ಬೆಂಗಳೂರು: ‘ಕೆಲವರು ಸೈನ್ಯಕ್ಕೆ ಸೇರುವವರು ಹೊಟ್ಟೆ ಪಾಡಿಗಾಗಿ ಸೇರುತ್ತಾರೆʼ ಎಂದು ಮಾಜಿ ಮುಖ್ಯಮಂತ್ರಿಗಳು ಸೈನಿಕರನ್ನೇ ಅವಮಾನಿಸಿದ್ದರು. ಈ ದೇಶದ ಸೈನಿಕ ಕಷ್ಟಗಳ ಬಗ್ಗೆ ಅವರಿಗೆ ಅರಿವಿಲ್ಲ. ಸೈನಿಕರಲ್ಲಿ ದೇಶ ಭಕ್ತಿಯಿರುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ವ್ಯಕ್ತಿಗಳಿಗೆ ಸವಾಲು ಹಾಕಿ ಕೇಳುತ್ತೇನೆ .ಒಂದು ಕೋಟಿ ರೂಪಾಯಿ ಸಂಬಳ ಕೊಟ್ಟರೂ ಇವರ ಮಕ್ಕಳನ್ನು ಸೇನೆಗೆ ಸೇರಿಸಲಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಚಿಕ್ಕಮಗಳೂರು ಶಾಸಕರಾದ ಸಿ.ಟಿ.ರವಿ ಅವರು ತಿಳಿಸಿದ್ದಾರೆ.
ಸೈನ್ಯಕ್ಕೆ ಸೇರಬೇಕಾದರೆ ದಿಲ್ಲು-ಧಮ್ಮು ಇರಬೇಕು. ಕೆಲ ಸಮಾಜಘಾತಕರು ಹೊಟ್ಟೆಪಾಡಿನ ವೃತ್ತಿ ಮಾಡುವ ಹೆಸರಲ್ಲಿ ತಲೆ ಹಿಡಿಯುವ ಕೂಡಾ ಕೆಲಸವನ್ನು ಮಾಡುತ್ತಾರೆ. ಸೈನ್ಯಕ್ಕೆ ಸೇರುವವರಿಗೆ ದೇಶ ಭಕ್ತಿಯಿರುತ್ತದೆ. ʼನಾನು ದೇಶಕ್ಕಾಗಿ ಪ್ರಾಣಕೊಡಲು ತಯಾರಿರುತ್ತಾರೆʼ ಅಂತಹವರನ್ನೂ ಅನುಮಾನಿಸಿದ ಇಂತಹವರು ಈ ಸಮಾಜದಲ್ಲಿರುವಾಗ ಯುಪಿಎಸ್‍ಸಿಯನ್ನು ಅನುಮಾನಿಸುವುದರಲ್ಲಿ ಅತಿಶಯೋಕ್ತಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಆರ್‍ಎಸ್‍ಎಸ್‍ಗೆ ದೇಶ ಶಕ್ತಿಶಾಲಿಯಾಗಬೇಕೆಂಬುದೇ ಅಜೆಂಡ. ಭಾರತ ವಿಶ್ವಗುರುವಾಗಬೇಕು ಎಂಬುದು ಅಜೆಂಡ. ಆರ್‌ಎಸ್‍ಎಸ್‍ನಲ್ಲಿ ಸ್ವಯಂಸೇವಕರಾದವರು ಜೀವನವನ್ನು ಸಮರ್ಪಣೆ ಮಾಡಿಕೊಂಡು ಕೆಲಸ ಮಾಡುತ್ತಾರೆ. ಯಾರೂ ಸ್ವಾರ್ಥಿಗಳಲ್ಲ. ʼನಾನು ನನ್ನ ಮಕ್ಕಳು, ಮರಿಮಕ್ಕಳುʼ ಈ ರಾಜ್ಯ ದೇಶ ಆಳ್ವಿಕೆ ಮಾಡಬೇಕು ಎಂಬ ಸ್ವಾರ್ಥವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆರ್‌ಎಸ್‍ಎಸ್‌ನ ಕನಸು ಭಾರತ ಬಲವಾಗಬೇಕು. ಸಮಾಜದಲ್ಲಿರುವ ದೋಷಗಳಾದ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ, ಸ್ವಜನಪಕ್ಷಪಾತ ಇದು ದೂರವಾಗಬೇಕು ಎಂದು ಆರ್‌ಎಸ್‍ಎಸ್ ಬಯಸುತ್ತದೆ. ಕೆಲವರು ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರವನ್ನು ಹಾಸಿಗೆ ಮಾಡಿಕೊಂಡು ಹೊದ್ದು ಮಲಗಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅನುಮಾನಿಸುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯಾವ ಆರ್‌ಎಸ್‍ಎಸ್ ನಾಯಕರಾಗಲಿ, ಕಾರ್ಯಕರ್ತರಾಗಲಿ ಸ್ವಾರ್ಥದ ಬಗ್ಗೆ ಯೋಚನೆ ಮಾಡಿದ್ದಾರೆ ಹೇಳಲಿ? ಅನಾಥಾಶ್ರಮ, ಗುರುಕುಲ, ವಿಶೇಷ ಚೇತನ ಮಕ್ಕಳಿಗೆ ಶಾಲೆಗಳನ್ನೂ ನಡೆಸುವ ಪರಿವಾರ ಸಂಸ್ಥೆಗಳು ಯಾವುದನ್ನೂ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ನೆರೆ ಹಾವಳಿ, ಕೊರೊನಾ ಸಮಯದಲ್ಲಿ, ಮಲೆನಾಡಿನಲ್ಲಿ ನಕ್ಸಲರ ಹಾವಳಿ ಇದ್ದಾಗ ಅಲ್ಲಿಯ ಜನರಿಗೆ ನಿಸ್ವಾರ್ಥ ಸೇವೆ ಮಾಡಿ ದೇಶ ಸೇವೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಸ್ವಯಂಸೇವಕರಿಗೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತೆ ಬಿಟ್ಟರೆ ಅವರಿಗೆ ಬೇರೆ ಯೋಚನೆಗಳೇ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಆರ್‌ಎಸ್‍ಎಸ್ ಕಾರ್ಯಕರ್ತರಿಗೆ ನಮ್ಮ ಕುಟುಂಬ ಬಲವಾಗಬೇಕು ಎಂಬ ಅಜೆಂಡವಿದೆಯೇ? ಖಂಡಿತ ಇಲ್ಲ. ಅವರು ಸಮರ್ಪಿತ ಬದುಕು ನಡೆಸುತ್ತಿದ್ದಾರೆ. ಪಿಎಚ್‍ಡಿ ಮಾಡಿರುವವರು, ಡಾಕ್ಟರ್‌ಗಳು, ಎಂಜಿನಿಯರ್‌ಗಳು ಆರ್‌ಎಸ್‍ಎಸ್ ಸೇರಿ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಆರ್‍ಎಸ್‍ಎಸ್ ನೂರಾರು ಶಾಖೆಗಳಿವೆ. ಕ್ರೀಡಾಭಾರತಿ, ವಿದ್ಯಾಭಾರತಿ ಸೇರಿದಂತೆ ನೂರಾರು ಕ್ಷೇತ್ರಗಳಲ್ಲಿ ಕಾರ್ಯಕರ್ತರು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದಾರೆ. ಸ್ವಾರ್ಥಿಗಳಿಗೆ ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಮ್ಮ ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.
ʼಆರ್‍ಎಸ್‍ಎಸ್ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸಂಘದ ಐಡಿಯಾಲಜಿಗಳ ಬಗ್ಗೆ ನಿರಂತರವಾಗಿ ಓದುತ್ತಿದ್ದೇನೆʼ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಂಘದ ಬಗ್ಗೆ ಸಂಪೂರ್ಣ ಜ್ಞಾನ ಕರಗತ ಮಾಡಿಕೊಳ್ಳಬೇಕಾದರೆ ನಿಮ್ಮ ಮನೆಯಲ್ಲಿ ಕುಳಿತು ಸಂಘದ ಬಗ್ಗೆ ಅದರ ಕಾರ್ಯಗಳ ಬಗ್ಗೆ ಓದಿದರೆ ಸಾಲದು. ಆರ್‍ಎಸ್‍ಎಸ್ ಶಾಖೆಗೆ ಬಂದು ಅಧ್ಯಯನ ಮಾಡಿ ಸಂಶೋಧನೆ ಮಾಡಿ ಆಗ ಸಂಘದ ಧೋರಣೆಗಳು ಏನು ಎಂದು ತಿಳಿಯುತ್ತದೆ ಎಂದು ಸವಾಲೆಸೆದಿದ್ದಾರೆ.
ಆರ್‍ಎಸ್‍ಎಸ್‍ನಲ್ಲಿ ಯಾವುದೇ ಐಡಿಯಾ¯ಜಿಗಳಿಲ್ಲ. ʼನಾವು ಸಹ ಹಿಂದೂಗಳೇʼ ಎಂದು ಹೇಳಿರುವ ಕುಮಾರಸ್ವಾಮಿ ಅವರಿಗೆ ಆರ್‍ಎಸ್‍ಎಸ್ ಹಿಂದುತ್ವದ ಮೇಲೆ ಏಕೆ ಅನುಮಾನ. ಆರ್‍ಎಸ್‍ಎಸ್ ದೇಶ ಭಕ್ತ ಸಂಘಟನೆಯೇ ವಿನಾ ದೇಶವನ್ನು ಒಡೆಯುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಅಧಿಕಾರಕ್ಕಾಗಿ ಜೋತು ಬೀಳುವ ಪಕ್ಷ ನಮ್ಮದಲ್ಲ. ದೇಶ ಸೇವೆಗಾಗಿ ಸದಾ ಸಿದ್ದರಿದ್ದೇವೆ. ಕೆಲವರ ಕೃಪಾಕಟಾಕ್ಷದಿಂದ 1989ರಲ್ಲಿ ಕೆಎಎಸ್‍ನಿಂದ ಐಎಎಸ್‍ಗೆ ಬಡ್ತಿ ಪಡೆದಿದ್ದ ಅಧಿಕಾರಿಯನ್ನು ಕರ್ನಾಟಕ ಲೋಕಸೇವಾ ಆಯೋಗಕ್ಕೆ 2007ರಲ್ಲಿ ನೇಮಿಸಿ ಕೈಗೊಂಬೆಯನ್ನಾಗಿ ಮಾಡಿಕೊಂಡು ಮಾಡಬಾರದ ಅಕ್ರಮಗಳನ್ನು ಮಾಡಿದ್ದು ನಿಮಗೆ ನೆನಪಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
2016ರಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ಕೊಟ್ಟು 676 ಅಭ್ಯರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಿದ್ದಾರೆ ಎಂದು ಹೇಳುತ್ತಿದ್ದೀರಲ್ಲ. ಹಾಗಾದರೆ ನೀವು ಸಿಎಂ ಆಗಿದ್ದಾಗ ಕೆಪಿಎಸ್‍ಸಿ ಮೂಲಕ ನೇಮಕವಾಗಿದ್ದ ಎಲ್ಲರೂ ಜೆಡಿಎಸ್ ಕಾರ್ಯಕರ್ತರು ಎಂದು ಒಪ್ಪಿಕೊಳ್ಳುವಿರಾ? ಎಂದು ಕೇಳಿದ್ದಾರೆ. ಭ್ರಷ್ಟರನ್ನು ತಮ್ಮ ಮನೆಯ ಸುತ್ತ ಬೆಳೆಸಿಕೊಂಡು ಬೇರೆಯವರ ಬಗ್ಗೆ ಮಾತನಾಡುವುದು ನಿಮಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ರಾಜಕೀಯ ಕಾರಣಕ್ಕಾಗಿ ನೀವು ಆರ್‍ಎಸ್‍ಎಸ್ ಅನ್ನು ದೂಷಿಸಬೇಡಿ. ಆರ್‍ಎಸ್‍ಎಸ್ ಬದ್ಧತೆಯ ಬಗ್ಗೆ ಮಾತನಾಡುವ ಮೊದಲು ಸಂಘದ ಶಾಖೆಗೆ ಬಂದು ಇಲ್ಲಿಯ ಸಿದ್ದಾಂತಗಳ ಅಧ್ಯಯನ ಮಾಡಿ. ಆಗ ನಿಮಗೆ ಆರ್‍ಎಸ್‍ಎಸ್ ಅಂದರೇನು. ಅದರ ಮಹತ್ವ ಏನು ಎಂಬುದು ಅರ್ಥವಾಗಬಹುದು ಎಂದು ತಿಳಿಸಿದ್ದಾರೆ.
ಚುನಾವಣೆ ಬಂದಾಗ ಜನರ ಸಂಕಷ್ಟಗಳು ನಿಮಗೆ ನೆನಪಾಗುವುದು ಹೊಸದೇನಲ್ಲ. ಆರ್‍ಎಸ್‍ಎಸ್ ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರ ಮಧ್ಯೆಯೇ ಬೆಳೆದು ಬಂದವರು. ಹೀಗಾಗಿ ಜನರ ಕಷ್ಟಗಳು, ನೋವುಗಳು ಏನೆಂದು ಅರಿವಿದೆ. ಸೈನಿಕರ ಬಗ್ಗೆ, ಆರ್‍ಎಸ್‍ಎಸ್ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವ ಅವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸಿ.ಟಿ.ರವಿ ಅವರು ತಿಳಿಸಿದ್ದಾರೆ.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ