ಬೆಂಗಳೂರು : ಹಾನಗಲ್ ಮತ್ತು ಸಿಂದಗಿ ವಿಜಯಯಾತ್ರೆಯನ್ನು ಬಿಜೆಪಿ ಮುಂದುವರಿಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೇರಲಿದೆ. 150 ಶಾಸಕರ ಸ್ಥಾನ ಗೆದ್ದು ಮತ್ತೆ ರಾಜ್ಯದಲ್ಲಿ ಸರಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ ವಿಧಾನಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಜ ಸಜ್ಜನರ್ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಡೆದ ರೋಡ್ ಷೋದಲ್ಲಿ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿದರು.
ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾದ ಸಿ.ಎಂ.ಉದಾಸಿ ಅವರ ನೆನಪಿನ ಜೊತೆ ಮತ್ತು ಅವರ ಅಭಿವೃದ್ಧಿಯ ಕಾರ್ಯಗಳನ್ನು ಮುಂದುವರಿಸುವ ದೃಷ್ಟಿಯಿಂದ ಶಿವರಾಜ ಸಜ್ಜನರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಕಮಲದ ಚಿಹ್ನೆಯನ್ನು ಜನರು ಅರಳಿಸಬೇಕು ಎಂದು ಅವರು ಮನವಿ ಮಾಡಿದರು.
ಸಂಸದರಾದ ಶಿವಕುಮಾರ್ ಉದಾಸಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ ಎಂದರು. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸಜ್ಜನಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಆದರ್ಶದ ರಾಜಕಾರಣ ಮಾಡುತ್ತಿರುವ ಬೊಮ್ಮಾಯಿ ಅವರ ಕೈಯನ್ನು ಬಲಪಡಿಸಲು ಈ ಕ್ಷೇತ್ರದಲ್ಲಿ ಶಿವರಾಜ ಅವರನ್ನು ಗೆಲ್ಲಿಸಿ ಎಂದು ವಿನಂತಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಅವರು ಮಾತನಾಡಿ, ಸಜ್ಜನರ್ ಅವರನ್ನು ಗೆಲ್ಲಿಸುವ ಮೂಲಕ ಹಾಗೂ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಸಿ.ಎಂ.ಉದಾಸಿ ಅವರ ಆತ್ಮಕ್ಕೆ ಶಾಂತಿ ತರುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ, ರಾಜ್ಯದ ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ, ಶಾಸಕರಾದ ರಾಜುಗೌಡ, ಅರುಣ್ ಕುಮಾರ್ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ