂದು ಕೇಳಿದರು. ಅಕಸ್ಮಾತ್ ಇವತ್ತು ಬಿಜೆಪಿ ಸರಕಾರವು ತಾಲಿಬಾನ್ ಆಗಿದ್ದರೆ ಪ್ರಶ್ನೆ ಮಾಡುತ್ತಿರುವವರೆಲ್ಲರೂ ಬದುಕಿರುತ್ತಿದ್ದರೇ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಶ್ರೀ ಎನ್. ರವಿಕುಮಾರ್, ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಹಾಗೂ ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ನೆ.ಲ.ನರೇಂದ್ರಬಾಬು ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *